ಮಲಯಾಳ ಸುದ್ದಿ ವಾಹಿನಿ ಮೀಡಿಯಾಒನ್ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ

ನವದೆಹಲಿ: ಭದ್ರತೆ ಕಾರಣಕ್ಕೆ ಮಲಯಾಳ ಸುದ್ದಿವಾಹಿನಿ `ಮೀಡಿಯಾಒನ್’ ಪ್ರಸಾರದ ಮೇಲೆ ಕೇಂದ್ರದ ಬಿಜೆಪಿ ಸರ್ಕಾರವು ಹೇರಿರುವ ನಿರ್ಬಂಧವನ್ನು ಎತ್ತಿಹಿಡಿದಿರುವ ಕೇರಳ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ನ್ಯಾಯಾಲಯ ಸಮ್ಮತಿಸಿದೆ.

ಈ ಸಂಬಂಧ ವಿಚಾರಣೆ ಕೈಗೊಂಡ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹಾಗೂ ನ್ಯಾಯಮೂರ್ತಿ ಎ.ಎಸ್ ಬೋಪಣ್ಣ ಅವರಿದ್ದ ವಿಭಾಗೀಯ ಪೀಠವು, ಈ ಅರ್ಜಿಯನ್ನು ಮಾರ್ಚ್‌ 10ರಂದು ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ. ಮೊದಲಿಗೆ ಈ ಅರ್ಜಿ ವಿಚಾರಣೆಯನ್ನು ಮಾರ್ಚ್‌ 11ರಂದು ನಡೆಸುವುದಾಗಿ ನ್ಯಾಯಾಲಯ ಹೇಳಿತ್ತು. ಆದರೆ, ಅಂದು ತಮಗೆ ಕೆಲಸವಿದೆ ಎಂದು ವಕೀಲ ದುಶ್ಯಂತ್ ದವೆ ಅವರು ಹೇಳಿದ ಹಿನ್ನೆಲೆಯಲ್ಲಿ ಮಾರ್ಚ್‌ 10ರಂದು ವಿಚಾರಣೆ ನಡೆಸಲು ನ್ಯಾಯಪೀಠ ಒಪ್ಪಿದೆ.

ಮಲಯಾಳ ಸುದ್ದಿ ವಾಹಿನಿ ಪರ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ದವೆ ’ನಮ್ಮ ಸುದ್ದಿ ವಾಹಿನಿಯು ಕಳೆದ 11 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, 350 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಸಾವಿರಾರು ಮಂದಿ ವೀಕ್ಷಕರಿದ್ದಾರೆ. ಆದರೆ, ಕೇಂದ್ರ ಸರ್ಕಾರ ಸುದ್ದಿವಾಹಿನಿಯನ್ನು ಮುಚ್ಚಿಸಿದೆ. ಕೇರಳ ಹೈಕೋರ್ಟ್‌ನ ಏಕ ಸದಸ್ಯ ಪೀಠ ಮತ್ತು ವಿಭಾಗೀಯ ಪೀಠ ಸುದ್ದಿ ಸಂಸ್ಥೆ ಮೇಲೆ ಕೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿವೆ. ಮಾಹಿತಿ ಹಕ್ಕು ಮತ್ತು ಪತ್ರಿಕಾ ಸ್ವಾತಂತ್ರ್ಯದ ಹಕ್ಕುಗಳಿಗೆ ಸಂಬಂಧಿಸಿದ ಇದು ಗಂಭೀರ ವಿಚಾರ’ ಎಂದು ಹೇಳಿದರು.

ವಿವಿಧ ತನಿಖಾ ಸಂಸ್ಥೆಗಳ ಗುಪ್ತಚರ ಮಾಹಿತಿ ಆಧರಿಸಿ ಸುದ್ದಿ ಸಂಸ್ಥೆ ಮೇಲೆ ಭದ್ರತಾ ಕ್ಲಿಯರೆನ್ಸ್ ಅನ್ನು ಕೇಂದ್ರ ಗೃಹ ಇಲಾಖೆ ನಿರಾಕರಿಸಿತ್ತು. ಇದನ್ನು ಕೇರಳ ಹೈಕೋರ್ಟ್ ಸಮರ್ಥಿಸಿಕೊಂಡಿತ್ತು. ಈ ತೀರ್ಪಿನ ವಿರುದ್ಧ ಈಗ ಮಾಧ್ಯಮ ಸಂಸ್ಥೆ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.

Donate Janashakthi Media

Leave a Reply

Your email address will not be published. Required fields are marked *