ಬೆಂಗಳೂರು : ಮಡಿವಾಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಎಸ್.ಬಿ.ಐ. ಬ್ಯಾಂಕ್ ರಾಬರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೆಕಾನಿಕಲ್ ಎಂಜಿನಿಯರ್ ಒಬ್ಬನನ್ನು ಬಂಧಿಸಿದ್ದಾರೆ. 28 ವರ್ಷದ ಧೀರಜ್ ಬಂಧಿತ ಆರೋಪಿ.
ಜನವರಿ 14ರಂದು ಬಿಟಿಎಂ ಲೇಔಟ್ನ ಎಸ್.ಬಿ.ಐ.ಬ್ಯಾಂಕ್ ಗೆ ನುಗ್ಗಿ, ಸಿಬ್ಬಂದಿಗೆ ಚಾಕು ತೋರಿಸಿ 3.75 ಲಕ್ಷ ನಗದು ಹಾಗೂ 1.8ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆರೋಪಿ ಧೀರಜ್ ಖಾಸಗಿ ಕಂಪನಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಈ ನಡುವೆ ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಸಂಪಾದಿಸಿ ಶ್ರೀಮಂತನಾಗುವ ಕನಸು ಕಂಡಿದ್ದ. ಆನ್‌ಲೈನ್ ಒಲಿಂಪಿ ಟ್ರೇಡಿಂಗ್‌ನಲ್ಲಿ ಲಕ್ಷಾಂತರ ರೂ. ಹಣ ತೊಡಗಿಸಿ ಸಂಪೂರ್ಣ ನಷ್ಟಮಾಡಿಕೊಂಡಿದ್ದ. ಒಲಿಂಪಿ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಲು ಸ್ನೇಹಿತರು, ಬಜಾಜ್ ಫೈನ್ಯಾನ್ಸ್‌ನಿಂದ ಒಟ್ಟು 35 ಲಕ್ಷ ರೂ. ಸಾಲ ಮಾಡಿದ್ದ. ಧೀರಜ್‌ಗೆ ತಿಂಗಳಿಗೆ ಬರುತ್ತಿದ್ದ 30 ಸಾವಿರ ರೂ. ವೇತನದಲ್ಲಿ ಸಾಲ ಹಿಂತಿರುಗಿಸಲು ಸಾಧ್ಯವಾಗಿರಲಿಲ್ಲ. ಸಾಲಗಾರರು ಹಣ ಹಿಂತಿರುಗಿಸುವಂತೆ ಒತ್ತಾಯಿಸುತ್ತಿದ್ದರು. ಹಣ ಹೊಂದಿಸಲು ಏನು ಮಾಡಬೇಕೆಂದು ದೋಚದೆ ಬ್ಯಾಂಕ್ ದರೋಡೆ ಮಾಡಲು ಮುಂದಾಗಿದ್ದ ಎಂಬುದು ತನಿಖೆಯಿಂದ ಬಯಲಾಗಿದೆ.
ಬ್ಯಾಂಕ್ ದರೋಡೆಗೆ ಪ್ಲಾನ್ ಮಾಡಿದ್ದೇಗೆ..?
ಸಾಲಗಾರರ ಕಾಟ ತಾಳಲಾರದೆ ಇದಕ್ಕೆ ಸಲ್ಯೂಷನ್ ಹುಡುಕ್ತಿದ್ದ ಧೀರಜ್ ಗೆ, ನ್ಯೂಸ್ ಪೇಪರ್ ನಲ್ಲಿ ಬಂದಿದ್ದ ಬ್ಯಾಂಕ್ ರಾಬರಿ ಸುದ್ದಿ ಸಿಕ್ಕಿದೆ. ಇದನ್ನ ನೋಡಿ ತಾನು ಬ್ಯಾಂಕ್ ದರೋಡೆ ಮಾಡಲು ಪ್ಲಾನ್ ಮಾಡಿದ್ದಾನೆ. ಒಬ್ಬನೇ ಬ್ಯಾಂಕ್ ದರೋಡೆ ಮಾಡುವುದು ಹೇಗೆ ಎಂದು ಗೂಗಲ್ ನಲ್ಲಿ ಮತ್ತು ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿದ್ದಾನೆ.
ಇಡೀ ಬೆಂಗಳೂರಲ್ಲಿ ಸೆಕ್ಯೂರಿಟಿ ಇಲ್ಲದ ಬ್ಯಾಂಕ್ ಗಳನ್ನ ಸರ್ಚ್ ಮಾಡಿದ್ದಾನೆ. ಈ ಹಿಂದೆ ಬ್ಯಾಂಕ್‌ಗಳಲ್ಲಿ ನಡೆದ ದರೋಡೆ ಪ್ರಕರಣಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದ. ನಂತರ ಒಂದು ವಾರಗಳ ಕಾಲ ನಗರದೆಲ್ಲೆಡೆ ಸುತ್ತಾಡಿ 20ಕ್ಕೂ ಹೆಚ್ಚಿನ ಬ್ಯಾಂಕ್‌ಗಳಿಗೆ ಹೋಗಿ, ಸೆಕ್ಯೂರಿಟಿಗಾರ್ಡ್‌ಗಳು ಇಲ್ಲದಿರುವುದು, ಯಾವ ಸಮಯದಲ್ಲಿ ಜನ ಕಡಿಮೆ ಇರುತ್ತಾರೆ ಎಂಬುದನ್ನು ಗಮನಿಸುತ್ತಿದ್ದ. ಬಳಿಕ ಬಿಟಿಎಂ ಲೇಔಟ್ ನಲ್ಲಿ ಸೆಕ್ಯೂರಿಟಿ ಇಲ್ಲದ್ದನ್ನ ಗಮನಿಸಿ ಮೂರು ದಿನಗಳ ಕಾಲ ಹೊಂಚು ಹಾಕಿ, ಜನವರಿ 14ನೇ ತಾರೀಖಿನಂದು ದರೋಡೆ ಮಾಡಿದ್ದಾನೆ. ಇಡೀ ದಿನ ಬ್ಯಾಂಕ್ ಬಿಲ್ಡಿಂಗ್ ಮೇಲೆಯೇ ಇದ್ದು, ಬ್ಯಾಂಕ್ ನಲ್ಲಿ ಇಬ್ಬರು ಸಿಬ್ಬಂದಿಗಳಿದ್ದ ಸಂದರ್ಭದಲ್ಲಿ ಚಾಕು ಹಿಡಿದು ಒಳಗೆ ನುಗ್ಗಿದ್ದಾನೆ. ಬ್ಯಾಂಕ್ ನಲ್ಲಿದ್ದ ಮ್ಯಾನೇಜರ್ ಹಾಗೂ ಮಹಿಳಾ ಸಿಬ್ಬಂದಿಯನ್ನ ಬೆದರಿಸಿ ಕೈಗೆ ಸಿಕ್ಕಿದ್ದನ್ನು ದೋಚಿಕೊಂಡು, ಪೊಲೀಸರ ದಾರಿ ತಪ್ಪಿಸಲು ಬ್ಯಾಂಕ್ ಸಮೀಪವೇ ಸುತ್ತಾಡಿ, ನಂತರ ಬ್ಯಾಂಕ್ ಬಳಿಯೇ ಆಟೋ ಹತ್ತಿ ಎಸ್ಕೇಪ್ ಆಗಿದ್ದ.
ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ ?
ಇತ್ತ ಬ್ಯಾಂಕ್ ಮ್ಯಾನೇಜರ್ ಹರೀಶ್ ಮಡಿವಾಳ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕೃತ್ಯ ನಡೆದ ಬ್ಯಾಂಕ್‌ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಆರೋಪಿ ಮುಖಚಹರೆ ಪತ್ತೆಯಾಗಿತ್ತು. ಜತೆಗೆ ಸಿಡಿಆರ್ ಮೂಲಕ ಆರೋಪಿಯ ಮೊಬೈಲ್ ನಂಬರ್ ಪತ್ತೆ ಹಚ್ಚಿ ತಾಂತ್ರಿಕ ಕಾರ್ಯಾಚರಣೆ ನಡೆಸಿದ್ದರು. ಆ ವೇಳೆ ಆರೋಪಿ ಕಾಮಾಕ್ಷಿಪಾಳ್ಯದಲ್ಲಿರುವುದು ಪತ್ತೆಯಾಗಿತ್ತು. ಕೂಡಲೇ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯು ದರೋಡೆ ಮಾಡಿದ ಬಳಿಕ ಚಿಕ್ಕಬಳ್ಳಾಪುರ, ಅನಂತಪುರ, ಬಳ್ಳಾರಿ ಸೇರಿ ವಿವಿಧ ಕಡೆ ಸುತ್ತಾಡಿಕೊಂಡಿದ್ದ. ಕೆಲ ಸಾಲಗಾರರಿಗೆ ಹಣ ಹಿಂತಿರುಗಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.