ಬೆಂಗಳೂರು : ರಾಜ್ಯದಲ್ಲಿ ಇತ್ತೀಚಿನ ಮೈಕ್ರೋ ಫೈನಾನ್ಸ್ ಗಳ ವಸೂಲಿ ದಂಧೆಗಳಿಗೆ ರಾಜ್ಯದ ರೈತರುಗಳು ಆತ್ಮಹತ್ಯೆ ಮಾರ್ಗವನ್ನು ಹಿಡಿದಿರುವುದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಹೊರಬೇಕು ಹಾಗೂ ಕೂಡಲೇ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಈ ಅಕ್ರಮ ಕಂಪನಿಗಳು ಸ್ಥಳೀಯ ರಾಜಕಾರಣಿಗಳು ಹಾಗೂ ಪೊಲೀಸ್ ಇಲಾಖೆಯ ಕೃಪಾಕಟಾಕ್ಷದಿಂದಾಗಿ ರೈತಾಪಿ ಮಕ್ಕಳ ಮೇಲೆ ಯಾವುದೇ ಆರ್ ಬಿ ಐ ನಿಯಮಾವಳಿಗಳು ಹಾಗೂ ಈ ನೆಲದ ಕಾನೂನುಗಳನ್ನು ಉಲ್ಲಂಘಿಸಿ ಅಕ್ರಮ ವಸೂಲಿ, ಬೆದರಿಕೆ, ಅಪಮಾನ ದಂತಹ ಕ್ರಿಮಿನಲ್ ಮಾರ್ಗಗಳಿಂದ ಚಕ್ರ ಬಡ್ಡಿ ವಸೂಲಿ ಮಾಡುತ್ತಿರುವುದು ರಾಜ್ಯದಲ್ಲಿ ಪೊಲೀಸ್ ಇಲಾಖೆ ವೈಫಲ್ಯಗೊಂಡಿರುವುದರ ಸಂಕೇತವಾಗಿದೆ.
ಸ್ಥಳೀಯ ಸಹಕಾರಿ ಸಂಸ್ಥೆಗಳು ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಹಣಕಾಸು ನೆರವು ನೀಡದೆ ಕೇವಲ ಪ್ರಭಾವಿಗಳ- ಸ್ಥಳೀಯ ಶಾಸಕರುಗಳ ಬಿಗಿ ಮುಷ್ಟಿಯಲ್ಲಿ ಸಿಲುಕಿಕೊಂಡಿವೆ. ಮತ್ತೊಂದು ಕಡೆ ಸರ್ಕಾರದಿಂದ ರೈತಾಪಿ ವರ್ಗಗಳಿಗೆ ಬೆಳೆ ನಷ್ಟ ಪರಿಹಾರಗಳಿಗೆ ಪರಿಣಾಮಕಾರಿಯಾದಂತಹ ಯೋಜನೆಗಳು ತಲುಪದೇ ಅನಿವಾರ್ಯವಾಗಿ ರೈತರು ಸಾಲಕ್ಕಾಗಿ ಇಂತಹ ಅಕ್ರಮ ಫೈನಾನ್ಸ್ ಕಂಪನಿಗಳ ಮೊರೆ ಹೋಗಿ ತಮ್ಮ ಜೀವಗಳನ್ನೇ ಬಲಿ ಕೊಡುವಂತಹ ವಾತಾವರಣ ಹಾಗೂ ಸಂದರ್ಭಗಳು ರಾಜ್ಯದಲ್ಲಿ ಸೃಷ್ಟಿಯಾಗಿದೆ.
ರಾಜ್ಯದ ಪೊಲೀಸ್ ಇಲಾಖೆ ಹಾಗೂ ಕೇಂದ್ರದ ಜಾರಿ ನಿರ್ದೇಶನಾಲಯ ಕಣ್ಮುಚ್ಚಿ ಕುಳಿತಿರುವುದು ಬೇಸರದ ಸಂಗತಿಯಾಗಿದೆ. ಆರಂಭದಲ್ಲಿ ಈ ಕಂಪನಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದ್ದಲ್ಲಿ ಈಗಾಗಲೇ ಆತ್ಮಹತ್ಯೆಗೆ ಶರಣಾಗಿರುವ ನೂರಾರು ರೈತರ ಜೀವವನ್ನು ಉಳಿಸಬಹುದಾಗಿತ್ತು. ಆದರೆ ಹಲವು ತಿಂಗಳುಗಳಿಂದ ಸರ್ಕಾರ ಹಾಗೂ ವಿಪಕ್ಷಗಳು ಇಲ್ಲಸಲ್ಲದ ರಾಜಕೀಯ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡು ಇಂದು ನೂರಾರು ರೈತರ ಆತ್ಮಹತ್ಯೆಗೆ ತಾವುಗಳೇ ನೇರ ಹೊಣೆ ಹೊರಬೇಕೆಂದು ಆಗ್ರಹಿಸಿದ್ದಾರೆ.
ಈ ಕೂಡಲೇ ಕಾನೂನಿನ ಬಿಗಿ ಕುಣಿಕೆಯನ್ನು ಹಣಕಾಸು ಕಂಪನಿಗಳ ವಿರುದ್ಧ ಪ್ರಯೋಗಿಸಬೇಕು ಹಾಗೂ ಕೇಂದ್ರದ ಜಾರಿ ನಿರ್ದೇಶನಾಲಯಕ್ಕೆ ಕ್ರಮ ತೆಗೆದುಕೊಳ್ಳಲು ಶೀಘ್ರ ಶಿಫಾರಸ್ಸು ಮಾಡಿ ಮುಂಬರುವ ದಿನಗಳಲ್ಲಿ ರೈತರ ಆತ್ಮಹತ್ಯೆಗಳನ್ನು , ಶೋಷಣೆಗಳನ್ನು ತಪ್ಪಿಸಬೇಕೆಂದು ಮುಖ್ಯಮಂತ್ರಿ ಚಂದ್ರು ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ.