ಬೆಂಗಳೂರು : ರೈತ ನಾಯಕ ಹಾಗೂ ಹಿರಿಯ ಸಿಪಿಐಎಂ ಮುಖಂಡ ಮಾರುತಿ ಮಾನ್ಪಡೆಯವರು ಇಂದು ಬೆಳಗ್ಗೆ 9;30 ಕ್ಕೆ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು, ಅವರು ಕಳೆದ 15 ದಿನಗಳಿಂದ ಕೋವೀಡ್ ಸೋಂಕಿನಿಂದ ಬಳಲುತ್ತಿದ್ದರು. ಸೊಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ. ಮಾನ್ಪಡೆಯವರ ಅಂತ್ಯಕ್ರೀಯೆ ಅವರ ಸ್ವ ಗ್ರಾಮ ಕಲಬುರ್ಗಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಶೋಷಿತ ಸಮುದಾಯದಿಂದ ಬಂದ ಮಾನ್ಪಡೆಯವರು ರೈತ ಕಾರ್ಮಿಕ ಚಳುವಳಿಯ ಪ್ರಖರ ಮುಂದಾಳಾಗಿ ಗುರುತಿಸಿಕೊಂಡಿದ್ದರು. ಅವರ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.
ಸರಕಾರಿ ಹುದ್ದೆಯನ್ನು ತೊರೆದು 1981-82 ರಲ್ಲಿ ಜನಪರ ಚಳುವಳಿಗೆ ಧುಮುಕಿದ್ದ ಮಾನ್ಪಡೆಯವರು ರೈತ ಚಳುವಳಿಯ ಮೂಲಕ ಎಲ್ಲರಿಗೂ ಚಿರಪರಿಚಿತರಾದವರು. ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷರಾಗಿದ್ದ ಮಾನ್ಪಡೆಯವರು ನಾಡಿನ ತುಂಬೆಲ್ಲ ರೈತಚಳುವಳಿಯನ್ನು ಪ್ರಖರಗೊಳಿಸಿದ್ದವರಲ್ಲಿ ಪ್ರಮುಖರಾಗಿದ್ದಾರೆ. ಮಾರ್ಕ್ಸ್ವಾದಿ ಕಮ್ಯೂನಿಷ್ಟ ಪಕ್ಷದ ರಾಜ್ಯಕಾರ್ಯದರ್ಶಿ ಮಂಡಳಿಯವರೆಗೆ ಅವರು ಸೇವೆಯನ್ನು ಸಲ್ಲಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯರಾಗುವ ಮೂಲಕ ರಾಜಕೀಯ ಆರಂಭಿಸಿದ್ದ ಮಾನ್ಪಡೆಯವರು ಕಲಬುರ್ಗಿ ಗ್ರಾಮೀಣ (ಕಮಲಾಪುರ) ಮೀಸಲು ಕ್ಷೇತ್ರದಲ್ಲಿ ಸಿಪಿಐಎಂ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ರೈತ ಚಳುವಳಿಯ ಜೊತೆ ಗ್ರಾಮ ಪಂಚಾಯತಿ, ಅಂಗನವಾಡಿ ನೌಕರರನ್ನು ಸಂಘಟನೆಗಳನ್ನು ಕ್ರೀಯಾಶೀಲಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ದಲಿತ ಹಕ್ಕುಗಳ ಸಮಿತಿಯ ಮೂಲಕ ದಲಿತರ ಸಂಕಷ್ಟಗಳಿಗೆ ಧ್ವನಿಯಾಗಿದ್ದರು. ಅಲ್ಪಸಂಖ್ಯಾತ ನಾಯಕರ ಜೊತೆ ನಿಕಟ ಸಂಪರ್ಕ ಹೊಂದಿದ್ದ ಮಾನ್ಪಡೆಯವರು ಕಲಬುರ್ಗಿಯಲ್ಲಿ ಹಲವಾರು ಸೌಹಾರ್ಧ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಮುನ್ನುಗ್ಗುವ ಸ್ವಭಾವದವರಾಗಿದ್ದ ಮಾನ್ಪಡೆಯವರು ಅನೇಕ ಸಂಘರ್ಷಾತ್ಮಕ ಹೋರಾಟಗಳ ಮೂಲಕ ಬಡವರು ಮತ್ತು ಶೋಷಿತರಿಗೆ ನ್ಯಾಯವನ್ನು ಕೊಡಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು. ಜನಶಕ್ತಿ ಮೀಡಿಯಾ ಒಂದು ಪ್ರಭಲ ಮಾಧ್ಯಮವಾಗಿ ಬೆಳೆಯಬೇಕು ಎಂಬ ಆಶಯವನ್ನು ಹೊಂದಿದ್ದ ಮಾನ್ಪಡೆಯವರಿಗೆ ಜನಶಕ್ತಿ ಮೀಡಿಯಾ ಸಂತಾಪಗಳನ್ನು ಸಲ್ಲಿಸುತ್ತಿದೆ.