ಅಮೆರಿಕದಲ್ಲಿ ‘ಕಮ್ಯುನಿಸ್ಟ್ ಅಪಾಯ’ದ ಹುಯಿಲೆಬ್ಬಿಸಿದ 1950ರ ದಶಕದ ಮೆಕ್ಕಾರ್ಥಿ ಕಾಲದ ವಿದ್ಯಮಾನ ಮತ್ತು ಟ್ರಂಪ್ ಈಗ ಪ್ರಾರಂಭಿಸಿರುವ ವಾಕ್ ಸ್ವಾತಂತ್ರ‍್ಯವನ್ನು ಹತ್ತಿಕ್ಕುವ ದಮನಕಾರೀ ಕ್ರಮಗಳಲ್ಲಿ ಬಹಳಷ್ಟು ಹೋಲಿಕೆಗಳಿವೆ ಎಂಬುದು ಅನೇಕರ ಅಭಿಪ್ರಾಯ. ವಾಸ್ತವವಾಗಿ, ಈಗಿನ ಟ್ರಂಪ್ ಬೇಟೆಯು ಹಲವು ರೀತಿಗಳಲ್ಲಿ ಮೆಕ್ಕಾರ್ಥಿ ಕಾಲದ ಚಿಂತಕರ ಬೇಟೆಗಿಂತಲೂ ಹೆಚ್ಚು ಕೆಟ್ಟದ್ದಾಗಿದೆ. ಮೆಕ್ಕಾರ್ಥಿವಾದವು ಒಂದು ನಿರ್ದಿಷ್ಟ ಸಂದರ್ಭದಲ್ಲಿ ಸಾಮ್ರಾಜ್ಯಶಾಹಿಯ ಒಂದು ನಿರ್ದಿಷ್ಟ ಕಾರ್ಯತಂತ್ರದ ಭಾಗವಾಗಿತ್ತು. ಆದರೆ, ಪ್ರಸ್ತುತ ಟ್ರಂಪ್ ದಾಳಿಯ ಸಂದರ್ಭವು ಸಾಮ್ರಾಜ್ಯಶಾಹಿಯ ನೈತಿಕ ದಿವಾಳಿತನವನ್ನೇ ಸೂಚಿಸುತ್ತದೆ. ಚಿಂತನೆಯ ಮೇಲೆ ಈಗ ನಡೆಯುತ್ತಿರುವ ನವ-ಫ್ಯಾಸಿಸ್ಟ್ ದಾಳಿಯು 1950ರ ದಶಕದ ಮೆಕಾರ್ಥೀಯ ದಾಳಿಗಿಂತಲೂ ವ್ಯಾಪಕವಾಗಿದೆ, ಇವನ್ನು ನವ-ಫ್ಯಾಸಿಸ್ಟ್ ಅಲ್ಲದ ಆಡಳಿತಗಳನ್ನು ಹೊಂದಿರುವ ಇತರೆ ಮುಂದುವರೆದ ಬಂಡವಾಳಶಾಹಿ ದೇಶಗಳಲ್ಲಿಯೂ ಸಹ ನಾವೀಗ ನೋಡುತ್ತಿದ್ದೇವೆ. ಅವೀಗ ದಮನಕಾರಿ ಮಿಲಿಟರಿವಾದದ ಹಂತವನ್ನು ಪ್ರವೇಶಿಸುತ್ತಿವೆ. ಇದು ವಿಶ್ವದ ಜನತೆಗೆ ಕೇಡಿನ ಒಂದು ಸೂಚನೆಯೇ ಸರಿ. ಮೆಕ್ಕಾರ್ಥಿವಾದ
ಪ್ರೊ.ಪ್ರಭಾತ್ ಪಟ್ನಾಯಕ್
ಅನು:ಕೆ.ಎಂ.ನಾಗರಾಜ್
ಅಮೆರಿಕದಲ್ಲಿ ಟ್ರಂಪ್ ಆಡಳಿತವು ವಾಕ್ ಸ್ವಾತಂತ್ರ‍್ಯದ ಮೇಲೆ ಪ್ರಸ್ತುತ ಹೇರಿರುವ ನಿರ್ಬಂಧವು 1950ರ ದಶಕದ ಒಂದು ಕಳವಳಕಾರಿ ವಿದ್ಯಮಾನವನ್ನು ನೆನಪಿಸುತ್ತದೆ. ಆಗ, ರಿಪಬ್ಲಿಕನ್ ಸೆನೆಟರ್ ಜೋಸೆಫ್ ಮೆಕ್ಕಾರ್ಥಿಯು ಹಲವಾರು ಕಮ್ಯೂನಿಸ್ಟರು ಮತ್ತು ಗೂಢಚಾರರಿಂದ ದೇಶಕ್ಕೆ ಅಪಾಯವಿದೆ ಎಂಬ ಒಂದು ಹುಯಿಲನ್ನೆಬ್ಬಿಸಿದ. ಕಮ್ಯೂನಿಸಂ ಭೀತಿಯಿಂದ ನಡುಗುತ್ತಿದ್ದ ಅಮೆರಿಕದ ಸರ್ಕಾರವು ಎಡ ಚಿಂತನೆ ಹೊಂದಿದ್ದ ವ್ಯಕ್ತಿಗಳನ್ನು ಹುಡುಕಿ ಹುಡುಕಿ ಅವರನ್ನು ಶಿಕ್ಷೆಗೆ ಗುರಿಪಡಿಸಿತು. ಕಮ್ಯೂನಿಸ್ಟ್ ಎಂದು ಆರೋಪಿಸಿ ಒಂದು ಇಡೀ ತಲೆಮಾರಿನ ಕಲಾವಿದರು ಮತ್ತು ಬುದ್ಧಿಜೀವಿಗಳನ್ನು ಶಿಕ್ಷೆಗೆ ಗುರಿಪಡಿಸಲಾಯಿತಷ್ಟೇ ಅಲ್ಲ, ಇದು ತರುವಾಯದ ದಶಕಗಳಲ್ಲಿ ಆ ದೇಶದ ಸೃಜನಶೀಲ ಜೀವನದ ಮೇಲೆ ಒಂದ ಆಳವಾದ ನಕಾರಾತ್ಮಕ ಮುದ್ರೆಯನ್ನು ಒತ್ತಿಬಿಟ್ಟಿತ್ತು. ಈ ರೀತಿಯ ಬೇಟೆಗೆ ಗುರಿಯಾದವರಲ್ಲಿ ಚಾರ್ಲ್ಸ್ ಚಾಪ್ಲಿನ್, ಬರ್ಟೋಲ್ಟ್ ಬ್ರೆಕ್ಟ್, ಡ್ಯಾಶಿಯಲ್ ಹ್ಯಾಮೆಟ್, ಡಾಲ್ಟನ್ ಟ್ರಂಬೊ(ಸಿನೆಮಾ ಚಿತ್ರಕತೆಗಾರ)ಮುಂತಾದ ಕಲಾವಿದರು ಮತು ಲೇಖಕರಿಂದ ಹಿಡಿದು ಅರ್ಥಶಾಸ್ತ್ರಜ್ಞರು ಮತ್ತು ಅಧ್ಯಯನಕಾರರಾದ ಲಾರೆನ್ಸ್ ಕ್ಲೈನ್, ರಿಚರ್ಡ್ ಗುಡ್ವಿನ್, ಇ ಹೆಚ್ ನಾರ್ಮನ್, ಡೇನಿಯಲ್ ಥಾರ್ನರ್, ಮೋಸೆಸ್ ಫಿನ್ಲೇ ಮತ್ತು ಪೌರಸ್ತ್ಯ ಶಿಕ್ಷಣ ತಜ್ಞ ಓವನ್ ಲ್ಯಾಟಿಮೋರ್‌ರಂತಹ ರವರೆಗೆ ಹಲವಾರು ಹೆಸರಾಂತ ವ್ಯಕ್ತಿಗಳನ್ನು ಶಿಕ್ಷೆಗೆ ಗುರಿಪಡಿಸಲಾಯಿತು. ಪರಮಾಣು ಬಾಂಬ್ ನಿರ್ಮಿಸುವ ಮ್ಯಾನ್‌ಹ್ಯಾಟನ್ ಯೋಜನೆಯನ್ನು ಮುನ್ನಡೆಸಿದ ಜೆ ರಾಬರ್ಟ್ ಓಪನ್‌ಹೈಮರ್; ಬ್ರೆಟನ್ ವುಡ್ಸ್ ವ್ಯವಸ್ಥೆಯನ್ನು ಸ್ಥಾಪಿಸಿದ ಹ್ಯಾರಿ ಡೆಕ್ಸ್ಟರ್ ವೈಟ್ (ಜೆ ಎಂ ಕೀನ್ಸ್ ಅವರ ಜೊತೆಯಲ್ಲಿ) ಅವರಂತಹ ಗಣ್ಯ ಸಾರ್ವಜನಿಕ ವ್ಯಕ್ತಿಗಳನ್ನು ಸಹ ಬಿಟ್ಟಿರಲಿಲ್ಲ: ಅವರನ್ನು ಅಮೆರಿಕದಲ್ಲಿ ಕಮ್ಯುನಿಸಂನ ಪ್ರಭಾವವನ್ನು ತನಿಖೆ ಮಾಡಲು ಸ್ಥಾಪಿಸಲಾದ ಸಮಿತಿಗಳಲ್ಲಿ ಒಂದಿಲ್ಲೊಂದು ಸಮಿತಿಯ ಮುಂದೆ ಹಾಜರಾಗುವಂತೆ ಮಾಡಲಾಯಿತು. ಬುದ್ಧಿಜೀವಿಗಳ ಇಂತಹ ಬೇಟೆಯಿಂದ ಅಮೆರಿಕಕ್ಕೆ ಆದ ನಷ್ಟ ಅಪಾರ. ಎಷ್ಟೆಂದರೆ, ಅಮೆರಿಕದೊಳಗೆ ಪೂರ್ವ ಮತ್ತು ಆಗ್ನೇಯ ಏಷ್ಯಾದ ಬಗ್ಗೆ ಆಳವಾದ ಜ್ಞಾನ ಹೊಂದಿದ್ದ ತಜ್ಞರನ್ನು ಮೆಕ್ಕಾರ್ಥಿಸಂ ಹೊಸಕಿಹಾಕಿದ ಕಾರಣದಿಂದಾಗಿ ಅಮೆರಿಕವು ವಿಯೆಟ್ನಾಂ ಯುದ್ಧದಲ್ಲಿ ಸಿಲುಕಿಕೊಂಡಿತು ಎನ್ನಲಾಗಿದೆ. ಈ ದೇಶಗಳ ಬಗ್ಗೆ ವಸ್ತುನಿಷ್ಠ ಅಧ್ಯಯನ-ವಿಶ್ಲೇಷಣೆ ಆ ಸಮಯದಲ್ಲಿ ಒಂದು ವೇಳೆ ಲಭಿಸಿದ್ದರೆ, ಅಮೆರಿಕವು ಅದರಿಂದ ಲಾಭ ಪಡೆಯಬಹುದಿತ್ತು ಮತ್ತು ಅದು ತನ್ನನ್ನು ತಾನೇ ಕೆಸರಿನಲ್ಲಿ ಹೂತುಹೋಗುವುದನ್ನು ತಪ್ಪಿಸಿಕೊಳ್ಳಬಹುದಿತ್ತು ಎಂದು ಕೆಲವರು ಹೇಳುತ್ತಾರೆ.
ಮೆಕ್ಕಾರ್ಥಿ ಕಾಲದ ವಿದ್ಯಮಾನ ಮತ್ತು ಟ್ರಂಪ್ ಈಗ ಪ್ರಾರಂಭಿಸಿರುವ ವಾಕ್ ಸ್ವಾತಂತ್ರ‍್ಯವನ್ನು ಹತ್ತಿಕ್ಕುವ ದಮನಕಾರೀ ಕ್ರಮಗಳಲ್ಲಿ ಬಹಳಷ್ಟು ಹೋಲಿಕೆಗಳಿವೆ ಎಂಬುದು ಅನೇಕರ ಅಭಿಪ್ರಾಯ ಎಂಬುದನ್ನು ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬ್ರೂಸ್ ಹಿಗ್ಗಿನ್ಸ್ (ಮಂತ್ಲಿ ರಿವ್ಯೂ ಆನ್‌ಲೈನ್, ಮಾರ್ಚ್ 21) ವ್ಯಕ್ತಪಡಿಸಿದ್ದಾರೆ. ಮೇಲ್ನೋಟದಲ್ಲಿ ಈ ಎರಡೂ ವಿದ್ಯಮಾನಗಳೂ ಒಂದೇ ರೀತಿಯವು ಎಂದು ಹೇಳುವುದು ಉತ್ಪ್ರೇಕ್ಷೆಯಾಗುತ್ತದೆ ಎಂದು ತೋರಬಹುದು. ಹೇಳಿ ಕೇಳಿ ಈವರೆಗೆ ನಡೆದಿರುವ ಕೇವಲ ಬೆರಳೆಣಿಕೆಯ ಬಂಧನ ಮತ್ತು ಗಡೀಪಾರು ಪ್ರಕರಣಗಳ ಬಗ್ಗೆ ಏಕೆ ತಲೆಕೆಡಿಸಿಕೊಳ್ಳಬೇಕು ಮತ್ತು ಅವು ಮೆಕ್ಕಾರ್ಥಿ ಕಾಲದ ಬೇಟೆ-ಕಿರುಕುಳಗಳಿಗೆ ಸಮನೆಂದು ಏಕೆ ಸೂಚಿಸಬೇಕು? ಹಾಗೆಯೇ, ಈವರೆಗೆ ಈ ರೀತಿಯ ಶಿಕ್ಷೆಗೆ ಗುರಿಯಾಗಿರುವವರು ಅಮೆರಿಕೇತರ ನಾಗರಿಕರು, ವೀಸಾದ ಮೇಲೆ ಆ ದೇಶದಲ್ಲಿರುವವರು ಅಥವಾ ಗ್ರೀನ್ ಕಾರ್ಡ್ ಹೊಂದಿರುವವರು, ಇದು ಖಂಡಿತವಾಗಿಯೂ ಮೆಕ್ಕಾರ್ಥಿ ಕಾಲದ ಅನುಭವಕ್ಕಿಂತ ಭಿನ್ನವಾಗಿದೆ, ಆಗ ಕೇವಲ “ಹೊರಗಿನವರು” ಮಾತ್ರವಲ್ಲದೆ ಅಮೆರಿಕದ ನಾಗರಿಕರೂ ಸಹ ಒಂದು ರೀತಿಯ ಅಗ್ನಿ ಪರೀಕ್ಷೆಗೆ ಮತ್ತು ಶಿಕ್ಷೆಗಳಿಗೆ ಒಳಗಾಗಿದ್ದರು ಎಂದು ಹೇಳಬಹುದು.
ಇದನ್ನೂ ಓದಿ : ಗಾಜಾದಲ್ಲಿ ನರಮೇಧ ತಕ್ಷಣ ನಿಲ್ಲಬೇಕು, ಇಸ್ರೇಲನ್ನು ಜನಾಂಗ ದ್ವೇಷ ನೀತಿಯ ರಾಷ್ಟ್ರವೆಂದು ಘೋಷಿಸಿ ಕ್ರಮ ಕೈಗೊಳ್ಳಬೇಕು-ಸಿಪಿಐ(ಎಂ) ಮಹಾಧಿವೇಶನದ ಕರೆ ಮೆಕ್ಕಾರ್ಥಿವಾದ
ಕೇವಲ ಆರಂಭವಷ್ಟೇ
ಆದರೆ, ಇಂತಹ ವಿಚಾರಗಳು ಹೆಚ್ಚು ಸಮಾಧಾನ ಕೊಡಲಾರವು. ಏಕೆಂದರೆ, ಮಹಮೂದ್ ಖಲೀಲ್ ರೀತಿಯ ಪ್ರಕರಣಗಳು ಕೇವಲ ಆರಂಭವಷ್ಟೇ. ಇದೇ ರೀತಿಯ ಸಾವಿರಾರು ಪ್ರಕರಣಗಳ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂಬುದನ್ನು ಸ್ವತಃ ಟ್ರಂಪ್ ಅವರೇ ಸ್ಪಷ್ಟಪಡಿಸಿದ್ದಾರೆ. ಮಹಮೂದ್ ಖಲೀಲ್, ಒಬ್ಬ ಗ್ರೀನ್ ಕಾರ್ಡ್ ಹೊಂದಿದವ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿರುವ ಅಮೇರಿಕನ್ ಪ್ರಜೆಯನ್ನು(ಅವಳೀಗ ಎಂಟು ತಿಂಗಳ ಗರ್ಭಿಣಿ) ಮದುವೆಯಾಗಿದ್ದವ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಗಾಜಾದಲ್ಲಿ ನಡೆಯುತ್ತಿರುವ ನರಮೇಧದ ವಿರುದ್ಧ ಕೊಲಂಬಿಯಾ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಪ್ರತಿಭಟನಾ ಪ್ರದರ್ಶನಗಳನ್ನು ಮುನ್ನಡೆಸಿದ ಕಾರಣದಿಂದಾಗಿ, “ಭಯೋತ್ಪಾದಕರ” ಜೊತೆ ಸಂಪರ್ಕ ಹೊಂದಿದ ಆರೋಪದ ಮೇಲೆ ಖಲೀಲ್ ಅವರನ್ನು ಬಂಧಿಸಲಾಗಿದೆ ಮತ್ತು ಅವರು ಗಡೀಪಾರು ಶಿಕ್ಷೆಗೆ ಒಳಗಾಗಲಿದ್ದಾರೆ. ಅದೇ ರೀತಿಯಲ್ಲಿ, ವೀಸಾ ಮತ್ತು ಗ್ರೀನ್ ಕಾರ್ಡ್ ಹೊಂದಿರುವವರನ್ನು ಒಮ್ಮೆ ದೊಡ್ಡ ಪ್ರಮಾಣದಲ್ಲಿ ಗಡೀಪಾರು ಮಾಡಿದರೆ, ಆಗ, ಗಾಜಾ ಮಾದರಿಯ ನರಮೇಧಗಳ ವಿರುದ್ಧ ಮತ್ತು ಅಂತಹ ಗಡೀಪಾರು ಕ್ರಮಗಳ ವಿರುದ್ಧವಾಗಿ ಪ್ರತಿಭಟನೆಗಳಲ್ಲಿ ತೊಡಗುವ ಅಮೆರಿಕದ ನಾಗರಿಕರು ಇಂಥಹ ಶಿಕ್ಷೆಯ ಕ್ರಮಗಳಿಂದ ತಪ್ಪಿಸಿಕೊಳ್ಳಲಾಗದು. ವಿದೇಶಿ “ಭಯೋತ್ಪಾದಕ” ಚಟುವಟಿಕೆಗಳನ್ನು ಬೆಂಬಲಿಸಿದ ಆರೋಪದ ಮೇಲೆ ಅವರೂ ಸಹ ಶಿಕ್ಷೆಗೆ ಗುರಿಯಾಗುತ್ತಾರೆ. ವಿಷಯವನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದ್ದಕ್ಕಾಗಿ ಜನರನ್ನು ಶಿಕ್ಷೆಗೊಳಪಡಿಸುವ ಪ್ರಕ್ರಿಯೆಯು ಒಮ್ಮೆ ಆರಂಭವಾದರೆ, ಅದು ಕೇವಲ ಒಂದು ವಿಭಾಗಕ್ಕೆ ಮಾತ್ರವೇ ಸೀಮಿತವಾಗಿರುತ್ತದೆ ಮತ್ತು ಉಳಿದವರನ್ನು ತಟ್ಟುವುದಿಲ್ಲ ಎಂದು ಹೇಳಲಾಗದು. ಆದ್ದರಿಂದ, ನಾವು ಮೆಕ್ಕಾರ್ಥಿ ಕಾಲದ ವಿದ್ಯಮಾನದ ಆರಂಭದ ಹಂತದಲ್ಲಿದ್ದೇವೆ ಎಂದು ಭಾವಿಸುವುದು ಯುಕ್ತವಾಗುತ್ತದೆ.
ವಾಸ್ತವವಾಗಿ, ಭಯಹುಟ್ಟಿಸುವ ಈ ಬೇಟೆಯು ಹಲವು ರೀತಿಗಳಲ್ಲಿ ಮೆಕ್ಕಾರ್ಥಿ ಕಾಲದಲ್ಲಿ ಆರಂಭಿಸಿದ ಬೇಟೆಗಿಂತಲೂ ಹೆಚ್ಚು ಕೆಟ್ಟದ್ದಾಗಿದೆ. ಮೊದಲನೆಯದಾಗಿ, 1952ರ ಯುಎಸ್ ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಮಹಮೂದ್ ಖಲೀಲ್ ಅವರನ್ನು ಗಡೀಪಾರು ಮಾಡಲು ಆದೇಶಿಸಲಾಗುತ್ತಿದೆ. ಈ ನಿಬಂಧನೆಯು, “ಅಮೆರಿಕದಲ್ಲಿ ವ್ಯಕ್ತಿಯ ಉಪಸ್ಥಿತಿ ಅಥವಾ ಚಟುವಟಿಕೆಗಳು ಯುಎಸ್‌ಗೆ ಗಂಭೀರ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತವೆ ಎಂದು ವಿದೇಶಾಂಗ ಕಾರ್ಯದರ್ಶಿಯು ನಂಬುವAಥಹ ಸಮಂಜಸ ಕಾರಣವನ್ನು ಹೊಂದಿರುವ ವಿದೇಶಿಯರನ್ನು ಗಡೀಪಾರು ಮಾಡಬಹುದು” ಎಂದು ಹೇಳುತ್ತದೆ. ಈ ನಿಬಂಧನೆಯ ಮೊರೆಹೋದಾಗ, ವೀಸಾ ಹೊಂದಿರುವವರು ಅಥವಾ ಗ್ರೀನ್ ಕಾರ್ಡ್ ಹೊಂದಿರುವವರು ಯಾವುದೇ ದೇಶದವರಾಗಿರಲಿ, ಯುಎಸ್‌ನ ವಿದೇಶಾಂಗ ನೀತಿಯನ್ನು ಟೀಕಿಸುವುದು ಸಾಧ್ಯವಿಲ್ಲ. ಉದಾಹರಣೆಗೆ, ಖಲೀಲ್ ಪ್ರಕರಣದಲ್ಲಿ, ಅವರು “ಭಯೋತ್ಪಾದಕ” ಸಂಘಟನೆಯಾದ ಹಮಾಸ್‌ಗೆ ಹತ್ತಿರವಾಗಿದ್ದಾರೆ (ಇದಕ್ಕೆ ಯಾವುದೇ ಪುರಾವೆಗಳನ್ನು ನೀಡಲಾಗಿಲ್ಲ) ಎಂದು ಮಾತ್ರವಲ್ಲದೆ, ಅವರ ವಿರುದ್ಧ “ಯೆಹೂದ್ಯ-ವಿರೋಧಿ” ಆರೋಪವೂ ಇದೆ. ಯುಎಸ್ ವಿದೇಶಾಂಗ ನೀತಿಯ ಈ “ಯೆಹೂದ್ಯ-ವಿರೋಧಿ” ನಿಲುವು ಅದು ವಿಶ್ವಾದ್ಯಂತ ಹೋರಾಡಲು ಉದ್ದೇಶಿಸಿರುವ ಗುಣಲಕ್ಷಣಗಳಲ್ಲಿ ಒಂದಾಗಿದೆ. ಗಾಜಾದ ಮೇಲೆ ಇಸ್ರೇಲ್ ನಡೆಸುತ್ತಿರುವ ನರಮೇಧದ ವಿರೋಧವನ್ನು “ಯೆಹೂದ್ಯ-ವಿರೋಧಿ” ಎಂದು ಹಣೆಪಟ್ಟಿ ಹಚ್ಚಲಾಗುತ್ತದೆ ಮತ್ತು ಈ ವಿರೋಧವನ್ನು ಯುಎಸ್ ವಿದೇಶಾಂಗ ನೀತಿಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುವ ಅಂಶವೆಂದು ಭಾವಿಸಲಾಗುತ್ತದೆ. ಮಾತ್ರವಲ್ಲ, ಯುಎಸ್ ವಿದೇಶಾಂಗ ನೀತಿಯ ಯಾವುದೇ ಅಂಶವನ್ನು ಟೀಕಿಸುವ ಯಾವುದೇ “ಅನ್ಯ”ರ ವಿರುದ್ಧವೂ ಇದೇ ಆರೋಪವನ್ನು ಮಾಡಬಹುದು ಮತ್ತು ಅಮೆರಿಕದ ವಿದೇಶಾಂಗ ನೀತಿಯ ವಿರುದ್ಧದ ಪ್ರದರ್ಶನಗಳಲ್ಲಿ ಭಾಗವಹಿಸುವ ಮೂಲಕ ಅಂತಹ “ಅನ್ಯ”ರಿಗೆ “ಸಹಾಯ ಮತ್ತು ಪ್ರೋತ್ಸಾಹ” ನೀಡುವ ಅಮೆರಿಕದ ನಾಗರಿಕರನ್ನೂ ಸಹ ವಿಚಾರಣೆಗೆ ಗುರಿಪಡಿಸಲು ನಿಸ್ಸಂದೇಹವಾಗಿ ಎಳೆದೊಯ್ಯಬಹುದು. ಅಂದರೆ, ಈ ನಿಬಂಧನೆಯನ್ನು (“ಯೆಹೂದ್ಯ-ವಿರೋಧಿ”) ಅಮೆರಿಕದ ಸಾಮ್ರಾಜ್ಯಶಾಹಿಯು ಜಗತ್ತಿನ ಬೇರೆಡೆಗಳಲ್ಲಿ ಕೈಗೊಳ್ಳುವ ಕೃತ್ಯಗಳ ಕ್ರೌರ್ಯವನ್ನು ಮರೆಮಾಚುವ ಕ್ರಮವಾಗಿ ಬಳಸಿಕೊಳ್ಳಲಾಗುತ್ತದೆ.
ಹೆಚ್ಚು ವ್ಯಾಪಕವಾದ ಬೇಟೆ
ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಪ್ರಸ್ತುತ ಬೇಟೆಯ ವ್ಯಾಪ್ತಿಯು ವೆಕ್ಕಾರ್ಥಿ ಕಾಲದ ಬೇಟೆಗಿಂತಲೂ ಹೆಚ್ಚು ವ್ಯಾಪಕವಾಗಿದೆ. ಅಂದರೆ, ಮೆಕ್ಕಾರ್ಥಿ ಕಾಲದಲ್ಲಿ ಆಗಿದ್ದಂತೆ ಕೇವಲ ಕಮ್ಯುನಿಸ್ಟರು ಮತ್ತು ಅವರ ಮೇಲೆ ಅನುಕಂಪವುಳ್ಳ ಜನ ವಿಭಾಗದ ವಿರುದ್ಧ ಮಾತ್ರ ಈ ಬೇಟೆಯು ಗುರಿ ಇಟ್ಟಿಲ್ಲ. ಬದಲಿಗೆ, ಅದು ಅಮೆರಿಕದ ವಿದೇಶಾಂಗ ನೀತಿಯನ್ನು ಟೀಕೆ ಮಾಡುವ ಧೈರ್ಯ ತೋರುವ ಎಲ್ಲರ ವಿರುದ್ಧವೂ ಗುರಿ ಇಟ್ಟಿದೆ. ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ, ಆಕ್ರಮಣಕಾರಿ ಮತ್ತು ವಿಸ್ತರಣಾವಾದಿ ಇಸ್ರೇಲಿ ವಲಸಿಗ-ವಸಾಹತುಶಾಹಿಯ ಮೂಲಕ ಇಡೀ ಪಶ್ಚಿಮ ಏಷ್ಯಾವನ್ನು ನಿಯಂತ್ರಿಸುವ ಅಮೆರಿಕದ ವಿದೇಶಾಂಗ ನೀತಿಯನ್ನು ಟೀಕೆ ಮಾಡುವ ಧೈರ್ಯ ತೋರುವ ಎಲ್ಲರ ವಿರುದ್ಧವೂ ಗುರಿ ಇಟ್ಟಿದೆ.
ಎರಡನೆಯದಾಗಿ, ಶೀತಲ ಸಮರದ ಸಂದರ್ಭದಲ್ಲಿ ಮೆಕ್ಕಾರ್ಥಿವಾದವನ್ನು ಹರಿಯ ಬಿಡಲಾಯಿತು. ಶೀತಲ ಸಮರವು ಸ್ವತಃ ಎರಡನೇ ಮಹಾಯುದ್ಧದ ಸಮಯದಲ್ಲಿ ಸೋವಿಯತ್ ಒಕ್ಕೂಟವು ಗಳಿಸಿದ್ದ ಪ್ರತಿಷ್ಠೆ ಮತ್ತು ಆಕರ್ಷಣೆಯ ವಿರುದ್ಧವಾಗಿ ಸಾಮ್ರಾಜ್ಯಶಾಹಿಯು ನಡೆಸಿದ ಕಾಳಗದ ಒಂದು ಭಾಗವಾಗಿತ್ತು. ಯುದ್ಧದಿಂದಾಗಿ ಹೇಳಲಾಗದಷ್ಟು ಹಾನಿಗೆ ಒಳಗಾಗಿದ್ದ ಸೋವಿಯತ್ ಒಕ್ಕೂಟವು ಆಕ್ರಮಣಕಾರಿ ಉದ್ದೇಶಗಳನ್ನು ಹೊಂದಿರಲಿಲ್ಲವಾದರೂ, ಸಾಮ್ರಾಜ್ಯಶಾಹಿಯು ಸೋವಿಯತ್ ಆಕ್ರಮಣದ ಒಂದು ಗುಮ್ಮವನ್ನು ಸೃಷ್ಟಿಸಿತು. ಸಂಕ್ಷಿಪ್ತವಾಗಿ ಹೇಳುವುದಾದರೆ ಮೆಕ್ಕಾರ್ಥಿವಾದವು ಒಂದು ನಿರ್ದಿಷ್ಟ ಸಂದರ್ಭದಲ್ಲಿ ಸಾಮ್ರಾಜ್ಯಶಾಹಿಯ ಒಂದು ನಿರ್ದಿಷ್ಟ ಕಾರ್ಯತಂತ್ರದ ಭಾಗವಾಗಿತ್ತು. ಆದರೆ, ಟ್ರಂಪ್ ಅವರ ಪ್ರಸ್ತುತ ದಾಳಿಯು ಯಾವುದೇ ನಿರ್ದಿಷ್ಟ ಶಕ್ತಿಯಿಂದ ಸಾಮ್ರಾಜ್ಯಶಾಹಿಗೆ ಯಾವುದೇ ನಿರ್ದಿಷ್ಟ ಬೆದರಿಕೆ ಎದುರಾಗಿದೆ ಎಂಬ ಕಾರಣವನ್ನು ಕೊಡಲಾಗದ ಪರಿಸ್ಥಿತಿಯಲ್ಲಿ ಬರುತ್ತಿದೆ. ನವ-ಉದಾರವಾದಿ ವ್ಯವಸ್ಥೆಯಿಂದ ಉಂಟಾದ ಬಿಕ್ಕಟ್ಟಿನಿಂದ ಹತಾಶೆಗೆ ತಳ್ಳಲ್ಪಟ್ಟ ದೇಶಗಳ ಸಂಖ್ಯೆ ಬಹಳ ದೊಡ್ಡದಾಗಿದ್ದು, ಅವು ತಮ್ಮ ಮೇಲೆ ಹೇರಲಾದ ಆರ್ಥಿಕ ವ್ಯವಸ್ಥೆಗಳಿಂದ ಅಲ್ಪ-ಸ್ವಲ್ಪ ಪರಿಹಾರವನ್ನು ಹುಡುಕುತ್ತಿರುವ ಸನ್ನಿವೇಶದಲ್ಲಿ ಅವು ಯಾವ ಬೆದರಿಕೆಯನ್ನೂ ಒಡ್ಡುವ ಸ್ಥಿತಿಯಲ್ಲಿ ಇಲ್ಲ. ಹೀಗಿರುವಾಗ, ಸಾಮ್ರಾಜ್ಯಶಾಹಿಯು ತನ್ನ ಆಕ್ರಮಣಕೋರತನವನ್ನು ಮುಚ್ಚಿಹಾಕುವ ಒಂದು ಸರಳ ಉದ್ದೇಶವನ್ನು ಈ ದಾಳಿ ಹೊಂದಿದೆ ಎಂಬುದೇ ವಾಸ್ತವ. ಹಾಗಾಗಿ, ಟ್ರಂಪ್ ಅವರ ದಾಳಿಯ ಸಂದರ್ಭವು ಸಾಮ್ರಾಜ್ಯಶಾಹಿಯ ನೈತಿಕ ದಿವಾಳಿತನವೇ ಆಗಿದೆಯೇ ಹೊರತು, ಸಾಮ್ರಾಜ್ಯಶಾಹಿಯಲ್ಲದ ಯಾವುದೇ ನಿರ್ದಿಷ್ಟ ಶಕ್ತಿಯ ನೈತಿಕ ಸ್ಥಾನಮಾನದ ಹಠಾತ್ತಾಗಿ ಹೆಚ್ಚಿದೆ ಎಂದೇನೂ ಅಲ್ಲ.
ಮೂರನೆಯದಾಗಿ, ವಾಕ್ ಸ್ವಾತಂತ್ರ‍್ಯದ ಮೇಲಿನ ಟ್ರಂಪ್ ಅವರ ದಾಳಿಯು ಮೆಕ್ಕಾರ್ಥಿವಾದಕ್ಕಿಂತಲೂ ವಿಶಾಲವಾದ ಗುರಿಯನ್ನು ಹೊಂದಿದೆ ಎಂಬುದನ್ನು, ಟ್ರಂಪ್ ಆಡಳಿತವು ಯುಎಸ್ ವಿಶ್ವವಿದ್ಯಾನಿಲಯಗಳು ತಮ್ಮ ವ್ಯವಹಾರಗಳನ್ನು ಹೇಗೆ ನಿರ್ವಹಿಸಬೇಕೆಂದು ನಿರ್ದೇಶಿಸುತ್ತಿರುವ ಮತ್ತು ಈ ನಿರ್ದೇಶನಗಳನ್ನು ಪಾಲಿಸದಿದ್ದರೆ ಸರ್ಕಾರ ಒದಗಿಸುವ ಹಣವನ್ನು ತಡೆಹಿಡಿಯುತ್ತಿರುವ ಸಂಪೂರ್ಣ ಅಸಾಂವಿಧಾನಿಕ ವಿಧಾನವು ದೃಢಪಡಿಸುತ್ತದೆ. ಕೊಲಂಬಿಯಾ ವಿಶ್ವವಿದ್ಯಾಲಯವು ತನ್ನ ಕಾರ್ಯಚಟುವಟಿಕೆಯಲ್ಲಿ ಹಲವಾರು ಬದಲಾವಣೆಗಳನ್ನು ಕೈಗೊಳ್ಳಬೇಕೆಂಬ ಟ್ರಂಪ್ ಆಡಳಿತದ ಆಗ್ರಹಕ್ಕೆ ಒಪ್ಪದಿದ್ದಾಗ, ಫೆಡರಲ್ ಸರ್ಕಾರವು ಒದಗಿಸುತ್ತಿದ್ದ $450 ಮಿಲಿಯನ್ ಹಣವನ್ನು ತಡೆಹಿಡಿಯಿತು. ಆನಂತರದಲ್ಲಿ ವಿಶ್ವವಿದ್ಯಾನಿಲಯವು ಇದಕ್ಕೆ ಒಪ್ಪಿಕೊಂಡಿದೆ ಎಂದು ಈಗ ವರದಿಯಾಗಿದೆ. ಟ್ರಂಪ್ ಆಡಳಿತದ ಈ ಕ್ರಮವು ಶೈಕ್ಷಣಿಕ ಸ್ವಾತಂತ್ರ‍್ಯವನ್ನು ಬಹಳವಾಗಿ ಮೊಟಕುಗೊಳಿಸುತ್ತದೆ. ವಿಶ್ವವಿದ್ಯಾನಿಲಯಗಳನ್ನು ಸರ್ಕಾರಕ್ಕೆ ತೃಪ್ತಿಯಾಗುವಂತೆ ನಡೆಸಬೇಕು ಎಂಬ ಷರತ್ತಿನ ಮೇಲೆ ಫೆಡರಲ್ ನಿಧಿಗಳನ್ನು ಒದಗಿಸುವ ಕ್ರಮವು ಒಂದು ವಿಶ್ವವಿದ್ಯಾನಿಲಯದ ಸ್ವಾಯತ್ತತೆಯ ಉಲ್ಲಂಘನೆಯಷ್ಟೇ ಅಲ್ಲ, ಅದರ ಶೈಕ್ಷಣಿಕ ವಾತಾವರಣವನ್ನು ಹಾಳುಗೆಡಹುವ ಕ್ರಮವೂ ಆಗುತ್ತದೆ. ಇದು, ವಿಶ್ವವಿದ್ಯಾನಿಲಯಗಳು ಸೃಜನಶೀಲ ಹಾಗೂ ವಿಮರ್ಶಾತ್ಮಕ ಚಿಂತನೆಗಳಿಗೆ ತಾಣಗಳಾಗುವ ಬದಲು ಸರ್ಕಾರದ ಅಂಗಗಳಾಗುವAತೆ ನಿರ್ಬಂಧಿಸುತ್ತದೆ. ಮೆಕ್ಕಾರ್ಥಿವಾದಕ್ಕೆ ಹೋಲಿಸಿದರೆ ಇದು ನಿಜಕ್ಕೂ ಹೊಸದೇ ಹೌದು.

* ಜೋಕ್ ಹೇಳಬೇಡ
* ಜೋಕ್ ಕೇಳಬೇಡ
* ಕಾಮಿಡಿ ಶೋ ನೋಡಬೇಡ
ಇದನ್ನೂ ಓದಿ : ಸುಂಕದ ಮನುಷ್ಯನ ಸಲ್ಲದ ಪ್ರಲಾಪ
ದಮನಕಾರಿ ಮಿಲಿಟರಿವಾದದತ್ತ
ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಚಿಂತನೆಯ ಮೇಲೆ ಈಗ ನಡೆಯುತ್ತಿರುವ ನವ-ಫ್ಯಾಸಿಸ್ಟ್ ದಾಳಿಯು 1950ರ ದಶಕದ ಮೆಕಾರ್ಥೀಯ ದಾಳಿಗಿಂತಲೂ ವ್ಯಾಪಕವಾಗಿದೆ ಎಂಬುದನ್ನು ನಾವೀಗ ನೋಡುತ್ತಿದ್ದೇವೆ. ನವ-ಫ್ಯಾಸಿಸ್ಟ್ ಅಲ್ಲದ ಆಡಳಿತಗಳನ್ನು ಹೊಂದಿರುವ ಇತರೆ ಸಾಮ್ರಾಜ್ಯಶಾಹಿ ದೇಶಗಳಲ್ಲಿಯೂ ಸಹ, ವಿಮರ್ಶಾತ್ಮಕ ಚಿಂತನೆ ಮತ್ತು ವಾಕ್ ಸ್ವಾತಂತ್ರ‍್ಯಗಳು ದಾಳಿಗೆ ಒಳಗಾಗುತ್ತಿವೆ. ಉದಾಹರಣೆಗೆ, ಯುರೋಪಿನಲ್ಲಿ ರಷ್ಯಾದ ವಿಸ್ತರಣಾವಾದದ ಬೆದರಿಕೆ ಉಂಟಾಗಿದೆ ಎಂಬ ಸಂಪೂರ್ಣವಾಗಿಯೂ ಆಧಾರರಹಿತವಾದ ಡಂಗುರವನ್ನು ಬಾರಿಸಲಾಗುತ್ತಿದೆ (ವಾಸ್ತವವೆಂದರೆ, ನ್ಯಾಟೋ ವಿಸ್ತರಣೆ ರಷ್ಯಾದ ಗಡಿಗಳವರೆಗೂ ಆಗಿದೆ ಮತ್ತು ಲಿಥುವೇನಿಯಾದಲ್ಲಿ ಜರ್ಮನ್ ಪಡೆಗಳನ್ನು ನಿಯೋಜಿಸಲಾಗಿದೆ). ಆದರೆ, ಅದೇ ಸಮಯದಲ್ಲಿ, ಗಾಜಾದಲ್ಲಿ ಇಸ್ರೇಲಿನ ಕ್ರಮಕ್ಕೆ ಪೂರ್ಣ ಬೆಂಬಲವೂ ಇದೆ. ವಾಸ್ತವವಾಗಿ, ಇಸ್ರೇಲಿನ ವಿರುದ್ಧ ಮಾಡುವ ಯಾವುದೇ ಟೀಕೆಯನ್ನು ಯೆಹೂದ್ಯ-ವಿರೋಧಿ ಎಂದು ಕರೆಯಲಾಗುತ್ತಿದೆ. ಗಾಜಾದಲ್ಲಿ ನಡೆಯುತ್ತಿರುವ ನರಮೇಧವನ್ನು ಚರ್ಚಿಸುವ ಸಲುವಾಗಿ ಕರೆಯುವ ಸಭೆಗಳನ್ನು ಜರ್ಮನಿಯಲ್ಲಿ ಅಧಿಕೃತವಾಗಿ ರದ್ದುಗೊಳಿಸಲಾಗುತ್ತಿದೆ.
ಈ ರೀತಿಯಲ್ಲಿ ಸಾಮ್ರಾಜ್ಯಶಾಹಿ ದೇಶಗಳು, ಅವು ನವ-ಫ್ಯಾಸಿಸ್ಟ್ ಆಳ್ವಿಕೆಯಲ್ಲಿರಲಿ ಅಥವಾ ಉದಾರವಾದಿ ಬೂರ್ಜ್ವಾ ಆಡಳಿತದಲ್ಲಿರಲಿ, ಅಭಿವ್ಯಕ್ತಿ ಸ್ವಾತಂತ್ರ‍್ಯದ ಮೇಲೆ ತೀವ್ರವಾದ ದಾಳಿಯನ್ನು ಮಾಡುತ್ತಿವೆ ಮತ್ತು ಹೆಚ್ಚು ಹೆಚ್ಚು ದಮನಕಾರಿಯೂ ಆಗುತ್ತಿವೆ. ನವ-ಫ್ಯಾಸಿಸ್ಟ್ ಆಡಳಿತಗಳು ತುಲನಾತ್ಮಕವಾಗಿ ಹೆಚ್ಚು ದಮನಕಾರಿಯಾಗಿದ್ದರೂ, ಉದಾರವಾದಿ ಬೂರ್ಜ್ವಾ ಆಡಳಿತಗಳೇನೂ ಅವುಗಳಿಗಿಂತ ಹಿಂದೆ ಬಿದ್ದಿಲ್ಲ. ಅಷ್ಟೇ ಅಲ್ಲ, ಈ ವಿದ್ಯಮಾನವು ಸಾಮ್ರಾಜ್ಯಶಾಹಿ ದೇಶಗಳೂ ಸಹ ಮಿಲಿಟರಿ ವೆಚ್ಚವನ್ನು ಹೆಚ್ಚಿಸಿಕೊಳ್ಳುತ್ತಿರುವ ಸಮಯದಲ್ಲಿ ಸಂಭವಿಸುತ್ತಿದೆ. ಜರ್ಮನಿಯು ತನ್ನನ್ನು ತಾನು ಯುದ್ಧ ಸನ್ನದ್ಧಗೊಳಿಸಿಕೊಳ್ಳುವ ಸಲುವಾಗಿ ಹೆಚ್ಚು ಹೆಚ್ಚು ಖರ್ಚು ಮಾಡಲು ಅನುವಾಗುವಂತೆ ತಾನು ಹೊಂದಬಹುದಾದ ಹಣಕಾಸಿನ ಕೊರತೆಯ ಮೇಲಿನ ಮಿತಿಯನ್ನು ತೆಗೆದುಹಾಕುವ ಸಾಂವಿಧಾನಿಕ ತಿದ್ದುಪಡಿಯನ್ನು ಅಂಗೀಕರಿಸಿದೆ. ಫ್ರಾನ್ಸ್ ಮತ್ತು ಇಂಗ್ಲೆಂಡ್ ಕೂಡ ತಮ್ಮ ಒಟ್ಟು ದೇಶೀಯ ಉತ್ಪನ್ನಕ್ಕೆ ಹೋಲಿಸಿದರೆ ತಮ್ಮ ಮಿಲಿಟರಿ ವೆಚ್ಚಗಳನ್ನು ಹೆಚ್ಚಿಸಿಕೊಳ್ಳುತ್ತಿವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಮೆಟ್ರೋಪಾಲಿಟನ್ ಬಂಡವಾಳಶಾಹಿಯು ದಮನಕಾರಿ ಮಿಲಿಟರಿವಾದದ ಹಂತವನ್ನು ಪ್ರವೇಶಿಸುತ್ತಿದೆ. ಎರಡನೇ ಮಹಾಯುದ್ಧದ ನಂತರದ ಕಾಲದಲ್ಲಿ ಇಂಥಹ ಒಂದು ವಿದ್ಯಮಾನವನ್ನು ನಾವು ಕಂಡಿರಲಿಲ್ಲ. ಇದು ವಿಶ್ವದ ಜನತೆಗೆ ಕೇಡಿನ ಒಂದು ಸೂಚನೆಯೇ ಸರಿ.
ಇದನ್ನೂ ನೋಡಿ : ಬಾಣಂತಿಯರ ಸಾವಿನ ಹೊಣೆ ಯಾರದ್ದು? ಮೆಡಿಸಿನ್ ಮಾಫಿಯಾಗೆ ಕಡಿವಾಣ ಯಾವಾಗ?! Janashakthi Media ಮೆಕ್ಕಾರ್ಥಿವಾದ