ಮಂಡ್ಯ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಈಗ ಮತದಾರರನ್ನು ನೆನಪಿಸಿಕೊಂಡಿರುವ ರಾಜಕಾರಣಿಗಳು ಸ್ವಕ್ಷೇತ್ರ ಬಿಟ್ಟು ಕದಲುತ್ತಿಲ್ಲ. ಇದರೊಂದಿಗೆ, ದಿನಕ್ಕೊಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವ ಚುನಾವಣಾ ಆಕಾಂಕ್ಷಿಗಳು ಮತದಾರರನ್ನು ಸೆಳೆಯಲು ಬೇಕಾದ ಎಲ್ಲಾ ತಂತ್ರಗಳನ್ನು ಅನುಸರಿಸುತ್ತಿದ್ದಾರೆ.
ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಯುವಜನ ಸೇವಾ ಹಾಗೂ ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ತಮ್ಮ ಕ್ಷೇತ್ರದಲ್ಲಿ ವಾರಕ್ಕೊಂದು ಬಾಡೂಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ.
ಇದನ್ನು ಓದಿ: 2023ರ ವಿಧಾನಸಭಾ ಚುನಾವಣೆ; ಅಖಾಡಕ್ಕಿಳಿದ ಸಿದ್ದರಾಮಯ್ಯ-ಕೋಲಾರದಲ್ಲಿ ಭರ್ಜರಿ ಸ್ವಾಗತ
ಇದುವರೆಗೂ ವರದಿಯಾದಂತೆ ಕಳೆದ 15 ದಿನದಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಸಾವಿರಾರು ಮಂದಿಗೆ ಬಾಡೂಟ ಹಾಕಿಸಲಾಗುತ್ತಿದೆ. ಈಗಾಗಲೇ ಸಂತೇಬಾಚಹಳ್ಳಿ, ಶೀಳನೆರೆ ಹೋಬಳಿ ವ್ಯಾಪ್ತಿಯಲ್ಲಿ ನಿರೀಕ್ಷೆಗೂ ಮೀರಿ ಜನರು ಬಾಡೂಟ ಸವಿದಿದ್ದಾರೆ ಎಂದು ವರದಿಯಾಗಿದೆ. ನೆನ್ನೆ(ಫೆಬ್ರವರಿ 08) ಬೂಕನಕೆರೆಯಲ್ಲಿ ನಡೆದ ಬಾಡೂಟ ಕಾರ್ಯಕ್ರಮದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು ಎನ್ನಲಾಗಿದೆ.
ಟನ್‌ಗಟ್ಟಲೆ ಕೋಟಿ ಮಾಂಸ, ಕುರಿ ಮಾಂಸ, ಮೀನು, ಮೊಟ್ಟೆಯ ಭರ್ಜರಿ ಬಾಡೂಟ ಸವಿಯಲು ಸುತ್ತಮುತ್ತಲಿನ ಹಳ್ಳಿಗಳ ಜನರು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ಕೆಲ ಹಳ್ಳಿಗಳಿಂದ ಜನರನ್ನು ಕರೆತರಲು ವಾಹನ ವ್ಯವಸ್ಥೆಯೂ ಮಾಡಲಾಗಿತ್ತು. ಬಾಡೂಟ ಕಾರ್ಯಕ್ರಮದೊಂದಿಗೆ ಚುನಾವಣಾ ಪ್ರಚಾರವೂ ನಡೆಯುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ನಾರಾಯಣಗೌಡರು ಜನರಿಗೆ ಮನವಿ ಮಾಡುತ್ತಿದ್ದಾರೆ.
ಬಿಜೆಪಿ ಬಿಡಲಿದ್ದಾರೆಯೇ ಕೆ ಸಿ ನಾರಾಯಣಗೌಡ!
ಈ ನಡುವೆ ಬಿಜೆಪಿ ಪಕ್ಷದಿಂದ ಸಚಿವರೂ ಆಗಿರುವ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂಬ ವಿಚಾರವೂ ಚಾಲ್ತಿಯಲ್ಲಿದ್ದು, ಕಾಂಗ್ರೆಸ್ ಸೇರ್ಪಡೆ ವಿಚಾರದಲ್ಲಿ ಮಂಡ್ಯ ಜಿಲ್ಲಾ ಕಾಂಗ್ರೆಸ್ ಪಾಳಯದಲ್ಲಿ ಪರ ವಿರೋಧಗಳು ವ್ಯಕ್ತವಾಗುತ್ತಿವೆ.
ಇದನ್ನು ಓದಿ: ಮಾರ್ಚ್ 25ಕ್ಕೆ ಮೋದಿ ಕೊನೆ ಭಾಷಣ-ನಂತರ ಚುನಾವಣೆ; ಆಯೋಗಕ್ಕೂ ಮೊದಲೇ ದಿನಾಂಕದ ಸುಳಿವು ನೀಡಿದ ಬಿಜೆಪಿ ಸಂಸದ
ಕಾಂಗ್ರೆಸ್ ಪಕ್ಷದ ಟಿಕೇಟ್ ಆಕಾಂಕ್ಷಿಗಳು ತಮ್ಮ ಬೆಂಬಲಿಗರ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸಭೆಯೊಂದರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಳ್ಳದಿರಿ ಎಂಬ ಗಲಾಟೆ ಗದ್ದಲ ನಡೆದಿದೆ.
ಗೆದ್ದಲು ಕಟ್ಟಿದ ಹುತ್ತಕ್ಕೆ ಹಾವು ಸೇರುವಂತೆ ನಾರಾಯಣಗೌಡ ಮೊದಲು ಬಿಎಸ್‌ಪಿ, ಜೆಡಿಎಸ್, ಅನಂತರ ಬಿಜೆಪಿ ಸೇರಿ ಆ ಪಕ್ಷಗಳನ್ನು ಹಾಳುಗೆಡವಿ ಇದೀಗ ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ. ಎರಡು ಅವಧಿಗೆ ತಮ್ಮನ್ನು ಶಾಸಕರನ್ನಾಗಿ ಮಾಡಿ ರಾಜಕೀಯ ಶಕ್ತಿ ನೀಡಿದ ಜೆಡಿಎಸ್ ಪಕ್ಷವನ್ನೇ ಕಾಲಿನಿಂದ ಒದ್ದವನು, ಪಕ್ಷಕ್ಕೆ ಕರೆತಂದು ಮಂತ್ರಿಯನ್ನಾಗಿ ಮಾಡಿದ ಬಿಜೆಪಿ ಪಕ್ಷವನ್ನೇ ಒದ್ದು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿರುವ ನಾರಾಯಣಗೌಡರಿಂದ ಕ್ರೇತದಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಲು ಸಾಧ್ಯವಿಲ್ಲ ಎಂದು ಕಾರ್ಯಕರ್ತರು ಪಟ್ಟು ಹಿಡಿದರು.
ಮಾರ್ಚ್ 13 ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮಂಡ್ಯ ಪಟ್ಟಣಕ್ಕೆ ಆಗಮಿಸುವ ಪ್ರಜಾಧ್ವನಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಗಲಾಟೆ ನಡೆದಿದೆ ಎಂದು ವರದಿಯಾಗಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ