ರಾಮನಗರ: ಮೇಕೆದಾಟು ಅಣೆಕಟ್ಟೆ ನಿರ್ಮಾಣ ಯೋಜನೆಗೆ ಆಗ್ರಹಿಸಿ ನೀರಿಗಾಗಿ ನಡಿಗೆ ಹೆಸರಿನಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಎರಡನೇ ಹಂತದ ಪಾದಯಾತ್ರೆಗೆ ಭಾನುವಾರ ರಾಮನಗರದಲ್ಲಿ ಚಾಲನೆ ನೀಡಲಾಗಿದೆ.
ಮೈಸೂರು-ಬೆಂಗಳೂರು ಹೆದ್ದಾರಿ ಪಕ್ಕದಲ್ಲಿ ಈ ಕಾರ್ಯಕ್ರಮಕ್ಕಾಗಿ ಸಿದ್ಧಗೊಂಡಿದ್ದ ವೇದಿಕೆಯಲ್ಲಿ ವಂದೇ ಮಾತರಂ, ನಾಡಗೀತೆ, ರೈತಗೀತೆ ಮೂಲಕ ಕಾಂಗ್ರೆಸ್ ನಾಯಕರು ಪಾದಯಾತ್ರೆಗೆ ಚಾಲನೆ ನೀಡಿದರು.
ಈ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಮೇಕೆದಾಟು ಯೋಜನೆ ಆಗಲೇಬೇಕು. ಇದೊಂದು ಬ್ಯಾಲೆನ್ಸಿಂಗ್ ರಿಸರ್ವ್ ವಾಟರ್. ಮೇಕೆದಾಟು ಯೋಜನೆಯಿಂದ 67 ಟಿಎಂಸಿ ನೀರು ಸಿಗಲಿದೆ. 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಇದಕ್ಕೆ ಕೇಂದ್ರ ಸರ್ಕಾರ ಕ್ಲಿಯರೆನ್ಸ್ ಕೊಡಬೇಕು. ರಾಜ್ಯ ಸರ್ಕಾರ ಯೋಜನೆ ಕೈಗೆತ್ತಿಕೊಳ್ಳಬೇಕು, ಪರಿಸರ ಇಲಾಖೆ ಒಪ್ಪಿಗೆ ಮೊದಲು ಪಡೆಯಬೇಕು. ಇಲ್ಲವಾದರೆ ರಾಜ್ಯದ ಜನರಿಗೆ ನೀವು ಮೋಸಮಾಡಿದಂತೆ.
ಬಿಜೆಪಿಯವರಿಗೆ ಮಾನ, ಮರ್ಯಾದೆ ಇಲ್ಲ. ನಾವು ಯೋಜನೆಗೆ ಆಗ್ರಹಿಸಿ ಹೋರಾಟ ಮಾಡ್ತಿದ್ದೇವೆ. ನಮ್ಮ ಪಾದಯಾತ್ರೆ ನಿಲ್ಲಲ್ಲ. ಐದು ದಿನಗಳ ಕಾಲ ಈ ಪಾದಯಾತ್ರೆ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ, ಹರಿಪ್ರಸಾದ್, ದೃವನಾರಾಯಣ್, ಕೆ.ಹೆಚ್.ಮುನಿಯಪ್ಪ, ಸಂಸದ ಡಿ.ಕೆ.ಸುರೇಶ್, ಚೆಲುವರಾಯಸ್ವಾಮಿ ಶಾಸಕರು, ಎಂಎಲ್ಸಿಗಳು ಸೇರಿದಂತೆ ಘಟಾನುಘಟಿ ನಾಯಕರು ಭಾಗಿಯಾಗಿದ್ದರು. ಅಲ್ಲದೆ ಚಿತ್ರನಟರಾದ ನೆನಪಿರಲಿ ಪ್ರೇಮ್, ಸಾಧು ಕೋಕಿಲ ಪಾದಯಾತ್ರೆಯಲ್ಲಿ ಭಾಗಿಯಾಗಿರುವುದು ಗಮನಸೆಳೆಯಿತು.