ಪಿಎಸ್ಐ ಹಗರಣ: ಆರೋಪ ಮಾಡುವ ಮುನ್ನ ಬಿಜೆಪಿ ನಾಯಕರು ಹೋಂವರ್ಕ್ ಮಾಡಿಕೊಂಡು ಬರಲಿ – ಸಚಿವ ಪ್ರಿಯಾಂಕ್​ ಖರ್ಗೆ

ಕಲಬುರಗಿ: ಪಿಎಸ್‌ಐ ಅಕ್ರಮದ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಹೇಳಿಕೆ ನೀಡಿದ್ದಾರೆ. ಪಿಎಸ್‌ಐ ಅಕ್ರಮದಲ್ಲಿ ಬಂಧನಕ್ಕೊಳಗಾದ ಆರೋಪಿಗಳನ್ನು ಬಿಡಿಸಲು ಖುದ್ದು ಬಿಜೆಪಿಯ ಹಾಲಿ ಶಾಸಕರೊಬ್ಬರು ಕರೆ ಮಾಡಿದ್ದರು. ಆದರೆ ಈಗ ಕಾಂಗ್ರೆಸ್​ ಮೇಲೆ ಆರೋಪ ಮಾಡುತ್ತಿದ್ದಾರೆ, ಆರೋಪ ಮಾಡುವ ಮುನ್ನ ಬಿಜೆಪಿ ನಾಯಕರು ಹೋಂವರ್ಕ್ ಮಾಡಿಕೊಂಡು ಬರಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಯಾರೇ ತಪ್ಪು ಮಾಡಿದವರು ಅವರನ್ನು ಕಾಂಗ್ರೆಸ್​ ಸರ್ಕಾರ ಬಿಡುವುದಿಲ್ಲ. ಕಳೆದ ನಾಲ್ಕು ದಿನಗಳಲ್ಲಿ ಅಕ್ರಮದಲ್ಲಿ ಭಾಗಿಯಾದ 20ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಆರ್​ಡಿ ಪಾಟೀಲ್ ಅವ​ರನ್ನು ಕೂಡಾ ಶೀಘ್ರವೇ ಬಂಧಿಸುತ್ತೇವೆ. ಆರ್​ಡಿಪಿ ಇರುವ ಸ್ಥಳದ ಮಾಹಿತಿ ಸಿಕ್ಕಿದೆ ಕೂಡಲೇ ಬಂಧಿಸಲಾಗುವುದು. ಪೊಲೀಸ್​ ಅಧಿಕಾರಿಗಳು ಆರೋಪಿ ಬಂಧನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದರು, ಆದರೆ ಆರ್ ಡಿ ಪಾಟೀಲ್ ತಪ್ಪಿಸಿಕೊಂಡಿದ್ದಾರೆ. ಇದರಲ್ಲಿ ಅಧಿಕಾರಿಗಳ ಪಾತ್ರ ಇದ್ದರೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಪಾಟೀಲ್​ ತಪ್ಪಿಸಿಕೊಳ್ಳಲು ಅಧಿಕಾರಿಗಳ ಕೃಪಾಕಟಾಕ್ಷ ಇತ್ತೊ ಇಲ್ಲವೋ ಗೊತ್ತಿಲ್ಲ‌, ವಿಚಾರಣೆ ನಡೆಸುತ್ತೇವೆ. ಇದರಲ್ಲಿ ಅಧಿಕಾರಿಗಳ ಲೋಪ ಕಂಡಲ್ಲಿ ಕ್ರಮ ಖಂಡಿತ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್​ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಪ್ರಥಮ ಬಾರಿಗೆ ಇಷ್ಟು ಬಿಗಿ ಭದ್ರತೆ ನಡುವೆ ಪ್ರಾಮಾಣಿಕ ಪರೀಕ್ಷೆ ನಡೆಸಿದ್ದೇವೆ. ಹ್ಯಾಂಡ್​ ವೈಡ್​ ಡಿವೈಸರ್ ಅಳವಡಿಕೆ, 800 ಮೀಟರ್​ನಲ್ಲಿನ ಲಾಡ್ಜ್​ಗಳ ಪರಿಶೀಲನೆ. ವಾಹನ ಪಾರ್ಕಿಂಗ್​ ತಪಾಸಣೆ ಸೇರಿ ಹತ್ತು ಹಲವಾರು ಮುಂಜಾಗ್ರತಾ ಕ್ರಮ ಜರುಗಿಸಿದ್ದು, ಇದೆ ಪ್ರಥಮ ಬಾರಿ. ಬಿಜೆಪಿ ಸರ್ಕಾರದಲ್ಲಿ ಪಿಎಸ್‌ಐ ಅಕ್ರಮ ನಡೆದಾಗ ಸದನದಲ್ಲಿ ಅಕ್ರಮ ನಡೆದಿಲ್ಲ ಎಂದರು. ಮುಖ್ಯಮಂತ್ರಿ ಗೃಹಮಂತ್ರಿಗಳಿಗೆ ಭೇಟಿಯಾಗಲು ಅಭ್ಯರ್ಥಿಗಳು ಚಪ್ಪಲಿ ಹರಿದುಕೊಂಡು ಸುಸ್ತಾದ ಬಳಿಕ, ಏಳು ತಿಂಗಳ ನಂತರ ಅಕ್ರಮದ ಬಗ್ಗೆ ಒಪ್ಪಿಕೊಂಡರು.

ಆದರೆ, ನಾವು ಕೇವಲ 24 ತಾಸಿನಲ್ಲಿ ಆರೋಪಿಗಳನ್ನು ಬಂಧನ ಮಾಡಿದ್ದೇವೆ. ಮುಂಜಾಗ್ರತಾ ಕ್ರಮ ಜರುಗಿಸಿ ಸುಮ್ಮನೆ ಕುಳಿತಿಲ್ಲ, ಅಕ್ರಮ ನಡೆದಾಗ ಶೀಘ್ರವೇ ಕ್ರಮ ಕೈಗೊಂಡು ಅಕ್ರಮದಲ್ಲಿ ಭಾಗಿಯಾದ ಎಲ್ಲರನ್ನೂ ಬಂಧಿಸುತ್ತೇವೆ. ಅಕ್ರಮದ ಕುರಿತಾಗಿ ಸಿಎಂ ಹೋಂ ಮಿನಿಸ್ಟರ್ ಎಲ್ಲರೂ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಅವರಂತೆ ಮೈಮೇಲೆ ಎಣ್ಣೆ ಹಾಕಿಕೊಂಡು ಕುಳಿತಿಲ್ಲ. ನಮ್ಮ ಜವಾಬ್ದಾರಿ ನಾವು ನಿಭಾಯಿಸುತ್ತಿದ್ದೇವೆ. ಏನಾದರೂ ಮಾಹಿತಿ ಇದ್ದರೆ ಕೊಡಲಿ. ಅದನ್ನು ಬಿಟ್ಟು ಬಿಜೆಪಿ ಅವರು ಕೇವಲ ಗಾಳಿಯಲ್ಲಿ ಗುಂಡು ಹಾರಿಸುವುದನ್ನು ನಿಲ್ಲಿಸಲಿ‌ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದರು.

Donate Janashakthi Media

Leave a Reply

Your email address will not be published. Required fields are marked *