ಬೆಳಗಾವಿ: ಮೈಕ್ರೋ ಫೈನಾನ್ಸ್ ಕಿರುಕುಳಗಳು ರಾಜ್ಯದಲ್ಲಿ ಸುಗ್ರೀವಾಜ್ಞೆ ಜಾರಿಯಾಗಿದ್ದರೂ ಸಹ ನಿಲ್ಲುತ್ತಿಲ್ಲ. ಸರ್ಕಾರ ತಂದಿರುವ ಸುಗ್ರೀವಾಜ್ಞೆಗೆ ಈ ಮೈಕ್ರೋ ಕಂಪನಿಗಳು ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಮನೆಗೆ ನುಗ್ಗಿ ಠಿಕಾಣೆ ಹೂಡಿ ಕಿರುಕುಳ ನೀಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಫೈನಾನ್ಸ್ ಕಂಪನಿ ಸಿಬ್ಬಂದಿಗಳಿಂದ ಖಾನಾಪುರ ತಾಲೂಕಿನ ಕೇರವಾಡ, ಗುಂಡ್ಯಾನಟ್ಟಿ ಗ್ರಾಮದಲ್ಲಿ ಕಿರುಕುಳ ನೀಡಲಾಗಿದೆ. ಫೈನಾನ್ಸ್ ಕಂಪನಿ ಸಿಬ್ಬಂದಿಗಳು ಮನೆಗಳಿಗೆ ನುಗ್ಗಿ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸಾಲ ವಸೂಲಿಗಾಗಿ ಮನೆಯೊಳಗೆ ನುಗ್ಗಿ ಟಿಕಾಣಿ ಹೂಡಿರುವ ಘಟನೆಗಳು ವರದಿಯಾಗಿವೆ. ನಾಲ್ಕು ದಿನಗಳ ಕಾಲ ಸಾಲ ಮರುಪಾವತಿಗೆ ಕಾಲಾವಕಾಶ ಕೇಳಿದರೂ ಕೇಳದ ಫೈನಾನ್ಸ್ ಸಿಬ್ಬಂದಿಗಳು, ಹಣ ನೀಡುವವರೆಗೂ ಮನೆ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: ಶುಶ್ರೂಷಕಿ ಸ್ವಾತಿ ಬ್ಯಾಡಗಿ ಕೊಲೆ ಪ್ರಕರಣ: 2 ಆರೋಪಿಗಳ ಬಂಧನ
ಪೊಲೀಸರು ಮತ್ತು ಮಾಧ್ಯಮಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಬಂದು ರಾತ್ರಿ 10 ಗಂಟೆಯವರೆಗೂ ಮನೆಯಲ್ಲೇ ಠಿಕಾಣಿ ಹೂಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಬಡ ಮಹಿಳೆಯರು ಆರೋಪಿಸಿದ್ದಾರೆ.
ಇದೇ ರೀತಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ಸಾಪೂರ, ಕಟಾಂಬಳಿ ಮತ್ತು ವಂಟಮೂರಿ ಹಗದಾಳ ಗ್ರಾಮಗಳಲ್ಲಿ ಕೂಡ ಫೈನಾನ್ಸ್ ಕಂಪನಿಗಳ ಕಿರುಕುಳ ಮಿತಿ ಮೀರಿದೆ. ಸಾಲ ಮರುಪಾವತಿ ಮಾಡದಿದ್ದರೆ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ರದ್ದು ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಫೈನಾನ್ಸ್ ಕಿರುಕುಳ ತಪ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಂತ್ರಸ್ತರು ಮನವಿ ಸಲ್ಲಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಫೈನಾನ್ಸ್ ಹಾವಳಿಗೆ ಕಡಿವಾಣ ಹಾಕುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಮಹಿಳೆಯರು ಹಾಗೂ ಸಾರ್ವಜನಿರಕು ಆಕ್ರೋಶ ಹೊರಹಾಕಿದ್ದಾರೆ. ಮೈಕ್ರೋ ಫೈನಾನ್ಸ್ ಸಿಬ್ಬಂದಿ ರಾಜಾರೋಷವಾಗಿ ಅಕ್ರಮವಾಗಿ ಮನೆ ಪ್ರವೇಶಿಸಿ ಟಿಕಾಣಿ ಹೂಡಿ ಅವಾಜ್ ಹಾಕಿದರೂ ಯಾರೊಬ್ಬರೂ ಬಂದು ಕೇಳುತ್ತಿಲ್ಲ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಸಹಾಯ ಸಿಗುತ್ತಿಲ್ಲ ಎಂದು ಮಹಿಳೆಯರು ಆರೋಪ ಮಾಡಿದ್ದಾರೆ. ಸರ್ಕಾರದ ಆದೇಶ ಪಾಲನೆ ಮಾಡುವಲ್ಲಿ ಬೆಳಗಾವಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾಲಗಾರರಿಗೆ ಆಗುತ್ತಿದ್ದ ಕಿರುಕುಳ ತಪ್ಪಿಸುವ ಉದ್ದೇಶದಿಂದ ಹೊರಡಿಸಿದ್ದ ಸುಗ್ರೀವಾಜ್ಞೆಗೆ ಕಾಯ್ದೆಯ ಬಲ ನೀಡುವ ‘ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಮಸೂದೆ 2025’ಕ್ಕೆ ವಿಧಾನಸಭೆ ಒಮ್ಮತದ ಅಂಗೀಕಾರ ನೀಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಮಸೂದೆಯನ್ನು ಪರ್ಯಾಲೋಚನೆಗೆ ಮಂಡಿಸಿದರು. ಈ ಕುರಿತು ವಿವರ ನೀಡಿದ ಅವರು, ಕೆಲವು ಕಿರು ಹಣಕಾಸು ಸಂಸ್ಥೆಗಳು ಸಾಲ ವಸೂಲಿಗೆ ಕಠಿಣ ಕ್ರಮಗಳನ್ನು ಅನುಸರಿಸಿದ್ದರಿಂದ ಜನ ಆತ್ಮವಿಶ್ವಾಸ ಕಳೆದುಕೊಂಡಿದ್ದರು. ಇದರ ಪರಿಣಾಮ 19 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಲ ವಸೂಲಾತಿ ಸಂಸ್ಥೆಗಳ ಕಿರುಕುಳದಿಂದ ಚಾಮರಾಜನರ ಜಿಲ್ಲೆಯ ಗ್ರಾಮವೊಂದರ ಗ್ರಾಮಸ್ಥರು ಮನೆಗಳನ್ನು ಬಿಟ್ಟು ಹೋಗಿದ್ದರು. ಜನರಲ್ಲಿ ಆತ್ಮವಿಶ್ವಾಸ ತುಂಬುವ ಸಲುವಾಗಿ ಕಠಿಣ ಕಾನೂನಿನ ಅಗತ್ಯವಿತ್ತು ಎಂದು ಪ್ರತಿಪಾದಿಸಿದರು.
ರಾಜ್ಯದಲ್ಲಿ ನೋಂದಾಯಿತವಲ್ಲದ ಹಣಕಾಸು ಸಂಸ್ಥೆಗಳು, ಲೇವಾದೇವಿದಾರರು ಸುಮಾರು 140 ಸಾವಿರ ಕೋಟಿ ಸಾಲ ನೀಡಿದ್ದಾರೆ. ಕೆಲವು ಸಂಸ್ಥೆಗಳು ತಿಂಗಳಿಗೆ ಶೇ 10ರಷ್ಟು ಬಡ್ಡಿ ವಿಧಿಸುತ್ತಿವೆ. ಬಹುತೇಕ ಕಪ್ಪು ಹಣವೇ ಬಳಕೆ ಆಗುತ್ತಿತ್ತು.
ಸಣ್ಣ ವ್ಯಾಪಾರಿಗಳಿಗೆ ದಿನಕ್ಕೆ 15,000 ಸಾಲ ನೀಡುವಾಗಲೇ 7500 ಹಿಡಿದುಕೊಳ್ಳುತ್ತಾರೆ. ಸಂಜೆ 15,000 ವಾಪಸ್ ಮಾಡಬೇಕಾಗುತ್ತದೆ. ಕಿರುಕುಳ ನೀಡುವುದಕ್ಕೆ, ಬಡವರ ರಕ್ತ ಹೀರುವುದಕ್ಕೆ ಹೊಸ ಕಾಯ್ದೆಯಿಂದ ಕಡಿವಾಣ ಬೀಳಲಿದೆ ಎಂದು ಪಾಟೀಲ ತಿಳಿಸಿದರು.
ಇದನ್ನೂ ನೋಡಿ: LIVE: ಜನಚಳುವಳಿಗಳ ಬಜೆಟ್ ಅಧಿವೇಶನ