ರಾಯಚೂರು: ಕೇಂದ್ರ ಸರ್ಕಾರವು ಎಪಿಎಂಸಿ ಮಾರುಕಟ್ಟೆ ಶುಲ್ಕ ಹೆಚ್ಚಳ ಮಾಡಿರುವ ಹಿನ್ನಲೆಯಲ್ಲಿ ಡಿ.೨೧ ರಂದು ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಹತ್ತಿ ಖರೀದಿಯನ್ನು ಸ್ಥಗಿತಗೊಳಿಸಲಾಗುವುದು ಎಂದು ರಾಯಚೂರು ಫ್ಯಾಕ್ಟರಿ ಮಾಲಿಕರ ಸಂಘದ ಅಧ್ಯಕ್ಷ ವಿ.ಲಕ್ಷ್ಮಿ ರೆಡ್ಡಿ ತಿಳಿಸಿದ್ದಾರೆ.
ಅವರಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ, ರಾಜ್ಯ ಸರ್ಕಾರ ಈಚೆಗೆ ಎಪಿಎಂಸಿ ಮಾರುಕಟ್ಟೆಯ ಪ್ರಾಂಗಣದಲ್ಲಿ ನಡೆಯುವ ವ್ಯಾಪಾರ ವಹಿವಾಟುಗಳ ಮೇಲೆ ಮಾರುಕಟ್ಟೆ ಶುಲ್ಕವನ್ನು ಏಕಾಏಕಿ ಶೇ 0.35 ರಿಂದ ಶೇ 1 ಕ್ಕೆ ಹೆಚ್ಚಳ ಮಾಡಿರುವುದು ಸರಿಯಲ್ಲ. ಮಾರುಕಟ್ಟೆ ಶುಲ್ಕ ಹೆಚ್ಚಳದಿಂದ ನೇರವಾಗಿ ರೈತರ ಮೇಲೆ ಹಾಗೂ ಪರೋಕ್ಷವಾಗಿ ವ್ಯಾಪಾರಸ್ಥರ ಮೇಲೆ ಹೊರೆಯಾಗುತ್ತಿದೆ. ಎಲ್ಲಾ ವ್ಯಾಪಾರ ವಹಿವಾಟುಗಳ ಬಂಡವಾಳಶಾಹಿಗಳ ಕಪಿಮುಷ್ಟಿಯಲ್ಲಿದ್ದು, ಇದರಿಂದ ರೈತರಿಗೆ ಸ್ಪರ್ಧಾತ್ಮಕ ಬೆಲೆ ದೊರಕದಂತಾಗಿದೆ ಎಂದರು.
ಈಗಾಗಲೇ ಕಲಬುರ್ಗಿ, ಬೀದರ್, ವಿಜಯಪುರ, ಗದಗ ಹಾಗೂ ಇನ್ನಿತರ ಎಪಿಎಂಸಿ ವ್ಯಾಪಾರ ವಹಿವಾಟು ಗಳನ್ನು ವ್ಯಾಪಾರಸ್ಥರು ಬಂದ್ ಮಾಡಿ ಅನಿರ್ದಿಷ್ಟಾವಧಿವರೆಗೆ ಪ್ರತಿಭಟನೆಗೆ ಮುಂದಾಗಿದ್ದು ಸೋಮವಾರ ಜಿಲ್ಲೆಯ ಎಲ್ಲಾ ಹತ್ತಿ ವ್ಯಾಪಾರಸ್ಥರು ಹಾಗೂ ಕೈಗಾರಿಕೋದ್ಯಮಿಗಳು ವ್ಯಾಪಾರ ವಹಿವಾಟುಗಳನ್ನು ಎಪಿಎಂಸಿ ಮಾರುಕಟ್ಟೆ ಹಾಗೂ ಹೊರಗಡೆ ವ್ಯಾಪಾರ ಬಂದ್ ಮಾಡಲಿದ್ದಾರೆ ಎಂದು ಲಕ್ಷ್ಮೀ ರೆಡ್ಡಿ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಶ್ರೇಣಿಕ್ ಸೇಠ್, ಗೌರವ ಕಾರ್ಯದರ್ಶಿ ಶೈಲೇಶ ಕುಮಾರ ಧೋಕಾ, ನಾರಾಯಣ ಲೋಹಟಿ ಇದ್ದರು.