60 ಅಂತಸ್ತಿನ ಕಟ್ಟಡದ ಮಹಡಿವೊಂದರಲ್ಲಿ ಬೆಂಕಿ ಅವಘಡ: ಒಬ್ಬ ಸಾವು-26 ಜನರ ರಕ್ಷಣೆ

ಮುಂಬೈ: ಮಹಾರಾಷ್ಟ್ರ ರಾಜ್ಯದ ಮುಂಬೈನಲ್ಲಿ ಕಟ್ಟಡವೊಂದರಲ್ಲಿ ಬೆಂಕಿ ಅವಘಡದಿಂದಾಗಿ ಆತಂಕ ಸೃಷ್ಠಿಯಾಗಿದೆ. ಬೆಂಕಿ ಅವಘಡದಿಂದ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಈಗಾಗಲೇ 26 ಜನರನ್ನು ರಕ್ಷಿಸಲಾಗಿದ್ದು, ಇನ್ನು ಕೆಲವರು ಸಿಲುಕಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಸೆಂಟ್ರಲ್ ಮುಂಬೈನ ಮಾಧವ್ ಪಾಲವ್ ಮಾರ್ಗದಲ್ಲಿರುವ ಅವಿಘ್ನ ಪಾರ್ಕ್ ನಲ್ಲಿರುವ 60 ಅಂತಸ್ತಿನ ಕಟ್ಟಡದ 19ನೇ ಮಹಡಿಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದು, ಅಗ್ನಿಶಾಮಕ ದಳದ ವಾಹನಗಳು ಆಗಮಿಸಿ, ಬೆಂಕಿ ನಂದಿಸುವ ಪ್ರಯತ್ನದಲ್ಲಿವೆ.

ಬೆಂಕಿ ಹೊತ್ತಿಕೊಂಡಿರುವ ಫ್ಲಾಟ್​ನ ಕಿಟಕಿಯಿಂದ ಬಚಾವಾಗಲು ಪ್ರಯತ್ನಿಸಿದ ವ್ಯಕ್ತಿಯೊಬ್ಬ ಮೇಲಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.  ಕಟ್ಟಡದೊಳಗೆ ಕುಟುಂಬಗಳು ವಾಸವಾಗಿದ್ದಾರೆ. ಹೀಗಾಗಿ, ಬೆಂಕಿ ಹೊತ್ತಿಕೊಂಡ ಕಟ್ಟಡದೊಳಗೆ ಸಾಕಷ್ಟು ಜನರು ಸಿಲುಕಿರುವ ಸಾಧ್ಯತೆಯಿದೆ ಎನ್ನಲಾಗಿದೆ.

ಬೆಂಕಿಯ ತೀವ್ರತೆಯಿಂದಾಗಿ ಕಟ್ಟಡದ 17ರಿಂದ 25ನೇ ಮಹಡಿಯವರೆಗೂ ಬೆಂಕಿ ವ್ಯಾಪಿಸಿದೆ. ಕಟ್ಟಡದ ಮೇಲಿಂದ ಬಿದ್ದು ಸಾವನನ್ಪ್ಪಿದ ವ್ಯಕ್ತಿಯನ್ನು 30 ವರ್ಷದ ಅರುಣ್​ ತಿವಾರಿ ಎಂದು ಗುರುತಿಸಲಾಗಿದೆ.

ಬೆಂಕಿ ನಂದಿಸಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, 14 ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. ಈಗಾಗಲೇ 26 ಜನರನ್ನು ರಕ್ಷಿಸಲಾಗಿದೆ. ಮೇಯರ್ ಸೇರಿದಂತೆ ಬಿಎಂಸಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ  ನಡೆಸಿದ್ದಾರೆ. ಬೆಂಕಿಯನ್ನು ಆರಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಈ ಅಗ್ನಿ ಅವಘಡದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಬಿಎಂಸಿ ಮುಖ್ಯಸ್ಥ ಇಕ್ಬಾಲ್ ಸಿಂಗ್ ಚಹಾಲ್ ಆದೇಶ ನೀಡಿದ್ದಾರೆ. ಕಟ್ಟಡದ ನಿವಾಸಿಗಳ ಪ್ರಕಾರ ಕಟ್ಟಡದಲ್ಲಿ ಎಲ್ಲ ರೀತಿಯ ಬೆಂಕಿ ಸುರಕ್ಷತಾ ಸಾಧನಗಳನ್ನು ಅಳವಡಿಸಲಾಗಿದ್ದರೂ ಸಹ, ಬೆಂಕಿ ದುರಂತ ಸಂಭವಿಸಿದೆ ಎಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *