ಬೆಂಗಳೂರು: ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷವಾದರೂ ಸಹ ಮೇಕೆದಾಟು ಯೋಜನೆಗೆ ಪರಿಸರ ಇಲಾಖೆಯಿಂದ ನಿರಾಕ್ಷೇಪಣ ಪತ್ರ ಪಡೆದಿಲ್ಲ. ಪಾದಯಾತ್ರೆ ರಾಜಕೀಯಕ್ಕಾಗಿ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಕುಡಿಯುವ ನೀರಿನ ವಿಷಯದಲ್ಲಿ ಯಾರೂ ರಾಜಕೀಯ ಮಾಡುವುದಿಲ್ಲ. ಮೇಕೆದಾಟು ಯೋಜನೆ ವಿಚಾರದಲ್ಲಿ ಸರ್ಕಾರವನ್ನು ಬಡಿದೆಬ್ಬಿಸಲು ನಾವು ಹೋರಾಟ ಮಾಡುತ್ತಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದರು.
ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಅವರು ವಿಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.
ನಮ್ಮ ಸರ್ಕಾರ ಮೇಕೆದಾಟು ಯೋಜನೆಗೆ 2017 ರಲ್ಲಿ ವಿಸ್ತೃತ ಯೋಜನಾ ವರದಿ ತಯಾರಿಸಿ, ಕೇಂದ್ರ ಜಲಮಂಡಳಿಗೆ ನೀಡಿದ್ದೆವು. ಅವರು ಕೆಲವು ಮಾಹಿತಿ ಕೇಳಿ ರಾಜ್ಯಕ್ಕೆ ವಾಪಾಸು ಕಳಿಸಿದ್ದರು. ಆಗ ನಮ್ಮ ಸರ್ಕಾರ ಇರಲಿಲ್ಲ, ಸಮ್ಮಿಶ್ರ ಸರ್ಕಾರ ಇತ್ತು. ಆಗ ಡಿ.ಕೆ ಶಿವಕುಮಾರ್ ಜಲ ಸಂಪನ್ಮೂಲ ಸಚಿವರಾಗಿದ್ದರು, ಅವರು ಕೇಂದ್ರ ಜಲಮಂಡಳಿ ಕೇಳಿದ್ದ ಹೆಚ್ಚಿನ ಮಾಹಿತಿಯನ್ನು ಒದಗಿಸಿದ್ದರು ಮತ್ತು ಪರಿಷ್ಕೃತ ಯೋಜನಾ ವರದಿ ಮಾಡಿ ಕಳಿಸಿದ್ದರು. ಬಿಜೆಪಿ ಸರ್ಕಾರ ಬಂದು ಮೂರು ವರ್ಷ ಸಮೀಪಿಸುತ್ತಿದ್ದರೂ ಸಹ ಯೋಜನೆ ಅನುಷ್ಠಾನಕ್ಕೆ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದರು.
ರಾಜಕೀಯ ಹೋರಾಟ ಅನ್ನೋ ಬೊಮ್ಮಯಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಯಿ ಹೋರಾಟದ ಮೂಲಕ ಬಂದವರಲ್ಲ. ಪಾದಯಾತ್ರೆ ಅನ್ನೋ ಕಲ್ಪನೆ ಸಹ ಇವರಿಗಿಲ್ಲ. ಯಡಿಯೂರಪ್ಪ ಮೂಲಕ ಅಧಿಕಾರಕ್ಕೆ ಬಂದವರು. ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಸವರಾಜ ಬೊಮ್ಮಯಿ ಬಂದಿಲ್ಲ. ಯಡಿಯೂರಪ್ಪ ಆಪರೇಷನ್ ಕಮಲ ಮಾಡಿದಕ್ಕೆ ಇವರು ಅಧಿಕಾರಕ್ಕೆ ಬಂದರು.
ನೀವೆಲ್ಲಾ ಹಬ್ಬದ ದಿನದಂದು ಬಂದಿದ್ದೀರಿ, ಇದು ನಿಜಕ್ಕೂ ನಮಗೆ ಉತ್ತೇಜನ ನೀಡುತ್ತಿದೆ. ನಮ್ಮ ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ತಿದೆ. ಜನರು ಸ್ವಯಂ ಪ್ರೇರಿತರಾಗಿ ಬೆಂಬಲ ನೀಡ್ತಿದ್ದಾರೆ. ನಮ್ಮ ಹೋರಾಟ ಯಶಸ್ವಿಯಾಗುತ್ತೆ. ಬಜೆಟ್ ಅಧಿವೇಶನದಲ್ಲಿ ವಿಷಯ ಪ್ರಸ್ತಾಪ ಮಾಡ್ತೀವಿ. ನೂರಕ್ಕೆ ನೂರು ಮುಂದೆ ನಾವು ಅಧಿಕಾರಕ್ಕೆ ಬರ್ತಿವಿ. ಜನರ ಅಶಿರ್ವಾದ ನಮ್ಮ ಮೇಲಿದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ ʻʻಗುರುವಾರದಂದು ಈ ಪಾದಯಾತ್ರೆ ಸಮಾರೋಪಗೊಳ್ಳಲಿದೆ. ವಿಜಯನಗರ ಮತ್ತು ಸುತ್ತಮುತ್ತಲಿನ ಜನರು ಮೆಟ್ರೊ ರೈಲು ಬಳಸಿಕೊಂಡೇ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ. ಸುರೇಶ್, ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕ ಪ್ರಿಯಾ ಕೃಷ್ಣ, ಮುಖಂಡರಾದ ಎಂ. ನಾರಾಯಣಸ್ವಾಮಿ, ಕುಸುಮಾ ಉಪಸ್ಥಿತರಿದ್ದರು.