ಇತ್ತೀಚೆಗೆ ಕೊಲಂಬಿಯಾ ರಾಜಧಾನಿ ಬೊಗೊಟಾದಲ್ಲಿ ಹೇಗ್ ಗುಂಪು ಸಂಘಟಿಸಿದ್ದ ಶೃಂಗಸಭೆಯಲ್ಲಿ ಇಸ್ರೇಲ್ ಮೇಲೆ ಶಸ್ತ್ರಾಸ್ತ್ರ ಮತ್ತು ಆರ್ಥಿಕ ದಿಗ್ಬಂಧನ ಹೇರುವ ನಿರ್ಣಯ ಕೈಗೊಳ್ಳಲಾಗಿದೆ. ಈ ಐತಿಹಾಸಿಕ ಒಪ್ಪಂದ ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧದ ವಿರುದ್ಧ ಮೊದಲ ಬಹುಪಕ್ಷೀಯ ಒತ್ತಡದ ಪ್ರಯತ್ನವಾಗಿದೆ.
ಗಾಜಾದಲ್ಲಿ ಪ್ಯಾಲೆಸ್ಟೀನ್ ಜನತೆಯ ಮೇಲೆ ದೌರ್ಜನ್ಯ ದಿನೇ ಭೀಕರ ಸ್ವರೂಪ ಪಡೆಯುತ್ತಿದೆ. ಗಾಜಾದ ಹಲವಾರು ಪ್ರದೇಶಗಳಿಂದ ತಕ್ಷಣವೇ ಖಾಲಿ ಮಾಡಬೇಕೆಂಬ ಫರ್ಮಾನು ಮತ್ತು ಕದನ ವಿರಾಮ ಲೆಕ್ಕಿಸದೆ, ನಿರಾಶ್ರಿತ ಕ್ಯಾಂಪ್, ಆಸ್ಪತ್ರೆಗಳೂ ಸೇರಿದಂತೆ ಎಲ್ಲ ಮಾಲಸೌಕರ್ಯಗಳನ್ನು ನಾಶ ಪಡಿಸಿದ ಇಸ್ರೇಲಿ ಸೈನ್ಯದ ಅವಿರತ ಬಾಂಭ್ ದಾಳಿಯ ಮೂಲಕ ನಡೆಸುವ ನರಮೇಧಕ್ಕೆ 22 ತಿಂಗಳುಗಳು ಕಳೆದಿವೆ. ಇದರಿಂದ ಸುಮಾರು 60 ಸಾವಿರ ಸಾವಿಗೀಡಾಗಿದ್ದು ಅವರಲ್ಲಿ ಶೇ.70 ಮಹಿಳೆಯರು ಮತ್ತು ಮಕ್ಕಳು. 1.5 ಲಕ್ಷ ತೀವ್ರವಾಗಿ ಗಾಯಗೊಂಡಿದ್ದಾರೆ. ವಿಶ್ವಸಂಸ್ಥೆ ಸೇರಿದಂತೆ ಎಲ್ಲ ಮಾನವೀಯ ಸಂಸ್ಥೆಗಳ ಆಹಾರ, ಔಷಧಿ ಯಂತಹ ಅಗತ್ಯ ಸಾಮಗ್ರಿಗಳು ಪೂರೈಕೆಯನ್ನು ತಡೆ ಹಿಡಿದು ಹಲವು ವಾರಗಳೇ ಆಗಿದ್ದು, ಸಾಮೂಹಿಕ ಹಸಿವು-ಸಾವುಗಳ ಅಪಾಯ ಕಾದಿದೆ. ಯು.ಎಸ್-ಇಸ್ರೇಲಿ ಪ್ರಾಯೋಜಿತ ‘ಗಾಜಾ ಮಾನವೀಯ ಫೌಂಡೇಶನ್’ ಮಾತ್ರ ಆಹಾರ ಪೂರೈಕೆ ಮಾಡಬೇಕು ಎಂದು ಷರತ್ತು ಹಾಕಿ, ಅದನ್ನು ಪಡೆಯಲು ಬಂದವರ ಮೇಲೆ ಇಸ್ರೇಲಿ ಸೈನ್ಯ ಗುಂಡು ದಾಳಿ ಮಾಡುವ ಮೂಲಕ ನರಮೇಧದ ಇನ್ನೊಂದು ಭೀಕರ ರೂಪದ ಅಧ್ಯಾಯ ತೆರೆದಿದೆ. ಕಳೆದ 8 ವಾರಗಳಲ್ಲಿ ಸಾವಿರಕ್ಕೂ ಹೆಚ್ಚು ಜನ ಇಂತಹ ದಾಳಿಗಳಲ್ಲಿ ಸತ್ತಿದ್ದಾರೆ.
ಆದರೂ ಇಸ್ರೇಲಿನ ಮೇಲೆ ಹಿಡಿತವಿರುವ ಯು.ಎಸ್ ಆಗಲಿ, ಯುರೋ ಕೂಟವಾಗಲಿ ಕಿರುಬೆರಳೆತ್ತಿಲ್ಲ. ವಿಶ್ವಸಂಸ್ಥೆ ಮತ್ತು ಮಾನವೀಯ ನೆರವು ಗುಂಪುಗಳು ಈ ಬೀಕರ ಪರಿಸ್ಥಿತಿಯನ್ನು ಖಂಡಿಸುತ್ತಿದ್ದರೂ, ನೆರೆಯ ಅರಬ್ ದೇಶಗಳಾಗಲಿ ಯಾವುದೇ ಅಂತರರಾಷ್ಟ್ರೀಯ ಸಂಘಟನೆಗಳು ಖಂಡನೆ ಮಾಡುತ್ತಿದ್ದರೂ ಯಾವುದೇ ಕಾರ್ಯಾಚರಣೆ ಮಾಡುತ್ತಿಲ್ಲ. ಈ ನಿರಾಶೆಯ ಕಾರ್ಮೋಡುಗಳ ನಡುವೆ ಬೆಳ್ಳಿ ಗೆರೆಯಂತೆ ದಕ್ಷಿಣ ಅಮೆರಿಕಾದ ಕೊಲಂಬಿಯ ರಾಜಧಾನಿ ಬೊಗೊಟಾದಲ್ಲಿ 30 ದೇಶಗಳ ಪ್ರತಿನಿಧಿಗಳು ಜುಲೈ 15-16ರಂದು ಒಂದು ಶೃಂಗ ಸಭೆಯಲ್ಲಿ ಸೇರಿದ್ದರು. ಈ ಶೃಂಗಸಭೆಯನ್ನು ಉದ್ದೇಶಿಸಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆ ನೇಮಿಸಿದ ವಿಶೇಷ ವರದಿಗಾರ ಫ್ರಾನ್ಸೆಸ್ಕೊ ಅಲ್ಬನೀಸ್ ಸಹ ಮಾತನಾಢಿದರು. ಅವರು ಇತ್ತೀಚೆಗೆ ಗಾಜಾ ನರಮೇಧದಲ್ಲಿ ಭಾಗಿಯಾಗಿರುವ ಗೂಗಲ್ ಇತ್ಯಾದಿ ದೈತ್ಯ ಕಂಫನಿಗಳ ಪಾತ್ರವನ್ನು ಬಯಲಿಗೆಳೆಯುವ ವರದಿ ಕೊಟ್ಟಿದ್ದರು.
“ಹೇಗ್ ಗುಂಪು” ಅಂತರರಾಷ್ಟ್ರೀಯ ಕಾನೂನಿನ ರಕ್ಷಣೆ ಮತ್ತು ಪ್ಯಾಲೆಸ್ಟೈನ್ ಜನರಿಗೆ ಸೌಹಾರ್ದ ಬೆಂಬಲ ನೀಡುವ ಕಾನೂನು ಮತ್ತು ರಾಜತಾಂತ್ರಿಕ ಕ್ರಮಗಳನ್ನು ಸಂಘಟಿಸಲು ಬದ್ಧವಾಗಿರುವ ದೇಶಗಳ ಜಾಗತಿಕ ಗುಂಪಾಗಿದೆ. ಈ ಸಭೆಯನ್ನು “ಹೇಗ್ ಗುಂಪು” ಕೊಲಂಬಿಯ ಮತ್ತು ದಕ್ಷಿಣ ಆಫ್ರಿಕಾದ ಸರಕಾರಗಳ ಸಹಕಾರದೊಂದಿಗೆ ಸಂಘಟಿಸಿದ್ದು, ಜನವರಿ 2025ರಲ್ಲಿ ಸ್ಥಾಪಿಸಲಾದ ಹೇಗ್ ಗುಂಪಿನ ಸದಸ್ಯ ದೇಶಗಳು ಸೇರಿದಂತೆ ಹಲವು (ಪ್ರಮುಖವಾಗಿ ಜಾಗತಿಕ ದಕ್ಷಿಣ ಅಂದರೆ ಅಭಿವೃದ್ಧಿಶೀಲ ) ದೇಶಗಳನ್ನು ಆಹ್ವಾನಿಸಲಾಗಿತ್ತು.
ಈ ಶೃಂಗಸಭೆಯಲ್ಲಿ ಏಶ್ಯಾ ಖಂಡದ ಬಾಂಗ್ಲಾದೇಶ, ಚೀನಾ, ಇಂಡೋನೇಷಿಯಾ, ಇರಾಕ್, ಲೆಬನಾನ್, , ಮಲೇಷಿಯಾ, , ಓಮಾನ್, ಪಾಕಿಸ್ತಾನ್, ಪ್ಯಾಲೆಸ್ಟೈನ್, ಖತಾರ್; ಆಫ್ರಿಕಾ ಖಂಡದ ದಕ್ಷಿಣ ಆಫ್ರಿಕಾ, ಅಲ್ಜೀರಿಯಾ, ಲಿಬಿಯಾ, ನಮಿಬಿಯಾ ಈಜಿಪ್ಟ್, ದಿಬೌಟಿ; ಅಮೆರಿಕಾ ಖಂಡದ ಕ್ಯೂಬಾ, ಕೊಲಂಬಿಯ, ಮೆಕ್ಸಿಕೋ, ಬ್ರೆಜಿಲ್, ಬೋಟ್ಸ್ವಾನಾ, ಚಿಲಿ, ಹೊಂಡುರಾಸ್, ನಿಕಾರಾಗುವಾ, ಉರುಗ್ವೆ ವೆನೆಜುವೆಲಾ, ಸೈಂಟ್ ವಿನ್‌ಸೆಂಟ್ ಮತ್ತು ಗ್ರೆನೆಡೈನ್ಸ್; ಯುರೋಪ್ ಖಂಡದ ಸ್ಲೋವೀನಿಯಾ, ಸ್ಪೇನ್, ಐರ್ಲೆಂಡ್, ನಾರ್ವೆ – ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಈ ಸಭೆಯಲ್ಲಿ ಇಸ್ರೇಲಿನ ” ದಂಡನೆಯಿಂದ ವಿನಾಯಿತಿಯ ಯುಗ ಕೊನೆಗೊಳ್ಳಬೇಕು. (ಇಸ್ರೇಲಿಗೆ ಸಂಬಂಧಿಸಿದ) ಅಂತಾರಾಷ್ಟ್ರೀಯ ಕಾನೂನನ್ನು ಯಾವ ಭಯ ಅಥವಾ ಪಕ್ಷಪಾತ ಇಲ್ಲದೆ ರಾಷ್ಟ್ರೀಯ ನೀತಿಗಳು ಮತ್ತು ಕಾನೂನುಗಳ ಮೂಲಕ, ಕಡ್ಡಾಯವಾಗಿ ಜಾರಿಗೆ ತರಬೇಕು. ಇದರ ಜತೆಗೆ ತಕ್ಷಣದ ಯುದ್ಧ ವಿರಾಮಕ್ಕೆ ಒಟ್ಟುಗೂಡಿದ ಒತ್ತಾಯ ತರಬೇಕು.” ಎಂಬ ನಿರ್ಣಯಕ್ಕೆ ಬರಲಾಯಿತು.
ಇದನ್ನೂ ಓದಿ :ಗಾಜಾ ಪಟ್ಟಿಯಾದ್ಯಂತ ರಾತ್ರಿಯಿಡೀ ಇಸ್ರೇಲ್ ದಾಳಿ: 31 ಜನರು ಸಾವು

ಗಾಜಾದಲ್ಲಿನ ಜನಾಂಗ ಹತ್ಯೆಯನ್ನು ತಡೆಯಲು ಕೆಳಕಂಡ ಕ್ರಮಗಳನ್ನು ಈ ಶೃಂಗಸಭೆಯಲ್ಲಿ ರೂಪಿಸಲಾಗಿದೆ:
1. ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳು, ಮದ್ದು-ಗುಂಡುಗಳು, ಇಂಧನ, ಮಿಲಿಟರಿ ಉಪಕರಣಗಳು ಮತ್ತು ಉಭಯ ( ಅಂದರೆ ನಾಗರಿಕ ಮತ್ತು ಮಿಲಟರಿ) ಬಳಕೆ ಸಾಮಗ್ರಿಗಳನ್ನು ನೀಡುವುದು ಅಥವಾ ವರ್ಗಾವಣೆ ಮಾಡುವುದನ್ನು ತಡೆಯುವುದು.
2. ಇಸ್ರೇಲ್‌ಗೆ ಇಂತಹ ನಿರ್ಬಂಧಿತ ಸಾಮಗ್ರಿಗಳನ್ನು ಸಾಗಿಸಲು ಬಳಸಬಹುದಾದ ಹಡಗುಗಳನ್ನು ಯಾವುದೇ ಬಂದರುಗಳಲ್ಲಿ ನಿಲುಗಡೆ ಅಥವಾ ಸೇವೆಗೊಳಪಡಿಸುವುದನ್ನು ತಡೆಯುವುದು.
3. ನಮ್ಮ (ಅಂದರೆ ಸಹಿ ಹಾಕಿರುವ ದೇಶಗಳ) ಧ್ವಜವನ್ನು ಹೊತ್ತಿರುವ ಹಡಗುಗಳು ಇಸ್ರೇಲ್‌ಗೆ ಈ ಸಾಮಗ್ರಿಗಳನ್ನು ಸಾಗಿಸುವುದನ್ನು ತಡೆಯುವುದು ಮತ್ತು ಈ ನಿಷೇಧ ಉಲ್ಲಂಘನೆಯಾಗುವಲ್ಲಿ ಹೊಣೆಗಾರಿಕೆಯನ್ನು ನಿಶ್ಚಿತಗೊಳಿಸುವುದು (ಉದಾ: ಧ್ವಜ ವಾಪಸ್ಸು).
4. ಸಾರ್ವಜನಿಕ ಸಂಸ್ಥೆಗಳು (ಅಥವಾ ಸಾರ್ವಜನಿಕ ಬೆಂಬಲದೊಂದಿಗೆ ಇತರರು) ಪ್ಯಾಲೆಸ್ಟೈನಿನ ಭೂಮಿಯಲ್ಲಿ ಇಸ್ರೇಲ್‌ನ ಆಕ್ರಮಣವನ್ನು ಬೆಂಬಲಿಸುವ ಯಾವುದೇ ಸಾರ್ವಜನಿಕ ಒಪ್ಪಂದಗಳನ್ನು ತಕ್ಷಣ ಮೌಲ್ಯಮಾಪನ ಮಾಡುವುದು
5. ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಗಂಭೀರ ಅಪರಾಧಗಳ ವಿರುದ್ಧ ನ್ಯಾಯ ಒದಗಿಸಲು ಬದ್ಧತೆ, ದೇಶೀಯ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಟ್ಟಿಯಾದ, ಪಕ್ಷಪಾತರಹಿತ ಮತ್ತು ಸ್ವತಂತ್ರ ತನಿಖೆ ಮತ್ತು ನ್ಯಾಯಾಂಗ ಕ್ರಮಗಳನ್ನು ಕೈಗೊಳ್ಳುವುದು
6. ಆಕ್ರಮಿತ ಪ್ಯಾಲೆಸ್ಟೈನಿನ ಭೂ ಪ್ರದೇಶದಲ್ಲಿ ನಡೆದ ಅಂತರಾಷ್ಟ್ರೀಯ ಅಪರಾಧಗಳಿಗೆ ನ್ಯಾಯ ಒದಗಿಸಲು , ರಾಷ್ಟ್ರೀಯ ಚೌಕಟ್ಟಿನಲ್ಲಿ ಸೂಕ್ತವಾಗಿ “ಸಾರ್ವತ್ರಿಕ ನ್ಯಾಯಾಧಿಕಾರ” ವನ್ನು ಸೇರಿಸುವುದು.
ಶೃಂಗಸಭೆಯಲ್ಲಿ ಬಾಗವಹಿಸಿದ 30 ದೇಶಗಳು, ಮುಂದೆ ಕಾಣಿಸಿದ 12 ದೇಶಗಳು ಮಾತ್ರ ತಕ್ಷಣವೇ ಈ ಒಪ್ಪಂದಗಳನ್ನು ಅನುಸರಿಸಲು ಒಪ್ಪಿಕೊಂಡವು: ಬೊಲಿವಿಯಾ, ಕ್ಯೂಬಾ, ಕೊಲಂಬಿಯಾ, ಇಂಡೋನೇಷಿಯಾ, ಇರಾಕ್, ಲಿಬಿಯಾ, ಮಲೇಷಿಯಾ, ನಮಿಬಿಯಾ, ನಿಕಾರಾಗುವಾ, ಓಮಾನ್, ಸೈಂಟ್ ವಿನ್‌ಸೆಂಟ್ ಮತ್ತು ಗ್ರೆನೆಡೈನ್ಸ್, ಮತ್ತು ದಕ್ಷಿಣ ಆಫ್ರಿಕಾ. ಇತರ ದೇಶಗಳು 2025ರ ಸೆಪ್ಟೆಂಬರ್ 20ರಂದು ನಡೆಯುವ 80ನೇ ಯುಎನ್ ಸಾಮಾನ್ಯ ಸಭೆಯ ಒಳಗೆ ಈ ಒಪ್ಪಂದಕ್ಕೆ ಸೇರಲಿದ್ದಾರೆ ಎಂಬ ನಿರೀಕ್ಷೆಯಿದೆ. ಇಸ್ರೇಲ್ ವಿರುದ್ಧದ ಈ ಕ್ರಮಗಳಲ್ಲಿ ಇತರ ರಾಷ್ಟ್ರಗಳನ್ನು ಸೇರಿಸಿಕೊಳ್ಳಲು ಹೇಗ್ ಗುಂಪು ಮುಂದುವರಿದು ಮಾತುಕತೆ ನಡೆಸಲಿದೆ.
ಗುಂಪಿನ ನಿರ್ಣಯಗಳನ್ನು ಘೋಷಿಸುತ್ತಾ ಕೊಲಂಬಿಯಾದ ಅಧ್ಯಕ್ಷ ಗಸ್ತಾವೋ ಪೆಟ್ರೊ ಹೇಳಿದರು:
“ನಾವು ಇತಿಹಾಸವನ್ನು ನಿರ್ಮಿಸಲು ಬೊಗೋಟಾಕ್ಕೆ ಬಂದೆವು – ಮತ್ತು ನಾವು ಇತಿಹಾಸವನ್ನು ನಿರ್ಮಿಸಿದ್ದೇವೆ… ಈಗ ನಾವು (ಇಸ್ರೇಲಿನ) ದಂಡನೆಯಿಂದ ವಿನಾಯಿತಿಯ ಯುಗವನ್ನು ಅಂತ್ಯಗೊಳಿಸುವ ಕೆಲಸವನ್ನು ಪ್ರಾರಂಭಿಸಿದ್ದೇವೆ. ಈ ಕ್ರಮಗಳು ಅಂತಾರಾಷ್ಟ್ರೀಯ ಕಾನೂನನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ತೋರಿಸುತ್ತವೆ.”
ದಕ್ಷಿಣ ಆಫ್ರಿಕಾದ ಕಾರ್ಯದರ್ಶಿ ರೋನಾಲ್ಡ್ ಲಮೊಲಾ ಗುಂಪಿನ ನಿರ್ಣಯದ ನಂತರ ಮಾತನಾಡುತ್ತಾ ಹೀಗೆ ಹೇಳಿದರು:
“ಇಲ್ಲಿ ನಾವು ಸಾಧಿಸಿದದ್ದೆಂದರೆ ಯಾವುದೇ ರಾಷ್ಟ್ರವೂ ಕಾನೂನಿಗೆ ಮೇಲ್ಪಟ್ಟದ್ದಲ್ಲ ಎಂಬ ಸಾಮೂಹಿಕ ದೃಢೀಕರಣ. ಹೇಗ್ ಗುಂಪು (ಇಸ್ರೇಲಿನ) ದಂಡನೆಯಿಂದ ವಿನಾಯಿತಿಯ ಯುಗದಲ್ಲಿ ಅಂತಾರಾಷ್ಟ್ರೀಯ ಕಾನೂನನ್ನು ಮುಂದಕ್ಕೆ ಒಯ್ಯಲು ಹುಟ್ಟಿಕೊಂಡದ್ದು. ಬೊಗೋಟಾದಲ್ಲಿ ಅಂಗೀಕರಿಸಿದ ಕ್ರಮಗಳು ನಾವು ಈ ಬಗ್ಗೆ ಗಂಭೀರರಾಗಿದ್ದೇವೆ ಎಂಬುದನ್ನು ತೋರಿಸುತ್ತವೆ.”
ಈ ಒಪ್ಪಂದ ಐತಿಹಾಸಿಕವಾಗಿದೆ, ಏಕೆಂದರೆ ಇದು ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧದ ವಿರುದ್ಧ ಮೊದಲ ಬಹುಪಕ್ಷೀಯ ಒತ್ತಡದ ಪ್ರಯತ್ನವಾಗಿದೆ. ಇದು ಅಂತರರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಗೆ ಇಸ್ರೇಲ್‌ಗೆ ಎಂದಿನಿಂದ ದೊರಕುತ್ತಿದ್ದ ದಂಡನೆಯಿಂದ ರಿಯಾಯಿತಿಗೆ ಹಲವು ದೇಶಗಳು ಜಂಟಿಯಾಗಿ ಸವಾಲು ಹಾಕುವ ಮೊದಲ ಪ್ರಯತ್ನವಾಗಿದೆ. ಇದಕ್ಕೆ ರಾಜತಾಂತ್ರಿಕ ಮಹತ್ವವಿದೆ. ಇದು ಇತರ ರಾಷ್ಟ್ರಗಳು ಸಹ ಗಾಜಾದಲ್ಲಿನ ಹಿಂಸೆಗೆ ತಡೆಯಹಾಕಲು ಒಟ್ಟಾಗಿ ಮುಂದಾಗಬಹುದಾದ ಆರಂಭ ಬಿಂದುವೂ ಇದಾಗಬಹುದು.
ಇದನ್ನೂ ನೋಡಿ : “ಇಸ್ರೇಲ್ ಪ್ಯಾಲಿಸ್ಟೈನ್ ಯುದ್ಧ”ದ ಹಿನ್ನೆಲೆ ಏನು? Janashakthi Media
