ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ಮಳೆ ಹಾಗೂ ಅದರಿಂದ ಉಂಟಾಗಿರುವ ಸಮಸ್ಯೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಅಧಿಕಾರಿಗಳ ಸಭೆ ನಡೆಯಿತು. ಆದರೆ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವರು ಗೈರಾಗಿದ್ದು ಚರ್ಚೆಗೆ ಗ್ರಾಸವಾಗಿದೆ.
ಚರಂಡಿಯಲ್ಲಿ ನೀರು ಹರಿಯದೆ ಹೊರ ಬಂದು ಸಮಸ್ಯೆಯಾಗಿದೆ. ನಗರೋತ್ಥಾನ ಯೋಜನೆಯಡಿ ತಡೆಗೋಡೆ ನಿರ್ಮಾಣ ಮಾಡಲಾಗುವುದು. ತಡೆಗೋಡೆಯಿಂದ ಆಗುತ್ತಿರುವ ಸಮಸ್ಯೆ ಪರಿಹಾರಕ್ಕೆ ಆದ್ಯತೆ ಕೊಡಲಾಗುವುದು. ಮನೆಗಳಿಗೆ ನೀರು ನುಗ್ಗದಂತೆ ತುರ್ತು ಕ್ರಮಕ್ಕೆ ವರದಿ ನೀಡಲು ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ. ಹಣಕಾಸು ಇಲಾಖೆ ಜೊತೆ ನಾನು ಮಾತಾಡಿದ್ದೇನೆ. ತಿಂಗಳಿಗೆ ಒಮ್ಮೆ ಅಧಿಕಾರಿಗಳು ವರದಿ ನೀಡಬೇಕು. ಏನಾದರೂ ಸಮಸ್ಯೆ ನನ್ನ ಗಮನಕ್ಕೆ ತಂದು ಚರ್ಚೆ ನಡೆಸುವಂತೆ ಸೂಚನೆ ನೀಡುವುದಾಗಿ ಹೇಳಿದರು.
ನಗರದಲ್ಲಿ ಪದೇ ಪದೇ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವುದನ್ನ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲು ವರದಿ ನೀಡಲು ಹೇಳಿದ್ದೇನೆ. ಅಲ್ಪಾವಧಿ ಹಾಗೂ ದೀರ್ಘಕಾಲ ಕ್ರಮಕೈಗೊಳ್ಳಲು ವರದಿ ಕೇಳಿದ್ದೇನೆ. ಇದಕ್ಕೆ ಸಂಬಂಧಿಸಿದ ಹಣಕಾಸು ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ಸಚಿವ ಆರ್ ಅಶೋಕ್, ಸೋಮಣ್ಣ ಗೈರು : ಕೆಲ ದಿನಗಳ ಹಿಂದೆಯಷ್ಟೇ ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನಕ್ಕೆ ಆರ್.ಅಶೋಕ್ ಹಾಗೂ ವಿ.ಸೋಮಣ್ಣ ಮಧ್ಯೆ ಜಟಾಪಟಿ ನಡೆದಿತ್ತು. ಬೆಂಗಳೂರು ಜವಾಬ್ದಾರಿಗಾಗಿ ಬಹಿರಂಗ ಹೇಳಿಕೆಗಳ ಮೂಲಕ ಪರಸ್ಪರ ಅಸಮಾಧಾನ ವ್ಯಕ್ತಪಡಿಸಿದರು.
ಸಿಲಿಕಾನ್ ಸಿಟಿಯಲ್ಲಿ ಸುರಿದ ವ್ಯಾಪಕ ಮಳೆ (Bengaluru Rain) ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣದಲ್ಲಿ ಇಂದು ತುರ್ತು ಸಭೆ ನಡೆಯಿತು. ಸಚಿವ ವಿ.ಸೋಮಣ್ಣ ಸಭೆಗೆ ಬರಲಿಲ್ಲ. ಇನ್ನು ಸಚಿವ ಆರ್.ಅಶೋಕ್ ಸಭೆಗೆ ಬರದೆ ತಮ್ಮ ಕ್ಷೇತ್ರದ ಹುಡುಗರೊಂದಿಗೆ ಮೈದಾನಲ್ಲಿ ಕ್ರಿಕೆಟ್ ಆಡಿದರು. ಸಭೆ ನಡೆಯುತ್ತಿದ್ದ ಸಮಯದಲ್ಲಿ ಮಕ್ಕಳೊಂದಿಗೆ ಅಶೋಕ್ ಕ್ರಿಕೆಟ್ ಆಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರಲ್ಲಿ ಇನ್ನೂ ಹೆಚ್ಚು ಮಳೆಯಾಗುತ್ತೆ : ಇನ್ನು ಇತ್ತುವಿಪತ್ತು ನಿರ್ವಹಣಾ ಅಧಿಕಾರಿಗಳು, BBMP , BWSSB ಅಧಿಕಾರಿಗಳು ಜೊತೆ ಸಿಎಂ ಸಭೆ ನಡೆಸಿದರು. ಬೆಂಗಳೂರಿನಲ್ಲಿ ಕಳೆದ ಒಂದು ತಿಂಗಳಿಂದ ಸುರಿದ ಮಳೆ ಮತ್ತು ಅದರಿಂದ ಉಂಟಾಗಿರುವ ಸಮಸ್ಯೆ ಕುರಿತು ಅಧಿಕಾರಿಗಳ ಸಭೆ ನಡೆಯಿತು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಈ ವರ್ಷ ಮಳೆಗಾಲ ವಿಸ್ತರಣೆ ಆಗಿದೆ. ನಗರದಲ್ಲಿ ಮತ್ತಷ್ಟು ಮಳೆ ಆಗುವ ಸಾಧ್ಯತೆ ಇದೆ. ಅಕ್ಟೋಬರ್, ನವೆಂಬರ್ ಅತಿ ಹೆಚ್ಚು ಮಳೆಯಾಗುತ್ತಿದೆ. ಹೀಗಾಗಿ ಬೆಂಗಳೂರು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಯಾವ ಪ್ರದೇಶದಲ್ಲಿ ಮಳೆ ಹೆಚ್ಚಾಗುತ್ತಿದೆ ಎಂದು ಗುರುತಿಸಿದ್ದೇವೆ. ಹೊರವಲಯದಲ್ಲಿ ಮಳೆ ಹೆಚ್ಚಾಗುತ್ತಿದೆ, ತುರ್ತಾಗಿ ಏನು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಸಚಿವರ ಗೈರಿಗೆ ಸಿಎಂ ಸಮರ್ಥನೆ : ಸಭೆಗೆ ಬೆಂಗಳೂರು ಸಚಿವರಾದ ಆರ್. ಅಶೋಕ್ ಹಾಗೂ ವಿ.ಸೋಮಣ್ಣ ಗೈರಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಬೆಂಗಳೂರಿಗೆ ಬಂದ ತಕ್ಷಣ ನಾನು ಈ ಸಭೆ ಮಾಡಿದೆ. ಇದು ತುರ್ತು ಸಭೆ, ಹಾಗಾಗಿ ಇಂದಿನ ಸಭೆಗೆ ಯಾರು ಬಂದಿಲ್ಲ. ಎಲ್ಲಾ ಸಚಿವರು ಚುರುಕಾಗಿ ಇದ್ದಾರೆ ಎಂದು ಸಮರ್ಥನೆ ನೀಡಿದರು.