ಮಂಡ್ಯ: ನರೇಗಾ ಕಾನೂನನ್ನು ತಿರುಚಲು ಹೊರಟಿದ್ದು, ಜಾತಿ ಆಧಾರದಲ್ಲಿ ವಿಂಗಡಿಸಿ ಕೆಲಸ ಮತ್ತು ಕೂಲಿಯನ್ನು ನೀಡುವಂತೆ ಮಾಡಲು ಮುಂದಾಗುವುದನ್ನು ತಡೆಯಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆ(ಎಐಎಡಬ್ಲ್ಯೂಯು) ಸಂಘಟನೆ ವತಿಯಿಂದ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ಕೇಂದ್ರದ ಬಿಜೆಪಿ ಸರಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯಡಿ ದುಡಿಯುವ ಕೂಲಿಕಾರರ ಐಕ್ಯತೆಯನ್ನು ಒಡೆದು ಮುಂದಿನ ಅವಧಿಯಲ್ಲಿ ವೇತನ/ಕೂಲಿ ನೀಡುವಾಗ ತಾರತಮ್ಯ ಮಾಡುವ ಸರ್ಕಾರದ ಉದ್ದೇಶವನ್ನು ಎಐಎಡಬ್ಲ್ಯೂಯು ಸಂಘಟನೆಯು ಬಲವಾಗಿ ಖಂಡಿಸಿದೆ.
ಕೇಂದ್ರ ಸರಕಾರ ಇಂತಹ ನೀತಿಯ ವಿರುದ್ಧ ಇಂದು ದೇಶಾದ್ಯಂತ ಪ್ರತಿಭಟಿಸಿ ಕೂಡಲೇ ತಿದ್ದುಪಡಿಯನ್ನು ಮಾಡಬಾರದೆಂದು ಸಂಘಟನೆಯು ಆಕ್ಷೇಪಣೆಯನ್ನು ಸಲ್ಲಿಸಿದೆ. ಹೋರಾಟದ ಮೂಲಕ ಸರಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮನವಿಯನ್ನು ಸಲ್ಲಿಸಿದೆ.
ಎಐಎಡಬ್ಲ್ಯೂಯು ಸಂಘಟನೆಯು ಜಿಲ್ಲಾಧ್ಯಕ್ಷರಾದ ಎಂ ಪುಟ್ಟಮಾದು ಅವರು ʻʻಉದ್ಯೋಗ ಖಾತ್ರಿ ಕೂಲಿಯನ್ನು ಜಾತಿ ಆಧಾರದಲ್ಲಿ ವಿಭಜಿಸುವುದು ಜಾತಿ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವಂತಾಗುತ್ತದೆ. ಮತ್ತು ಎಸ್.ಸಿ, ಎಸ್.ಟಿ, ಹಿಂದುಳಿದ ವರ್ಗ, ಮುಂದುವರೆದ ಜಾತಿ ಎಂದು ಈ ಆಧಾರದಲ್ಲಿ ವಿಂಗಡಿಸಿ ಕೆಲಸ ಮತ್ತು ಕೂಲಿಯನ್ನು ಕೊಡಲು ನರೇಗಾ ಕಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿರುವುದು ಅತ್ಯಂತ ಖಂಡನೀಯವಾಗಿದ್ದು ಇದನ್ನು ಯಾವುದೇ ಕಾರಣಕ್ಕೂ ಮಾಡಕೂಡದುʼʼ ಎಂದು ಎಂದು ಆಗ್ರಹಿಸಿದರು.
ಸಂಘಟನೆಯು ದೇಶದ ಐಕ್ಯತೆ ಮತ್ತು ಸಮಾನತೆಯ ಸಾರವಾಗಿರುವ ಈ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಲು ಮುಂದಾಗಬೇಕೆಂದು ಹಾಗೂ ಇದಕ್ಕಾಗಿ ಹೆಚ್ಚಿನ ಹಣವನ್ನು ಪ್ರತಿವರ್ಷ ಬಜೆಟ್‌ನಲ್ಲಿ ನೀಡಬೇಕೆಂದು ಒತ್ತಾಯಿಸಿವೆ.
ಈ ತಿದ್ದುಪಡಿಯಿಂದಾಗಿ ಸಮಾನ ವೇತನ ಪಡೆಯಬೇಕಾದ ಕೆಲಸಗಾರರಿಗೆ ತಾರತಮ್ಯ ಮಾಡಿದಂತಾಗಿ ಕೂಲಿ ಪಾವತಿಯಲ್ಲಿ ಅನಗತ್ಯ ವಿಳಂಬ ಹಾಗೂ ಕೂಲಿ ಪಾವತಿಯ ಪ್ರಕ್ರಿಯೆಯಲ್ಲಿ ಗೊಂದಲಕ್ಕೆ ಆಸ್ಪದ ಮಾಡಿದಂತಾಗುವುದು. ಇದು ಸಮಾನ ವೇತನ ಪಾವತಿಯ ಸಿದ್ಧಾಂತಕ್ಕೆ ಮತ್ತು ಸಮಾನ ಬದುಕು ಸಮಾನ ಬಾಳುವೆ ನಡೆಸಬೇಕೆಂಬ ನೀತಿಗೆ ಹಾಗೂ ಸಂವಿಧಾನಿಕ ಹಕ್ಕುಗಳನ್ನು ಮೊಟಕು ಮಾಡಿದಂತಾಗುವುದು. ಅದಲ್ಲದೆ ಎಸ್.ಸಿ., ಎಸ್.ಟಿ., ಹಿಂದುಳಿದ ಜಾತಿ ಇತರ ಬಡ ಕೆಲಸಗಾರರ ಹಕ್ಕುಗಳಿಗೆ ಅನ್ಯಾಯವಾಗುವುದು.
ಆದ್ದರಿಂದ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಅನಗತ್ಯ ಶಿಫಾರಸನ್ನು ಹಿಂಪಡೆಯಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ. ಬದಲಾಗಿ ಪ್ರತಿಯೊಂದು ಕೆಲಸ ಬಯಸುವ ಕುಟುಂಬಕ್ಕೆ ವರ್ಷದಲ್ಲಿ 200 ದಿನಗಳ ಕೆಲಸ ನೀಡಬೇಕೆಂದು ದಿನದ ವೇತನವನ್ನು ರೂ. 600/-ಕ್ಕೆ ಏರಿಸಬೇಕೆಂದು ಎಐಎಡಬ್ಲ್ಯೂಯು ಸಂಘಟನೆಯು ಒತ್ತಾಯಿಸಿದೆ ಹಾಗೂ ಕೆಲಸಗಾರರಿಗೆ ಬಾಕಿ ಇರುವ ಕೂಲಿಯನ್ನು ಕೂಡಲೇ ಪಾವತಿಸಬೇಕೆಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಎಐಎಡಬ್ಲ್ಯೂಯು ಸಂಘಟನೆಯು ಜಿಲ್ಲಾಧ್ಯಕ್ಷರಾದ ಎಂ ಪುಟ್ಟಮಾದು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಹನುಮೇಶ್, ಮಳವಳ್ಳಿ ತಾಲ್ಲೂಕು ಅಧ್ಯಕ್ಷ ಬಿ.ಎಂ. ಶಿವಮಲ್ಲಯ್ಯ, ರಾಜ್ಯ ಸಹ ಕಾರ್ಯದರ್ಶಿ ಕೆ. ಹನುಮೇಗೌಡ, ಮಳವಳ್ಳಿ ತಾಲ್ಲೂಕು ಕಾರ್ಯದರ್ಶಿ ಸರೋಜಮ್ಮ, ಮದ್ದೂರು ತಾಲ್ಲೂಕು ಕಾರ್ಯದರ್ಶಿ ಅಜಯ್‌ಕುಮಾರ್, ಮಂಡ್ಯ ತಾಲ್ಲೂಕು ಅಧ್ಯಕ್ಷರಾದ ಅಮಾಸಯ್ಯ, ರಾಜ್ಯ ಸಮಿತಿ ಸದಸ್ಯರಾದ ಮಧುಕುಮಾರ್, ಟಿ ಸಿ ವಸಂತ, ತಳಗವಾದಿ ವಲಯ ಅಧ್ಯಕ್ಷರಾದ ರಾಮಣ್ಣ, ಸುಜ್ಜಲೂರು ವಲಯ ಆಧ್ಯಕ್ಷರಾದ ಪಾಪಣ್ಣ @ ಕಪನೀಗೌಡ, ಮುಖಂಡರಾದ ಪ್ರೇಮ, ಕೆಪಿಆರ್‌ಎಸ್ ಸಂಘಟನೆ ಮುಖಂಡರಾದ ಟಿ.ಹೆಚ್. ಆನಂದ್ ಮತ್ತಿತರರು ಭಾಗವಹಿಸಿದ್ದರು.