ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ : ಬೇಳೆಯ ಜೊತೆ ಮೂಳೆ… ಹಪ್ಪಳದ ಜೊತೆ ಕಬಾಬ್ ಇರಲಿ!

ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರಕ್ಕೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ
ಮಂಡ್ಯ:ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ನೀಡಬೇಕು ಎಂದು ಒತ್ತಾಯಿಸಿ  ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮೊಟ್ಟೆ ತಿನ್ನುವ ಮೂಲಕ ಪ್ರತಿಭಟನೆ ನಡೆಸಿ, ಬೇಳೆಯ ಜೊತೆ ಮೂಳೆಯು ಇರಲಿ, ಹಪ್ಪಳದ ಜೊತೆ ಕಬಾಬ್ ಇರಲಿ, ಕೋಸಂಬರಿ ಜೊತೆ ಎಗ್ ಬುರ್ಜಿ ಇರಲಿ, ಮುದ್ದೆ ಜೊತೆ ಜೊತೆ ಬೋಟಿ ಇರಲಿ ಎಂದು ಘೋಷಣೆ ಕೂಗಿ ಮಾಂಸಹಾರಕ್ಕೆ ಆಗ್ರಹಿಸಿದರು.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯುವುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಆದರೆ ಸಾಹಿತ್ಯ ಸಮ್ಮೇಳನದ ವಾಣಿಜ್ಯ ಮಳಿಗೆಗಳಲ್ಲಿ ಮಾಂಸಾಹಾರಕ್ಕೆ ನಿಷೇಧ ವಿಧಿಸಿ ಸಮ್ಮೇಳನಕ್ಕೆ ಆಗಮಿಸುವ ಲಕ್ಷಾಂತರ ಜನತೆಗೆ ಸಸ್ಯಾಹಾರ ನೀಡಲು ಮುಂದಾಗಿರುವುದು ಜನರ ಆಹಾರದ ಹಕ್ಕನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮಂಡ್ಯ ಸಾಹಿತ್ಯ ಸಮ್ಮೇಳನ|ಮನೆಗೊಂದು ಕೋಳಿ ಸಂಗ್ರಹ ಅಭಿಯಾನ: ಬಾಡೂಟ ಬಳಗದ ಸಿದ್ಧತೆ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಂಸಾಹಾರ ನಿರ್ಬಂಧಿಸುವುದು ಸಾಧುವಲ್ಲ. ಅದರಲ್ಲೂ ಮಂಡ್ಯ ಜಿಲ್ಲೆಯ ಹಬ್ಬ, ಸಂಭ್ರಮ, ಸಮ್ಮೇಳನಗಳು ಮಾಂಸಾಹಾರಿ ಊಟೋಪಚಾರಕ್ಕೆ ಹೆಸರುವಾಸಿಯಾಗಿವೆ. ಅಲ್ಲದೇ ಸಮ್ಮೇಳನದಲ್ಲಿ ಭಾಗವಹಿಸುವ ಬಹುಸಂಖ್ಯಾತರು ಮಾಂಸಾಹಾರಿಗಳೇ ಆಗಿರುವಾಗ ನಿಷೇಧ ಏತಕ್ಕಾಗಿ ಎಂದು ಪ್ರಶ್ನಿಸಿದರು.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರಕ್ಕೆ ಬೇಡಿಕೆ ಏಕೆ ಎಂದು ಪ್ರಶ್ನಿಸುವುದೇ ಅಸಮಂಜಸವಾಗಿದೆ. ಆಹಾರ ಎಂಬುದು ಆಹಾರವಷ್ಟೇ, ಅದನ್ನು ಸಸ್ಯಾಹಾರ ಮತ್ತು ಮಾಂಸಾಹಾರ ಎಂದು ಬೇರ್ಪಡಿಸಿ ಮಾಂಸಾಹಾರ ಅಧಮ, ಅಪವಿತ್ರ ಎಂಬೆಲ್ಲಾ ಭಾವವನ್ನು ಜನರಲ್ಲಿ ಬಿತ್ತುವ ಕೆಲಸ ದೇಶದಲ್ಲಿ ನಡೆಯುತ್ತಾ ಇದೆ. ಈ ಮೂಲಕ ಬಹುಜನರ ಆಹಾರ ಪದ್ಧತಿಗಳನ್ನು ಅಸ್ಪೃಶ್ಯ ಮತ್ತು ಅಕ್ರಮವಾಗಿಸುವ ಪ್ರಯತ್ನಗಳು ಶತಮಾನಗಳಿಂದಲೂ ನಡೆಯುತ್ತಿವೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಂಪರೆಯಲ್ಲಿ 12-13 ಶತಮಾನದ ಚಾಲುಕ್ಯ ಅರಸ ಮೂರನೇ ಸೋಮೇಶ್ವರನು ಬರೆದ ಮಾನಸೋಲ್ಲಾಸ ಕೃತಿಯಲ್ಲಿ ಮಾಂಸಾಹಾರಗಳ ಬಹುದೊಡ್ಡ ಪಟ್ಟಿಯೇ ಇದೆ. ಹೀಗಿರುವಾಗ ಮಾಂಸಾಹಾರ ನಿಷೇಧ ಎಂಬುದು ಅಪಾಯಕಾರಿ ಅಜೆಂಡವಾಗಿದೆ. ನಾಗರಿಕರ ಮೂಲಭೂತ ಅಗತ್ಯವಾದ ಆಹಾರದ ವಿಚಾರದಲ್ಲಿ ಸಮ್ಮೇಳನದ ಆಯೋಜಕರು ತಾರತಮ್ಮ ಮತ್ತು ಕೀಳು ಮನೋಭಾವ ಹೊಂದಿರುವುದು ಪ್ರಜಾಪ್ರಭುತ್ವ ವಿರೋಧಿ ನಿಲುವು ಎಂದು ಕಿಡಿಕಾರಿದರು.

ಸಾಹಿತ್ಯ ಸಮ್ಮೇಳನದ ವಾಣಿಜ್ಯ ಮಳಿಗೆಗಳಲ್ಲಿ ಮಾಂಸಾಹಾರದ ಮಾರಾಟಕ್ಕೆ ವಿಧಿಸಿರುವ ನಿರ್ಬಂಧ ತೆಗೆದುಹಾಕಿ ಮುಕ್ತ ಅವಕಾಶ ಒದಗಿಸಬೇಕು, ಸಮ್ಮೇಳನದ ಊಟದಲ್ಲಿ ಸಸ್ಯಾಹಾರ ಊಟದ ಜೊತೆಗೆ ಎಲ್ಲರೂ ತಿನ್ನಬಹುದಾದ ಕೋಳಿ ಮಾಂಸ ಮೊಟ್ಟೆಯನ್ನು ಕಡ್ಡಾಯವಾಗಿ ನೀಡಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಸಮ್ಮೇಳನದಲ್ಲಿ ಮಾಂಸಾಹಾರ ನೀಡದಿದ್ದರೆ ಸಾರ್ವಜನಿಕರಿಂದ ಕೋಳಿ, ಮೊಟ್ಟೆ ಮತ್ತು ಪಡಿತರ ಸಂಗ್ರಹಿಸಿ ಮಾಂಸಾಹಾರ ವಿತರಿಸುವ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಿಐಟಿಯುನ ಸಿ.ಕುಮಾರಿ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ, ಟಿ.ಎಲ್.ಕೃಷ್ಣೇಗೌಡ, ಕರುನಾಡು ಸೇವಕರು ಸಂಘಟನೆಯ ಎಂ.ಬಿ ನಾಗಣ್ಣಗೌಡ, ಕರವೇ ಎಚ್‍.ಡಿ.ಜಯರಾಮ್, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಎಂ.ವಿ.ಕೃಷ್ಣ, ಹಿಂದುಳಿದ ವರ್ಗಗಳ ಒಕ್ಕೂಟದ ಸಂದೇಶ್, ವಕೀಲ ಬಿ.ಟಿ ವಿಶ್ವನಾಥ್, ಡಾ.ಬಿ.ಆರ್ ಅಂಬೇಡ್ಕರ್ ವಾರಿಯರ್ಸ್‌ನ ಗಂಗರಾಜು, ನಿರಂಜನ್, ಟಿ.ಡಿ ನಾಗರಾಜ್, ನರಸಿಂಹಮೂರ್ತಿ, ಎಂ.ಸಿ.ಲಂಕೇಶ್ ಮಂಗಲ, ಲಕ್ಷ್ಮಣ್ ಚೀರನಹಳ್ಳಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಹೋರಾಟಕ್ಕೆ ಸಿಕ್ಕ ಮೊದಲ ಜಯ : ಮಹೇಶ್‌ ಜೋಷಿ ನೇತೃತ್ವದ ಕನ್ನಡ ಸಾಹಿತ್ಯ ಪರಿಷತ್ತು ಮೊದಲ ತಪ್ಪನ್ನು ಸರಿಪಡಿಸಿಕೊಂಡಿದೆ. ಮದ್ಯ ಮತ್ತು ತಂಬಾಕಿನ ಜೊತೆ ಮಾಂಸಾಹಾರವನ್ನು ನಿಷೇಧಿಸಲಾಗಿದೆ ಎಂಬ ಸೂಚನೆಯನ್ನು ಬದಲಾಯಿಸಿ ಈಗ ಮದ್ಯ ಮತ್ತು ತಂಬಾಕನ್ನು ಮಾತ್ರ ನಿಷೇಧಿಸಲಾಗಿದೆ ಎಂದು ಹಾಕಿದ್ದಾರೆ. ಇದು ಹೋರಾಟಕ್ಕೆ ಸಿಕ್ಕ ಮೊದಲ ಜಯ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ‌ ತಿಳಿಸಿದ್ದಾರೆ.

ಈ ಮೊದಲು ಹೊರಡಿಸಿದ್ದ ಆದೇಶ
ಹೋರಾಟದ ನಂತರ ಬದಲಾವಣೆಗೊಂಡ ಆದೇಶ

 

ಇದನ್ನೂ ನೋಡಿ: ಶಾಹಿ,ಗ್ನಾನವ್ಯಾಪಿ,ಸಂಭಾಲ್,ಅಜ್ಮೀರ್ ಚಿಸ್ತಿ ದರ್ಗಾ,ಮಸೀದಿಗಳ ಸಮೀಕ್ಷೆಯೂ, ಪೂಜಾ ಸ್ಥಳ ಸಂರಕ್ಷಣಾ ಕಾಯ್ದೆ ಉಲ್ಲಂಘನೆಯೂ

Donate Janashakthi Media

Leave a Reply

Your email address will not be published. Required fields are marked *