ಬೆಂಗಳೂರು: ಕನಿಷ್ಠ ವೇತನ, ನಿವೃತ್ತರಿಗೆ ಪಿಂಚಣಿ ಸೇರಿದಂತೆ ಸುಮಾರು 16 ಬೇಡಿಕೆಗಳನ್ನು ಮುಂದಿಟ್ಟು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘ(ಸಿಐಟಿಯು)ದ ಸಾವಿರಾರು ಕಾರ್ಯಕರ್ತರು ಮಂಗಳವಾರ ನಗರದ ಫ್ರೀಡಂ ಪಾರ್ಕಿನಲ್ಲಿ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಅಧಿಕಾರಿಗಳು ಬೇಡಿಕೆಯನ್ನು ಅದಷ್ಟು ಬೇಗನೇ ಈಡೇರಿಸುತ್ತೇವೆ ಹಾಗಾಗಿ ಹೋರಾಟ ಕೈ ಬಿಡುವಂತೆ ಆಗ್ರಹಿಸಿದರು. ಆದರೆ ಇದಕ್ಕೆ ಒಪ್ಪದ ಹೋರಾಟಗಾರರು ತಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಸುವುದಾಗಿ ಹೇಳಿದರು.
ಗ್ರಾಮ ಪಂಚಾಯತಿ ನೌಕರರಿಗೆ ಕನಿಷ್ಠ ವೇತನವಾಗಿ ರೂ. 31,000 ವೇತನ ನೀಡಲು, ನಿವೃತ್ತರಾದ ನೌಕರರಿಗೆ ಮಾಸಿಕ ಕನಿಷ್ಠ ರೂ. 6000 ಪಿಂಚಣಿ, ಏಕಕಾಲಕ್ಕೆ ಅನುಮೋದನೆ ನೀಡಿ ಸರಕಾರಿ ನೌಕರರನ್ನಾಗಿ ಪರಿಗಣಿಸುವುದು ಸೇರಿದಂತೆ ಇನ್ನಿತರೆ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹೋರಾಟಗಾರರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಗ್ರಾಮ ಪಂಚಾಯತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ ವಸೂಲಿಗಾರ , ಕ್ಲರ್ಕ್, ಡಾಟಾ ಎಂಟ್ರಿ ಆಪರೇರ್ಟ್, ಪಂಪ್ ಆಪರೇಟರ್, ಜವಾನ, ಸ್ವಚ್ಚತಾಗಾರರನ್ನು ಏಕಕಾಲಕ್ಕೆ ಸರ್ಕಾರಿ ನೌಕರನಾಗಿ ಘೋಷಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಪ್ರತಿದಿನ 7 ತಾಸು ವಿದ್ಯುತ್ ಪೂರೈಕೆ : ಸಿಎಂ ಸಿದ್ದರಾಮಯ್ಯ
ಧರಣಿಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ್ದ ಅಧಿಕಾರಿಗಳು ಬೇಡಿಕೆಯ ಬಗ್ಗೆ ಸಚಿವರ ಜೊತೆಗೆ ಚರ್ಚಿಸಿದ್ದಾಗಿ ಹೇಳಿ, ಹೋರಾಟ ಕೈಬಿಡುವಂತೆ ಹೋರಾಟಗಾರರಿಗೆ ಮನವಿ ಮಾಡಿದರು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಸಂಘದ ನಾಯಕರು, ಬೇಡಿಕೆಯನ್ನು ಈಡೇರಿಸದೆ, ಬೇಡಿಕೆ ಬಗ್ಗೆಗಿನ ಆದೇಶ ಪತ್ರ ನಮ್ಮ ಕೈಸೇರದೆ ಹೋರಾಟ ಕೈಬಿಡುವುದಿಲ್ಲ ಎಂದು ಖಡಕ್ ಆಗಿ ವೇದಿಕೆಯಲ್ಲೆ ಹೇಳಿದರು. ಈ ವೇಳೆ ಹೋರಾಟ ಸ್ಥಳದಲ್ಲಿ ತುಸು ಗೊಂದಲದ ವಾತಾವರಣ ಕೂಡಾ ನಿರ್ಮಾಣವಾಯಿತು.
ಹೋರಾಟದ ಬಗ್ಗೆ ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡಿದ ಸಂಘದ ರಾಜ್ಯ ಅಧ್ಯಕ್ಷರಾದ ಮಂಟನಗೌಡ ಅವರು, “ದಿನನಿತ್ಯ ಬಳಸುವ ವಸ್ತುಗಳ ಬೆಲೆ ಗಗನಕ್ಕೆ ಏರಿಕೆಗೆ ಅನುಗುಣವಾಗಿ ಕನಿಷ್ಟ ವೇತನ 31 ಸಾವಿರ ರೂ ನಿಗದಿಗೊಳ್ಳಿಸಬೇಕು. ಗ್ರಾಮ ಪಂಚಾಯತಿಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾದ ನೌಕರಿಗೆ ಪಿಂಚಣಿ ನೀಡಬೇಕಿದೆ. ಒಂದು ವೇಳೆ ಅವರು ಕರ್ತವ್ಯದ ವೇಳೆ ಮರಣ ಹೊಂದಿದರೆ ಅವರ ಕುಟುಂಬಿಕರಿಗೆ ಅನುಕಂಪದ ಆಧಾರದಲ್ಲಿ ನೌಕರಿ ಒದಗಿಸಬೇಕು. ಗ್ರಾಮ ಪಂಚಾಯತಿಗಳಲ್ಲಿ ಕಾರ್ಯ ನಿರ್ವಹಿಸುವ ನೌಕರರಿಗೆ ವರ್ಗಾವಣೆ ಅವಕಾಶ ನೀಡಬೇಕು” ಎಂದು ಹೇಳಿದರು. ಪಂಚಾಯತಿ ನೌಕರ
ಇದನ್ನೂ ಓದಿ: ಕ್ಷೇತ್ರಕ್ಕೆ ನೀರು ಬರದಿದ್ದರೆ ನಾಳೆಯೇ ರಾಜೀನಾಮೆ, ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಕಾಂಗ್ರೆಸ್ ಶಾಸಕ
“ಆದಾಯಕ್ಕೆ ಅನುಗುಣವಾಗಿ ಕರ ವಸೂಲಿಗಾರರ ಹುದ್ದೆಗಳನ್ನು ನಿಗದಿಗೂಳಿಸಬೇಕು. ಪ್ರತಿಯೊಂದು ಗ್ರಾಮ ಪಂಚಾಯತಿಗಳಿಗೆ ಲೆಕ್ಕ ಸಹಾಯಕ ಹುದ್ದೆ ಸೃಷ್ಟಿಸಬೇಕು, ಸೇವಾ ಹಿರಿತನ ಪರಿಗಣಿಸಿ ವೇತನ ಹೆಚ್ಚಿಳ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕಿದೆ. ಈಗಾಗಲೆ ಅಧಿಕಾರಿಗಳು ಬಂದು ಒಳ್ಳೆಯ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಒಂದು ವೇಳೆ ನಾಳೆಯ ಒಳಗೆ ತೀರ್ಮಾನಕ್ಕೆ ಬರದಿದ್ದರೆ, ನಾವು ಬೀದಿಗೆ ಇಳಿಯಲಿದ್ದೇವೆ. ಇಲಾಖೆಗಳನ್ನು ಮುತ್ತಿಗೆ ಹಾಕಲಿದ್ದೇವೆ” ಎಂದು ಮಂಟನಗೌಡ ಅವರು ಹೇಳಿದರು.
ಧರಣಿಯಲ್ಲಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಗ್ರಾಮ ಪಂಚಾಯತಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ. ರಾಮಕೃಷ್ಣ, ರಾಜ್ಯ ನಾಯಕರಾದ ಆರ್.ಎಸ್. ಬಸವರಾಜ, ಗೋಪಾಲಕೃಷ್ಣ ಅರಳಹಳ್ಳಿ, ಬಿ. ಐ. ಈಳಗೇರ ಸೇರಿದಂತೆ ಹಲವಾರು ನಾಯಕರು ಭಾಗವಹಿಸಿದ್ದರು.
ವಿಡಿಯೊ ನೋಡಿ: ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಿಸಿಡಿದೆದ್ದ ಗ್ರಾಮ ಪಂಚಾಯಿತಿ ನೌಕರರು