ಬೆಂಗಳೂರು: ಕೇಂದ್ರ-ರಾಜ್ಯದಲ್ಲಿನ ಬಿಜೆಪಿ ಸರಕಾರಗಳು ತಾರತಮ್ಯಕ್ಕೊಳಗಾದವರ ವಿರೋಧಿ ನೀತಿಗಳಾದ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದಿಂದಾಗಿ ಮೀಸಲಾತಿ ಸೌಲಭ್ಯಳಿಂದ ವಂಚನೆಗೆ ಒಳಗಾಗಿದ್ದಾರೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ದುರ್ಬಲರ ಶಿಕ್ಷಣದ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದರೇ, ಖಾಲಿ ಇರುವ ದಶಲಕ್ಷಾಂತರ ಸರಕಾರಿ ನೌಕರಿಗಳನ್ನು ತುಂಬದೇ ಇರುವ ಮತ್ತು ಗುತ್ತಿಗೆ ಆಧಾರದಲ್ಲಿ ಕಡಿಮೆ ವೇತನಕ್ಕೆ ದುಡಿಸಿಕೊಳ್ಳುವ ಲೂಟಿಕೋರ ನೀತಿ ಹಾಗೂ ಸಾರ್ವಜನಿಕ ಉದ್ದಿಮೆಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ವಹಿಸಿಕೊಡುವ ನೀತಿಗಳು ಅವರ ಉದ್ಯೋಗಾವಕಾಶಗಳನ್ನು ಕಿತ್ತುಕೊಂಡಿವೆ ಎಂದು ಸಿಪಿಐ(ಎಂ) ಪಕ್ಷವೂ ಆರೋಪಿಸಿದೆ.
ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಅವರು, ಭೂಸುಧಾರಣಾ ತಿದ್ದುಪಡ ಕಾಯ್ದೆ – 2020, ಎಪಿಎಂಸಿ ತಿದ್ದುಪಡಿ ಕಾಯ್ದೆ-2020, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ- 2020 ಮತ್ತು ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ ಇವುಗಳು, ವಂಚಿತ ಸಮಯದಾಯದವರ ಹೊಟ್ಟೆಯ ಮೇಲೆ ಹಾಗೂ ಬದುಕುವ ಹಕ್ಕಿನ ಮೇಲೆ ಹೊಡೆದಿವೆ ಎಂದಿದ್ದಾರೆ.
ಖಾಸಗೀ ಉದ್ಯಮಗಳಿಗೆ ಸರಕಾರ ಭೂಮಿ, ನೀರು, ವಿದ್ಯುತ್, ಐದು ವರ್ಷಗಳ ಕಾಲ ಬಡ್ಡಿ ರಹಿತ ಸಾವಿರಾರು ಕೋಟಿ ರೂ.ಗಳ ಸಾರ್ವಜನಿಕ ಬ್ಯಾಂಕುಗಳ ಸಾಲ, ತೆರಿಗೆ ರಿಯಾಯಿತಿ ಮುಂತಾಗಿ ನೀಡಿದರೂ ಉದ್ಯೋಗದಲ್ಲಿ ಮೀಸಲಾತಿಗೆ ಕ್ರಮವಹಿಸುತ್ತಿಲ್ಲ.
ಈ ಎಲ್ಲ ಕಾಯ್ದೆಗಳನ್ನು ವಾಪಾಸು ಪಡೆಯದೇ ದುರ್ಬಲ ಹಾಗೂ ತಾರತಮ್ಯಕ್ಕೊಳಗಾದ ಜನತೆಯ ಬದುಕುವ ಹಕ್ಕನ್ನು ಮತ್ತು ಮೀಸಲಾತಿ ಹಕ್ಕನ್ನು ಉಳಿಸಿಕೊಳ್ಳಲಾಗದು. ಆದ್ದರಿಂದ ತಕ್ಷಣವೇ ಈ ನೀತಿಗಳನ್ನು ವಾಪಾಸು ಪಡೆಯುವಂತೆ ಮತ್ತು ತಾರತಮ್ಯಕ್ಕೊಳಗಾದ ದುರ್ಬಲರ ಮೀಸಲಾತಿಯನ್ನು ಸಂರಕ್ಷಿಸುವಂತೆ ಖಾಸಗಿ ರಂಗಕ್ಕೂ ವಿಸ್ತರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಒತ್ತಾಯಿಸಿದೆ.
ಅದೇ ಸಂದರ್ಭದಲ್ಲಿ ಈ ದುರ್ಬಲ ಹಾಗೂ ತಾರತಮ್ಯಕ್ಕೊಳಗಾದ ಜನ ಸಮುದಾಯಗಳ ಜನಸಂಖ್ಯೆಗನುಗುಣವಾದ ಅನುದಾನವನ್ನು ಬಜೆಟ್‌ನಲ್ಲಿ ಒದಗಿಸಬೇಕು ಮತ್ತು ಜನಸಂಖ್ಯೆಗನುಗುಣವಾಗಿ ಮೀಸಲಾತಿ ಸೌಲಭ್ಯವನ್ನು ವಿಸ್ತರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಸಿಪಿಐ(ಎಂ) ಪಕ್ಷವು ಆಗ್ರಹಿಸಿದೆ.
ಕರ್ನಾಟಕ ಸರಕಾರ ಈಗಾಗಲೇ ಸಲ್ಲಿಸಲಾಗಿರುವ ಪರಿಶಿಷ್ಢ ಜಾತಿ ಹಾಗೂ ಪಂಗಡಗಳ ಜನಸಂಖ್ಯೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸುವ ಸಂಬಂಧದ ನ್ಯಾ. ಎಚ್.ಎನ್.ನಾಗಮೋಹನ್ ದಾಸ್ ರವರ ವರದಿಯನ್ನು ಅಂಗೀಕರಿಸದೇ ಅಥವಾ ತಿರಸ್ಕರಿಸದೇ, ಆ ಕುರಿತು ಏನೊಂದು ಕ್ರಮವಹಿಸದೇ ಪರಿಶಿಷ್ಠ ಜಾತಿ ಹಾಗೂ ಪಂಗಡಗಳ ಜನತೆಯ ವಿರೋಧವಾದ ಉದಾಸೀನ ನೀತಿಯನ್ನು ಅನುಸರಿಸುತ್ತಿರುವುದನ್ನು ಸಿಪಿಐ(ಎಂ) ಬಲವಾಗಿ ಖಂಡಿಸಿದೆ. ಕೂಡಲೇ ನ್ಯಾ. ಎಚ್.ಎನ್.ನಾಗಮೋಹನ್ ದಾಸ್ ವರದಿಯ ಕುರಿತ ಸರಕಾರದ ಅಭಿಪ್ರಾಯವನ್ನು ಮತ್ತು ವರದಿಯನ್ನು ಬಹಿರಂಗಪಡಿಸುವಂತೆ ಒತ್ತಾಯಿಸಿದೆ.
ಎಸ್.ಸಿ.-ಎಸ್.ಟಿ. ಮೀಸಲಾತಿ ಹೆಚ್ಚಳಕ್ಕಾಗಿನ ಹೋರಾಟಕ್ಕೆ ಸಿಪಿಐ(ಎಂ) ಬೆಂಬಲ
ಈ ಕುರಿತು ರಾಜ್ಯದಾದ್ಯಂತ ನಡೆದಿರುವ, ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿಯ ಚಳುವಳಿಯನ್ನು ಸಿಪಿಐ(ಎಂ) ಬೆಂಬಲಿಸುತ್ತದೆ. ಮಾತ್ರವಲ್ಲಾ, ಸದರಿ ಹೋರಾಟ ಸಮಿತಿಯು ಮೀಸಲಾತಿಯನ್ನು ಇಲ್ಲದಂತೆ ಮಾಡುವ ಕಾಯ್ದೆಗಳನ್ನು ವಾಪಾಸು ಪಡೆಯುವಂತೆ ಒತ್ತಾಯಿಸಲು ಆ ಹಕ್ಕೊತ್ತಾಯಗಳನ್ನು ಹಕ್ಕೊತ್ತಾಯಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳುವಂತೆ ಸಿಪಿಐ(ಎಂ) ಪಕ್ಷದ ವಿನಂತಿ.