ಆಡಳಿತ ಮಂಡಳಿಯ ಕಿರುಕುಳಕ್ಕೆ ಬೇಸತ್ತು ಮೆಡಿಕಲ್‌ ವಿದ್ಯಾರ್ಥಿನಿ ಸಾವು

ಕೋಲಾರ:ಮಕ್ಕಳ ವೈದ್ಯೆಯಾಗುವ ಕನಸನ್ನು ಹೊತ್ತುಕೊಂಡು ದೂರದ ಬಳ್ಳಾರಿಯಿಂದ ಬೆಂಗಳೂರಿಗೆ ಬಂದಿದ್ದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಭಾನುವಾರ ಕೋಲಾರ ತಾಲ್ಲೂಕಿನ ಕೆಂದಟ್ಟಿ ಸಮೀಪದ ಕ್ವಾರಿಯಲ್ಲಿರುವ ನೀರಿಗೆ ಮೇಲಿಂದ ಹಾರಿ ಸಾವನ್ನಪ್ಪಿದ ಘಟನೆ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಬಳಿಯ  ಎಂವಿಜೆ ವೈದ್ಯಕೀಯ ಕಾಲೇಜಿನಲ್ಲಿ ಎಂ.ಡಿ (ಮಕ್ಕಳ ತಜ್ಞೆ) ಮೊದಲ ವರ್ಷದ ವ್ಯಾಸಂಗದಲ್ಲಿ ತೊಡಗಿದ್ದ ಬಳ್ಳಾರಿಯ ಕೌಲ್‌ ಬಜಾರ್‌ನ ನಿವಾಸಿ (24 )ವರ್ಷದ  ಪಿ. ದರ್ಶಿನಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದು ಈ ಸಂಬಂಧ ವೈದ್ಯರೊಬ್ಬರ ವಿರುದ್ಧ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.

ಕೊಪ್ಪಳದಲ್ಲಿ ಎಂಬಿಬಿಎಸ್‌ ಮುಗಿಸಿ, ಕಳೆದ 7 ತಿಂಗಳ ಹಿಂದೆ ಎಂವಿಜೆ ಮೆಡಿಕಲ್‌ ಕಾಲೇಜಿಗೆ ಪ್ರವೇಶ ಪಡೆದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದರು. ತಂದೆಯನ್ನು ಕಳೆದುಕೊಂಡು ತಾಯಿಯ ಆಶ್ರಯದಲ್ಲಿ ಬೆಳೆಯುತ್ತಿರುವ ಈ ವಿದ್ಯಾರ್ಥಿನಿ ಮಕ್ಕಳ ತಜ್ಞೆಯಾಗಿ ಎಂವಿಜೆ ವೈದ್ಯಕೀಯ ಕಾಲೇಜಿನಲ್ಲಿ ಉಚಿತ ಪ್ರವೇಶ ಪಡೆದುಕೊಂಡಿದ್ದಳು. (ಸರ್ಕಾರಿ ಕೋಟಾ) ವಸತಿ ನಿಲಯಕ್ಕೆ 2 ಲಕ್ಷ ರೂಪಾಯಿ ಪಾವತಿ ಮಾಡಿದರು ಕೂಡ ಸರಿಯಾದ ಊಟ ಸಿಗುತ್ತಿರಲಿಲ್ಲ. ಇದರಿಂದ ರೋಸಿ ಹೋಗಿ ಕಾಲೇಜು ತೊರೆಯುವ ನಿರ್ಧಾರಕ್ಕೆ ಬಂದಿದ್ದೆ, ಆಗ ಆಡಳಿತ  ಮಂಡಳಿಯವರು  50 ಲಕ್ಷ ರೂಪಾಯಿ ಪಾವತಿಸಬೇಕೆಂದು ಷರತ್ತು ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನೂ ಓದಿ : ಸೇವೆಯಿಂದ ವಜಾ : ಶುಶ್ರೂಷಕಿಯರ ಅಳಲು

“ಉಚಿತ ಪ್ರವೇಶದ ಕಾರಣಕ್ಕಾಗಿ  ದಿನದ 24 ಗಂಟೆಗಳ ಕಾಲ ವಿಶ್ರಾಂತಿ ಇಲ್ಲದೆ ಕೆಲಸವನ್ನು ಈ  ವಿದ್ಯಾರ್ಥಿನಿಯಿಂದ ಮಾಡಿಸುವ ಮೂಲಕ  ಕಾಲೇಜು ಆಡಳಿತ ಮಂಡಳಿ ಕಿರುಕುಳ ನೀಡಿದೆ. ಜೊತೆಗೆ ಹಿರಿಯ ವೈದ್ಯರೊಬ್ಬರು ಕಾಫಿ ಕುಡಿಯುವ ನೆಪದಲ್ಲಿ ವಿದ್ಯಾರ್ಥಿನಿಯನ್ನು ಕರೆದುಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದಾರೆ ಎಂದು ತಮ್ಮ ಪೋಷಕರಲ್ಲಿ ಹಾಗೂ ಸ್ನೇಹಿತರ ಜೊತೆಗೆ ನಡೆದಿರುವ ಘಟನೆಯ ಬಗ್ಗೆ ತನ್ನ ನೋವನ್ನು ಹೇಳಿಕೊಂಡಿದ್ದಾಳೆ. ಮಂಡಳಿಯವರ ಈ ರೀತಿಯ ಕಿರುಕುಳವನ್ನು ಪ್ರಶ್ನಿಸಿದರೆ ಕಾಲೇಜಿನಲ್ಲಿ ಆತಂರಿಕ ಪರೀಕ್ಷೆಯ ಅಂಕಗಳನ್ನು ಕೊಡುವುದಿಲ್ಲ ಎಂಬ ಭಯ ಇತ್ತೆಂದು ತಿಳಿಸಿದ್ದಾರೆ.  ಆತ್ಮಹತ್ಯೆಗೂ ಮುನ್ನ ತನ್ನ  ಸ್ನೇಹಿತನಾದ ಶಿವಮಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.  ನಂತರ ಶಿವಮಣಿಯ ಕರೆಗೂ ಸ್ಪಂದಿಸದೇ, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಿ.ದರ್ಶಿನಿ ಅವರ ಸಹೋದರ ಪ್ರಜ್ವಲ್‌ ಅವರು ನೀಡಿದ ದೂರಿನ ಮೇಲೆ ಕೋಲಾರ ಗ್ರಾಮಾಂತರ ಪೋಲಿಸರು ಆಕೆಗೆ ಕಿರುಕುಳ ನೀಡಿದ ಆರೋಪದ ಮೇಲೆ ಕಾಲೇಜಿನ ಹಿರಿಯ ವೈದ್ಯೆ ಡಾ.ಮಹೇಶ್‌ ವಿರುದ್ಧ ಐಪಿಸಿ ಸೆಕ್ಷನ್‌ 306 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅಕ್ಕ ದರ್ಶಿನಿ ಕಾಲೇಜಿನಿಂದ 35 ಕಿ.ಮೀ ದೂರವಿರುವ ಕೆಂದಟ್ಟಿಗೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಲು ಸಾದ್ಯವಿಲ್ಲ, ಆಡಳಿತ ಮಂಡಳಿಯವರೆ ಕೊಂದು ಕ್ವಾರಿಯ ನೀರಲ್ಲಿ ಹಾಕಿದ್ದಾರೆ ಎಂದು ಪ್ರಜ್ವಲ್‌ ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸರ ತನಿಖೆಯಿಂದ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

Donate Janashakthi Media

Leave a Reply

Your email address will not be published. Required fields are marked *