ಚಂಡೀಗಢ: ಚಂಡೀಗಢ ವಿಶ್ವವಿದ್ಯಾಲಯದ ಬಾಲಕಿಯರ ಹಾಸ್ಟೆಲ್ ವಿದ್ಯಾರ್ಥಿನೀಯರ ಖಾಸಗಿ ವಿಡಿಯೋಗಳು ಸೋರಿಕೆಯಾಗಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ನಡೆಸಿದ ಬೃಹತ್ ಪ್ರತಿಭಟನೆ ಕೈಗೊಂಡಿದ್ದರು. ವಿದ್ಯಾರ್ಥಿನೀಯರ ಸ್ನಾನ ಗೃಹದ ವಿಡಿಯೋ ಹಂಚಿಕೆಯಾಗಿದೆ. ವಿದ್ಯಾರ್ಥಿನೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವನ್ನು ಐದು ದಿನ ಅಂದರೆ, ಸೆಪ್ಟಂಬರ್ 24ರವರೆಗೆ ಬಂದ್ ಮಾಡಲಾಗಿದೆ.
ಚಂಡೀಗಢ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೊಬ್ಬಳು ಯುವತಿಯರ ಸ್ನಾನದ ವಿಡಿಯೋ ಮಾಡಿಕೊಂಡು ಹೊರಗಿನ ಪುರುಷರಿಗೆ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪಂಜಾಬ್ನ ಮೊಹಾಲಿಯಲ್ಲಿರುವ ಚಂಡೀಗಢ ವಿಶ್ವವಿದ್ಯಾನಿಲಯದಲ್ಲಿ ಘಟನೆ ನಡೆದಿದೆ.
ನೂರಾರು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆವರಣ ಮತ್ತು ಲೂಧಿಯಾನ-ಚಂಡೀಗಢ ಹೆದ್ದಾರಿಯಲ್ಲಿ ತಡರಾತ್ರಿ ಪ್ರತಿಭಟನೆ ನಡೆಸಿದರು. ಸ್ನಾನ ಮಾಡುವಾಗ 60 ವಿದ್ಯಾರ್ಥಿನಿಯರ ವಿಡಿಯೋಗಳನ್ನು ಆರೋಪಿ ಚಿತ್ರೀಕರಿಸಿದ್ದಾಳೆ. ಬಳಿಕ ಆ ವೀಡಿಯೊವನ್ನು ಅಂತರ್ಜಾಲದಲ್ಲಿ ಬಿಡುಗಡೆ ಮಾಡಲಾಗಿದೆ. ಇದಾದ ಬಳಿಕ 8 ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದ್ದು, ಅವರನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಭಾನುವಾರ ತಡರಾತ್ರಿಯವರೆಗೂ ಪ್ರತಿಭಟನೆ ಮುಂದುವರೆದಿತ್ತು. ಜಿಲ್ಲಾಡಳಿತ, ಪೊಲೀಸ್ ಮತ್ತು ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದರು.
ಪ್ರಾಥಮಿಕ ತನಿಖೆಯ ನಂತರ, ಪೊಲೀಸರು ಆರೋಪಿ ವಿದ್ಯಾರ್ಥಿನಿ ಹಣಕ್ಕಾಗಿ ಬೇಡಿಕೆಯಿಡುತ್ತಿದ್ದಳು, ಆಕೆಯನ್ನು ಈಗಾಗಲೇ ಬಂಧಿಸಲಾಗಿದೆ. ಆಕೆ 23 ವರ್ಷದ ತನ್ನ ಪ್ರಿಯಕರನಿಗೆ ಆ ವಿಡಿಯೋಗಳನ್ನು ಕಳುಹಿಸಿದ್ದಳು ಎನ್ನಲಾಗಿದೆ. ಹಿಮಾಚಲ ಪ್ರದೇಶದಲ್ಲಿ ಆತನನ್ನು ಬಂಧಿಸಿ ಪಂಜಾಬ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಮಾಚಲ ಪೊಲೀಸರು ಮತ್ತೊಬ್ಬ 31 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಪ್ರಕರಣ ಬೆಳಕಿಗೆ ಬಂದಾಗಿನಿಂದ ವಿದ್ಯಾರ್ಥಿನೀಯರು ವಿವಿ ವಸತಿ ನಿಲಯವನ್ನು ತೊರೆದು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.
ಆರೋಪದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಭಗವಂತ್ ಮಾನ್ ತನಿಖೆಗೆ ಆದೇಶಿಸಿದ್ದಾರೆ.
ಪಂಜಾಬ್ ಶಿಕ್ಷಣ ಸಚಿವರು ವಿದ್ಯಾರ್ಥಿಗಳು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. “ನಾನು ಚಂಡೀಗಢ ವಿಶ್ವವಿದ್ಯಾನಿಲಯದ ಎಲ್ಲಾ ವಿದ್ಯಾರ್ಥಿಗಳನ್ನು ಶಾಂತ ಕಾಪಾಡುವಂತೆ ವಿನಂತಿಸಿಕೊಳ್ಳುತ್ತೇನೆ. ಯಾವುದೇ ತಪ್ಪಿತಸ್ಥರನ್ನು ಬಿಡುವುದಿಲ್ಲ. ಇದು ಅತ್ಯಂತ ಸೂಕ್ಷ್ಮ ವಿಷಯ. ಇದು ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳ ಘನತೆಗೆ ಸಂಬಂಧಿಸಿದೆ. ಮಾಧ್ಯಮ ಸೇರಿದಂತೆ ನಾವೆಲ್ಲರೂ ತುಂಬಾ ಜಾಗರೂಕರಾಗಿರಬೇಕು ಎಂದು ಟ್ವೀಟ್ ಮಾಡಿದ್ದಾರೆ.