ಮತ್ತೊಂದು ಹೊಸತನಕ್ಕೆ ಸಾಕ್ಷಿಯಾಗಲಿದೆ ʻಶಂಕರ್‌ನಾಗ್‌ ನಾಟಕೋತ್ಸವʼ

ಪ್ರತಿಬಾರಿಯೂ ಹೊಸತನವನ್ನು ಉಣಬಡಿಸುವ ಹಲವು ವಲಯಗಳು ಸಾಕಷ್ಟು ಇವೆ. ಅವುಗಳಲ್ಲಿ ರಂಗಭೂಮಿಯೂ ಸಹ ಒಂದಾಗಿದೆ. 2018ರಿಂದ ಪ್ರತಿವರ್ಷವು ಶಂಕರ್‌ನಾಗ್‌ ನಾಟಕೋತ್ಸವ ಮೂಲಕ ಹೊಸತನ್ನು ನೀಡುತ್ತಿರುವ ರಂಗಪಯಣ ತಂಡವು ಈ ಬಾರಿಯ ನಾಲ್ಕನೇ ವರ್ಷದ ರಂಗೋತ್ಸವಕ್ಕೆ ʻರಂಗ ಧಾರಿಣಿʼ ವಿಶಿಷ್ಠತೆಯನ್ನು ಸೃಷ್ಠಿಸಿದೆ.

ʻರಂಗ ಧಾರಿಣಿʼ ಮೂಲಕ 2021ರ 5 ದಿನಗಳ ನಾಟಕೋತ್ಸವದ ಎಲ್ಲಾ ನಾಟಕಗಳು ಹಾಗೂ ಕಾರ್ಯಕ್ರಮಗಳು ಮಹಿಳಾ ನಾಟಕೋತ್ಸವವಾಗಿದೆ. ನಾಟಕ ಪ್ರದರ್ಶನದೊಂದಿಗೆ ಶಂಕರ್‌ನಾಗ್‌ ಪ್ರಶಸ್ತಿ ಪ್ರಧಾನ, ಸಂವಾದ, ನಾಗರ ಕಟ್ಟೆ, ರಂಗಗೀತೆ ಕಾರ್ಯಕ್ರಮಗಳು ಒಳಗೊಂಡಿದೆ. ಮಹಿಳಾ ಪ್ರಧಾನ ವೇದಿಕೆ ಮೂಲಕ ಮಹಿಳೆಯರ ಅಸ್ಮಿತೆಗಳನ್ನು ತೋರ್ಪಡಿಸಿಕೊಳ್ಳುವುದಕ್ಕೆ ಈ ವೇದಿಕೆ ಒಂದು ಸಾಕ್ಷಿಯಾಗಲಿದೆ.

ಇದನ್ನು ಓದಿ: ಶಂಕರ್‌ನಾಗ್‌ ನಾಟಕೋತ್ಸವ: ರಂಗ ಧಾರಿಣಿ – ಮಹಿಳಾ ರಂಗೋತ್ಸವ

ರಂಗಭೂಮಿ, ಕಿರುತೆರೆ, ಹಿರಿತೆರೆ, ಚಳುವಳಿ, ಸಾಮಾಜಿಕ ಕ್ಷೇತ್ರ, ದುಡಿಮೆಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಸಾವಿರಾರು ಮಹಿಳೆಯರ ಪರವಾಗಿ ದುಡಿಯುತ್ತಿರುವ ಪ್ರಮುಖ ಮಹಿಳೆಯರು ತಮ್ಮದೇ ಕ್ಷೇತ್ರದಲ್ಲಿನ ಅನುಭವವನ್ನು ಈ ವೇದಿಕೆಯ ಮೂಲಕ ತಿಳಿಯಪಡಿಸಲಿದ್ದಾರೆ. ಹಾಗಾಗಿ ಈ ಬಾರಿಯ ಶಂಕರ್‌ನಾಗ್‌ ನಾಟಕೋತ್ಸವ ಒಂದು ವಿಶೇಷತೆಯಿಂದ ಕೂಡಿದೆ.

ಕನ್ನಡ ಚಿತ್ರರಂಗದಲ್ಲಿ ಮೇರು ನಟರಾಗಿದ್ದ ಶಂಕರ್‌ನಾಗ್‌ ರಂಗಭೂಮಿಯಲ್ಲಿಯೂ ಸಾಕಷ್ಟು ಕೊಡುಗೆಗಳನ್ನು, ಅವರೊಂದಿಗೆ ಸದಾ ಜೊತೆಯಾಗಿದ್ದ ಹಲವು ಸ್ನೇಹಿತರ ಬಳಗದವರು ಹಲವು ಸಂದರ್ಭದಲ್ಲಿ ಶಂಕರ್‌ನಾಗ್‌ ಬಗೆಗಿನ ವಿಚಾರಗಳನ್ನು ಪ್ರಸ್ತುತಪಡಿಸಿದಾಗಲೆಲ್ಲ, ಶಂಕರ್‌ನಾಗ್‌ ಒಬ್ಬ ವ್ಯಕ್ತಿ ಅಲ್ಲ… ಅದೊಂದು ಶಕ್ತಿ… ಸದಾಕಾಲ ಬರೀ ಸಮಾಜಮುಖಿ ಬೆಳವಣಿಗೆಗಳ ಬಗ್ಗೆ ಚಿಂತಿಸುತ್ತಿದ್ದ ಶಂಕರ್‌ನಾಗ್‌ ಅವರ ಹೆಸರಿನಲ್ಲಿ ಏನಾದರೊಂದು ವಿಶಿಷ್ಠವಾದದ್ದು ಮಾಡಬೇಕೆಂದು ಉದ್ದೇಶದಿಂದ ಪ್ರತಿ ವರ್ಷದ ಪರಮ ಗುರಿ ಎಂಬ ಅಡಿ ಬರಹದೊಂದಿಗೆ ಸಜ್ಜಾದ ವೇದಿಕೆ ʻʻಶಂಕರ್‌ನಾಗ್‌ ನಾಟಕೋತ್ಸವʼʼ.

ಕಳೆದ 13 ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ರಂಗಪಯಣ ತಂಡವು ಈ ಬಾರಿ ಹಮ್ಮಿಕೊಂಡಿರುವ ಐದು ದಿನಗಳ ನಾಟಕೋತ್ಸವವದಲ್ಲಿ ನಾಟಕ ಪ್ರದರ್ಶನವಲ್ಲದೆ, ಶಂಕರ್‌ನಾಗ್‌ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ರಂಗಭೂಮಿಯಲ್ಲಿ ಸತತವಾಗಿ ಸೇವೆ ಮಾಡುತ್ತಿರುವ ಹನುಮಕ್ಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅಕ್ಕೈ ಪದ್ಮಶಾಲಿ ಅವರಿಗೆ ಈ ಬಾರಿಯ ಶಂಕರ್‌ನಾಗ್‌ ಪ್ರಶಸ್ತಿ ನೀಡಲಾಗುತ್ತಿದೆ.

ರಂಗಭೂಮಿ ಅಲ್ಲದೆ, ಇನ್ನು ಹಲವು ಕ್ಷೇತ್ರಗಳಲ್ಲಿ ಕೇವಲ ಹವ್ಯಾಸವಾಗಿ ತೊಡಗಿಸಿಕೊಳ್ಳದೇ ಬದುಕಿಗೆ ಒಂದು ಆಧಾರವೆಂಬಂತೆ ದುಡಿಮೆಯಾಗಿಸಿಕೊಂಡಿರುವ ವಿವಿಧ ವಲಯಗಳಲ್ಲಿನ ಮಹಿಳಾ ಸಾಧಕಿಯರು ತಮ್ಮದೇ ಕ್ಷೇತ್ರದಲ್ಲಿ ಆಗು-ಹೋಗುಗಳು, ಎದುರಾಗುತ್ತಿರುವ ಹೊಸ ಸವಾಲುಗಳು, ಇತ್ಯಾದಿ ವಿಚಾರಗಳ ಬಗ್ಗೆ ಸಂವಾದದಲ್ಲಿ ತಮ್ಮ ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ.

ಇದನ್ನು ಓದಿ: ʻನಯನʼ ರಂಗದ ಮೇಲೆ ಬಣ್ಣ ಹಚ್ಚಿ 25 ವಸಂತ-ರಂಗಪಯಣಕ್ಕೆ 12

ಪ್ರತಿವರ್ಷದಂತೆ ಈ ವರ್ಷವೂ ಸಹ ʻನಾಗರ ಕಟ್ಟೆʼ ಕಾರ್ಯಕ್ರಮವಿರಲಿದ್ದು, ಕಳೆದ ಬಾರಿ ನಾಟಕೋತ್ಸವಗಳಲ್ಲಿ ಶಂಕರ್‌ನಾಗ್‌ ಅವರೊಂದಿಗೆ ಸದಾಕಾಲ ಗುರುತಿಸಿಕೊಂಡಿದ್ದ, ಅವರೊಂದಿಗೆ ಕೆಲಸ ಮಾಡಿದವರು, ಆಪ್ತ ವಲಯದವರು ಶಂಕರ್‌ನಾಗ್‌ ಅವರ ಬಗೆಗಿನ ಅನುಭವವನ್ನು ಹಂಚಿಕೊಂಡಿದ್ದರು. ಈ ಬಾರಿಯ ಉತ್ಸವವದಲ್ಲಿ ಶಂಕರ್‌ನಾಗ್‌ ಅವರೊಂದಿಗೆ ಕೆಲಸ ಮಾಡಿರುವವರು ಶಂಕರ್‌ನಾಗ್‌ ಅವರ ಮತ್ತಷ್ಟು ಹೊಸತನದ ವಿಚಾರಗಳ ಬಗ್ಗೆ ಮಾತನಾಡಲಿದ್ದಾರೆ.

ನಾಟಕವನ್ನು ವೃತ್ತಿಯಾಗಿ ಸ್ವೀಕರಿಸಿದ ಮಹಿಳೆಯರು, ಅರ್ಕೇಷ್ಟ್ರ ಮತ್ತು ಮಹಿಳೆಯರು ಎಂಬ ವಿಚಾರದ ಬಗ್ಗೆ ಸಂವಾದ ಕಾರ್ಯಕ್ರಮ, ಅನುಸಂಧಾನ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭದಲ್ಲಿ ಸ್ತ್ರೀ ಎಂದರೇ ಅಭಿವ್ಯಕ್ತಿ ಮತ್ತು ಅನುಭವ ಎಂಬ ವೇದಿಕೆಗಳು ನಿರ್ಮಾಣವಾಗಿದೆ.

ಇವುಗಳಲ್ಲದೆ, ಇನ್ನು ಹಲವು ವೇದಿಕೆ ಕಾರ್ಯಕ್ರಮಗಳು, ನಾಟಕ ಪ್ರದರ್ಶನಗಳು 2021ರ ನವೆಂಬರ್‌ 28 ರಿಂದ ಡಿಸೆಂಬರ್‌ 02ರವರೆಗೆ ನಡೆಯಲಿರುವ ಈ ಬಾರಿಯ ಶಂಕರ್‌ನಾಗ್‌ ನಾಟಕೋತ್ಸವವದಲ್ಲಿ ಇರಲಿದೆ. ಇವೆಲ್ಲ ಕಾರ್ಯಕ್ರಮಗಳು ಬೆಂಗಳೂರಿನ ಜೆ.ಸಿ.ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರತಿದಿನ ಸಂಜೆ 4.30ರಿಂದ ಆರಂಭವಾಗಲಿದೆ.

ವರದಿ: ವಿನೋದ ಶ್ರೀರಾಮಪುರ

Donate Janashakthi Media

Leave a Reply

Your email address will not be published. Required fields are marked *