‘ಮೇದಿನʼ ಇದು ‘ಹುತಾತ್ಮರ ಮಹಾನ್ಗಾಥೆ’

ಕೆ. ಮಹಾಂತೇಶ

ಸಿಐಟಿಯು ರಾಜ್ಯ ಕಾರ್ಯದರ್ಶಿ

ಮೇ.01 ಇಡೀ ಜಗತ್ತಿನಾದ್ಯಂತ ಆಚರಿಸಲ್ಪಡುವ ಕಾರ್ಮಿಕರ ದಿನಾಚರಣೆ. ಅದೊಂದು ಅಂತರಾಷ್ಟ್ರೀಯ ಮಹತ್ವದ ದಿನ ಮಾತ್ರವಲ್ಲ ಚಾರಿತ್ರಿಕವಾಗಿ ಒಂದು ದೀರ್ಘ ಚರಿತ್ರೆಯನ್ನೇ ತನ್ನೊಡಲಿನಲ್ಲಿ ಇಟ್ಟುಕೊಂಡಿರುವ ದಿನ.

ಅದು 1886 ರ ಮೇ 4 ಮಂಗಳವಾರ. ಸಮಯ ರಾತ್ರಿ ಎಂಟೂವರೆ ಗಂಟೆ. ಅಮೇರಿಕಾದ ಚಿಕಾಗೋ ನಗರದ ಹೇ ಮಾರ್ಕೆಟ್ ಚೌಕಿನ ಬಳಿ ಸುಮಾರು 2500 ಜನರು ನೆರೆದಿದ್ದ ಒಂದು ಸಭೆ. ಆ ಸಭೆಯನ್ನುದ್ದೇಶಿಸಿ ಕಾರ್ಮಿಕ ಪತ್ರಿಕೆಯೊಂದರ ಸಂಪಾದಕ ಆಗಸ್ಟ್ ಸ್ಟೈಜ್ ಆಗಷ್ಟೇ ತನ್ನ ಪ್ರತಿಭಟನಾ ಭಾಷಣ ಆರಂಭಿಸಿದ್ದರು. ಆ ಈ ಸಭೆಯ ಹಿಂದಿನ ದಿನವಷ್ಟೇ, ಮ್ಯಾಕ್-ಕಾರ್ಮಿಕ್ ರೀಪರ್ ಪ್ಲಾಂಟ್ ಎನ್ನುವ ಕಾರ್ಖಾನೆಯಲ್ಲಿ ಮುಷ್ಕರನಿರತ ಕಾರ್ಮಿಕರ ಮೇಲೆ ಪೊಲೀಸರು ಗುಂಡು ಹಾರಿಸಿದ್ದರು. ಅದನ್ನು ಖಂಡಿಸಿ ಚಿಕಾಗೋದ ಈ ಹೇ ಮಾರ್ಕೆಟ್ ಚೌಕದಲ್ಲಿ ಈ ಸಭೆ ನಡೆಯುತ್ತಿತ್ತು. ಆಗಸ್ಟ್ ಸ್ಟೈಜ್ ಭಾಷಣದ ಬಳಿಕಾ ಕಾರ್ಮಿಕ ನಾಯಕ ಆಲ್ಬರ್ಟ ಪಾರ್ಸನ್ ಆದಾದ ನಂತರ ಮೆಥಾಡಿಸ್ಟ್ ಚರ್ಚನ ಪಾದ್ರಿಯಾಗಿದ್ದ ಸ್ಯಾಮುಯಲ್ ಮಾತನಾಡಿ ಅಮೇರಿಕನ್ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಬಯಲು ಮಾಡತೊಡಗಿದರು. ಗಂಟೆ ರಾತ್ರಿ ಹತ್ತುವರೆಯಾದರೂ ಅಲ್ಲಿ ಎರಡೂ ಸಾವಿರಕ್ಕೂ ಹೆಚ್ಚಿನ ಜನರು ಇನ್ನೂ ಇದ್ದರು. ಸ್ಯಾಮುಯಲ್ ಫೀಲ್ಡನ್ ತನ್ನ ಭಾಷಣ ಮುಗಿಸಬೇಕು ಎನ್ನುವಷ್ಟರಲ್ಲೇ… 176 ಜನರನ್ನು ಒಳಗೊಂಡ ಸಶಸ್ತ್ರ ಪೊಲೀಸರ ತುಕಡಿಯೊಂದು ಡಿಢೀರನೆ ಆ ಸಭೆಯ ಮೇಲೆ ದಾಳಿ ನಡೆಸಿತು. ಅಷ್ಟರಲ್ಲೇ ಪೊಲೀಸರ ಮಧ್ಯೆದಲ್ಲೇ ಒಮ್ಮೇಲೆ ಡೈನಮೈಟ್ ಬಾಂಬ್ ಅಸ್ಪೋಟಿಸಿತು. ಅಮೇರಿಕಾದ ಇತಿಹಾಸದಲ್ಲೇ ಇಂತಹ ಬಾಂಬು ಅಸ್ಪೋಟಗೊಂಡಿದ್ದು ಇದೇ ಮೊದಲು.! ಪರಿಣಾಮ ಒಬ್ಬ ಸತ್ತು ಹತ್ತಾರು ಪೊಲೀಸರು ಗಂಭೀರವಾಗಿ ಗಾಯಗೊಂಡರು. ಇದರಿಂದಾಗಿ ಕೋಪದ್ರೇಕಗೊಂಡ ಪೊಲೀಸರು ವಿವೇಕಹೀನರಾಗಿ ಹಲವು ದಿಕ್ಕುಗಳಿಂದ ರ‍್ರಾ-ಬರ‍್ರಿಯಾಗಿ ಗುಂಡು ಹಾರಿಸಿ ನಾಲ್ಕು ಕಾರ್ಮಿಕರ ದೇಹಗಳನ್ನು ನೆಲಕ್ಕುರುಳಿಸಿದರು. ಮತ್ತೂ ಹತ್ತಾರು ಜನರು ಮರಣಾಂತಿಕವಾಗಿ ಗಾಯಗೊಂಡರು. ಈ ಬಾಂಬು ಅಸ್ಪೋಟವು ಪೊಲೀಸರನ್ನು ಎಷ್ಟು ಭಯ-ಭೀತರನ್ನಾಗಿಸಿತ್ತೆಂದರೆ… ತಮ್ಮ ಬಂದೂಕುಗಳಿಂದ ಗುಂಡು ಹಾರಿಸಿ ಅಲ್ಲಿ ನೆರೆದಿದ್ದ ಕಾರ್ಮಿಕರನ್ನು ಕೊಂದಿದ್ದು ಮಾತ್ರವಲ್ಲ ಅವರ ಆರು ಜನ ಪೊಲೀಸ ಸಹೋದ್ಯೋಗಿಗಳನ್ನೇ ಸ್ವತಃ ಅವರ ಬಂದೂಕಿನಿಂದ ಗುಂಡು ಹಾರಿಸಿ ಕೊಂದಿದ್ದರು.!

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ : ಎಸ್​ಐಟಿ ತನಿಖೆಗೆ ಸಿಎಂ ಸೂಚನೆ

ಚಿಕಾಗೋ ನಗರದ ಹೇ ಮಾರ್ಕೆಟ್ ಚೌಕದಲ್ಲಿ ಅಂದು ನಡೆದ ಈ ದುರ್ಘಟನೆಯ ಪರಿಣಾಮ ನಂತರದ ದಿನಗಳಲ್ಲಿ ಇನ್ನೂ ಭೀಕರವಾಗಿತ್ತು. ಚಿಕಾಗೋ ಮಾತ್ರವಲ್ಲ ಅಮೇರಿಕಾದ ಎಲ್ಲಾ ನಗರಗಳಲ್ಲಿ ವಾಕ್ ಮತ್ತು ಸಂಘಟನಾ ಸ್ವಾತಂತ್ರ್ಯದ ಹಕ್ಕುಗಳು ಮೊಟಕುಗೊಂಡು ಹೇಳಹೆಸರಿಲ್ಲದಂತೆ ಮಾಯವಾದವು. ಅಮೇರಿಕಾದಾದ್ಯಂತ ನೂರಾರು ಕಾರ್ಮಿಕ ನಾಯಕರುಗಳನ್ನು ದಸ್ತಗೀರಿ ಮಾಡಿ ಹಿಂಸೆ ನೀಡಲಾಯಿತು. ಪೊಲೀಸರ ಉದ್ದಟತನದಿಂದ ಉಂಟಾದ ಹೇ ಮಾರ್ಕೆಟ್ ದುರ್ಘಟನೆಯ ಹೊಣೆಯನ್ನು ನೈಟ್ಸ್ ಆಫ್ ಲೇಬರ್(Knights of Labour) ಹೆಗಲಿಗೆರಿಸಿ ಅದರ ಮುಖಂಡರನ್ನು ದೋಷರೋಪಿಗಳನ್ನಾಗಿ ಮಾಡಲಾಯಿತು. ಅಮೇರಿಕಾದ ಪತ್ರಿಕೆಗಳು, ವ್ಯಾಪರಸ್ಥರು ಮತ್ತು ಜನಸಾಮನ್ಯರು ಹೀಗೆ ಎಲ್ಲರೂ ಲೇಬರ್ ಯೂನಿಯನ್ ಮುಖಂಡರನ್ನು ದ್ವೇಷಿಸಲಾರಂಭಿಸಿದರು. ಪರಿಣಾಮ ಕಾರ್ಮಿಕರು ಜನಸಾಮನ್ಯರ ಸಹನೂಭೂತಿ ಕಳೆದುಕೊಂಡರು. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಕೈಗಾರಿಕಾ ಮಾಲೀಕರು ಸರ್ಕಾರದ ಮೆಲೆ ಒತ್ತಡ ತಂದು ಕಾರ್ಮಿಕ ನಾಯಕರನ್ನು ತೀವ್ರ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದರು. ಅಂತಿಮವಾಗಿ ಬಂಧಿಸಲಾಗಿದ್ದ 8 ಜನ ಮುಖಂಡರನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಅದರಲ್ಲಿ 4 ಜನರನ್ನು1887 ನವೆಂಬರ್ 11  ರಂದು ಗಲ್ಲಿಗೇರಿಸಲಾಯಿತು. ಉಳಿದ 4 ಜನರ ಪೈಕಿ ಒಬ್ಬ ಲೂಯಿ ಲಿಂಗ್ ಎಂಬಾತನು ಜೈಲಿನಲ್ಲೇ ಡೈನಾಮೈಟ್ ಸಿಡಿತದಿಂದ ಹಿಂದಿನ ದಿನವಷ್ಟೇ ಸತ್ತು ಹೋದರೆ ಉಳಿದ 3 ಕೈದಿಗಳಿಗೆ  1893  ಜೂನ್‌ನಲ್ಲಿ ಕ್ಷಮದಾನ ನೀಡಿ ಬಿಡುಗಡೆಗೊಳಿಸಲಾಯಿತು. ‘ಹೇ ಮಾರ್ಕೆಟ್‌ನ ಆ ಪ್ರತಿಭಟನಾ ಸಭೆ, ನಂತರ ನಡೆದ ಪೊಲೀಸ್ ದೌರ್ಜನ್ಯ, ನಂತರದ ವಿಚಾರಣೆ, ಗಲ್ಲು ಶಿಕ್ಷೆ ಹೀಗೆ ಇವೆಲ್ಲವೂ ಇತಿಹಾಸದ ಪುಟಗಳಲ್ಲಿ ಇಂದಿಗೂ ‘ಹೇ ಮಾರ್ಕೆಟ್ ಹತ್ಯಾಕಾಂಡ’ ವೆಂದೇ ಇಂದಿಗೂ ಕರೆಯಲ್ಪಡುತ್ತದೆ.

ಚಿಕಾಗೋದಲ್ಲೇ ಯಾಕೆ…?

೧೮೮೬ಈ ಹೇ ಮರ‍್ಕೆಟ್ ಘಟನೆ ಚಿಕಾಗೋ ನಗರಲ್ಲೇ ಯಾಕೆ ಸಂಭವಿಸಿತು..? ಎಂಬ ಪ್ರಶ್ನೆಗೆ ಚಿಕಾಗೋನಗರದ ಲೇಖಕ ನೆಲ್ಸನ್ ಆಲ್ಗ್ರೆನ್ 1950 ರಲ್ಲಿ ತನ್ನ ಬರವಣಿಗೆಯಲ್ಲಿ ಹೀಗೆ ಹೇಳುತ್ತಾನೆ.. “ಚಿಕಾಗೋ ಎನ್ನುವುದು ಒಂದು “ಉರ್ಧ್ವಮುಖಿ ನಗರ” ಅಲ್ಲಿನ ಪ್ರತಿಯೊಬ್ಬನು ಅಂತರ್‌ಮುಖಿಯಾಗಿ ಕೇವಲ ತನ್ನ ಏಳಿಗೆಯ ಬಗ್ಗೆಯಷ್ಟೇ ಚಿಂತಿಸುತ್ತಿದ್ದ. ಅನ್ಯರ ಬಗ್ಗೆ ಕಿಂಚಿತ್ತು ಕಾಳಜಿ ತೋರದೆ ಸ್ವಾರ್ಥಿಗಳನ್ನೊಳಗೊಂಡ ಸಂತೃಪ್ಪ ತಾಣವಾಗಲು ಆ ನಗರ ಸದಾ ಹವಣಿಸುತ್ತಿತ್ತು. ಬಹುಶಃ ಆರಂಭದಿಂದಲೂ ಚಿಕಾಗೋ ಹೀಗೆ ಇತ್ತೆಂದು ಕಾಣುತ್ತದೆ ಅದು ಯಾವ ಕಾಲದಲ್ಲೂ ಸ್ನೇಹ-ಸೌಹಾರ್ಧಯುತ ಮತ್ತು ಸಹಕಾರದ ನಗರವಾಗದೆ ಸದಾ ಪೈಪೋಟಿಯೇಯನ್ನೇ ತನ್ನ ಒಡಲಲ್ಲಿ ಆವರಿಸಿಕೊಂಡಿತ್ತು ಎಂಬುದಾಗಿ ನೆಲ್ಸನ್ ವಿವರಿಸಿದ್ದಾನೆ. ಅಲ್ಲಿಗೆ ಭೇಟಿ ನೀಡಿದ್ದ ವಿದೇಶಿಯರ ಬಾಯಲ್ಲಿ ಕೂಡ ಚಿಕಾಗೋದ ನಗರವಾಸಿಗಳು ಸದಾ ಸಂಪತ್‌ನ್ನು ಉಳಿಸುವ-ಗಳಿಸುವ ವಿಷಯದಲ್ಲೇ ಸಾಕಷ್ಟು ಆಸಕ್ತರಾಗಿದ್ದರು. ಒಟ್ಟಿನಲ್ಲಿ ‘ಡಾಲರ್ ಸಾಮ್ರಾಟ’ನಾಗಿ ಮೆರೆಯುತ್ತಿದ್ದ ನಗರವಾಗಿತ್ತು ಎಂಬ ಖ್ಯಾತಿ ಗಳಿಸಿತ್ತು.

೧೮೮೦ ರ ಸುಮಾರಿನಲ್ಲಿ ಈ ಚಿಕಾಗೋ ನಗರ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದ ನಗರವಾಗಿತ್ತು. 1887 ರ ಲಂಡನ್ ಟೈಮ್ಸ್ ಪತ್ರಿಕೆಯ ವರದಿ ಪ್ರಕಾರ ನ್ಯೂಯಾರ್ಕಿಗಿಂತಲೂ ಹೆಚ್ಚು ದುಂದುಗಾರರನ್ನು ಹೊಂದಿದ, ಸಟ್ಟಾ ವ್ಯಾಪಾರವನ್ನು ಕರಗತ ಮಾಡಿಕೊಂಡ ಚತುರ ಉದ್ದಿಮೆಗಾರರನ್ನು, ಧಾಡ್ಸಿ ಸ್ವಾಭಾವದ ವ್ಯಾಪಾರಿಗಳಿಂದ ತುಂಬಿ ತುಳುಕುತ್ತಿದ್ದ ಮತ್ತು ಉದಿಮೆದಾರರ ‘ಸ್ವರ್ಗ’ವಾಗಿ ಚಿಕಾಗೋ ರೂಪಗೊಂಡಿತ್ತು. ನ್ಯೂ ಇಂಗ್ಲೆಂಡ್ ಮತ್ತು ಪೂರ್ವದ ಕಡೆಯಿಂದ ಬಂದಿದ್ದ ಹಲವು ಆಂಗ್ಲೋ ಸ್ನಾಕ್ಸನ್ ಪ್ರಾಟೆಸ್ಟೆಂಟರೇ ಚಿಕಾಗೋ ನಗರ ಬದುಕಿನ ಪ್ರಭಾವಿ ಪುರುಷರಾಗಿ ಬೆಳೆದಿದ್ದರು. 1830-40  ದಶಕಗಳಲ್ಲಿ ಈ ನಗರಕ್ಕೆ ಐರಿಶರು ಹಾಗೂ ಜರ್ಮನರು ಆಗಮಿಸತೊಡಗಿದರು. ಆರಂಭದಲ್ಲಿ ಬಂದು ತಳವೂರಿಸಿದವರು ನಂತರ ಬಂದವರನನು ಸಹಜವಾಗಿಯೇ ‘ಕನಿಷ್ಟರೆಂದು’ ಅವರನ್ನು ಶೋಷಿಸಲಾರಂಭಿಸಿದರು. ಇದರ ವಿರುದ್ದ ಕ್ರಮೇಣ ಐರಿಶ ಹಾಗೂ ಜರ್ಮನರು ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗಿ ಹೋರಾಟಕ್ಕಿಳಿದರು. ಆದರೆ ಚಿಕಾಗೋದ ಶೋಷಕ ಪ್ರಭುಗಳು ಝೆಕ್, ಬೋಗೀಮಿಯನ್, ಪೊಲೀಶ್ ಮೊದಲಾದ ಇತರೆ ಜನಾಂಗೀಯ ಕಾರ್ಮಿಕರನ್ನು ತಂದು ಹೋರಾಟಗಾರರ ವಿರುದ್ದ ಛೂ ಬಿಟ್ಟರು. ಪರಿಣಾಮವಾಗಿ ಜನಾಂಗೀಯ ಗಲಭೆಗಳು ಚಿಕಾಗೋ ನಗರದ ದಿನನಿತ್ಯದ ಘಟನೆಗಳಾದವು. 1885 ರ ಹೊತ್ತಿಗೆಲ್ಲಾ ಚಿಕಾಗೋ ನಗರವು ಸ್ಥಳೀಯರಿಗಿಂತ ವಿದೇಶಿಗರಿಂದಲೇ ತುಂಬಿ ಹೋಗಿತ್ತು. ಅಲ್ಲದೆ ತಮ್ಮ ಹಕ್ಕುಗಳಿಗಾಗಿ ಹಾಗೂ ತಮ್ಮ ಮೇಲೆ ನಡೆಯುತ್ತಿದ್ದ ಅಮಾನವೀಯ ಶೋಷಣೆ ವಿರುದ್ದವೂ ಆ ವಲಸೆ ಜನರು ನಿತ್ಯ ಬಂಡಾಯ ನಡೆಸುತ್ತಿದ್ದರು. ಇದರಿಂದಾಗಿ ಹೆದರಿದ ಚಿಕಾಗೋದ ಬೃಹತ್ ಉದ್ದಿಮೆದಾರರು ಹೊರಗಿನವರನ್ನು ಹತ್ತಿಕ್ಕಲು ಜನಾಂಗೀಯ ವಿರೋಧಿ, ವಿದೇಶಿಯರ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ‘ನೋ-ನಥಿಂಗ್ಸ್’(Know- Nothings) ಎನ್ನುವ ರಾಜಕೀಯ ಪಕ್ಷವೂಂದನ್ನು ಹುಟ್ಟು ಹಾಕಿದರು.

ಸರಣಿ ಹೋರಾಟಗಳ ಪರ್ವ

ಈಗಾಗಲೇ ಪ್ರಸ್ತಾಪಿಸದಂತೆ 1886  ರ ಮೇ 4 ರ ಆ ‘ಹೇ ಮಾರ್ಕೆಟ್’ ಘಟನೆಯು ಆಕಸ್ಮಿಕವಾದುದಲ್ಲ. ಅದಕ್ಕಿಂತ ಪೂರ್ವದಲ್ಲಿ ಚಿಕಾಗೋದಲ್ಲಿ ಕಾರ್ಮಿಕರು ಕನಿಷ್ಟವೇತನಕ್ಕಾಗಿ, ಎಂಟು ಗಂಟೆ ಕೆಲಸದ ಬೇಡಿಕೆಗಾಗಿ, ಹಲವು ಸರಣಿ ಹೋರಾಟಗಳನ್ನು ನಡೆಸುತ್ತಲೇ ಬಂದಿದ್ದರು. ಅದರಲ್ಲಿ ಪ್ರಮುಖವಾದವುಗಳೆಂದರೆ, ಚಿಕಾಗೋದಲ್ಲಿ ವಲಸೆ ಕಾರ್ಮೀಕರು ಪ್ರತಿ ಭಾನುವಾರದ ರಜಾ ಸಮಯದಲ್ಲಿ ಒಂದೆಡೆ ಸೇರುತ್ತಿದ್ದ ಮತ್ತು ತಮ್ಮ ಕಷ್ಟ ಸುಖ ಹಾಗೂ ತಮ್ಮ ಸಂಘಟನೆ ಕುರಿತು ಚರ್ಚಿಸುತ್ತಿದ್ದ ಸ್ಥಳಗಳೆಂದರೆ ‘ಮದ್ಯದಂಗಡಿಗಳು’ ಆದರೆ ಬಾರ್ ಲೈಸೆನ್ಸ್ ಶುಲ್ಕಗಳನ್ನು30 ರಿಂದ 300 ಡಾಲರ್‌ಗೆ ಹೆಚ್ಚಿಸಿದ ನಗರಾಡಳಿತ ಕ್ರಮದಿಂದ ಅನೇಕ ಮದ್ಯದಂಗಡಿಗಳು ಮುಚ್ಚಿದವು. ಪರಿಣಾಮವಾಗಿ ಕಾರ್ಮಿಕರು ಒಂದಡೆ ಸೇರುವ ಅವಕಾಶದಿಂದ ವಂಚಿತರಾದರು. ಇದರ ವಿರುದ್ದ 1885ರ ಏಪ್ರಿಲ್  21 ರಂದು ನಡೆಸಲಾದ ಕಾರ್ಮಿಕರ ಬೃಹತ್ ಮೆರವಣಿಗೆಯನ್ನು ಅಲ್ಲಿಯ ಮೇಯರ್ ಪೊಲೀಸರನ್ನು ಬಳಸಿ ಹತ್ತಿಕ್ಕಿದನು. ಅಂದು ನಡೆದ ಗೋಲಿಬಾರ್‌ಗೆ ಒಬ್ಬ ಕಾರ್ಮಿಕ ಬಲಿಯಾದ. ಮತ್ತೊಂದೆಡೆ ಚಿಕಾಗೋ ನಗರದಲ್ಲಿ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ ಸಾವಿರಾರು ಕಾರ್ಮಿಕರೇ ವಾಸವಿದ್ದ ಮನೆಗಳೆಲ್ಲಾ ಸುಟ್ಟುಬೂದಿಯಾಗಿ 250 ಜನರು ಸಜೀವ ದಹನಗೊಂಡರು. ನಿರಾಶ್ರಿತರಿಗೆ ಸರಿಯಾದ ಪರಿಹಾರ ಪುನರ್‌ವಸತಿ ನೀಡುವಲ್ಲಿ ಭಾರೀ ಸಂಚು ರೂಪಿಸಲಾಯಿತು. ಇನ್ನೂ ಇದಕ್ಕಿಂತ ಮೊದಲೇ 1872 ರ ಚಳಿಗಾಲದಲ್ಲಿ ಹಸಿವಿನಿಂದ ಬಳಲುತ್ತಿದ್ದ ಜನರು ನಡೆಸದ ಹೋರಾಟ ‘ರೊಟ್ಟಿ ದಂಗೆ’ ಎಂದೇ ಚಿಕಾಗೋದ ಚರಿತ್ರೆಯಲ್ಲಿ ದಾಖಲಾಯಿತು. ಹಾಗೆ 1877  ರಲ್ಲಿ ನಡೆದ ರೈಲ್ ರೋಡ್ ಮುಷ್ಕರವು ಪ್ರಮುಖವಾದವುಗಳು.

ತದನಂತರದಲ್ಲಿ ಎದ್ದು ಬಂದ 1884  ರ ‘ಬಡವರ ಮಾರ್ಚ’ ೧೮೮೫ ರ ‘ಸ್ಟ್ರೀಟ್ ಕಾರ್’ ಮುಷ್ಕರ ಸಂದರ್ಭದಲ್ಲಿ ಪೊಲೀಸರು ಕಾರ್ಮಿಕರ ಮೇಲೆ ನಡೆಸಿದ ಪಾಶವೀ ಕೃತ್ಯಗಳ ವಿರುದ್ದದ ಹೋರಾಟಗಳು ಮುಂದಿನ ಚಳುವಳಿಗೆ ಬರೆದ ದಿಕ್ಸೂಚಿಗಳಾದವು.

 ‘ಹೇ ಮಾರ್ಕೆಟ್’ ದುರ್ಘಟನೆಗೆ ಪ್ರೇರಣೇ ಏನು..?

ಇದೆಲ್ಲಕ್ಕಿಂತ ಹೆಚ್ಚಾಗಿ ಹೇ ಮಾರ್ಕೆಟ್ ಘಟನೆಗೆ ಕಾರಣವಾದುದು ಚಿಕಾಗೋದ ಮ್ಯಾಕ್-ಕಾರ್ಮಿಕ್ ರೀಪರ್ ಪ್ಲಾಂಟ್ ಎನ್ನುವ ಕಾರ್ಖಾನೆಯಲ್ಲಿ ನಡೆದ ಘಟನಾವಳಿಗಳು. ಚಿಕಾಗೋದಲ್ಲಿ ಸೈರನ್ ಮ್ಯಾಕ್ ಕಾರ್ಮಿಕ್ ಸಹೋದದರು ಆರಂಭಿಸಿದ ಈ ಕಂಪನಿ  ಪ್ರಾರಂಭದಲ್ಲಿ ಕಾರ್ಮಿಕರ ಮತ್ತು ಮಾಲೀಕರ ನಡುವೆ ಉತ್ತಮ ಸಂಬಂಧ ಹೊಂದಿತ್ತು. 1862  ರಲ್ಲಿ ಕಂಪನಿಯಲ್ಲಿ ಕಾರ್ಮಿಕ ಸಂಘವನ್ನು ಮಾನ್ಯ ಕೂಡ ಮಾಡಲಾಗಿತ್ತು. ಆದರೆ ಮಾಲೀಕ ಸೈರನ್ 1884  ರಲ್ಲಿ ತೀರಿ ಹೋದ. ಮತ್ತೊಂದು ಮಾಲೀಕ ಸಹೋದರ ಇಯಾಂಡರ್ ಕಂಪನಿ ತೊರೆದ. ನಂತರ ಸೈರನ್ ಮಗನಾದ ಮಾನ್ಯಾಕ್ ಕಾರ್ಮಿಕ್-2  ಮಾಲೀಕನಾದ. ಅವನು ಕೇವಲ  25 ವರ್ಷದ ಅನುಭವ ರಹಿತ ಮಾಲೀಕ. ಅವನಿಗೆ ಸೂಪರ್ ಲಾಭದ ಬಗ್ಗೆ ಮಾತ್ರವೇ ಗಮನ ಹೊರತು ಕಾರ್ಮಿಕರ ಬಗ್ಗೆ ಕಿಂಚಿತ್ತೂ ಕರುಣೆಯೇ ಇರಲಿಲ್ಲ. ಚಿಕಾಗೋದ ಅಂದಿನ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ ಎಲ್ಲಾ ಕೈಗಾರಿಕೆಗಳು ಸಿಲುಕಿದ್ದರೂ ಈ ಕಂಪನಿ ಮಾತ್ರ ಕಾರ್ಮಿಕರಿಗೆ ಸರಿಯಾಗಿ ಕೂಲಿ ನೀಡದೆ ,ಎಲ್ಲಾ ಸೌಲತ್ತುಗಳನ್ನು ವಂಚಿಸಿ ಶೇ 71 ರಷ್ಟು ಲಾಭಗಳಿಸುತ್ತಿತ್ತು. ಅಂದಿನ ಕಾಲದ ಪತ್ರಿಕೆಗಳ ವರದಿಗಳ ಪ್ರಕಾರ ಕಾರ್ಮಿಕರ ಶ್ರಮವನ್ನು ಲೂಟಿ ಮಾಡುತ್ತಿದ್ದ ಆ ಮಾಲೀಕ ಆ ಪಾಪದ ಹಣವನ್ನೆಲ್ಲಾ ಚಿಕಾಗೋದ ‘ಪ್ರೆಸ್‌ಬಿಟೇರಿಯನ್’ ಎನ್ನುವ ಧಾರ್ಮಿಕ ಮಠಕ್ಕೆ ಧಾರೆ ಎರೆಯುತ್ತಿದ್ದ. ಹಾಗೆ ನೀಡಿದ ಹಣದ ಮೊತ್ತ 4 ಲಕ್ಷ 50 ಸಾವಿರ ಡಾಲರ್ ಆಗಿತ್ತು. ಈ ಕಂಪನಿಯ ಬಹುಪಾಲು ಕಾರ್ಮಿಕರೆಲ್ಲರೂ ಕ್ಯಾಥೋಲಿಕ್ ಧರ್ಮಕ್ಕೆ ಸೇರಿದವರಾಗಿದ್ದರು. ತಮಗೆ ಅತ್ಯಲ್ಪ ಕೂಲಿ ನೀಡಿ ಉಳಿದ ಹಣವನ್ನು ಧಾರ್ಮಿಕ ಮಠಕ್ಕೆ ನೀಡುವುದರ ವಿರುದ್ದ ಅವರು ತೀವ್ರ ಪ್ರತಿಭಟನೆಗಿಳಿದರು. ಈ ಕಂಪನಿಯಲ್ಲಿ 1884 ರಿಂದ 1886 ರ ಮೇ ನಡುವಿನ ಅವಧಿಯಲ್ಲಿ ಹಲವು ಮುಷ್ಕರಗಳು ನಡೆದವು. ಅಂತಿಮವಾಗಿ 1886 ಮೇ 3 ರಂದು ಮುಷ್ಕರ ಮುರುಕ ಪೊಲೀಸರು, ಮಾಲೀಕರ ಅಣತಿಯಂತೆ ಕಾರ್ಮಿಕ ಚಳುವಳಿ ಮೇಲೆ ಗೋಲಿಬಾರ್ ನಡೆಸಿದರು. ಈ ಘಟನೆಯೇ ಮರುದಿನದ ‘ಹೇ ಮಾರ್ಕೆಟ್’ ದುರ್ಘಟನೆಗೆ ಕಾರಣವಾಯಿತು ಮಾತ್ರವಲ್ಲ ಜಗತ್ತಿನಾದ್ಯಂತ ಪ್ರಬಲ ಕಾರ್ಮಿಕ ಆಂದೋಲವನ್ನೇ ಹುಟ್ಟು ಹಾಕಿತು.

‘ಮೇ ದಿನದ ಉದಯ’

ಚಿಕಾಗೋದ ಹೇ ಮಾರ್ಕೆಟ್ ಘಟನೆ ಮತ್ತು ನಂತರದಲ್ಲಿ ಕಾರ್ಮಿಕ ನಾಯಕರ ವಿಚಾರಣೆ ನಾಟಕ ಮತ್ತು ಅದರಲ್ಲಿ ೪ ಜನರನ್ನು ಗಲ್ಲಿಗೇರಿಸಿದ ಪ್ರಕರಣದ ಹಿಂದಿರುವ ಪಿತೂರಿಗಳನ್ನು ಅಮೇರಿಕನ್ ಲೇಬರ್ ಯೂನಿಯನ್ ಮತ್ತು ಲೈಟ್ಸ್ ಆಫ್  ಲೇ¨ರ್ ಯೂನಿಯನ್‌ನ ಕಾರ್ಮಿಕ ನಾಯಕರು ಅಳವಾಗಿ ಅರ್ಥೈಸಿಕೊಂಡರು. ಚಿಕಾಗೋದ ಆಳುವ ಪ್ರಭುಗಳು ಇಡೀ ಕಾರ್ಮಿಕ ಚಳುವಳಿಯನ್ನೇ ಈ ಪ್ರಕರಣದ ಮೂಲ ಹೊಸಕಿ ಹಾಕುವ ಯೋಜನೆ ಹೊಂದಿದ್ದರು. ಹಾಗಾಗಿ ಹೇ ಮಾರ್ಕೆಟ್ ಪ್ರಕರಣದಲ್ಲಿ ಬಂಧಿತರಾಗಿರುವ ಕಾರ್ಮಿಕ ನಾಯಕರ ಬಿಡುಗಡೆಗೆ ಅಮೇರಿಕಾದ ಉದ್ದಗಲಕ್ಕೂ ಪ್ರತಿಭಟನೆಗಳನ್ನು ಅಯೋಜಿಸಿ ಅವರ ಪರ ನ್ಯಾಯಲಯದ ಹೋರಾಟಕ್ಕೆ ಹಣ ಸಂಗ್ರಹಿಸಲಾಯಿತು. ಬಂಧನಕ್ಕೊಳಗಾದ ಈ ನಾಯಕರ ಬಗ್ಗೆ ದೇಶದೆಲ್ಲೆಡೆ ಅನುಕಂಪದ ಮಹಾಪೂರವೆ ಹರಿದು ಬಂತು. ಅಮೇರಿಕಾದ ಹೆಸರಾಂತ ಕಾದಂಬರಿಕಾರ ವಿಲಿಯಂ ಡೀನ್ ಹೊವೆಲ್ಸ್ ಸೇರಿದಂತೆ ಹಲವು ಮಾಜಿ ಸೆನೆಟ್‌ರಗಳು, ಮಾಜಿ ನ್ಯಾಯಧೀಶರು ಹೀಗೆ ಹಲವರು ಕಾರ್ಮಿಕರ ನ್ಯಾಯಬದ್ದ ಹಕ್ಕನ್ನು ಬೆಂಬಲಿದರು. ಈ ಎಲ್ಲಾ ವಿರೋಧಗಳ ನಡುವೆಯೂ ಬಂಧಿತ ಕಾರ್ಮಿಕ ನಾಯಕರನ್ನು ಗಲ್ಲಿಗೇರಿಸಲು ತಯಾರಿ ನಡೆದಿತ್ತು. ಅವರನ್ನು ಗಲ್ಲಿಗೇರಿಸುವ ಆ 1887  ರ ನವೆಂಬರ 11 ದಿನ ಇಡೀ ಚಿಕಾಗೋ ನಗರವೇ ಕಾರ್ಮೀಕರ ಕ್ರೋಧದಿಂದ ಹೆಪ್ಪುಗಟ್ಟಿದ ಕಾರ್ಮೋಡದಂತಿತ್ತು. ಯಾವಗಾ ಬೇಕಾದರೂ ಆ ಮೋಡಗಳು ಒಡೆದು ಅಬ್ಬರದ ಮಳೆ ಸುರಿಯುವ ಎಲ್ಲಾ ಲಕ್ಷಣಗಳು ಕಂಡು ಬಂದವು. ಚಿಕಾಗೋದಲ್ಲಿ ಅಂದು ಒಂದೂಗೂಡಿದ್ದ ಕಾರ್ಮಿಕರ ಸಂಖ್ಯೆಗೆ ಅಂದು ಅಲ್ಲಿ ನಿಯೋಜಿಸಲಾಗಿದ್ದ ಶಸ್ತçಸಜ್ಜಿತ ಪೊಲೀಸರು ಏನೇನೂ ಅಲ್ಲವಾಗಿತ್ತು. ಒಂದರ್ಥದಲ್ಲಿ ಅಲ್ಲಿನ ಜೈಲಿನ ಮೇಲೆ ದಾಳಿ ನಡೆಸಲು ಬೇಕಾದ ಎಲ್ಲಾ ತಯಾರಿಗಳನ್ನು ಕಾರ್ಮಿಕರು ನಡೆಸಿದ್ದರು.!  ಆದರೆ ಈ ವಿಷಯ ಜೈಲಿನೊಳಗಿದ್ದ ಸ್ಟೈಜ್ ಎಂಗೆಲ್ ಮತ್ತಿತರ ಗಮನಕ್ಕೆ ಬೀಳುತ್ತಿದ್ದಂತೆ ಮರಣದಂಡನೆಗೆ ಗುರಿಯಾಗಿದ್ದರೂ, ಸಾವಿನ ದಡದಲ್ಲೂ ನಿಂತಿದ್ದರೂ ಅವರು ವಿವೇಕಶಾಲಿಗಳಾಗಿ ವರ್ತಿಸಿದರು. ಕಾರ್ಮಿಕರರೇನಾದರೂ ಅಂತಹ ಕಾರ್ಯಕ್ಕೆ ಕೈ ಹಾಕಿದರೆ ಮುಂದಾಗುವ ಘಟನೆಗಳು ಕಲ್ಲನಾತೀತವಾಗಿದ್ದವು. ಇಡೀ ಚಿಕಾಗೋದಲ್ಲಿ ಕಾರ್ಮಿಕರ ಮಾರಣಹೋಮವೇ ನಡೆಯುತ್ತಿತ್ತು. ಹೀಗಾಗಿ ಆತ್ಮಾರ್ಪಣೆ ಮಾಡಲು ರೆಡಿಯಾಗಿದ್ದ ಆ ನಾಲ್ಕು ಬಂಧಿತ ನಾಯಕರು ಇಂತಹ ಕೆಲಸಕ್ಕೆ ಇಳಿಯದಿರುವಂತೆ ಹೊರಗಿರುವ ಕಾರ್ಮಿಕರಿಂದ ಶಪಥ ಮಾಡಿಸಿದರು. ಇಂತಹ ವಿಶಾಲ ಮನೋಭಾವದ ಆ ಕಾರ್ಮಿಕರ ನಾಯಕರನ್ನು ಅಂತಿಮವಾಗಿ ಭೇಟಿ ಮಾಡಲು ಅವರ ಕುಟುಂಬದವರಿಗೂ ಅವಕಾಶ ನೀಡದೆ ಆಳುವ ಅರಸರು ತಮ್ಮ ಅಮಾನವೀಯತೆಯನ್ನು ಮರೆದರು ಮಾತ್ರವಲ್ಲ 1887 ರ ನವೆಂಬರ್ 11 ಮದ್ಯಾನ್ಹದ ಹೊತ್ತಿಗೆಲ್ಲಾ ಆ ನಾಲ್ವರು ಕಾರ್ಮಿಕ ನಾಯಕರ ಕುತ್ತಿಗೆಗೆ ಗಲ್ಲಿನ ಹಗ್ಗ ಬಿಗಿದರು.! ಜಗತ್ತಿನ ಕಾರ್ಮಿಕ ಚಳುವಳಿಯ ಇತಿಹಾಸದಲ್ಲಿ ಆ ಶುಕ್ರವಾರ ‘ಬ್ಲಾಕ್ ಫ್ರೈಡೇ’ ಎಂದೇ ದಾಖಲಾಯಿತು. ಇದಾದ ನಂತರ ಅಮೇರಿಕಾ ಮಾತ್ರವಲ್ಲ ಜಗತ್ತಿನಾದ್ಯಂತ ಕಾರ್ಮಿಕರ ಬಲಿದಾನ, ಹಕ್ಕುಗಳ ರಕ್ಷಣೆ ಕುರಿತು ಬಿಸಿಬಸಿ  ಚರ್ಚೆಗಳು ನಡೆದವು. ಕಾರ್ಮಿಕ ನಾಯಕರು ಹುತತ್ಮಾರಾದರೂ ಕಾರ್ಮಿಕರ ಪರಿಸ್ಥಿತಿಯೇನೂ ಬದಲಾಗಲಿಲ್ಲ. ಅದರ ಬದಲು ತೀವ್ರ ದುಡಿತ, ಶೋಷಣೆಗಳು ಮತ್ತಷ್ಟು ತೀವ್ರಗೊಂಡವು. ೧೮೮೮ ರ ಡಿಸೆಂಬರ್‌ನಲ್ಲಿ ಕಾರ್ಮಿಕ ಚಳುವಳಿಯನ್ನು ಪುರುಜ್ಜೀವನಗೊಳಿಸುವ ದೃಷ್ಟಿಯಿಂದ ಅಮೇರಿಕನ್ ಫೆಡರೇಷನ್ ಆಫ್ ಲೇರ‍್ಸ್ ಸೆಂಟ್ ಲೂಯಿಯದಲ್ಲಿ ಸಮಾವೇಶವೊಂದನ್ನು ಸಂಘಟಿಸಿತು. ಅದರಲ್ಲಿ ‘8 ಗಂಟೆ ದುಡಿಮೆ, 8 ಗಂಟೆ ವಿಶ್ರಾಂತಿ ಮತ್ತು 8 ಗಂಟೆ ಖಾಸಗಿ ಇಚ್ಚೆ ಕಾರ್ಯಕ್ಕೆ’ ಎನ್ನುವ ಬೇಡಿಕೆಯನ್ನು ಅಂಗೀಕರಿಸಿ ೧೮೯೦ ಮೇ ೧ರ ದಿನಾಚರಣೆಗೆ ಅಧಿಕೃತವಾಗಿ ಕರೆ ನೀಡಿತು.

‘ಚಾರಿತ್ರಿಕ ದಿನ’

ಅಂದಿನಿಂದ ಇಂದಿನವರೆಗೂ ಮತ್ತು ಮುಂದೆಯೂ ಮೇ ದಿನವು ವಿಶ್ವದ ಎಲ್ಲಾ ಕಾರ್ಮಿಕ ವರ್ಗವನ್ನು ಏಕತ್ರಗೊಳಿಸಿ ಬಂಡವಾಳಶಾಹಿಗಳು ಹೆಣೆಯುತ್ತಿರುವ ಶೋಷಣೆಗಳ ಚಕ್ರವೂಹದ ಅಬೇಧ್ಯ ಕೋಟೆಗಳನ್ನು ಬೇಧಿಸುತ್ತಾ ಹೋರಾಟಕ್ಕಿಳಿಸುವ ಚಾರಿತ್ರಿಕ ದಿನ ಎನ್ನುವುದರಲ್ಲಿ ಅನುಮಾನವಿಲ್ಲ. ಬಹುಶಃ ಜಗತ್ತಿನ ಎಲ್ಲಾ ದೇಶಗಳಲ್ಲೂ ಮೇ ದಿನವನ್ನು  ತಪ್ಪದೆ ಆಚರಿಸಲಾಗುತ್ತಿದೆ. ‘ವಿಶ್ವದ ಕಾರ್ಮಿಕÀರೇ ಒಂದಾಗಿರಿ’ ಎನ್ನುವ ಸ್ಪೂರ್ತಿಯನ್ನು ಕಾರ್ಮಿಕ ವರ್ಗಕ್ಕೆ ನೀಡಿ ಆ ವರ್ಗವನ್ನು ಒಂದುಗೂಡಿಸುವ ಅದರ ಪ್ರಚ್ಛನ್ನ ಶಕ್ತಿ ಆಪಾರ. ಒಂದೇ ಮಾತಿನಲ್ಲಿ ಹೇಳಬೇಕಾದರೆ ‘ಎಲ್ಲ ರಾಷ್ಟçಗಳಲ್ಲಿಯೂ ಧನಿಕ ವರ್ಗವು ಕಾರ್ಮಿಕ ವರ್ಗದ ಮೇಲೆ ಹೇರಲು ಪ್ರಯತ್ನಿಸುತ್ತಿರುವ ಗುಲಾಮಗಿರಿಯ ಹೊಸ ರೂಪದ ವಿರುದ್ದ ಟೊಂಕಕಟ್ಟಿ ನಿಲ್ಲಲು ಪ್ರೆರೇಪಿಸುತ್ತಿದೆ ಮೇ ದಿನ.’

ಆದರೆ ಇಂತಹ ಚಾರಿತ್ರಿಕ ದಿನವನ್ನು ಇದೀಗ ಎಲ್ಲಾ ಕಡೆಗಳಲ್ಲೂ ಕೇವಲ ಔಪಚಾರಿಕವಾಗಿ ಬೇರೆಯ ದಿನಾಚರಣೆಗಳಂತೆ ಆಚರಿಸಿ ಕೈತೊಳೆದುಕೊಳ್ಳುವ ಪ್ರವೃತ್ತಿ ವ್ಯಾಪಕವಾಗಿದೆ. ಇಂತಹ ಅಪಾಯ ಪ್ರವೃತ್ತಿಗಳ ಬಗ್ಗೆ ಭಾರತದ ಕಾರ್ಮಿಕ ಚಳುವಳಿಯ ಅಗ್ರಗಣ್ಯ ನಾಯಕರಾಗಿದ್ದ ಡಾ: ಎಂ.ಕೆ ಪಂಧೆಯವರು ಅಮೇರಿಕಾದ ಇಲಿನಾಯ್ ಲೇಬರ್ ಹಿಸ್ಟರಿ ಸೊಸೈಟಿ ಪ್ರಕಟಿಸಿರುವ ಡಾ: ವಿಲಿಯಮ್ ಜೆ, ಆಡ್ಯಲ್‌ಮೆನ್ ಅವರು  ಹೇ ಮಾರ್ಕೆಟ್ ಪ್ರಕರಣದ ಚರಿತ್ರೆಯನ್ನು ವಿಸ್ತೃತವಾಗಿ ವಿವರರಿಸಿರುವ ಕೃತಿ ‘ಹೇ ಮಾರ್ಕೆಟ್ ರೀ-ವಿಜಿಟೆಡ್’ ಕೃತಿಯ ಭಾರತೀಯ ಆವೃತ್ತಿಗೆ ೨೦೦೯ ರ ಮೇ ೪ ರಂದು ಬರೆದ ಮುನ್ನುಡಿಯಲ್ಲಿ ಹೀಗಿ ಗುರುತಿಸಿದ್ದಾರೆ .”ಇಂದು ಭಾರತ ಸೇರಿದಂತೆ ಅನೇಕ ರಾಷ್ಟçಗಳಲ್ಲಿ ಫೈವ್ ಸ್ಟಾರ್ ಟ್ರೇಡ್ ಯೂನಿಯನ್ ಸಂಸ್ಕೃತಿ ಆವಿಷ್ಕರಿಸುತ್ತಿದೆ ಇಂತಹ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ನಾಯಕರು ಹೇ ಮಾರ್ಕೆಟ್ ಹುತಾತ್ಮರನ್ನು ಕೇವಲ ಮೇ ೧ ರಂದು ವೈಭವೀಕರಿಸಿ ಮೇ ದಿನದ ಜನಪ್ರಿಯತೆಯನ್ನು ಕೇವಲ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಆ ಹುತಾತ್ಮರ ಧೀರ ಧಿಮಂತಿಕೆಯಲ್ಲಿ ಹೆಜ್ಜೆ ಹಾಕದೇ ವರ್ಗ ಸಖ್ಯತೆಯ ಧೋರಣೆಗಳನ್ನು ಅನುಸರಿಸುತ್ತಾ ಶೋಷಕರೊಂದಿಗೆ ಶಾಮೀಲಾಗುತ್ತಿದ್ದಾರೆ. ಇಂತಹ ನಾಯಕರುಗಳು ಹೇ ಮಾರ್ಕೆಟ್ ಹುತಾತ್ಮ ಪರಂಪರೆಗಳನ್ನು ಮುಂದೊಯ್ಯಲಾರರು ಮೇಲಾಗಿ ಅವರಿಗೆ ಆ ಹಕ್ಕೂ ಇರುವುದಿಲ್ಲ”

ಹೇ ಮಾರ್ಕೆಟ್ ಘಟನೆ ನಡೆದು ಇಂದಿಗೆ ೧೩೮ ವರ್ಷಗಳಾದವು. ಜಗತ್ತಿನಲ್ಲಿ ನೂರಕ್ಕೂ ಅಧಿಕ ವರ್ಷಗಳಿಂದ ನಡೆದು ಬರುತ್ತಿರುವ ಮೇ ದಿನದ ಆ ಕ್ರಾಂತಿಕಾರಿ ಪರಂಪರೆ ಈಗಲೂ ಜಗದ ಎಲ್ಲಾ ಕಾರ್ಮಿಕ ಚಳುವಳಿಗೆ ಹೊಸ ಸ್ಪೂರ್ತಿ ಹಾಗೂ ಚೈತನ್ಯದ ಕಾವನ್ನು ನೀಡುತ್ತಲೇ ಬಂದಿದೆ. ಪ್ರತಿಬಾರಿಯೂ ಜಾಗತೀಕರವಾಗಿ ಒಂದೊಂದು ಸವಾಲನ್ನು ಮೇ ದಿನ ತನ್ನ ಘೋಷಣೆಯನ್ನಾಗಿ ಅಳವಡಿಸಿಕೊಳ್ಳುತ್ತಿದೆ. ಈ ಬಾರಿ ಜಾಗತೀಕವಾಗಿ ಬಂಡವಾಳಶಾಹಿ ಯುದ್ದದ ಹೆಸರಲ್ಲಿ ಪ್ಯಾಲಿಸ್ತೇನ್ ಜನರ ಮೇಲೆ ನಡೆಸುತ್ತಿರುವ ದಾಳಿಯ ವಿರುದ್ದ ಮೇ ದಿನ ಕೇಂದ್ರೀಕರಿಸಲಾಗಿದೆ. ಹಾಗೆ ಭಾರತದಲ್ಲಿ ಎಡೆ ಎತ್ತಿ ನಿಂತಿರುವ ಪ್ಯಾಶಿಸಂ ಸೋಲಿಸುವ ಸವಾಲನ್ನು ಭಾರತದ ಕಾರ್ಮಿಕ ವರ್ಗ ತನ್ನ ಪ್ರಧಾನ ಕರ್ತವ್ಯವನ್ನಾಗಿಸಿಕೊಂಡಿದೆ. ಈ ವರ್ಷದ ಮೇ ದಿನಾಚರಣೆಯು ಭವಿಷ್ಯದಲ್ಲಿ ಹೊಸದೊಂದು ಭರವಸೆಗೆ ನಾಂದಿಯಾಗಲಿ ಎಂದು ದೃಢವಾಗಿ ನಂಬೋಣ.

ಇದನ್ನೂ ನೋಡಿಬಿಜೆಪಿ ಮತ್ತು ಮಿತ್ರಪಕ್ಷಗಳಿಗಿಲ್ಲ ಕಾರ್ಮಿಕರ ಮತ – ಕಾರ್ಮಿಕ ನಾಯಕರ ಅಭಿಮತ

 

Donate Janashakthi Media

Leave a Reply

Your email address will not be published. Required fields are marked *