ಕೊಡಗು: ಕಾವೇರಿ ನದಿ ನೀರಿನಿಂದಾಗಿ ರಾಜ್ಯದ ಮೂರು ಕೋಟಿಗೂ ಹೆಚ್ಚು ಜನರಿಗೆ ಅನುಕೂಲವಾಗುತ್ತಿದೆ. ಈ ನದಿಯಿಂದ ಕೋಟಿ ಕೋಟಿ ಜನರ ಜೀವನ ಸಾಗುತ್ತಿದೆ ಎಂದು ತಲಕಾವೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ನೀರಿನ ಬಳಕೆ ವಿಚಾರದಲ್ಲಿ ಹಲವು ಹೋರಾಟ ಆಗುತ್ತಿದೆ. ಅನೇಕ ಮಹನೀಯರು ಕಾವೇರಿಗಾಗಿ ಹೋರಾಟ ಮಾಡಿದ್ದಾರೆ. ಈ ವರ್ಷದಲ್ಲಿ 104 ಟಿಎಂಸಿ ನೀರು ಸಮುದ್ರ ಸೇರಿದೆ. ವ್ಯರ್ಥವಾಗುವ ನೀರನ್ನು ತಡೆಯಲು ಮೇಕೆದಾಟು ಅಣೆಕಟ್ಟು ನಿರ್ಮಾಣ ಆಗಬೇಕು. ಆಗ ಅದರಲ್ಲಿ ವಿದ್ಯುತ್ ಉತ್ಪಾದನೆಯನ್ನು ಮಾಡಬಹುದಾಗಿದೆ. ಇದರಿಂದ ಇನ್ನಷ್ಟು ಜನತೆ ಅನುಕೂಲ ಪಡೆದುಕೊಳ್ಳಲಿದ್ದಾರೆ ಎಂದರು.
ಮೇಕೆದಾಟಿಗೆ ಅಣೆಕಟ್ಟು ನಿರ್ಮಾಣ ಮಾಡುವುದರಿಂದ ಬೆಂಗಳೂರಿಗೆ ನಿರಂತರ ನೀರು ಸರಬರಾಜು ಆಗುತ್ತದೆ. ಮಳೆ ಇಲ್ಲದಾಗ ರೈತರಿಗೆ ನೀರು ಒದಗಿಸಬಹುದು. ಯೋಜನೆಗೆ ಕೇಂದ್ರ ಅನುಮೋದನೆ ನೀಡಿದೆ. ಪರಿಸರ ವಿಭಾಗವು ಅನುಮೋದನೆ ನೀಡಬೇಕು ಮತ್ತು ಕೇಂದ್ರ ಸರಕಾರ ಪರಿಹಾರವನ್ನು ನೀಡುವ ವ್ಯವಸ್ಥೆಯಾಗಬೇಕಿದೆ. ಕೂಡಲೇ ಈ ಯೋಜನೆ ಪ್ರಾರಂಭ ಆಗಬೇಕು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಒತ್ತಡ ಹಾಕಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆ ಜನವರಿ 9 ರಿಂದ 19ರವರೆಗೆ ನಡೆಯಲಿದೆ. ಪಾದಯಾತ್ರೆ ಯಶಸ್ಸಿಗೆ ಕಾವೇರಿಗೆ ಪೂಜೆ ಸಲ್ಲಿಸಿದ್ದೇನೆ ಎಂದು ಹೇಳಿದರು.
ಕಾವೇರಿ ನಮ್ಮದು, ನೀರು ನಮ್ಮದು. ಯೋಜನೆಯಿಂದ ಎರಡು ರಾಜ್ಯಕ್ಕೂ ಅನುಕೂಲವಾಗಲಿದೆ. ಎಲ್ಲಾ ಪಕ್ಷದವರೂ ಬೆಂಬಲ ಕೊಡುತ್ತಿದ್ದಾರೆ ಜೆಡಿಎಸ್, ಬಿಜೆಪಿ ಪಕ್ಷದವರು ಬೆಂಬಲಿಸುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಪಾದಯಾತ್ರೆ ನಾಯಕತ್ವ ತೆಗೆದುಕೊಂಡಿದೆ ಅಷ್ಟೇ. ತಮಿಳುನಾಡಿನವರು ಮೇಕೆದಾಟು ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಅವರ ಹಕ್ಕನ್ನು ಕಿತ್ತುಕೊಳ್ಳುತ್ತಿಲ್ಲ. ಅದರ ಬೀಗ ಕೇಂದ್ರದ ಕೈನಲ್ಲಿದೆ. ಅವರು ಕೂಡಾ ನಮಗೆ ಸಹಕಾರ ಕೊಡಲಿ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
169 ಕಿ.ಮೀ. ಪಾದಯಾತ್ರೆ
ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಜನವರಿ 9 ರಿಂದ 19ರವರೆಗೆ ಹತ್ತು ದಿನಗಳ ಕಾಲ ಬರೋಬ್ಬರಿ 169 ಕಿ.ಮೀ. ಉದ್ದದ ಬೃಹತ್ ಪಾದಯಾತ್ರೆ ನಡೆಸಲು ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಲಾಗಿದೆ. ‘ನಮ್ಮ ನೀರು- ನಮ್ಮ ಹಕ್ಕು’ ಘೋಷಣೆ ಅಡಿಯಲ್ಲಿ ಬೆಂಗಳೂರಿಗೆ ಕುಡಿಯುವ ನೀರುಪೂರೈಸುವ ಯೋಜನೆ ಜಾರಿಗೆ ಒತ್ತಾಯಿಸಿ ಪಾದಯಾತ್ರೆ ನಡೆಯಲಿದೆ. ಜನವರಿ 9ರಂದು ಬೆಳಗ್ಗೆ 9.30 ಗಂಟೆಗೆ ಮೇಕೆದಾಟು ಬಳಿಯಿಂದ ಬೆಂಗಳೂರುವರೆಗಿನ ಪಾದಯಾತ್ರೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಚಾಲನೆ ದೊರೆಯಲಿದೆ.
ಮೇಕೆದಾಟುವಿನಿಂದ ಕನಕಪುರ, ರಾಮನಗರ, ಬಿಡದಿ ಮೂಲಕ 75 ಕಿ.ಮೀ. ದೂರದಲ್ಲಿರುವ ಕೆಂಗೇರಿಗೆ ಪಾದಯಾತ್ರೆ ಆಗಮಿಸಲಿದೆ. ಬಳಿಕ ನಾಯಂಡಹಳ್ಳಿ ಜಂಕ್ಷನ್ ಮೂಲಕ ಬೆಂಗಳೂರು ನಗರದ ವಿವಿಧ ಕ್ಷೇತ್ರಗಳಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಮೇಕೆದಾಟುವಿನಿಂದ ಬೆಂಗಳೂರಿಗೆ 5 ದಿನ ಹಾಗೂ ಬೆಂಗಳೂರು ನಗರದಲ್ಲಿ 5 ದಿನ ಪಾದಯಾತ್ರೆ ನಡೆಯಲಿದ್ದು, ಒಟ್ಟು ಹದಿನೈದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 169 ಕಿ.ಮೀ. ಉದ್ದದ ಪಾದಯಾತ್ರೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.