ನವದೆಹಲಿ : ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಪ್ರಕಟಿಸಿರುವ 2021-22ರ ಮುಂಗಾರು ಬೆಳೆಗಳ ಕನಿಷ್ಟ ಬೆಂಬಲ ಬೆಲೆ(ಎಂ.ಎಸ್.ಪಿ.)ಗಳು ಫಲದಾಯಕವೂ ಆಗಿಲ್ಲ, ಏರಿರುವ ಬೇಸಾಯ ವೆಚ್ಚಗಳಿಗೆ ಅನುಗುಣವಾಗಿಯೂ ಇಲ್ಲ, ದೇಶದ ರೈತರಿಗೆ ಈ ಸರಕಾರ ವಿಶ್ವಾಸಘಾತ ಮಾಡಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ(ಎ.ಐ.ಕೆ.ಎಸ್.) ಖಂಡಿಸಿದೆ.
ಕಳೆದ ವರ್ಷದ ಎಂ.ಎಸ್.ಪಿ.ಗಳಿಗೆ ಒಂದು ಸಣ್ಣ ಆಂಶವನ್ನು ಯಾಂತ್ರಿಕವಾಗಿ ಸೇರಿಸಿ ಇವನ್ನು ಪ್ರಕಟಿಸಿಸಲಾಗಿದೆ. ಬಿಜೆಪಿ ಸರಕಾರದ ನೀತಿಗಳಿಂದಾಗಿ ಆಗಿರುವ ಹಣದುಬ್ಬರ ಅಥವ ವ್ಯವಸಾಯದ ಖರ್ಚುಗಳಲ್ಲಿ ಆಗಿರುವ ಏರಿಕೆಗಳನ್ನು ಇದು ಲೆಕ್ಕಕ್ಕೆ ತಗೊಂಡಿಲ್ಲ. ಸಿ2, ಅಂದರೆ ಸಮಗ್ರ ವೆಚ್ಚಗಳು+ 50% ಎಂಬ ಸೂತ್ರದ ಪ್ರಕಾರ ಎಂ.ಎಸ್.ಪಿ.ಯನ್ನು ಲೆಕ್ಕ ಹಾಕುವ ಬದಲು, ಮಾಡಿದ ವೆಚ್ಚಗಳು + ಕುಟುಂಬ ಶ್ರಮದ ಅನುಮಾನಿತ ಮೌಲ್ಯ(ಎ2+ಎಫ್.ಎಲ್.)ಸೂತ್ರದ ಮೇಲೆಯೇ ಎಂ.ಎಸ್.ಪಿ.ಗಳನ್ನು ಲೆಕ್ಕ ಹಾಕುವ ತನ್ನ ಸೋಗಿನ ವರ್ತನೆಯನ್ನು ಈ ಸರಕಾರ ಮುಂದುವರೆಸುತ್ತಿದೆ ಎಂದು ಎ.ಐ.ಕೆ.ಎಸ್. ಹೇಳಿದೆ.
ಇದನ್ನು ಓದಿ: ದರ ಏರಿಕೆಯ ಶಾಕ್ ಮೇಲೆ ಶಾಕ್! ರಾಜ್ಯ ಸರಕಾರದಿಂದ ಕರೆಂಟ್ ಶಾಕ್
ಇದು ಸ್ವಾಮಿನಾಥನ್ ಆಯೋಗ ಶಿಫಾರಸು ಮಾಡಿರುವ ಸಿ2+50% ಕ್ಕಿಂತ ಬಹಳ ಕೆಳ ಮಟ್ಟದಲ್ಲಿದೆ, ಸಾಂಕ್ರಾಮಿಕದಿಂದ ಮತ್ತು ಲಾಗುವಾಡುಗಳ ವೆಚ್ಚಗಳಲ್ಲಿ ಲಂಗುಲಗಾಮಿಲ್ಲದ ಏರಿಕೆಗಳಿಂದಾಗಿ ಈಗಾಗಲೇ ಬಿಕ್ಕಟ್ಟಿನಲ್ಲಿರುವ ರೈತರ ಆಕಾಂಕ್ಷೆಗಳನ್ನು ಇದು ಈಡೇರಿಸುವುದಿಲ್ಲ.
ಈಗ ಪ್ರಕಟಿಸಿರುವ ಕನಿಷ್ಟ ಬೆಂಬಲ ಬೆಲೆಗಳು ಫಲದಾಯಕವಾಗಿವೆ ಎಂಬ ಸುಳ್ಳನ್ನು ಬಯಲಿಗೆಳೆಯಬೇಕಾಗಿದೆ ಎಂದಿರುವ ಎ.ಐ.ಕೆ.ಎಸ್., ಇವು ರೈತರಿಗೆ ಲಾಭದಾಯಕವಾಗಿಲ್ಲ, ಮಾತ್ರವಲ್ಲ, ಈ ಅಲ್ಪ ಏರಿಕೆಯೂ ಬಹುಪಾಲು ರೈತರಿಗೆ ದಕ್ಕುವುದಿಲ್ಲ ಎಂದು ಹೇಳಿದೆ. ಏಕೆಂದರೆ, ಸರಕಾರದಿಂದ ರೈತರ ಬೆಳೆಗಳ ಖರೀದಿಯ ಖಾತ್ರಿಯೆನೂ ಇಲ್ಲ.
ಮೊದಲನೆಯದಾಗಿ, ‘ಕೃಷಿ ವೆಚ್ಚಗಳು ಮತ್ತು ಬೆಲೆಗಳ ಅಯೋಗ’(ಸಿ.ಎ.ಸಿ.ಪಿ.) ಮತ್ತು ರಾಜ್ಯ ಕೃಷಿ ಇಲಾಖೆಗಳು ಲೆಕ್ಕ ಹಾಕಿರುವ ವೆಚ್ಚಗಳನ್ನೇ ತಗೊಂಡರೂ ಸಿ2 ಮತ್ತು ಎ2+ಎಫ್ಎಲ್ ಲೆಕ್ಕಗಳಲ್ಲಿ ಅಪಾರ ಅಂತರ ಇದೆ. ಎರಡನೆಯದಾಗಿ, ಸಿ.ಎ.ಸಿ.ಪಿ. ಲೆಕ್ಕಹಾಕಿರುವ ವೆಚ್ಚಗಳು ಮತ್ತು ರಾಜ್ಯ ಕೃಷಿ ಇಲಾಖೆಗಳು ಲೆಕ್ಕ ಹಾಕಿರುವ ವೆಚ್ಚಗಳ ನಡುವೆಯೂ ಅಪಾರ ಅಂತರವಿದೆ.
ಕಾಲಂ (4) ಸ್ವಾಮಿನಾಥನ್ ಆಯೋಗದ ಸೂತ್ರದ ಪ್ರಕಾರ ಪ್ರಕಟಿಸಬೇಕಾಗಿದ್ದ ಕನಿಷ್ಟ ಬೆಂಬಲ ಬೆಲೆ ಮತ್ತು ಕಾಲಂ (5) ಸರಕಾರ ಪ್ರಕಟಿಸಿರುವ ಎಂಎಸ್ಪಿ. ಕಾಲಂ (6) ಇವೆರಡರ ನಡುವಿನ ವ್ಯತ್ಯಾಸವನ್ನು, ಅಂದರೆ ಸರಕಾರ ಪ್ರಕಟಿಸಿರುವ ಕನಿಷ್ಟ ಬೆಂಬಲ ಬೆಲೆ ದೊರೆತರೂ ರೈತರಿಗೆ ಪ್ರತಿ ಕ್ವಿಂಟಾಲಿಗೆ ಆಗಿರುವ ನಷ್ಟವನ್ನು ಸೂಚಿಸುತ್ತದೆ.
ಇದನ್ನು ಓದಿ: ಅಂಬಾನಿ ಕಂಪನಿ ಭತ್ತಕ್ಕೆ ಎಂ.ಎಸ್.ಪಿ.ಗಿಂತ ಹೆಚ್ಚುಕೊಡುತ್ತಿದೆಯೇ?
ಸರಕಾರ ಕನಿಷ್ಟ ಬೆಂಬಲ ಬೆಲೆ ನಿಗದಿಯಲ್ಲೇ ವಂಚನೆ ಮಾಡುತ್ತದೆ, ಮಾತ್ರವಲ್ಲ, ಈ ಎಲ್ಲ ಬೆಳೆಗಳನ್ನೂ ಸರಕಾರ ಖರೀದಿಸುವ ಖಾತ್ರಯಿಲ್ಲವಾದ್ದರಿಂದ ರೈತರಿಗೆ ಈ ಬೆಲೆಗಳೂ ಸಿಗುವ ಖಾತ್ರಿಯಿಲ್ಲ. ಆದ್ದರಿಂದಲೇ ವ್ಯವಸಾಯ ವೆಚ್ಚಗಳನ್ನು ಸರಿಯಾಗಿ ಲೆಕ್ಕ ಹಾಕಬೇಕು, ಕನಿಷ್ಟ ಬೆಂಬಲ ಬೆಲೆಗಳನ್ನು ಸಿ2+50% ಸೂತ್ರದಂತೆ ನಿಗದಿಪಡಿಸಬೇಕು ಹಾಗು ಈ ಬೆಲೆಗಳನ್ನು ಖಾತ್ರಿಪಡಿಸುವ ಒಂದು ಕಾನೂನು ತರಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.
ಅಲ್ಲದೆ, ಈ ಮೇಲೆ ಹೇಳಿದಂತೆ ಸಿ.ಎ.ಸಿ.ಪಿ. ಅಂದಾಜು ಮಾಡಿರುವ ಸಿ2 ವೆಚ್ಚಗಳು ಬಹಳಷ್ಟು ಸಂದರ್ಭಗಳಲ್ಲಿ ರಾಜ್ಯಗಳ ಕೃಷಿ ಇಲಾಖೆಗಳು ಲೆಕ್ಕ ಹಾಕಿದ ಅಂದಾಜು ವೆಚ್ಚಗಳಿಗಿಂತ ಕಡಿಮೆ ಇರುತ್ತದೆ. ಉದಾ: ಕರ್ನಾಟಕದಲ್ಲಿ ಭತ್ತದ ವ್ಯವಸಾಯಕ್ಕೆ ತಗಲುವ ವೆಚ್ಚ ಕ್ವಿಂಟಾಲಿಗೆ ರೂ.2733 ಎಂದು ರಾಜ್ಯ ಕೃಷಿ ಇಲಾಖೆ ಅಂದಾಜು ಮಾಡಿದರೆ, ಸಿಎಸಿಪಿ ಅಂದಾಜು ರೂ.1635, ಅಂದರೆ ರೂ.1098 ಕಡಿಮೆ. ತೊಗರಿಗೆ ರೂ.6399 ಎಂದು ಆಂದಾಜು ಮಾಡಿದ್ದರೆ, ಸಿಎಸಿಪಿ ಅಂದಾಜು ರೂ.4961, ಅಂದರೆ ರೂ. 1438 ಕಡಿಮೆ.
ನರೇಂದ್ರ ಮೋದಿ ಸರಕಾರ ಇಂತಹ ವಂಚಕ ಕಸರತ್ತುಗಳಿಂದ ರೈತರಿಗೆ ಮೋಸ ಮಾಡುವುದನ್ನು ನಿಲ್ಲಿಸಬೇಕು, ಮತ್ತು ವೆಚ್ಚಗಳ ಲೆಕ್ಕಾಚಾರಗಳಲ್ಲಿನ ಸಮಸ್ಯೆಗಳನ್ನು ಸರಿಪಡಿಸಿ ರೈತರ ಬೆಳೆಗಳಿಗೆ ಫಲದಾಯಕ ಬೆಲೆಗಳನ್ನು ಖಾತ್ರಿಪಡಿಸಲು ಒಂದು ಕಾಯ್ದೆಯನ್ನು ತರಬೇಕು ಎಂದು ಅಖಿಲ ಭಾರತ ಕಿಸಾನ್ ಸಭಾ ಆಗ್ರಹಿಸಿದೆ. ಬಿಜೆಪಿ ಸರಕಾರದ ಈ ವಿಶ್ವಾಸಘಾತವನ್ನು ಪ್ರತಿಭಟಿಸಬೇಕು, ಬಯಲಿಗೆಳೆಯಬೇಕು ಎಂದು ಅದು ತನ್ನ ಘಟಕಗಳಿಗೆ ಕರೆ ನೀಡಿದೆ.