ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಸಾಲ ಪಡೆದು ವಂಚನೆ ಎಸಗಿ ಭಾರತದಿಂದ ವಿದೇಶಕ್ಕೆ ಪಲಾಯನ ಮಾಡಿದ್ದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ಕೋರ್ಟ್ ತಡೆ ನೀಡಿದೆ.
ಡೊಮಿನಿಕಾದಲ್ಲಿ ಬಂಧನಕ್ಕೊಳಗಾದ ಮೆಹುಲ್ ಚೋಕ್ಸಿ ಅವರಿಗೆ ಕಾನೂನು ಸಲಹೆ ಪಡೆಯಲು ಅವಕಾಶ ನೀಡದ್ದು, ಅವರ ಪರ ವಕೀಲರು, ಡೊಮಿನಿಕಾ ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿರುವ ಬೆನ್ನಲ್ಲೇ ನ್ಯಾಯಾಲಯ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರ ಪ್ರಕ್ರಿಯೆಗೆ ನ್ಯಾಯಾಲಯ ತಡೆ ನೀಡಿದೆ.
ಇದನ್ನು ಓದಿ: 48 ಗಂಟೆಗಳಲ್ಲಿ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ: ಆ್ಯಂಟಿಗುವಾ ಪ್ರಧಾನಿ
‘ಕಾನೂನು ತಂಡವು ಡೊಮಿನಿಕಾದಲ್ಲಿ ಮೆಹುಲ್ ಚೋಕ್ಸಿಗಾಗಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದೆ ಮತ್ತು ಆತನಿಗೆ ಕಾನೂನು ಸಲಹೆ ಪಡೆಯಲು ಅವಕಾಶ ನಿರಾಕರಿಸಲಾಗಿದೆ, ಇದು ಸಾಂವಿಧಾನಿಕ ಹಕ್ಕುಗಳ ಅಭಾವವನ್ನು ಎತ್ತಿ ತೋರಿಸಿದೆ’ ಎಂದು ಅವರ ಕಾನೂನು ಸಲಹೆಗಾರ ವಿಜಯ್ ಅಗರ್ವಾಲ್ ವಿವರಿಸಿದ್ದಾರೆ.
ಈ ವಿಷಯವು ಇಂದಿನ (ಮೇ 28) ಸ್ಥಳೀಯ ಕಾಲಮಾನ ಬೆಳಿಗ್ಗೆ 9 ಗಂಟೆಗೆ ಮತ್ತೆ ವಿಚಾರಣೆಗೆ ಬರುವ ನಿರೀಕ್ಷೆಯಿದೆ.
₹13,500 ಕೋಟಿ ಮೊತ್ತದ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಭಾರತದಿಂದ ತಲೆಮರೆಸಿಕೊಂಡಿದ್ದ ಮೆಹುಲ್ ಚೋಕ್ಸಿ, ಕಳೆದ ಭಾನುವಾರ ಆಂಟಿಗುವಾ ಮತ್ತು ಬಾರ್ಬುಡಾದಿಂದ ಕಾಣೆಯಾಗಿದ್ದರು. ಅಲ್ಲಿಂದ ಸುಮಾರು 100 ನಾಟಿಕಲ್ ಮೈಲುಗಳಷ್ಟು ದೂರದಲ್ಲಿರುವ ಡೊಮಿನಿಕಾದಲ್ಲಿ ಅಕ್ರಮ ಪ್ರವೇಶದ ಕಾರಣದಿಂದ ಅವರನ್ನು ಬಂಧಿಸಿರುವ ಕುರಿತು ಅಗರ್ವಾಲ್ ಅನುಮಾನ ವ್ಯಕ್ತಪಡಿಸಿದ್ದರು.
ಆಂಟಿಗುವಾದಿಂದ ನಾಪತ್ತೆಯಾಗಿದ್ದ ಮೆಹುಲ್ ಚೌಕ್ಸಿಯನ್ನು ಹಲವೆಡೆ ಕಾರ್ಯಚಾರಣೆ ನಂತರ ದೊಮಿನಿಕಾದಲ್ಲಿ ಬಂಧಿಸಲಾಗಿದೆ. ಡೊಮಿನಿಕಾದ ಅವರ ವಕೀಲ ವೇಯ್ನ್ ಮಾರ್ಷ್ ಅವರು ರೇಡಿಯೊ ಕಾರ್ಯಕ್ರಮವೊಂದರಲ್ಲಿ ಹೇಳಿಕೆಯೊಂದನ್ನು ನೀಡಿದ್ದಾರೆ. ‘ನನ್ನನ್ನು ಆಂಟಿಗುವಾ ಮತ್ತು ಬಾರ್ಬುಡಾದ ಜಾಲಿ ಹಾರ್ಬರ್ನಲ್ಲಿ ಭಾರತೀಯರಂತೆ ಕಾಣುವ ವ್ಯಕ್ತಿಗಳು ಮತ್ತು ಆಂಟಿಗುವಾದ ಪೊಲೀಸರು ಕರೆದುಕೊಂಡು ಹೋಗಿದ್ದರು, ನಂತರ ಹಡಗಿನಲ್ಲಿ ಕೂರಿಸಿದ್ದರು’ ಎಂದು ಚೋಕ್ಸಿ ತಿಳಿಸಿರುವುದಾಗಿ ಹೇಳಿದ್ದಾರೆ. ಅಂತೆಯೇ ಕಣ್ಣುಗಳು ಊದಿಕೊಂಡು ಮತ್ತು ತನ್ನ ಜೀವಕ್ಕಾಗಿ ಹೆದರುತ್ತಿದ್ದ ಚೋಕ್ಸಿಯ ದೇಹದ ಮೇಲೆ ಗಾಯದ ಗುರುತುಗಳನ್ನು ನೋಡಿದ್ದೇನೆ. ಚೋಕ್ಸಿ ಆಂಟಿಗುವಾ ಮತ್ತು ಬಾರ್ಬುಡಾದ ಪ್ರಜೆಯಾಗಿದ್ದಾರೆ. ಭಾರತಕ್ಕೆ ವಾಪಸ್ ಕಳುಹಿಸಲು ಅವರು ಭಾರತದ ಪ್ರಜೆಯಲ್ಲ ಎಂದು ಮಾರ್ಷ್ ಹೇಳಿದ್ದಾರೆ.
ಇದನ್ನೂ ಓದಿ: ಭ್ರಷ್ಟಾಚಾರಿ ಮೆಹುಲ್ ಚೋಕ್ಸಿ ನಾಪತ್ತೆ: ಯಾವುದೇ ಮಾಹಿತಿ ಲಭ್ಯವಿಲ್ಲವೆಂದ ಆ್ಯಂಟಿಗುವಾ ಪೊಲೀಸರು
ಡೊಮಿನಿಕಾದಲ್ಲಿ ಚೋಕ್ಸಿಯ ನಿಗೂಢ ಕಣ್ಮರೆ ಮತ್ತು ಬಂಧನದ ಸಂಪೂರ್ಣ ಪ್ರಸಂಗವೇ ‘ಅನುಮಾನಾಸ್ಪದ’ವಾಗಿದೆ ಎಂದು ಅಗರ್ವಾಲ್ ತಿಳಿಸಿದ್ದಾರೆ.
‘ಆಂಟಿಗುವಾ ಮತ್ತು ಬಾರ್ಬುಡಾ ಹಾಗೂ ಡೊಮಿನಿಕಾದಲ್ಲಿನ ಚೋಕ್ಸಿ ಪರ ವಕೀಲರು ಅವರ ಸಾಂವಿಧಾನಿಕ ಹಕ್ಕುಗಳ ಪ್ರಕಾರ ಚೋಕ್ಸಿಯೊಂದಿಗೆ ಕಾನೂನು ಸಂದರ್ಶನ ನಡೆಸಲು ಪ್ರಯತ್ನಿಸಿದ್ದರು. ಆದರೆ, ಅವರಿಗೆ ಪ್ರವೇಶ ನಿರಾಕರಿಸಲಾಯಿತು. ಹೆಚ್ಚಿನ ಪ್ರಯತ್ನದ ನಂತರ ಅವರು ಚೋಕ್ಸಿಯೊಂದಿಗೆ ಎರಡು ನಿಮಿಷ ಮಾತನಾಡಲು ಸಾಧ್ಯವಾಯಿತು. ಕಣ್ಣು ತೆರೆಯುವಷ್ಟರಲ್ಲಿ ಆಗಿಹೋದ ಭಯಾನಕ ಅನುಭವವನ್ನು ಚೋಕ್ಸಿ ವಿವರಿಸಿದರು ಮತ್ತು ಅವರು ಆಂಟಿಗುವಾದಿಂದ ಸ್ವಯಂಪ್ರೇರಣೆಯಿಂದ ಎಲ್ಲಿಗೂ ಹೋಗುತ್ತಿರಲಿಲ್ಲ ಎಂಬ ನನ್ನ ನಿಲುವನ್ನು ಸಮರ್ಥಿಸುತ್ತದೆ’ ಎಂದು ಅಗರ್ವಾಲ್ ಹೇಳಿದ್ದಾರೆ.