ಬೆಂಗಳೂರು: ಇಂದಿರಾ ಕ್ಯಾಂಟೀನ್ ಬೆಂಗಳೂರಿನಲ್ಲಿ 2017ರಲ್ಲಿ ಆರಂಭಿಸಲಾಯಿತು. ಇಂದಿರಾ ಕ್ಯಾಂಟೀನ್ಗಳಲ್ಲಿ ಅಂದಿನಿಂದಲೂ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಮುದ್ದೆ, ಚಪಾತಿ ನೀಡುವುದಕ್ಕೆ ಬೇಡಿಕೆ ಕೇಳಿ ಬರುತ್ತಿತ್ತು. ಆದ್ದರಿಂದ ಮುಂದಿನ ದಿನಗಳಲ್ಲಿ ಇಂದಿರಾ ಕ್ಯಾಂಟೀನ್ಗಳಲ್ಲಿ ಮುದ್ದೆ ಊಟದ ವ್ಯವಸ್ಥೆಗೆ ಬಿಬಿಎಂಪಿ ಸಿದ್ಧತೆ ನಡೆಸಿದೆ. ಅಂದಹಾಗೆ ಕರುನಾಡಿನ ಸುಗ್ಗಿಯ ಹಬ್ಬ ಸಂಕ್ರಾಂತಿ ವೇಳೆಗೆ ಇಂದಿರಾ ಕ್ಯಾಂಟೀನ್ನಲ್ಲಿ ಮುದ್ದೆ ದೊರೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ತನಕ ಇಂದಿರಾ ಕ್ಯಾಂಟೀನ್ಗಳಲ್ಲಿ ಕೇವಲ ರೈಸ್ ಬಾತ್ ಅಥವಾ ಅನ್ನ, ಸಾಂಬರ್, ಮೊಸರನ್ನ ಮಾತ್ರ ಕೊಡಲಾಗುತ್ತಿತ್ತು. ಆದರೆ ಹಿರಿಯ ನಾಗರಿಕರು ಸೇರಿದಂತೆ ಇತರರು ಕೇವಲ ರೈಸ್ ಬೇಡ, ಮುದ್ದೆ, ಚಪಾತಿಯನ್ನೂ ನೀಡುವಂತೆ ಕೇಳುತ್ತಿದ್ದರು. ಈ ವಿಚಾರ ಸರ್ಕಾರದ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್ ನಲ್ಲಿ ಮುದ್ದೆ ಕೊಡಲು ತೀರ್ಮಾನಿಸಲಾಗಿದೆ.
ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಮಾತ್ರ ಮುದ್ದೆ ನೀಡುವುದಕ್ಕೆ ತೀರ್ಮಾನಿಸಲಾಗಿದೆ. ಮುದ್ದೆ ಕೊಡುವುದರಿಂದ ಇಂದಿರಾ ಕ್ಯಾಂಟೀನ್ಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯೂ ಇದೆ.
ಇಂದಿರಾ ಕ್ಯಾಂಟೀನ್ನಲ್ಲಿ ಸುಳ್ಳು ಲೆಕ್ಕ ನೀಡಿ ರಿಯಾಯಿತಿ ಹಣ ಲೂಟಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಆದ್ದರಿಂದ ಬಿಬಿಎಂಪಿ ಅಧಿಕಾರಿಗಳು ಪ್ರತಿಯೊಂದನ್ನು ಡಿಜಿಟಲಿಕರಣದ ಮೂಲಕ ಪಾರದರ್ಶಕ ವ್ಯವಸ್ಥೆ ಮಾಡಲು ನಿರ್ಧರಿಸಿದ್ದಾರೆ. 19 ಮೊಬೈಲ್ ಇಂದಿರಾ ಕ್ಯಾಂಟೀನ್ ವಾಹನ ಕೆಟ್ಟು ನಿಂತುಕೊಂಡಿದ್ದವು. ಇದೀಗ ಆ ಕ್ಯಾಂಟೀನ್ಗಳನ್ನು ದುರಸ್ತಿಪಡಿಸಲಾಗಿದೆ. ಇವು ಇನ್ನೊಂದು ವಾರದಲ್ಲಿ ಪುನರ್ ಆರಂಭಗೊಳ್ಳಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.