ಜನವರಿ 2: ಸಫ್ದರ್ ಹಶ್ಮಿ ಹುತಾತ್ಮರಾದ ದಿನ

ಐಕೆ ಬೊಳುವಾರು
1989ರ ಜನವರಿ 1ರಂದು ಜನ ನಾಟ್ಯ ಮಂಚ ದೆಹಲಿಯ ಕಲಾವಿದ ಸಫ್ದರ್ ಹಶ್ಮಿ ನಾಟಕ ಮಾಡುತ್ತಿರುವಾಗಲೇ ಅವರ ಮೇಲೆ ಗೂಂಡಾಗಳು ಧಾಳಿ ಮಾಡುತ್ತಾರೆ. ಜನವರಿ 2 ರಂದು ಸಫ್ದರ್ ಹಶ್ಮಿಯವರ ಪ್ರಾಣ ಇನ್ನಿಲ್ಲವಾಗಿ ಅವರು ಹುತಾತ್ಮರೆನಿಸುತ್ತಾರೆ.

ಜನ ನಾಟ್ಯ ಮಂಚದ ಸಫ್ದರ್ ಹಶ್ಮಿಯನ್ನು ನೆನಪಿಸಿಕೊಳ್ಳಬೇಕಾದ ದಿನ ಇದು. ಪ್ರತಿರೋಧ ರಂಗ ಚಳುವಳಿಯ ಪ್ರಮುಖ ರಂಗಸಂಸ್ಥೆ ಜನ ನಾಟ್ಯ ಮಂಚ ದೆಹಲಿ. ಪ್ರಾರಂಭಗೊಂಡು ಐವತ್ತು ವರ್ಷಗಳು ಕಳೆದಿವೆ. ಜನ ನಾಟ್ಯ ಮಂಚದ ಆರಂಭಕ್ಕೆ ಕಾರಣರಾದ ಸಫ್ಧರ್ ಹಶ್ಮಿ ನಾಟಕ ಪ್ರದರ್ಶನ ನೀಡುತ್ತಿದ್ದಾಗಲೇ ರಾಜಕೀಯ ಗೂಂಡಾಗಳ ಧಾಳಿಗೆ ಒಳಗಾಗಿ ಮೃತ್ಯುವಿಗೆ ಬಲಿಯಾಗುತ್ತಾರೆ.

ಈ ಘಟನೆ ನಡೆದ 48 ಗಂಟೆಗಳ ಒಳಗಾಗಿ ಸಫ್ದರ್ ಪತ್ನಿ ಮಾಲಾಯ್ ಶ್ರೀ ಹಶ್ಮಿ ಮುಂದಾಳುತನದಲ್ಲಿ ಜಂಡಾನಗರದ ಅದೇ ಸ್ಥಳದಲ್ಲಿ ಅದೇ ಕಲಾವಿದರು ಹಲ್ಲಾ ಬೋಲ್ ನಾಟಕವನ್ನು ಮುನ್ನಡೆಸುತ್ತಾರೆ. ಈ ಬಗೆಯ ಪ್ರತಿರೋಧ ಭಾರತದ ಬೀದಿನಾಟಕದ ಇತಿಹಾಸದಲ್ಲಿಯೇ ಮೊದಲನೆಯದು ಎಂಬುದಾಗಿ ದಾಖಲಾಗುತ್ತದೆ.

ಇದನ್ನೂ ಓದಿ: ಧಾರವಾಡ: ತಿನ್ನಲು ಕಡ್ಲೆ ಗಿಡ ಕಿತ್ತಿದ್ದಕ್ಕೆ ನಾಲ್ವರು ದಲಿತ ಹುಡುಗರ ಮೇಲೆ ಹಲ್ಲೆ

ಇದೀಗ ಸಫ್ಧರ್ ಹಶ್ಮಿಯವರು ಇಲ್ಲವಾಗಿ 35 ವರ್ಷಗಳು ಕಳೆದರೂ ದೆಹಲಿಯ ಜನ ನಾಟ್ಯ ಮಂಚ ಮತ್ತಷ್ಟು ಸಕ್ರಿಯವಾಗಿ ಬೀದಿ ನಾಟಕಗಳ ಮೂಲಕ ಸಮಾಜದ ಓರೆ-ಕೋರೆಗಳಿಗೆ ತನ್ನ ಪ್ರತಿಕ್ರಿಯೆ ನೀಡುತ್ತಿದೆ.

ಬೀದಿ ನಾಟಕದ ವ್ಯಾಕರಣ

ನಮ್ಮಲ್ಲಿ ಎಷ್ಟು ಜನ ಬೀದಿ ನಾಟಕದ ನಿರ್ದಿಷ್ಟ ವ್ಯಾಕರಣ ಮತ್ತು ಭಾಷೆಯನ್ನು ಶೋಧಿಸಲು ಬೆಳೆಸಲು ಪ್ರಯತ್ನಿಸಿದ್ದೇವೆ? ನಮ್ಮಲ್ಲಿ ಎಷ್ಟು ಜನ ನಮ್ಮನ್ನೇ ತರಬೇತುಗೊಳಿಸಿಕೊಳ್ಳುವ ಬೀದಿ ನಾಟಕದ ಸ್ವರೂಪ ಮತ್ತು ಅಗತ್ಯಕ್ಕೆ ಸಂಬಂಧಿಸಿದ ಸತತ ಪ್ರಯತ್ನಗಳನ್ನು ಮಾಡಿದ್ದೇವೆ? ನಮ್ಮಲ್ಲಿ ಎಷ್ಟು ಜನ ಬೀದಿ ನಾಟಕದ ಪರಂಪರೆಯನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ್ದಾರೆ? ನನಗೆ ತಿಳಿದಂತೆ ಹೆಚ್ಚು ಜನ ಇಲ್ಲ.

ನಮ್ಮ ನಾಟಕಗಳು ನಾಜೂಕಿಲ್ಲದ ಕಳಪೆ ಮತ್ತು ಶುದ್ಧ ಮನರಂಜನೆ ನೀಡದ ಹಳಸಲು ಆಗಿದೆ. ನಾವು ಹಾಡಿದಾಗ ಶೃತಿ ತಪ್ಪುತ್ತೇವೆ. ನರ್ತಿಸುವಾಗ ತಾಳ ತಪ್ಪುತ್ತೇವೆ.ನಾವು ಮಾತನಾಡಿದರೆ ನಮ್ಮ ಧ್ವನಿ ಬೀದಿ ಗದ್ದಲ ದಾಟಿ ಜನರನ್ನು ತಲುಪುವುದಿಲ್ಲ. ನಾವು ಆರಿಸುವ ಸಂದರ್ಭಗಳು ಚರ್ವಿತ ಚರ್ವಣ – ಒಂದೇ ತೆರನಾದದ್ದು. ನಮ್ಮ ಹಾಸ್ಯ ಕೂಡ ಹಾಸ್ಯಾಸ್ಪದವೇ ಆಗಿದೆ. ನಮ್ಮ ಕೆಲಸದಲ್ಲಿ ಗೊತ್ತು ಗುರಿ ಇಲ್ಲದ ಹಂಗಾಮಿತನದ ಪ್ರವೃತ್ತಿ ಇದೆ. ಯಾರು ಬೇಕಾದರೂ ಬೀದಿ ನಾಟಕ ಆಡಬಹುದು ಎಂಬ ಭಾವನೆ ಇದೆ. ಅಭ್ಯಾಸ- ತರಬೇತಿ -ಶಿಸ್ತು ಬೇಕಾಗಿರುವುದಿಲ್ಲ. ಇದು ಅಪಾಯಕಾರಿ. ಮಾನಸಿಕವಾಗಿ ಮತ್ತು ದೈಹಿಕವಾಗಿ ಶ್ರಮ ವಹಿಸಿ ತರಬೇತಿಗೊಳ್ಳದಿದ್ದರೆ ಅವರಿಗೆ ಬೀದಿ ನಾಟಕದಲ್ಲಿ ಸ್ಥಳವಿಲ್ಲ. ಸ್ವಾಭಾವಿಕ ಪ್ರತಿಭೆ ಇಲ್ಲದೆ ಅಥವಾ ಪ್ರತಿಭೆಯನ್ನು ಬೆಳೆಸಿಕೊಳ್ಳುವ ಹಂಬಲವಿಲ್ಲದೆ ಇದಕ್ಕೆ ಧುಮುಕುವವರು ಬೀದಿ ನಾಟಕ ಸ್ವಭಾವತ ಕಲಾತ್ಮಕ ಅಲ್ಲ ಎಂದು ಟೀಕಿಸುವವರಿಗಿಂತ ಹೆಚ್ಚು ಅಪಾಯಕಾರಿಯಾಗಿರುತ್ತಾರೆ.

2020 ರಲ್ಲಿ ಪ್ರಕಟವಾದ ಜನ ನಾಟ್ಯ ಮಂಚ್ ದೆಹಲಿಯ ನಟ- ಲೇಖಕ ಸುಧನ್ವ ದೇಶಪಾಂಡೆ ತನ್ನ HALLA BOL-The death and life of Safdar Hashmi ಇಂಗ್ಲಿಷ್ ಕೃತಿಯಲ್ಲಿ ಹಶ್ಮಿಯವರ ಬೀದಿ ನಾಟಕದ ಚಿಂತನೆಗಳ ಕುರಿತಾಗಿ ಮಾತನಾಡುವಾಗ ಮೇಲಿನ ಮಾತುಗಳನ್ನು ಉಲ್ಲೇಖಿಸುತ್ತಾರೆ.

ಸುಧನ್ವ ದೇಶಪಾಂಡೆ ಬರೆದ ಸಫ್ದರ್ ಹಶ್ಮಿಯವರ ಸಾವು ಮತ್ತು ಬದುಕಿನ ಕುರಿತಾಗಿ ಬರೆದ ಹಲ್ಲಾ ಬೋಲ್ ಕೃತಿಯನ್ನು ಸಂಗಾತಿ ಎಂಜಿ ವೆಂಕಟೇಶ್ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ್ದಾರೆ.

[2020ರಲ್ಲಿ ಪ್ರಥಮ ಮುದ್ರಣ ಕಂಡಿರುವ ಈ ಪುಸ್ತಕದ ವಿತರಕರು ಕ್ರಿಯಾ ಮಾಧ್ಯಮ ಪ್ರೈವೇಟ್ ಲಿಮಿಟೆಡ್ ನಾಲ್ಕನೇ ಅಡ್ಡರಸ್ತೆ ಮಹಾಲಕ್ಷ್ಮಿ ಬಡಾವಣೆ ಬೆಂಗಳೂರು 560086, ಫೋನ್ -90360 82005 ]

ಎಂಜಿ ವೆಂಕಟೇಶ್ ಅವರ ಕನ್ನಡ ಅನುವಾದ ಪುಸ್ತಕಕ್ಕೆ ಮುನ್ನುಡಿ ಬರೆದಿರುವ ಲೇಖಕ ಬೊಳುವಾರು ಮಹಮದ್ ಕುಂಞಿ ಹೇಳಿರುವ ಎರಡು ಸಾಲುಗಳನ್ನು ಗಮನಿಸಿ.

ಸಫ್ದರ್ ಎಂಬ ಹೆಸರಲ್ಲಿ ಓಡಾಡುತ್ತಿದ್ದ ರಸ್ತೆಯ ಬದಿಯ ಗಾಡಿಗಳ ಎದುರು ಚಹಾ ಹೀರುತ್ತಿದ್ದ ಪಕ್ಕದ ಗಲ್ಲಿಯಲ್ಲಿ ಕಾಣ ಸಿಕ್ಕಿದವರನ್ನು ಗಟ್ಟಿ ಧ್ವನಿಯಲ್ಲಿ ಮುಟ್ಟಿ ಮಾತನಾಡಿಸುತ್ತಿದ್ದ ಮನುಷ್ಯನೊಬ್ಬನ ಕೆಂಪು ರಕ್ತವನ್ನು ನಡುಬೀದಿಯಲ್ಲಿ ಚೆಲ್ಲಿದ ದೇಶ ನಮ್ಮದು. ಆದರೆ ದೇಹದೊಂದಿಗೆ ಸಫ್ದರ್ ಕೂಡಾ ಸತ್ತು ಹೋಗಬಹುದು ಎಂದು ನಂಬಿದ್ದ ಕೊಲೆಗಾರರಿಗೆ ಸಹಜವಾಗಿ ನಿರಾಸೆಯಾಗಿದೆ. ಸಿಟ್ಟು ಬಂದಿದೆ . ಸಫ್ದರ್ ಚಿಂತನೆಗಳನ್ನು ಮತ್ತೊಮ್ಮೆ ಕೊಲ್ಲುವ ಸಲುವಾಗಿ ಸುಳ್ಳು ಸುಳ್ಳು ಕಾರಣಗಳನ್ನು ಸೃಷ್ಟಿಸಲಾಗುತ್ತಿದೆ. ಇಂತಹ ಹೊತ್ತಲ್ಲಿ ಒಂದಷ್ಟು ಹೊತ್ತಾದರೂ ಮನುಷ್ಯರಾಗುವಂತೆ ನಮ್ಮನ್ನು ಒತ್ತಾಯಿಸುವ ಈ ನೋವಿನ ಕೃತಿಯನ್ನು ಕನ್ನಡಕ್ಕೆ ಪರಿಚಯಿಸುತ್ತಿರುವ ಸಮುದಾಯದ ಎಂಜಿ ವೆಂಕಟೇಶ್ ಅವರ ಹತ್ತಿರದ ಸಂಗಾತಿಗಳಲ್ಲಿ ನಾನೂ ಒಬ್ಬ ಎಂಬುದು ನನಗೂ ಹೆಮ್ಮೆಯ ಸಂಗತಿ.

ಈ ಪುಸ್ತಕದ ಒಂದು ಅಧ್ಯಾಯದಲ್ಲಿ ಸಫ್ದರ್ ಹಶ್ಮಿ ಪತ್ನಿ ಮಾಲಾಯ್ ಶ್ರೀ ಹಶ್ಮಿ ತಾವು ನೋಡಿರುವ ಅತ್ಯುತ್ಕೃಷ್ಟ ಬೀದಿ ನಾಟಕ ಪೆಬೆತ್ ನ್ನು ಭೋಪಾಲಿನಲ್ಲಿಯೇ ನೋಡಿರುವುದಾಗಿ ಖಚಿತವಾಗಿ ನೆನಪಿಸಿಕೊಳ್ಳುತ್ತಾರೆ . ಇದು ಸುಧನ್ವ ದೇಶಪಾಂಡೆ ಹೇಳುವ ಹಾಗೆ 1983 ರಲ್ಲಿ ಭೋಪಾಲ್ ನಲ್ಲಿ ನಡೆದ ರಾಷ್ಟ್ರೀಯ ನುಕ್ಕಡ್ ರಂಗ್ ಮೇಳ್ 1983 ನಿಂದ ಬಂದ ಬಳಿಕ ಸಿದ್ಧಪಡಿಸಿದ ಟಿಪ್ಪಣಿ ಇರಬೇಕು ಎಂಬುದಾಗಿ ಹೇಳುತ್ತಾರೆ.

ತಾಯಿ ಹಕ್ಕಿ ತನ್ನ ಮರಿಗಳನ್ನು ಹೇಗೆ ದುಷ್ಟ ಬೆಕ್ಕಿನಿಂದ ಕಾಪಾಡಿಕೊಳ್ಳುತ್ತಾಳೆ ಎಂಬ ಸಣ್ಣ ಸರಳ ಜಾನಪದ ಕಥೆಯ ಮಾತಿಲ್ಲದ ಪ್ರದರ್ಶನ ನೋಡಿದ ಜನಮ್ ತಂಡದ ಕಲಾವಿದರು ಮೂಕರಾಗಿ ಬಿಟ್ಟಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ. ಅದು ಬಹಳ ಸರಳ ರೂಪದ ಕಾವ್ಯಾತ್ಮಕ ನಾಟಕ. ಯಾರಾದರೂ ತಾಯಿ ಹಕ್ಕಿಯಾಗಿ ಸಾಬಿತ್ರಿ ರವರ ಅಭಿನಯ ನೋಡಿದ್ದರೆ ಎಂದೂ ಮರೆಯಲು ಸಾಧ್ಯವಿಲ್ಲ. ಅವರ ಅಪ್ರತಿಮ ಅಭಿನಯ- ಬೆಡಗು – ಸರಳವಾದರೂ ಅತ್ಯುತ್ಕೃಷ್ಟ ರಂಗ ಚಲನೆ – ಭಾವಗಳ ಅಭಿವ್ಯಕ್ತಿ -ಹಾಡು -ನೃತ್ಯ ಎಲ್ಲವೂ ಒಂದಾಗಿದ್ದು ಅಪರೂಪಕ್ಕೆ ಕಾಣಸಿಗುವಂತಾದ್ದು.

1983 ರಲ್ಲಿ ಪುತ್ತೂರು ಸಮುದಾಯದ ನಾವು ಬೇನೆ ನಾಟಕದ ಮೂಲಕ ಭಾಗವಹಿಸಿದ್ದೆವು. ಮಣಿಪುರದ ಕನ್ನಯ್ಯಲಾಲ್ -ಸಾಬಿತ್ರಿ ದಂಪತಿಗಳು
ಅಲ್ಲಿಗೆ ಬಂದು ಯಾರಾದರೂ ಐದು ಮಂದಿ ನಟರು ಬನ್ನಿ- ನಾಟಕ ಅಭ್ಯಾಸ ಮಾಡೋಣ ಎಂದು ಬರ ಹೇಳಿದಾಗ ಕರ್ನಾಟಕದಿಂದ ನಾನು – ಚಂದ್ರಹಾಸ ಉಳ್ಳಾಲ ಮತ್ತು ಎಸ್ ಆರ್ ರಮೇಶ್ ಸೇರಿಕೊಂಡಿದ್ದೆವು.

[1989ರಲ್ಲಿ ಮೂಡುಬಿದ್ರೆಯ ಪ್ರತಿಭಟನಾ ಪ್ರದರ್ಶನದಲ್ಲಿ ನಟರಾಗಿ ಭಾಗವಹಿಸಿದವರು. ಕತೆಗಾರ ಫಕೀರ್ ಮೊಹಮ್ಮದ್ ಕಟಪಾಡಿ – ಪತ್ರಕರ್ತ ಧನಂಜಯ ಮೂಡುಬಿದಿರೆ- ಸಂತೋಷ್ ಕುಮಾರ್ – ಪ್ರಕಾಶ -ಕೃಷ್ಣರಾಜ ವಿಶ್ವಂಭರ ಸುವರ್ಣ ಮತ್ತು ನಾನು ಐಕೆ ಬೊಳುವಾರು ]

ಇವತ್ತಿನ ದಿನಗಳಲ್ಲಿ ಬೀದಿ ನಾಟಕಗಳ ಕುರಿತಾಗಿ ನಾವು ಗಮನಿಸಬೇಕಾದ ಸಂಗತಿಗಳೆಂದರೆ ಪ್ರತಿರೋಧ -ಪ್ರತಿಭಟನೆಯ ಅಂಗವಾಗಿ ಆರಂಭವಾಗಿ ಚಳುವಳಿಯ ರೂಪ ಪಡೆದುಕೊಂಡ ಬೀದಿ ನಾಟಕ ಇಂದು ಅಷ್ಟೇ ಉತ್ಸಾಹ ಹುಮ್ಮನಸ್ಸಿನಿಂದ ಮುಂದೆ ಸಾಗುತ್ತಿಲ್ಲ. ಅದು ಕೇವಲ ಸರಕಾರಿ ಯೋಜನೆಗಳ ಪ್ರಚಾರಕ್ಕೆ – ಕಾರ್ಪೊರೇಟ್ ಸಂಸ್ಥೆಗಳ ಸರಕುಗಳ ಮಾರಾಟಕ್ಕೆ – ಕಾಲೇಜು ವಿದ್ಯಾರ್ಥಿಗಳ ನಾಟಕ ಸ್ಪರ್ಧೆಗಳಿಗೆ ಸೀಮಿತವಾಗತೊಡಗಿದೆ.

ರಂಗಶಾಲೆಗಳಲ್ಲಿ ತರಬೇತು ಪಡೆದು ಬಂದಿರುವ ನಮ್ಮ ಯುವ ನಟ ಸಮೂಹ ಕೂಡಾ ಸುಸಜ್ಜಿತ ರಂಗ ಮಂದಿರಗಳಲ್ಲಿ ಬೀದಿ ನಾಟಕ ಮಾಡಿದರೆ ರಂಗಭೂಮಿಯು ಅಭಿವೃದ್ಧಿಪಥ ಕಾಣಬಹುದು ಎಂದೆಲ್ಲ ಯೋಚನೆ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ನಮ್ಮ ಸುತ್ತಮುತ್ತ ದಿನವೂ ಸಾವಿರಾರು ಪ್ರತಿಭಟನೆಗಳು – ಮೆರವಣಿಗೆಗಳು -ಸಮಾವೇಶಗಳು – ಅಧಿವೇಶನಗಳು – ಸಮ್ಮೇಳನಗಳು ನಡೆಯುತ್ತಿವೆ. ಈ ಪ್ರತಿರೋಧ ಪ್ರತಿಭಟನೆಗಳು ಸರಕಾರದ ಅನುಮತಿ ಪಡೆದೇ ಆಗಬೇಕಿದೆ.

ಅದೂ ನಿರ್ದಿಷ್ಟ ಅವಧಿಗೆ ಆರಂಭವಾಗಿ ಮುಗಿಯಬೇಕು. ಇಂತಹ ಸ್ಥಳದಲ್ಲಿಯೇ ಪ್ರತಿಭಟಿಸಿ ಮನವಿ ಪತ್ರ ಸಲ್ಲಿಸಿ ಹಿಂದೆ ಹೋಗಬೇಕು. ಎಂದೆಲ್ಲಾ ಷರತ್ತುಗಳು ಇರುವಂತ ದಿನಗಳಲ್ಲಿ ಕನಿಷ್ಠ ಈ ಪ್ರತಿಭಟನೆ ಮಾಡುವ ಸಂಘ ಸಂಸ್ಥೆಗಳು ತಮ್ಮ ಪ್ರತಿಭಟನಾ ಸ್ಥಳಗಳಲ್ಲಿ ತಮ್ಮ ಪ್ರತಿಭಟನಾ ಧ್ಯೇಯೋದ್ದೇಶಗಳನ್ನು ಕುರಿತ ಬೀದಿ ನಾಟಕಗಳನ್ನಾದರೂ ಮಾಡಲು ಚಿಂತಿಸಬೇಕು. ಆಗ ಬೀದಿ ನಾಟಕ ಪ್ರಕಾರವಾದರೂ ಕೆಲವು ದಿನ ಉಳಿಯುವ ಹಾಗೆ ಆಗಬಹುದು.

ಇಲ್ಲಿ ಪ್ರತಿಭಟನೆಗಳಿಗೆ ಬಂದಿರುವ ಅಷ್ಟೂ ಮಂದಿ ಕಾರ್ಯಕರ್ತರು ಪ್ರೇಕ್ಷಕರಾಗಿ ಸಿಗುತ್ತಾರೆ. ಮತ್ತು ತಮ್ಮ ಬೀದಿನಾಟಕದ ಧ್ಯೇಯ ಮತ್ತು ಉದ್ದೇಶಗಳನ್ನು ಸಮರ್ಪಕವಾಗಿ ತಲುಪಿಸಲು ನಟ ನಟಿಯರಿಗೆ ಸಾಧ್ಯವಾಗಬಹುದು. ಇದು ನಮ್ಮೆಲ್ಲರ ಅಪೇಕ್ಷೆಯೂ ಆಗಬೇಕು.

ಇದನ್ನೂ ನೋಡಿ: ಸಫ್ದರ್‌ ಹಾಶ್ಮಿ ಮತ್ತು ಬೀದಿ ನಾಟಕ ಪ್ರಜ್ಞೆ – ಕಿರಣ ಭಟ್ ಹೊನ್ನಾವರ – ರಂಗಸಂಘಟಕ Janashakthi Media

 

Donate Janashakthi Media

Leave a Reply

Your email address will not be published. Required fields are marked *