ಶಿವಮೊಗ್ಗ : ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಇತ್ತೀಚಿನ ದಿನಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಕೃತ್ಯದಲ್ಲಿ ಭಾಗಿಯಾಗಿದ್ದ ಎನ್ನಲಾಗಿರುವ ಮತ್ತೊಬ್ಬ ಶಂಕಿತ ವ್ಯಕ್ತಿ ಮಾಝ್ ಮುನೀರ್ ಅಹಮದ್ (26) ಎಂಬುವವರನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಚೆಗೆ ಚಿಕ್ಕಮಗಳೂರಿನ ಶಂಕಿತ ಮುಜಮೀಲ್ ಶರೀಫ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಬಂಧಿತ ಶರೀಫ್ ನೀಡಿದ ಮಾಹಿತಿಯ ಆಧಾರದ ಮೇಲೆ ಇದೀಗ ಮಾಝ್ ಮುನೀರ್ ಅಹಮದ್ನನ್ನು ಬಂಧಿಸಲಾಗಿದೆ. ಮುನೀರ್ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯವನಾಗಿದ್ದು, ಎಂಜಿನಿಯರ್ ಪದವೀಧರ ಎನ್ನಲಾಗಿದೆ.
ಇದಾನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್ ನಂಟು
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದಲ್ಲಿ ಮಾಝ್ ಭಾಗಿಯಾರಿರುವ ಶಂಕೆ ವ್ಯಕ್ತವಾಗಿತ್ತಾದರೂ ನಿಖರ ಮಾಹಿತಿ ಲಭ್ಯವಾಗಿರಲಿಲ್ಲ. ಈತ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿರುವ ಅನುಮಾನದ ಮೇಲೆ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿತ್ತು. ಆ ಸಂದರ್ಭದಲ್ಲಿ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಈಚೆಗೆ ಕರ್ನಾಟಕ, ತಮಿಳುನಾಡು ಹಾಗೂ ಉತ್ತರ ಪ್ರದೇಶದ 18 ಕಡೆಗಳಲ್ಲಿ ಎನ್ಐಎ ದಾಳಿ ಮಾಡಿದ ಸಂದರ್ಭದಲ್ಲಿ ಮುಜಮೀಲ್ ಶರೀಫ್ ಭಾಗಿಯಾಗಿರುವ ಸುಳಿವು ಸಿಕ್ಕಿತ್ತು. ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಮಾಝ್ನ ಬಗ್ಗೆ ತಿಳಿದುಬಂದಿದೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದಲ್ಲಿ ಮಾಝ್ ಮುನೀರ್ ಅಹಮದ್ ಎನ್ನುವ ವ್ಯಕ್ತಿಯನ್ನು ಮೊದಲ ಆರೋಪಿಯನ್ನಾಗಿ, ಬಾಂಬ್ ಇರಿಸಿದ್ದ ಎನ್ನಲಾಗಿರುವ ತೀರ್ಥಹಳ್ಳಿಯ ಮುಸಾವೀರ್ ಹುಸೇನ್ ಶಾಜೀಬ್ ಮತ್ತು ಅಬ್ದುಲ್ ಮಥೀನ್ ಅಹ್ಮದ್ ತಾಹಾ ಎಂಬವನನ್ನು ಎರಡು ಮತ್ತು ಮೂರನೇ ಆರೋಪಿಗಳನ್ನಾಗಿ ಗುರುತಿಸಲಾಗಿದೆ. ಇನ್ನು ಮುಜಮೀಲ್ ಶರೀಫ್ ನಾಲ್ಕನೇ ಆರೋಪಿಯಾಗಿದ್ದಾನೆ. ತೀರ್ಥಹಳ್ಳಿಯ ಬಿಜೆಪಿಯ ಸಾಯಿ ಪ್ರಸಾದ್‌ನನ್ನು ಎನ್‌ಐಎ ವಿಚಾರಣೆ ನಡೆಸುತ್ತಿದೆ. ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದಲ್ಲಿ ಇನ್ನು ಹಲವರು ಭಾಗಿಯಾಗಿರುವ ಶಂಕೆ ಇರುವುದರಿಂದ ಎನ್ಐಎ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ ಎಂದು ವರದಿಯಾಗಿದೆ.