ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಭಾರತೀಯ ಸೇನೆಯ ಉಗ್ರ ನಿಗ್ರಹ ಕಾರ್ಯಾಚರಣೆ ಮುಂದುವರೆದಿದ್ದು, ಪುಲ್ವಾಮ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಎನ್ಕೌಂಟರ್ನಲ್ಲಿ ಜೈಶ್–ಎ–ಮೊಹಮ್ಮದ್ನ (ಜೆಇಎಂ) ಉಗ್ರ ಸಂಘಟನೆಯ ಪ್ರಮುಖ ಭಯೋತ್ಪಾದಕ ಕಮಾಂಡರ್ ಶಾಮ್ ಸೋಫಿಯನ್ನು ಕೊಂದು ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಅವಂತಿಪುರದ ತ್ರಾಲ್ ಪ್ರದೇಶದ ತಿಲ್ವಾನಿ ಮೊಹಲ್ಲಾ ವಗ್ಗದ್ ಪ್ರದೇಶದಲ್ಲಿ ಉಗ್ರರು ಅಡಗಿಕೊಂಡಿರುವ ಖಚಿತ ಮಾಹಿತಿಯಿಂದ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಉಗ್ರರು ಭದ್ರತಾ ಪಡೆಯ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿದಾಗ ಸೇನಾ ಪಡೆಯು ಪ್ರತಿದಾಳಿ ನಡೆಸಿದಾಗ ಉಗ್ರ ಶಾಮ್ ಸೋಫಿ ಬಲಿಯಾಗಿದ್ದಾನೆ.
ಉಗ್ರರು ಅಗಡಿರುವ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ಆ ಪ್ರದೇಶವನ್ನು ಸುತ್ತುವರೆದು ಕಾರ್ಯಾಚರಣೆ ಆರಂಭಿಸಿತ್ತು. ಈ ಬಗ್ಗೆ ಮಾತನಾಡಿರುವ ಸೇನಾಪಡೆಯ ಹಿರಿಯ ಅಧಿಕಾರಿಯೊಬ್ಬರು ‘ಇದುವರೆಗೆ ಒಬ್ಬ ಭಯೋತ್ಪಾದಕನನ್ನು ಕೊಲ್ಲಲಾಗಿದೆ. ಕಾರ್ಯಾಚರಣೆ ಮುಂದುವರೆದಿದ್ದು, ಮತ್ತಷ್ಟು ಉಗ್ರರು ಅಡಗಿರುವ ಶಂಕೆ ಇದೆ ಎಂದು ಹೇಳಿದ್ದಾರೆ.
ಉಗ್ರ ಶಾಮ್ ಸೋಫಿ ಈ ಹಿಂದೆ ಕಾಶ್ಮೀರದ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ವಿಜಯ್ ಕುಮಾರ್ ಹತ್ಯೆಯಲ್ಲೂ ಪಾಲ್ಗೊಂಡಿದ್ದ ಎನ್ನಲಾಗಿದೆ. ಈ ಸಂಬಂಧ ಆತನ ವಿರುದ್ಧ ದೂರು ಕೂಡ ದಾಖಲಾಗಿತ್ತು. ಇದಕ್ಕೂ ಮೊದಲು ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಗುಂಡಿನ ಚಕಮಕಿಯಲ್ಲಿ ಐವರು ಉಗ್ರರು ಹತರಾದ ಒಂದು ದಿನದ ನಂತರ ಇಂದು ಮತ್ತೆ ಗುಂಡಿನ ಕಾಳಗ ನಡೆದಿದೆ.