ನಿತ್ಯಾನಂದಸ್ವಾಮಿ
ಕಳೆದ ಒಂದು ವಾರದಿಂದ ನಾಡಿನ ಖ್ಯಾತ ಮಠಾಧೀಶರು ಗುಂಪು ಗುಂಪಾಗಿ ಅಥವ ಒಬ್ಬೊಬ್ಬರಾಗಿ ಮುಖ್ಯಮಂತ್ರಿ ಯಡಿಯೂರಪ್ಪರವರ ನಿವಾಸ ಕಾವೇರಿಗೆ ತೆರಳಿ ಯಡಿಯೂರಪ್ಪರವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು, ಅವರನ್ನು ಪದಚ್ಯುತಗೊಸಿಳಿದರೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಬೆಂಬಲಿಸಲು ಬಂದಿದ್ದ ಮಠಾಧೀಶರಲ್ಲಿ ಕೆಲವರಿಗೆ ಯಡಿಯೂರಪ್ಪರವರ ಸಮ್ಮುಖದಲ್ಲೇ ಮುಚ್ಚಿದ ಲಕೋಟೆಗಳನ್ನು ಹಂಚಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿತ್ತು ಎನ್ನಲಾಗಿದೆ. ಹಂಚಿದ ಆ ಲಕೋಟೆಗಳಲ್ಲಿ ಏನಿತ್ತು ಎಂಬ ಬಗ್ಗೆ ಹಲವು ಬಗೆಯ ಊಹೆಗಳು ಹುಟ್ಟಿಕೊಂಡಿವೆ. ಮಠಾಧೀಶರಿಗೆ ಹಂಚಿದ ಲಕೋಟೆಗಳಲ್ಲಿ ಹಣವನ್ನು ಹಂಚಲಾಗಿದೆ ಎಂದು ಜನ ಮಾತನಾಡುತ್ತಿದ್ದಾರೆ. ಮಠಾಧೀಶರಿಗೆ ಯಡಿಯೂರಪ್ಪ ಹಣ ಹಂಚುವುದು ಗುಟ್ಟಿನ ವಿಷಯವೇನಲ್ಲ. ಬಜೆಟ್‌ನಲ್ಲೇ ಸಾರ್ವಜನಿಕ ಹಣವನ್ನು ಮಠಗಳಿಗೆ ನೀಡುತ್ತಾ ಬಂದಿರುತ್ತಾರೆ. ಆದರೆ ಯಡಿಯೂರಪ್ಪರವರನ್ನು ಬೆಂಬಲಿಸಲು ಮಠಾಧೀಶರು ಹಣ ಪಡೆಯುವುದು ಎಷ್ಟು ಸೂಕ್ತ?
ಮಠಾಧೀಶರು ಇಷ್ಟೊಂದು ಕೀಳುಮಟ್ಟಕ್ಕೆ ಇಳಿದಿರುವುದು ನಂಬಲಾಗುತ್ತಿಲ್ಲ. ಇದು ನಿಜವೇ ಆಗಿದ್ದರೆ ಈ ಮಠಾಧೀಶರು ತಮ್ಮ ಭಕ್ತರ ಹಾಗೂ ನಾಡಿನ ಸಮಸ್ತ ಜನಗಳ ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಹೇಳಲೇ ಬೇಕಾಗುತ್ತದೆ. ಭ್ರಷ್ಟ ರಾಜಕಾರಣಿಗಳು ಚುನಾವಣೆಗಳಲ್ಲಿ ಜನಬೆಂಬಲ ಪಡೆಯಲು ಮತದಾರರಿಗೆ ಹಣ ಹಂಚುವುದಕ್ಕೂ ಯಡಿಯೂರಪ್ಪರವರು ಮಠಾಧೀಶರ ಬೆಂಬಲ ಪಡೆಯಲು ಅವರಿಗೆ ಲಕೋಟೆಗಳನ್ನು ವಿತರಿಸುವುದಕ್ಕೂ ಎಲ್ಲಿದೆ ವ್ಯತ್ಯಾಸ? ಮತದಾರರು ತಮ್ಮ ಮತಗಳನ್ನು ನೀಡಲು ಹಣ ಪಡೆಯುವುದು ತಪ್ಪು ಎಂದು ಹೇಳಬೇಕಾದ, ಜನರನ್ನು ಎಚ್ಚರಿಸಬೇಕಾದ ಮಠಾಧೀಶರು ಸ್ವತಃ ಯಡಿಯೂರಪ್ಪರವರಿಗೆ ಬೆಂಬಲ ನೀಡಲು ಹಣ ಪಡೆದದ್ದು ನಿಜವೇ ಆಗಿದ್ದರೆ ಅವರು ಸಮಾಜಕ್ಕೆ ಕೊಡುವ ಸಂದೇಶವಾದರೂ ಏನು? ದುಡ್ಡಿಗಾಗಿ ತಮ್ಮ ಮತಗಳನ್ನು ಮಾರಿಕೊಳ್ಳುವವರಿಗೂ ದುಡ್ಡಿಗಾಗಿ ತಮ್ಮ ಬೆಂಬಲವನ್ನು ಮಾರಿಕೊಳ್ಳುವ ಮಠಾಧೀಶರಿಗೂ ಎಲ್ಲಿದೆ ವ್ಯತ್ಯಾಸ?
ಒಂದು ರಾಜ್ಯದ ಮುಖ್ಯಮಂತ್ರಿಯಾರಾಗಿರಬೇಕು ಎಂದು ನಿರ್ಧರಿಸುವುದು ಮಠಾಧೀಶರ ಕೆಲಸವಲ್ಲ. ಅದು ಮತದಾರರಿಂದ ಆಯ್ಕೆಯಾದ ಶಾಸಕರು ನಿರ್ಧರಿಸಬೇಕಾದ ಸಂಗತಿ. ಇದು ರಾಜಕೀಯ ಪಕ್ಷವೊಂದರ ಆಂತರಿಕ ವಿಷಯ. ಮಠಾಧೀಶರು ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು. ಒಂದು ರಾಜ್ಯದ ಮುಖ್ಯಮಂತ್ರಿಯನ್ನು ಬದಲಿಸಲು ನಿರ್ಧರಿಸಿದರೆ ಅದರಲ್ಲಿ ಮಠಾಧೀಶರು ಮೂಗು ತೂರಿಸಬಾರದು. ಹಾಗೆ ಮಾಡುವುದು ಅವರಿಗೂ ಅವರು ಪ್ರತಿನಿಧಿಸುವ ಮಠಗಳಿಗೂ ಶೋಭೆತರುವ ಕೆಲಸವಾಗದು.
ಯಡಿಯೂರಪ್ಪರವರನ್ನು ಪದಚ್ಯುತಗೊಳಿಸಿದರೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಕೆಲವು ಮಠಾಧೀಶರು ಬಿಜೆಪಿ ವರಿಷ್ಠರಿಗೆ ಎಚ್ಚರಿಕೆ ನೀಡಿದ್ದಾರೆ. ಅವಧಿಗೂ ಮುನ್ನ ಯಡಿಯೂರಪ್ಪರವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ಪಕ್ಷಕ್ಕೆ ನಷ್ಟವಾಗುದಾಗಿಯೂ, ರಾಜ್ಯದಲ್ಲಿ ಬಿಜೆಪಿ ಸರ್ವನಾಶವಾಗುವುದಾಗಿಯೂ ಎಚ್ಚರಿಸಿದ್ದಾರೆ. ಅವಧಿ ಪೂರ್ಣಗೊಳಿಸುವ ಮೊದಲೇ ಮುಖ್ಯಮಂತ್ರಿಗಳ ಬದಲಾವಣೆ ಕರ್ನಾಟಕಕ್ಕೆ ಹೊಸದೇನಲ್ಲ. ಅದರೆ ಮಠಾಧೀಶರು ಈ ರೀತಿ ಗುಂಪು ಕಟ್ಟಿಕೊಂಡು ರಾಜಕಾರಣಕ್ಕೆ ಇಳಿದಿರುವುದು ಹಿಂದೆಂದೂ ಸಂಭವಿಸಿರಲಿಲ್ಲ. ಇದು ಹೊಸ ಬೆಳವಣಿಗೆ. ಅಷ್ಟೇ ಅಪಾಯಕಾರಿ ಬೆಳವಣಿಗೆ. ಈ ಪ್ರಕ್ರಿಯೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿರುವವರು ವೀರಶೈವ ಲಿಂಗಾಯತ ಮಠಾಧೀಶರು. ಅವರನ್ನು ಹಿಂಬಾಲಿಸುತ್ತಿರುವವರು ತಳವರ್ಗಕ್ಕೆ ಸೇರಿದ ಸಮುದಾಯಗಳ ಮಠಾಧೀಶರು. ಇವರಲ್ಲಿ ಕೆಲವರು ಪ್ರಗತಿಪರರು, ಎಂದು ಹೇಳಿಕೊಳ್ಳುತ್ತಿದ್ದವರೂ ಸೇರಿರುವುದು ನಾಡಿನ ದುರಂತವೇ ಸರಿ.
ಮಠಾಧೀಶರು ಸರ್ವ ಸಂಘ ಪರಿತ್ಯಾಗಿಗಳೆಂದೇ ಜನರ ವಿಶ್ವಾಸವನ್ನು ಗಳಿಸಿದವರು. ಸಮಾಜಕ್ಕೆ ನೈತಿಕ ಮಾದರಿಗಳನ್ನು ಅವರು ಒದಗಿಸಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಮಠಾಧೀಶರು ರಾಜಕಾರಣಿಗಳಂತೆ ವರ್ತಿಸುವ ಉದಾಹರಣೆಗಳು ಹೆಚ್ಚಾಗಿವೆ. ಜಾತಿ ರಾಜಕಾರಣವನ್ನು ಬಲಪಡಿಸಲು ಇವರೇ ಕಾರಣರಾಗುತ್ತಿದ್ದಾರೆ. ತಮ್ಮ ಮಠದ ಭಕ್ತರೆಂದುಕೊಳ್ಳುವ ರಾಜಕಾರಣಿಗಳು ಜನತೆಗೆ ದ್ರೋಹ ಮಾಡುತ್ತಿರುವಾಗ ಅವರನ್ನು ತಿದ್ದುವ, ಅವರಿಗೆ ಬುದ್ದಿಹೇಳುವ ಸಾಮರ್ಥ್ಯವನ್ನೇ ಅವರು ಕಳೆದುಕೊಂಡಿದ್ದಾರೆ. ಹೀಗಾಗಿ ಮಠಾಧೀಶರು ಸಮಾಜದಲ್ಲಿ ಗೌರವವನ್ನು ಕಳೆದುಕೊಳ್ಳುತ್ತಿದ್ದಾರೆ. ತಮ್ಮ ಜಾತಿಯವರೇ ಮುಖ್ಯಮಂತ್ರಿ ಆಗಿರಬೇಕು ಎಂದು ಒತ್ತಾಯಿಸುವ ಈ ಮಠಾಧೀಶರು ಸಮಾಜವನ್ನು ಒಂದುಗೂಡಿಸುವ ಬದಲು ಛಿಧ್ರಗೊಳಿಸುತ್ತಿದ್ದಾರೆ. ಸಮಾಜದಲ್ಲಿನ ಒಡಕುಗಳನ್ನು ಮತ್ತಷ್ಟು ಆಳಗೊಳಿಸುತ್ತಿದ್ದಾರೆ. ಸಮತಾವಾದಿ ಬಸವಣ್ಣರವರ ಆದರ್ಶಗಳಿಗೆ ಕಳಂಕಪ್ರಾಯರಾಗುತ್ತಿದ್ದಾರೆ.
ಯಡಿಯೂರಪ್ಪರವರು ಸಹ ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಕೆಳಗಿಳಿಯಲು ಸಿದ್ಧರಾಗಿರುವಂತೆ ಕಾಣುತ್ತದೆ. ಮಠಾಧೀಶರ ಬೆಂಬಲ ಒಂದು ನಾಟಕ ಮಾತ್ರ. ಬಿಜೆಪಿ ವರಿಷ್ಠರು ತಮ್ಮದೇ ಆದ ಲೆಕ್ಕಚಾರದಲ್ಲಿ ಯಡಿಯೂರಪ್ಪರವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ನಿರ್ಧರಿಸಿದಂತೆ ಕಾಣುತ್ತದೆ. ಹಾಗೆ ಮಾಡುವುದೇ ಆದಲ್ಲಿ ಅದರಿಂದ ಪಕ್ಷಕ್ಕೆ ಹಾನಿ ಆಗಬಾರದೆಂಬುದು ಅವರ ಕಾರ್ಯತಂತ್ರವಾಗಿದೆ. ಯಡಿಯೂರಪ್ಪ ರವರು ಸಹ ಲೆಕ್ಕಾಚಾರದಲ್ಲಿ ತೊಡಗಿದಂತೆ ಕಾಣುತ್ತದೆ. ತಾನು ಮುಖ್ಯಮಂತ್ರಿ ಸ್ಥಾನದಲ್ಲಿ ಇರುವಾಗಲೇ ತನ್ನ ಇನ್ನೊಬ್ಬ ಮಗನಿಗೆ ರಾಜ್ಯದಲ್ಲಿ ಸೂಕ್ತ ಗಾದಿಯನ್ನು ಖಚಿತ ಪಡಿಸದೆ ಯಡಿಯೂರಪ್ಪ ನಿರ್ಗಮಿಸಲಾರರು. ಈಗಾಗಲೇ ಒಬ್ಬ ಮಗ ಸಂಸತ್ ಸದಸ್ಯರಾಗಿದ್ದಾರೆ. ಹಾನಗಲ್ ಮತಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಯಡಿಯೂರಪ್ಪ ತನ್ನ ಮಗನನ್ನು ನಿಲ್ಲಿಸಿ ಗೆಲ್ಲಿಸುವ ಲೆಕ್ಕಾಚಾರ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಏನಾದರೂ ಮಾಡಿ ತನ್ನ ಮಕ್ಕಳ ಭವಿಷ್ಯವನ್ನು ಖಚಿತಪಡಿಸದೆ ಯಡಿಯೂರಪ್ಪ ಕೆಳಗಿಳಿಯಲಾರರು. ಗುಪ್ತವಾದ ಈ ನಾಟಕದಲ್ಲಿ ಮಠಾಧೀಶರಿಗೆ ಒಂದು ಪಾತ್ರ ದೊರಕಿಸಲಾಗಿದೆ. ಮುಂದೇನು ಎಂಬುದು ಕೆಲವೇ ದಿನಗಳಲ್ಲಿ ಬಹಿರಂಗಗೊಳ್ಳಬಹುದು. ಬಿಜೆಪಿಯೊಳಗೆ ವಂಶ ಪರಂಪರೆಯ ರಾಜಕಾರಣವನ್ನು ಬಲಪಡಿಸಲು ಶ್ರಮಿಸುತ್ತಿರುವ ಯಡಿಯೂರಪ್ಪರವರ ಬಣ್ಣ ಶೀಘ್ರದಲ್ಲೇ ಬಯಲಾಗಲಿದೆ.