ನವದೆಹಲಿ: ಕೊವಿಡ್ ಲಸಿಕೆ ಪಡೆಯಲು ನೋಂದಾವಣೆಗಾಗಿ ಕೊವಿನ್ ಜಾಲತಾಣದಲ್ಲಿ ಸಲ್ಲಿಸಿದ್ದ ಭಾರತೀಯರ ಆಧಾರ್ ಕಾರ್ಡ್ ಸೇರಿದಂತೆ ವೈಯಕ್ತಿಕ ವಿವರಗಳ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಿವೆ ಎಂದು ವರದಿಯಾಗಿದೆ.
ಕೊವಿನ್ ದತ್ತಾಂಶ ಸೋರಿಕೆಯ ಸುದ್ದಿ ಈ ಇಂದೆ 2021ರಲ್ಲಿ ಬಂದಿತ್ತು. ಆಗ ಕೇಂದ್ರ ಆರೋಗ್ಯ ಮಂತ್ರಾಲಯ ಅದನ್ನು ನಿರಾಕರಿಸಿತ್ತು. ಈ ಬಾರಿಯೂ ಅದನ್ನು ನಿರಾಕರಿಸಿದೆ, ಈ ಸುದ್ದಿ ಕಿಡಿಗೇಡಿತನದ ಸ್ವರೂಪದ್ದಾಗಿದ್ದು, ಅದಕ್ಕೆ ಯಾವುದೇ ಆಧಾರವಿಲ್ಲ ಎಂದಿದೆ. ಆದರೆ ಮಾಹಿತಿ ತಂತ್ರಜ್ಞಾನ(ಐಟಿ) ಮಂತ್ರಾಲಯ ಸೋರಿಕೆಯಾಗಿರುವುದು ನೇರವಾಗಿ ಕೊವಿನ್ ಜಾಲತಾಣದಿಂದಲ್ಲ ಎಂದು ಈ ಸುದ್ದಿಗೆ ಪ್ರತಿಕ್ರಿಯಿಸುತ್ತ ಹೇಳಿದೆ. ಈ ಮೊದಲೇ ಕದ್ದಿದ್ದ ದತ್ತಾಂಶಗಳಿಂದ ಸೋರಿಕೆಯಾಗಿದೆ ಎಂದು ಅದು ಹೇಳಿದೆ. ಇದು ಮತ್ತೆ ಹಲವು ಪ್ರಶ್ನೆಗಳನ್ನಬ್ಬಿಸಿದೆ. ಮೊದಲನೆಯದಾಗಿ, ದತ್ತಾಂಶ ಸೋರಿಕೆಯಾಗಿರುವುದು ನಿಜ ಎಂದು ಐಟಿ ಮಂತ್ರಾಲಯ ಒಪ್ಪಿಕೊಂಡಿದೆಯೇ? ಈ ಹಿಂದೆ ದತ್ತಾಂಶ ಕಳವು ಹೇಗಾಯಿತು, ಯಾಕಾಯಿತು ಮತ್ತು ಯಾರು ಮಾಡಿದ್ದು, ಆಬಗ್ಗೆ ಕ್ರಮ ಕೈಗೊಳ್ಳಲಾಗಿದೆಯೇ ಇತ್ಯಾದಿ ಪ್ರಶ್ನೆಗಳು ಏಳುತ್ತವೆ. ಅಲ್ಲದೆ ಕೊವಿನ್ ಲಸಿಕೆ ಪಡೆದವರು ಮತ್ತು ನೀಡಿದವರಲ್ಲದೆ, ಮೂರನೇಯವರು ಎಪಿಐ ಮೂಲಕ ದತ್ತಾಂಶಗಳನ್ನು ಪಡೆಯಬಹುದು ಎಂದೂ ಐಟಿ ಮಂತ್ರಾಲಯ ತನ್ನ ಸ್ಪಷ್ಟೀಕರಣದಲ್ಲಿ ಹೇಳಿದೆ. ಈ ಮೂರನೇಯವರು ಯಾರು, ಅವರಿಗೇಕೆ ದತ್ತಾಂಶ ಲಭ್ಯಗೊಳಿಸಬೇಕು ಎಂಬ ಪ್ರಶ್ನೆಗಳೂ ಎದ್ದಿವೆ.
ಇಂತಹ ಒಂದು ಬೃಹತ್ ಪ್ರಮಾಣದ ದತ್ತಾಂಶ ಉಲ್ಲಂಘನೆ ಆಘಾತಕಾರಿ ಎಂದು ಈ ಸುದ್ದಿಗೆ ಪ್ರತಿಕ್ರಿಯಿಸುತ್ತ ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ. ಇದು ಗಂಭೀರ, ಕಳವಳಕಾರಿ ಮತ್ತು ಎಲ್ಲಾ ಭಾರತೀಯರ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಘೋಷಿಸಿದ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅದು ಹೇಳಿದೆ.
ಈ ಹಿಂದೆ ಜೂನ್ 2021 ರಲ್ಲಿ ಇದೇ ರೀತಿಯ ಆರೋಪ ಬಂದಿದ್ದು, ಅದನ್ನು ಆರೋಗ್ಯ ಸಚಿವಾಲಯವು ನಿರಾಕರಿಸಿತ್ತು, ಆದರೂ ಅದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MEITY) ಅಡಿಯಲ್ಲಿ ದತ್ತಾಂಶ-ಛೇದನೆಯನ್ನು ತಡೆಯುವ ‘ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್’(CERT-In)ನಿಂದ ಈ ಬಗ್ಗೆ ತನಿಖೆಗೆ ಆದೇಶ ನೀಡಿತ್ತು. ಈ ತನಿಖೆಯ ವಿವರಗಳನ್ನು ಇನ್ನೂ ಸಾರ್ವಜನಿಕವಾಗಿ ಲಭ್ಯಗೊಳಿಸಿಲ್ಲ.
ಇದನ್ನೂ ಓದಿ : ಉಚಿತ ಲಸಿಕೆ 75ಶೇ.! … ಪೆಟ್ರೋಲ್-ಡೀಸೆಲ್100ರೂ.!! ಆದರೂ………… ನಗಿಸಬೇಡಿ!!!
ಈ ಬಗ್ಗೆ ಒಂದು ಸಮಗ್ರ ತನಿಖೆಯನ್ನು ನಡೆಸಬೇಕು ಮತ್ತು ಭಾರತೀಯರ ವೈಯಕ್ತಿಕ ಮಾಹಿತಿಯ ಸುರಕ್ಷತೆಯಲ್ಲಿ ಇಂತಹ ದೊಡ್ಡ ಉಲ್ಲಂಘನೆಗೆ ಕಾರಣರಾದವರನ್ನು ಗುರುತಿಸಬೇಕು ಮತ್ತು ಅದನ್ನು ತಡೆಗಟ್ಟುವ ಕ್ರಮವನ್ನು ಅನುಸರಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಗ್ರಹಿಸಿದೆ.