ಬೆಂಗಳೂರು: ಕರ್ನಾಟಕ ಸರ್ಕಾರದ ಸಚಿವಾಲಯದ ನೌಕರರ ಸಂಘ ಸಚಿವಾಲಯ ಬಂದ್‌ಗೆ ಕರೆ ನೀಡಿದ್ದು, ಕೂಡಲೇ ಸಚಿವಾಲಯದ 542 ಕಿರಿಯ ಸಹಾಯಕ ಹುದ್ದೆಗಳನ್ನು ಕಡಿತಗೊಳಿಸುವ ಪ್ರಸ್ತಾವನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿವೆ.
ನಾಳೆ (ಮೇ 27) ವಿಧಾನಸೌಧದಲ್ಲಿ ಸಚಿವಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ವಿಧಾನಸೌಧ ಬಂದ್‌ಗೆ ಕರೆ ನೀಡಿದೆ. ಇದರಿಂದಾಗಿ ಒಂದು ದಿನದ ಮಟ್ಟಿಗೆ ವಿಧಾನಸೌಧದಲ್ಲಿ ಕೆಲಸಗಳು ಸ್ಥಗಿತಗೊಳ್ಳುವ ನಿರೀಕ್ಷೆ ಇದೆ.
ಕರ್ನಾಟಕ ಸರ್ಕಾರದ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಪಿ. ಗುರುಸ್ವಾಮಿ ಈ ಕುರಿತು ಮಾಹಿತಿ ನೀಡಿದ್ದು, “ಆಡಳಿತ ಸುಧಾರಣೆ ನೆಪದಲ್ಲಿ ಸಚಿವಾಲಯದ ಹಲವು ಶಾಖೆಗಳನ್ನು ವಿಲೀನ ಅಥವ ರದ್ದುಗೊಳಿಸಲು ಸರ್ಕಾರ ಮುಂದಾಗಿದೆ. ನಿವೃತ್ತಿಯಾದ ಅಧಿಕಾರಿ, ನೌಕರರ ಮರು ನೇಮಕಾತಿ ರದ್ದು ಮಾಡಬೇಕು. 542 ಕಿರಿಯ ಸಹಾಯಕರ ಹುದ್ದೆಗಳ ಕಡಿತ ಪ್ರಸ್ತಾವನೆ ಕೈಬಿಡಬೇಕು. ಸಚಿವಾಲಯದ ಅಧಿಕಾರಿಗಳು ನಿಯೋಜನೆ ಮೇರೆಗೆ ಇತರ ಇಲಾಖೆಗೆ ಹೋಗುವ ಅವಕಾಶ ನೀಡಬೇಕು. ಯಾವುದೇ ಹುದ್ದೆಗಳ ಕಡಿತ ಪ್ರಸ್ತಾವನೆಗಳನ್ನು ಕೈಬಿಡಬೇಕು ಎಂಬ ಪ್ರಮುಖ ಬೇಡಿಕೆಯಾಗಿದೆ ಎಂದಿದ್ದಾರೆ.
ಬೇಡಿಕೆಗಳನ್ನು ಈಡೇರಿಸಬೇಕೆಂದು ಈಗಾಗಲೇ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದೇವು. ಆದರೆ, ಸರ್ಕಾರ ಸ್ಪಂದಿಸದ ಹಿನ್ನಲೆಯಲ್ಲಿ ಸಚಿವಾಲಯ ಬಂದ್ ಕರೆ ನೀಡಲಾಗಿದೆ. ಆ ಮೂಲಕ ಹೋರಾಟಕ್ಕೆ ಇಳಿದಿದ್ದೇವೆ ಎಂದು ಪಿ. ಗುರುಸ್ವಾಮಿ ಹೇಳಿದ್ದಾರೆ.