ಬೆಂಗಳೂರು: ಹೊಸ ವರ್ಷ ಆರಂಭವಾಗುತ್ತಿದ್ದಂತೆ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಹೊಸ ವರ್ಷಕ್ಕೆ ನಮ್ಮ ಮೆಟ್ರೊ ಪ್ರಯಾಣದ ದರ ಬಹುತೇಕ ಹೆಚ್ಚಳವಾಗುವ ಸಾಧ್ಯತೆ ಇದೆ. ಶೇ. 10-15 ರಷ್ಟು ಏರಿಕೆ ಮಾಡುವ ಸಂಭವವಿದೆ. ಮೆಟ್ರೋ
ದರ ಪರಿಷ್ಕರಣೆ ಜವಾಬ್ದಾರಿ ಹೊಂದಿರುವ ದರ ನಿಗದಿ ಸಮಿತಿಯು (ಎಫ್‌ಎಫ್‌ಸಿ) ಶೀಘ್ರದಲ್ಲೇ ತನ್ನ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಿದೆ. ಸಮಿತಿಯು ಈ ಹಿಂದೆ ಪ್ರಸ್ತಾವಿತ ಪ್ರಯಾಣ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಸಲಹೆಗಳನ್ನು ಆಹ್ವಾನಿಸಿತ್ತು.
ಪ್ರಸ್ತುತ, ಬೆಂಗಳೂರಿನಲ್ಲಿ ಕನಿಷ್ಠ ದರ 10 ರೂ. ಮತ್ತು ಗರಿಷ್ಠ 60 ರೂ. ಇದೆ. ಸ್ಮಾರ್ಟ್‌ಕಾರ್ಡ್ ಬಳಕೆದಾರರು ಈ ದರಗಳಲ್ಲಿಶೇ. 5ರಷ್ಟು ರಿಯಾಯಿತಿ ಪಡೆಯುತ್ತಾರೆ. 2017ರಲ್ಲಿ ಕೊನೆಯದಾಗಿ ದರ ಪರಿಷ್ಕರಣೆ ಮಾಡಲಾಗಿತ್ತು.
ನ್ಯಾಯಮೂರ್ತಿ ಆರ್. ಥರಾಣಿ (ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಧಿಮೂಧಿರ್ತಿ) ನೇತೃತ್ವದ ಮೂವರು ಸದಸ್ಯರ ಸಮಿತಿಯು ಮೆಟ್ರೊ ಪ್ರಯಾಣ ದರ ಪರಿಷ್ಕರಿಸಲಿದೆ. ಸಮಿತಿಯಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸತ್ಯೇಂದ್ರ ಪಾಲ್ ಸಿಂಗ್ ಮತ್ತು ಕರ್ನಾಟಕದ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ ಕೂಡ ಇದ್ದಾರೆ. ಮೆಟ್ರೋ
ಪ್ರಸ್ತಾವಿತ ದರ ಪರಿಷ್ಕರಣೆಗಳು ನ್ಯಾಯೋಚಿತ ಮತ್ತು ಸಮತೋಲಿತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸಮಿತಿಯು ಭಾರತ ಮತ್ತು ಅಂತಾರಾಷ್ಟ್ರೀಯ ಮಟ್ಟದ ವಿವಿಧ ನಗರಗಳಲ್ಲಿ ಮೆಟ್ರೊ ದರ ಪರಿಶೀಲಿಸಿದೆ. ಶೀಘ್ರದಲ್ಲೇ ಶಿಫಾರಸುಗಳೊಂದಿಗೆ ವಿಸ್ತೃತ ವರದಿಯನ್ನು ಸರಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ.
ಬೆಂಗಳೂರಿನ ಮೆಟ್ರೊ ಜಾಲ ಸರಿಸುಮಾರು 76 ಕಿಲೋ ಮೀಟರ್‌ಗಳಷ್ಟು ವ್ಯಾಪಿಸಿದೆ. ಇದು ಹೊಸದಿಲ್ಲಿ ನಂತರ ಭಾರತದ ಎರಡನೇ ಅತಿದೊಡ್ಡ ಮೆಟ್ರೊ ಜಾಲವಾಗಿದೆ. ಪ್ರಸ್ತುತ ಪ್ರತಿದಿನ 7.5 ಲಕ್ಷಕ್ಕೂ ಅಧಿಕ ಜನರು ಮೆಟ್ರೊದಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಶೀಘ್ರ ಆರ್.ವಿ.ರಸ್ತೆ- ಬೊಮ್ಮಸಂದ್ರ ಮಾರ್ಗ ಕೂಡ ಸಂಚಾರಕ್ಕೆ ಮುಕ್ತವಾಗಲಿದ್ದು, ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಅಧಿಕವಾಗುವ ಸಾಧ್ಯತೆ ಇದೆ.