ಕೊಪ್ಪಳ: ಹಿಂದೂ ಪದದ ಬಗ್ಗೆ ಹೇಳಿಕೆ ನೀಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸಾಕಷ್ಟು ವಿವಾದ ಎದ್ದಿತು, ಸ್ವತಃ ಕಾಂಗ್ರೆಸ್ ಪಕ್ಷದ ನಾಯಕರೇ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ತಮ್ಮ ಹೇಳಿಕೆಯನ್ನು ಅವರು ಹಿಂಪಡೆದಿದ್ದರು.
ಮತ್ತೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸತೀಶ್ ಜಾರಕಿಹೊಳಿ ಕೊಪ್ಪಳ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದೂ ಪದದ ನನ್ನ ಹೇಳಿಕೆಯ ಬಗ್ಗೆ ಪರ ವಿರೋಧ ಚರ್ಚೆ ಇದ್ದೇ ಇರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕಿದೆ ಎಂದಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ತಮ್ಮನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿರುವುದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ ಅವರ ಆಹ್ವಾನಕ್ಕೆ ನಾನು ಈಗಾಗಲೇ ಉತ್ತರ ಕೊಟ್ಟಿದ್ದೇನೆ. ಅವನ ಅಹ್ವಾನಕ್ಕೆ ನಾನು ಹೊಗುವ ಅವಶ್ಯಕತೆ ಇಲ್ಲ. ಆತ ಸುಳ್ಳಿನ ಸರದಾರ, ಸುಳ್ಳಿನ ವಿಶ್ವವಿದ್ಯಾಲಯದ ಕುಲಪತಿ, ಆತನ ಜೊತೆ ಚರ್ಚೆಗೆ ನಾನು ಹೋಗಬೇಕಾ…? ಚಿನ್ನದ ರಸ್ತೆ ಎಲ್ಲಿದೆ, ಬುಲೆಟ್ ಟ್ರೈನ್ ಎಲ್ಲಿದೆ…? ಎಂದು ಚಕ್ರವರ್ತಿ ಸೂಲಿಬೆಲೆ ವಿರುದ್ಧ ವ್ಯಂಗ್ಯವಾಡಿದರು.
ನಿನ್ನೆ ಬಿಜೆಪಿ ಸಚಿವ ಶ್ರೀರಾಮುಲು ಆವೇಶಭರಿತರಾಗಿ ಭಾಷಣ ಮಾಡುವ ಅಗತ್ಯವಿರಲಿಲ್ಲ. ಮೀಸಲಾತಿ ಕೊಡುವ ಬಗ್ಗೆ ಮೊದಲ ಹೆಜ್ಜೆ ಇಟ್ಟಿದ್ದೇ ಮೈತ್ರಿ ಸರ್ಕಾರ. ಕಾಂಗ್ರೆಸ್-ಜೆಡಿಎಸ್ ಸರ್ಕಾರವಿದ್ದಾಗಲೇ ಆಯೋಗ ರಚನೆ ಮಾಡಿದ್ದೆವು. ಬಿಜೆಪಿಯವರು ವಿನಾಃಕಾರಣ ತಡ ಮಾಡಿದರು. ಕೊನೆಗೂ ಸ್ವಾಮೀಜಿ ಅವರ ದಿಟ್ಟ ನಿರ್ಧಾರಕ್ಕೆ ಮಣಿದು ಮೀಸಲಾತಿ ಕೊಟ್ಟಿದ್ದಾರೆ. ಎಸ್‌ಟಿ ಸಮೂದಾಯಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 30 ಸಾವಿರ ಕೋಟಿ ಕೊಟ್ಟಿದ್ದರು. ಕೇಂದ್ರ ಸರ್ಕಾರ ನೀಡಿದ ಅನುದಾನದ ಅರ್ಧಕ್ಕಿಂತ ಹೆಚ್ಚು ನಾವು ಕೊಟ್ಟಿದ್ದೇವು. ಒಂದು ಕೊಟ್ಟು ಒಂದು ಕಿತ್ತುಕೊಳ್ಳುವುದು ಬಿಜೆಪಿ ಕೆಲಸ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷದಿಂದ ರಾಜ್ಯದಲ್ಲಿ ಎಸ್‌ಸಿ ಎಸ್‌ಟಿ ಸಮಾವೇಶ ಮಾಡುವ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಕಾಂಗ್ರೆಸ್‌ನಿಂದ ಎಸ್‌ಸಿ ಎಸ್‌ಟಿ ಸಮಾವೇಶ ಮಾಡುವ ಬಗ್ಗೆ ಸಭೆಯಾಗಿದೆ. ಎಲ್ಲಿ ಯಾವಾಗ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ ಎಂದರು.
ಅಕ್ರಮ ಮಾರ್ಗದ ಮೂಲಕ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಹೊರಟಿರುವ ಬಿಜೆಪಿಗೆ ಅಹಿಂದ ಮತದಾರರನ್ನು ವಂಚಿಸುತ್ತಿದೆ. ಹಾಗಾಗಿ, ಅವರ ವಿವರಗಳನ್ನು ಮತದಾರರ ಪಟ್ಟಿಯಿಂದ ತೆಗೆಯಿಸುವ ಅಸ್ತ್ರ ಉಪಯೋಗಿಸಲು ಮುಂದಾಗಿದೆ.
ಮುಂದಿನ ವಿಧಾನಸಭಾ ಚುನಾವಣೆಯ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿ ಸತೀಶ್ ಜಾರಕಿಹೊಳಿ, ಅಭ್ಯರ್ಥಿಗಳನ್ನು ಘೋಷಣೆ ಮಾಡುವುದು ಹೈಕಮಾಂಡ್. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಚುನಾವಣೆ ಸ್ಪರ್ಧೆಯಲ್ಲಿ ಟಿಕೆಟ್ ನೀಡುವ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಆದರೆ ಯಾರಿಗೆ ಟಿಕೆಟ್ ನೀಡಬೇಕು ಎಂದು ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.