ಸೌಜನ್ಯ ನ್ಯಾಯಕ್ಕಾಗಿ ಸಭೆ, ಪ್ರತಿಭಟನೆ ನಡೆಸಬಹುದು : ಹೈಕೋರ್ಟ್ ಮಹತ್ವದ ಆದೇಶ

ಇಂದು ಸಂಜೆ 5.30 ಕ್ಕೆ ನಡೆಯಲಿರುವ ದಿಕ್ಸೂಚಿ ಸಭೆ ನಿರಾತಂಕ

ಸೌಜನ್ಯ ನ್ಯಾಯಕ್ಕಾಗಿ ಶಾಂತಿಯುತ ಪ್ರತಿಭಟನೆ, ಸಭೆಗಳನ್ನು ನಡೆಸಬಹುದು ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.

ಮಾರ್ಚ್ 18, 2025 ಸಂಜೆ 5.30 ಕ್ಕೆ ಎಐಟಿಯುಸಿ ಸಭಾಂಗಣದಲ್ಲಿ ಆಯೋಜಿಸಿದ್ದ ಸೌಜನ್ಯ ನ್ಯಾಯಕ್ಕಾಗಿ ಸಮಾಲೋಚನಾ ಸಭೆಯನ್ನು ನಿಲ್ಲಿಸುವಂತೆ ಶೇಷಾದ್ರಿಪುರ ಪೊಲೀಸರು ನೀಡಿದ್ದ ನೋಟಿಸ್ ಬಗೆಗಿನ ರಿಟ್ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಈ ಆದೇಶ ನೀಡಿದ್ದಾರೆ.

ಇದನ್ನು ಓದಿ:ಕಾಂಗ್ರೆಸ್‌ ಕಾರ್ಯಕರ್ತೆಯಿಂದ ಎಚ್‌.ಎಂ ರೇವಣ್ಣ ವಿರುದ್ಧ ಹಲ್ಲೆ ಆರೋಪ

ಸಾಹಿತಿ-ಚಿಂತಕ- ಹೋರಾಟಗಾರರ ಸಮಾಲೋಚನಾ ಸಭೆಯ ಸಂಚಾಲಕರದಲ್ಲೊಬ್ಬರಾದ ವಿನಯ್ ಶ್ರೀನಿವಾಸ್ ಮತ್ತು ವಿಜಯಭಾಸ್ಕರ್ ಪರವಾಗಿ ಹಿರಿಯ ನ್ಯಾಯವಾದಿ ಶ್ರುತಿ ಚಗಂತಿ ರಿಟ್ ಪಿಟೀಷನ್ ಸಲ್ಲಿಸಿದ್ದರು. ರಿಟ್ ಪಿಟೀಷನ್ ಅರ್ಜಿಯ ವಿಚಾರಣೆ ನಡೆಸಿದ ಜಸ್ಟಿಸ್ ಎಂ ನಾಗಪ್ರಸನ್ನ “ಪೊಲೀಸರು , ಸರ್ಕಾರ ಸಭೆಯನ್ನು, ಪ್ರತಿಭಟನೆಯನ್ನು ತಡೆಯುವಂತಿಲ್ಲ. ಆದರೆ ಕಾನೂನು ಉಲ್ಲಂಘನೆಯಾದರೆ ಮಾತ್ರ ಪೊಲೀಸರು ಕ್ರಮ ತೆಗೆದುಕೊಳ್ಳಬಹುದು. ಪ್ರತಿಭಟನೆಗಳನ್ನು ಊಹೆಯ ಆಧಾರದಲ್ಲಿ ತಡೆಯುವಂತಿಲ್ಲ” ಎಂದು ಆದೇಶ ನೀಡಿದ್ದಾರೆ.

ಸೌಜನ್ಯ ನ್ಯಾಯಕ್ಕಾಗಿ ಮತ್ತು ಊಳಿಗಮಾನ್ಯ ಧರ್ಪ ವಿರೋಧಿಸಿ ಸಾಹಿತಿಗಳು-ಚಿಂತಕರು-ಹೋರಾಟಗಾರರ ಸಮಾಲೋಚನಾ ಸಭೆಯ ಆಯೋಜಕರಿಗೆ ಶೇಷಾದ್ರಿಪುರ ಪೊಲೀಸರು 17.03.2025 ರಂದು ರಾತ್ರಿ 10:22 ಕ್ಕೆ ವಾಟ್ಸಾಪ್ ಮೂಲಕ ನೋಟಿಸ್ ನೀಡಿದ್ದರು. ಹೈಕೋರ್ಟ್ ರಿಟ್ ಅರ್ಜಿ ಆದೇಶದ ಪ್ರಕಾರ ಜಸ್ಟಿಸ್ ಫಾರ್ ಸೌಜನ್ಯ ಹೆಸರಿನಲ್ಲಿ ಯಾರೂ ಯಾವುದೇ ಸಭೆ, ಪ್ರತಿಭಟನೆ ನಡೆಸುವಂತಿಲ್ಲ. ಒಂದು ವೇಳೆ ಸಭೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ನೋಟಿಸ್ ನಲ್ಲಿ ಉಲ್ಲೇಖಿಸಿದ್ದರು.

ಶೇಷಾದ್ರಿಪುರ ಪೊಲೀಸ್ ಠಾಣೆಯ ನೋಟಿಸನ್ನು ಮೀರಿ ಸಭೆ ನಡೆಸಿದರೆ, ಅಥವಾ ಸಭೆ ನಡೆಸಲು ಸಭಾಂಗಣ ನೀಡಿದರೆ ಬಂಧಿಸುವುದಾಗಿ ಪೊಲೀಸರು ದೂರವಾಣಿಯಲ್ಲಿ ಸಂಘಟಕರಿಗೆ ಹೇಳಿದ್ದರು ಎಂದು ಹೋರಾಟಗಾರರ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿದ್ದಾರೆ.

ಪೊಲೀಸರು ಕಾನೂನು ಬಾಹಿರವಾಗಿ ನೀಡಲಾದ ವಾಟ್ಸಪ್ ನೋಟಿಸ್ ಹೋರಾಟಗಾರರ ಮೂಲಭೂತ ಹಕ್ಕುಗಳನ್ನು ಕಸಿದಿದೆ. ಪೊಲೀಸರ ಈ ಕ್ರಮ ವಿಕೃತ ಮತ್ತು ದುರುದ್ದೇಶಪೂರಿತವಾಗಿದೆ ಎಂದು ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಲಾಗಿದೆ.

ಇದನ್ನು ಓದಿ:ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ -16- ಮೂರು ಸಿನಿಮಾಗಳತ್ತ ಒಂದು ನೋಟ

ಸೌಜನ್ಯ ನ್ಯಾಯಕ್ಕಾಗಿ ನಡೆಸುತ್ತಿರುವ ಸಮಾಲೋಚನಾ ಸಭೆಯು ಕಚೇರಿಯೊಳಗೆ ನಡೆಯುತ್ತಿರುವ ಸಭೆಯಾಗಿದೆ. ಪ್ರತಿಭಟನೆಯಲ್ಲದೇ ಇದ್ದರೂ ದುರುದ್ದೇಶಪೂರ್ವಕವಾಗಿ ನೋಟಿಸ್ ನಲ್ಲಿ ಪ್ರತಿಭಟನೆ ಎಂದು ಉಲ್ಲೇಖಿಸಲಾಗಿದೆ. ಪೊಲೀಸರು ಒಳಾಂಗಣ ಚಟುವಟಿಕೆಯನ್ನು ನಿಯಂತ್ರಿಸುವಂತಿಲ್ಲ. ಸಮಾಲೋಚನಾ ಸಭೆಯು ಪ್ರತಿಭಟನೆ ಅಲ್ಲದೇ ಇರುವುದರಿಂದ ಪೊಲೀಸರು ತಮ್ಮ ವ್ಯಾಪ್ತಿ ಮೀರಿ ನೋಟಿಸ್ ನೀಡಿದ್ದಾರೆ ಎನ್ನುವುದು ಸ್ಪಷ್ಟವಿದೆ ಎಂದು ರಿಟ್ ಅರ್ಜಿಯಲ್ಲಿ ಹೇಳಲಾಗಿದೆ.

 

ಹೈಕೋರ್ಟ್ ರಿಟ್ ಅದೇಶವು (WP No : 19382/2023) ಕೇವಲ ಆ ಸದ್ರಿ ರಿಟ್ ನ ವಾದಿ- ಪ್ರತಿವಾದಿಗಳಿಗೆ ಮಾತ್ರ ಅನ್ವಯಿಸುತ್ತದೆ. ಹೈಕೋರ್ಟ್ ರಿಟ್ ನ ಅಂತಿಮ ತೀರ್ಪು ಬರದೇ ಇರುವುದರಿಂದ ಹೈಕೋರ್ಟ್ ಆದೇಶವು ಪ್ರತಿವಾದಿಗಳಿಗಲ್ಲದೇ ಬೇರೆಯವರಿಗೆ ಅನ್ವಯಿಸುವುದಿಲ್ಲ. ಆದರೆ ಪೊಲೀಸರು ಹೈಕೋರ್ಟ್ ರಿಟ್ ಅದೇಶದ ಪ್ರತಿವಾದಿಯಲ್ಲದ ಹೋರಾಟಗಾರರನ್ನು ಸಭೆ ನಡೆಸದಂತೆ ತಡೆಯುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಹೈಕೋರ್ಟ್ ನ ರಿಟ್ ಆದೇಶದಲ್ಲಿ “9 ನೇ ಪ್ರತಿವಾದಿ ಅಥವಾ ಅವನ ಅನುಯಾಯಿಗಳು ಅಥವಾ ಯಾವುದೇ ವ್ಯಕ್ತಿ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಿದರೆ ಅಥವಾ ಯಾವುದೇ ಅವಹೇಳನಕಾರಿ ಹೇಳಿಕೆಯನ್ನು ಪ್ರಕಟಿಸಿದರೆ, ಅದು ಕಾನೂನಿಗೆ ಅನುಸಾರವಾಗಿ ಅಪರಾಧವಾಗಿದೆ. ಮತ್ತು ಆ ನಿಟ್ಟಿನಲ್ಲಿ 9 ನೇ ಪ್ರತಿವಾದಿ ಅಥವಾ ಅವನ ಅನುಯಾಯಿಗಳು ಮಾಡಿದ ಯಾವುದೇ ಕ್ರಮದಿಂದ ಬಾಧಿತರಾದ ಯಾವುದೇ ವ್ಯಕ್ತಿ ಆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ಕಾನೂನಿನ ಪ್ರಕಾರ ತಕ್ಷಣವೇ ಕ್ರಮ ಕೈಗೊಳ್ಳುವುದು ಪೊಲೀಸರ ಬದ್ಧ ಕರ್ತವ್ಯವಾಗಿದೆ.” ಎಂದು ಹೇಳಲಾಗಿದೆ. ಆದರೆ ಹೈಕೋರ್ಟ್ ರಿಟ್ ನಲ್ಲಿರುವ ಪ್ರತಿವಾದಿಗಳಲ್ಲದ ವ್ಯಕ್ತಿಗಳು ಶೇಷಾದ್ರಿಪುರಂ ಎಐಟಿಯುಸಿ ಸಭಾಂಗಣದಲ್ಲಿ ಸಭೆ ನಡೆಯುವುದಕ್ಕೂ ಮೊದಲೇ, ಯಾರೂ ದೂರು ನೀಡದೆಯೇ ಪೊಲೀಸರು ಕಾರ್ಯಕ್ರಮ ನಿಲ್ಲಿಸುವಂತೆ ನೋಟಿಸ್ ನೀಡಿದ್ದಾರೆ.

ಶೇಷಾದ್ರಿಪುರ ಪೊಲೀಸರ ನೋಟಿಸ್ ಮತ್ತು ಬಂಧನದ ಬೆದರಿಕೆಯು ಸಂವಿಧಾನದ ಆರ್ಟಿಕಲ್ 19(1)(a) ಮತ್ತು 19(1)(b) ಅಡಿಯಲ್ಲಿ ಸಾಹಿತಿ-ಚಿಂತಕ- ಹೋರಾಟಗಾರರ ಮೂಲಭೂತ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಹೋರಾಟಗಾರರ ಪರವಾಗಿ ಹೈಕೋರ್ಟ್ ಗೆ ಹಿರಿಯ ನ್ಯಾಯವಾದಿ ಶ್ರುತಿ ಚಗಂತಿಯವರು ಸಲ್ಲಿಸಿರುವ ರಿಟ್ ನಲ್ಲಿ ಹೇಳಲಾಗಿದೆ.

Donate Janashakthi Media

Leave a Reply

Your email address will not be published. Required fields are marked *