ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಸಚಿವ ಮಧು ಬಂಗಾರಪ್ಪ ತಪ್ಪಿತಸ್ಥ: ಕೋರ್ಟ್ ಆದೇಶ

ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರನ್ನು ಚೆಕ್‌ ಬೌನ್ಸ್ ಪ್ರಕರಣವೊಂದರಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು  ತಪ್ಪಿತಸ್ಥ ಎಂದು ತೀರ್ಪು ನೀಡಿದ್ದು, ಶಿಕ್ಷೆಗೆ ಗುರಿಪಡಿಸಿದೆ.

ಈ ಪ್ರಕರಣದಲ್ಲಿ ದೂರುದಾರರಾಗಿದ್ದ ರಾಜೇಶ್‌ ಎಕ್ಸ್‌ಪೋರ್ಟ್‌ ಸಂಸ್ಥೆಗೆ ₹ 6.96 ಕೋಟಿ ಹಾಗೂ ಸರ್ಕಾರದ ಸಕ್ಷಮ ಸಂಸ್ಥೆಗೆ ₹ 10 ಸಾವಿರ ಪಾವತಿಸಬೇಕು. ತಪ್ಪಿದ್ದಲ್ಲಿ 6 ತಿಂಗಳು ಸಾದಾ ಸಜೆ ಅನುಭವಿಸಬೇಕು ಎಂದೂ ಕೋರ್ಟ್‌ ಆದೇಶಿಸಿದೆ. 42ನೇ ಹೆಚ್ಚುವರಿ ಚೀಫ್‌ ಮೆಟ್ರೊಪಾಲಿಟಿನ್‌ ಮ್ಯಾಜಿಸ್ಟೇಟ್‌ ನ್ಯಾಯಾಲಯದ ನ್ಯಾಯಾಧೀಶರಾದ ಪ್ರೀತ್ ಜೆ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ.

ಈ ಪ್ರಕರಣದಲ್ಲಿ ಆಕಾಶ್‌ ಆಡಿಯೊ-ವಿಡಿಯೊ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯನ್ನು ಮೊದಲ ಆರೋಪಿಯಾಗಿ ಹಾಗೂ ಸಂಸ್ಥೆಯ ನಿರ್ದೇಶಕರಾಗಿದ್ದ  ಎಸ್‌.ಮಧು ಬಂಗಾರಪ್ಪಅವರನ್ನು ಎರಡನೇ ಆರೋಪಿಯಾಗಿ ಹೆಸರಿಸಲಾಗಿತ್ತು. ‘ನೆಗೋಷಿಯೆಬಲ್‌ ಇನ್‌ಸ್ಟ್ರುಮೆಂಟ್ಸ್ ಕಾಯ್ದೆಯ ಸೆಕ್ಷನ್ 138ರ ಅನುಸಾರ ಆರೋಪಿ 1 ಮತ್ತು 2 ತಪ್ಪಿತಸ್ಥರು. ಇವರು ಒಟ್ಟು ₹ 6,96,70,000 ಪಾವತಿಸಬೇಕು. ತಪ್ಪಿದ್ದಲ್ಲಿ ಎರಡನೇ ಆರೋಪಿ ಆರು ತಿಂಗಳು ಸಾದಾ ಸಜೆ ಅನುಭವಿಸಬೇಕು’ ಎಂದು ಆದೇಶಿಸಿದೆ. ಅಲ್ಲದೆ, 2ನೇ ಆರೋಪಿಯು ಈ ಪ್ರಕರಣವನ್ನು ಅನಗತ್ಯವಾಗಿ ಲಂಬಿಸಲು ಕಾರಣರಾಗಿದ್ದಾರೆ ಎಂದು ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.

ಇದನ್ನು ಓದಿ : ಅತಿಥಿ ಉಪನ್ಯಾಸಕರಿಗೆ 5 ಸಾವಿರ ವೇತನ ಹೆಚ್ಚಳಕ್ಕೆ ಸರ್ಕಾರ ತೀರ್ಮಾನ

ದೂರಿನ ಪ್ರಕಾರ, ಆಕಾಶ್‌ ಆಡಿಯೊ ವಿಡಿಯೊ ಸಂಸ್ಥೆಯು ರಾಜೇಶ್‌ ಎಕ್ಸ್‌ಪೋರ್ಟ್ಸ್‌ ಸಂಸ್ಥೆಯಿಂದ ಅಂತರ ಕಾರ್ಪೋರೇಟ್‌ ಠೇವಣಿಯಾಗಿ ₹ 6 ಕೋಟಿ ಪಡೆದುಕೊಂಡಿತ್ತು. ಈ ಸಂಬಂಧ ನಿರ್ದೇಶಕರಾಗಿದ್ದ ಮಧು ಬಂಗಾರಪ್ಪ ₹ 6.6 ಕೋಟಿಗೆ ಚೆಕ್‌ ಕೊಟ್ಟಿದ್ದರು. ಆದರೆ, ಚೆಕ್‌ 2011ರ ನವೆಂಬರ್ 27ರಂದು ಬೌನ್ಸ್‌ ಆಗಿತ್ತು. ಬಳಿಕ ರಾಜೇಶ್‌ ಎಕ್ಸ್‌ಪೋರ್ಟ್ ಸಂಸ್ಥೆ 2012ರಲ್ಲಿ ಮತ್ತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಚೆಕ್‌ ಮೊತ್ತ, ಪರಿಹಾರ‌ ಪಾವತಿಗೆ ಕೋರಿತ್ತು. 2022ರಲ್ಲಿ ಈ ಪ್ರಕರಣವನ್ನು ವಿಶೇಷ ಕೋರ್ಟ್‌ಗೆ ವರ್ಗಾಯಿಸಲಾಗಿತ್ತು.

ಮಧು ಬಂಗಾರಪ್ಪ ಅವರು ಪ್ರಕರಣದ ರದ್ದತಿ ಕೋರಿ ಹೈಕೋರ್ಟ್‌ಗೆ ಅರ್ಜಿಸಲ್ಲಿಸಿದ್ದರು. ಮಾತು ನೀಡಿದ್ದಂತೆ ಪೂರ್ಣ ಹಣಪಾವತಿಸದ ಕಾರಣ ಈ ಅರ್ಜಿಯು 2022ರಲ್ಲಿ ತಿರಸ್ಕೃತಗೊಂಡಿತ್ತು.

ಬಳಿಕ ವಿಶೇಷ ಕೋರ್ಟ್‌ಗೆ 2023ರ ಡಿ.26ರಂದು ಅರ್ಜಿ ಸಲ್ಲಿಸಿದ್ದ ಅವರು, ಬಾಕಿ ಮೊತ್ತ ₹ 6.10 ಕೋಟಿ ಅನ್ನು 2024ರ ಜನವರಿ 30‌ರ ಒಳಗೆ ಪೂರ್ಣ ಪಾವತಿಸಲಾಗುವುದು ಎಂದು ತಿಳಿಸಿದ್ದರು. ಆದರೆ, ವಿಶೇಷ ಕೋರ್ಟ್ ಇದನ್ನು ತಿರಸ್ಕರಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌ ಈಗ ಆದೇಶ ಹೊರಡಿಸಿದೆ.

Donate Janashakthi Media

Leave a Reply

Your email address will not be published. Required fields are marked *