ಬೆಂಗಳೂರು: ನಮ್ಮ ಮೆಟ್ರೊ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿದ್ದ ಪ್ರದೇಶದಲ್ಲಿ ರಸ್ತೆ ಮಧ್ಯದಿಂದ ಭೂಕುಸಿತ ನಡೆದ ಪ್ರಕರಣ ಗುರುವಾರ ವರದಿಯಾಗಿದೆ. ನಾಗವಾರ ಮುಖ್ಯ ರಸ್ತೆಯ ಉಮರ್ ನಗರ ಬಳಿ ರಸ್ತೆ ಕುಸಿದಿದೆ. ತಕ್ಷಣ ಮೆಟ್ರೊ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಕಾಂಕ್ರಿಟ್ ಹಾಕಿ ಹೊಂಡವನ್ನು ಮುಚ್ಚಿದ್ದಾರೆ.
ನಾಗವಾರ ತನಕದ ಮೆಟ್ರೊ ಕಾಮಗಾರಿಗಾಗಿ ಸುರಂಗ ಮಾರ್ಗವನ್ನು ಮೆಟ್ರೊದ ಯಂತ್ರಗಳು ನಡೆಸುತ್ತಿವೆ. ಈ ವೇಳೆ ಭೂಕುಸಿತ ಉಂಟಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ರಸ್ತೆ ಏಕಾಏಕಿ ಕುಸಿದ ಕಾರಣ ಸ್ಥಳೀಯರು ಆತಂಕಗೊಂಡಿದ್ದರು. ಆದರೆ ಯಾವುದೇ ಹಾನಿ ಸಂಭವಿಸಿಲ್ಲ. ತಕ್ಷಣ ಪೊಲೀಸರು ರಸ್ತೆಯನ್ನು ಬಂದ್ ಮಾಡಿ ಅಪಾಯವನ್ನು ತಪ್ಪಿಸಿದ್ದಾರೆ.
ನಮ್ಮ ಮೆಟ್ರೋ ಕಾಮಗಾರಿಯ ವೇಳೆ ಉಂಟಾಗುತ್ತಿರುವ ಅಲುಗಾಟದಿಂದ ಅಕ್ಕ ಪಕ್ಕದ ಕಟ್ಟಡಗಳಲ್ಲೂ ಬಿರುಕು ಮೂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಾಮಗಾರಿ ನಡೆಯುವ ವೇಳೆ ನಿರು ತುಂಬಿಕೊಂಡು ರಸ್ತೆಯಲ್ಲಿ ಕುಸಿತ ಉಂಟಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸ್ಥಳಕ್ಕೆ ಮೆಟ್ರೊ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಹೆಬ್ಬಗೋಡಿ ಮೆಟ್ರೊ ನಿಲ್ದಾಣಕ್ಕೆ ‘ಬಯೋಕಾನ್’ ಹೆಸರು | ಪ್ರತಿಭಟನೆ
ಈ ಹಿಂದೆ ಸಂಭವಿಸಿದ ಮೆಟ್ರೋ ಅನಾಹುತಗಳಿವು
ಈ ಹಿಂದೆಯೂ ಸಹ ಇಂತಹ ಘಟನೆಗಳು ಮರುಕಳಿಸಿವೆ. ಸಿಲ್ಕ್ ಬೋರ್ಡ್ನಿಂದ ಕೆ.ಆರ್.ಪುರಂ ಮಾರ್ಗ ಕಾಮಗಾರಿ ವೇಳೆ 2021 ಅ.24 ರಂದು ಬೆಳಗ್ಗೆ 6.30 ಕ್ಕೆ ಕ್ರೇನ್ ಅರ್ಧಕ್ಕೆ ಮುರಿದು ಬಿದ್ದಿತ್ತು. 2020ರ ಫೆ. 28 ರಂದು ಕೆಂಗೇರಿ ನಿಲ್ದಾಣದಲ್ಲಿ ಎಸ್ಕಲೇಟರ್ ಅಳವಡಿಸುವ ವೇಳೆ ಕಾರ್ಮಿಕ ಬಿದ್ದು ಮೃತಪಟ್ಟಿದ್ದ. 2019ರ ಜನವರಿ 28 ರಂದು ಶ್ರೀರಾಮಪುರ ಮೆಟ್ರೋ ನಿಲ್ದಾಣದಲ್ಲಿ ಅಜ್ಜಿಯ ತೋಳಲ್ಲಿದ್ದ ಮಗು ಜಾರಿ ಎಸ್ಕಲೇಟರ್ನಿಂದ ಬಿದ್ದು ಮೃತಪಟ್ಟಿತ್ತು. 2019ರ ನವೆಂಬರ್ನಲ್ಲಿ 7 ಕ್ರಷರ್ ಇಳಿಸುವಾಗ ಚೈನ್ ತುಂಡಾಗಿ ಕಾರ್ಮಿಕ ಸಮೀರ್ ಮೃತಪಟ್ಟಿದ್ದ. 2019ರ ಆಗಸ್ಟ್ನಲ್ಲಿ ಇಂದಿರಾ ನಗರ ಮೆಟ್ರೋ ಸ್ಟೇಷನ್ ಪಿಲ್ಲರ್ ಬೇರಿಂಗ್ನಲ್ಲಿ ಬಿರುಕು ಕಾಣಿಸಿಕೊಂಡಿತ್ತು. 2018ರಲ್ಲಿ ಟ್ರಿನಿಟಿ ನಿಲ್ದಾಣ ನೇರಳೆ ಮೆಟ್ರೋ ಮಾರ್ಗ ಬೈಯಪ್ಪನಹಳ್ಳಿ ಮುತ್ತು ಮೈಸೂರು ರಸ್ತೆಯಲ್ಲಿನ ಪಿಲ್ಲರ್ 155 ರಲ್ಲಿ ಬಿರುಕು ಕಾಣಿಸಿಕೊಂಡಿತ್ತು.
2023ರ ಜನವರಿಯಲ್ಲಿ ನಾಗವಾರ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ದಿಢೀರ್ ಕುಸಿತಗೊಂಡು ತಾಯಿ–ಮಗ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಪಿಲ್ಲರ್ 218ರಲ್ಲಿ ಸ್ಟೇಜಿಂಗ್ ಮತ್ತು ಗೈವೈರ್ ಬೆಂಬಲದೊಂದಿಗೆ ಪಿಲ್ಲರ್ ನಿರ್ಮಾಣ ಹಾಗೂ ಬಲವರ್ಧನೆ ಕಾರ್ಯ ನಡೆಯುತ್ತಿತ್ತು. ಆದರೆ, 18 ಮೀಟರ್ ಎತ್ತರದ ಪಿಲ್ಲರ್ನ ಗೈವೈರ್ಗಳ ಪೈಕಿ ಒಂದು ತಂತಿ ಸಡಿಲಗೊಂಡು ತುಂಡಾಗಿತ್ತು, ಇದರಿಂದಾಗಿ ಪಿಲ್ಲರ್ ಕೆ.ಆರ್.ಪುರಂ ಹೆಬ್ಬಾಳ ಮುಖ್ಯರಸ್ತೆಗೆ ಅಡ್ಡವಾಗಿ ಬಿದ್ದಿದ್ದು, ಸಾವುನೋವು ಸಂಭವಿಸಿತ್ತು.