ಕಲಬುರಗಿ: ಆಗಾಗ ಗುಲ್ಬರ್ಗ ವಿಶ್ವವಿದ್ಯಾಲಯ ಒಂದಲ್ಲಾವೊಂದು ವಿವಾದಗಳಿಂದ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಮತ್ತೊಂದು ವಿವಾದದೊಂದಿಗೆ ಸದ್ದು ಮಾಡುತ್ತಿದೆ. ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡದೆ ಅವರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಎರಡ್ಮೂರು ವರ್ಷಗಳು ಕಳೆದರೂ ಅಂಕಪಟ್ಟಿ ಪದವಿ ಪ್ರಮಾಣಪತ್ರಗಳು ಸಿಗದೆ ಪರದಾಟ
ಅಂಕಪಟ್ಟಿ ಮತ್ತು ಪದವಿ ಪ್ರಮಾಣಪತ್ರಗಳು ಎರಡ್ಮೂರು ವರ್ಷಗಳು ಕಳೆದರೂ ಸಿಗದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ದೂರದ ಊರುಗಳಿಂದ ಪದೇ ಪದೇ ವಿಶ್ವವಿದ್ಯಾಲಯಕ್ಕೆ ಅಲೆದು ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುವಂತಾಗಿದೆ.
ಈ ಬಗ್ಗೆ ವಿವಿಯ ಅಧಿಕಾರಿಗಳನ್ನು ಪ್ರಶ್ನಿಸಿದಾಗ, USMS ಆಪ್ ನಲ್ಲಿನ ದೋಷ ಮತ್ತು ಹೊರಗುತ್ತಿಗೆ ಸಿಬ್ಬಂದಿ ಸರಿಯಾಗಿ ಕೆಲಸ ಮಾಡದಿರುವುದೇ ಕಾರಣ ಎಂದು ಹೇಳುತ್ತಿದ್ದಾರೆ. ವಿಶ್ವವಿದ್ಯಾಲಯದ ಈ ನಿರ್ಲಕ್ಷ್ಯದಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆ, ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ – ಕೆ.ಜೆ.ಜಾರ್ಜ್
ಹಣ ನೀಡಿದರೆ ಮಾತ್ರ ಅಂಕಪಟ್ಟಿ ನೀಡಲಾಗುತ್ತಾ?
ಹಣ ನೀಡಿದರೆ ಮಾತ್ರ ಅಂಕಪಟ್ಟಿ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ಬಿಕೆ ಉಮೇಶ್ ನೇತೃತ್ವದ ತಂಡವು ವಿಶ್ವವಿದ್ಯಾಲಯದ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದೆ.
ಕಲಬುರಗಿ ವಿವಿ ಹಗರಣದ ಸರಮಾಲೆಯಲ್ಲಿ ಸಿಲುಕಿ ಭ್ರಷ್ಟಾಚಾರದ ಕೂಪವಾಗಿದೆ. ಇದೀಗ ವಿವಿ ಮೇಲೆ ಲೋಕಾಯುಕ್ತ ರೇಡ್‌ನಿಂದಾಗಿ ಮತ್ತಷ್ಟು ಹಗರಣ ಬೆಳಕಿಗೆ ಬರುವ ಸಾಧ್ಯತೆ ಇದೆ.
ಲೋಕಾಯುಕ್ತ ಎಸ್.ಪಿ ಬಿಕೆ ಉಮೇಶ್ ನೇತೃತ್ವದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯ ಮೇಲೆ ದಾಳಿ ನಡೆಸಲಾಗಿದೆ. ಗುಲ್ಬರ್ಗಾ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಮತ್ತು ಪದವಿ ಪ್ರಮಾಣ ಪತ್ರ ಡುಬ್ಲಿಕೇಟ ನೀಡುವಲ್ಲಿ ವಿಳಂಬ ನೀತಿ ಹಾಗೂ ಲಂಚ ಪಡೆಯುತ್ತಿರುವ ಆರೋಪ ಕೇಳಿ ಬಂದ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳಗ್ಗೆ ಏಕಕಾಲಕ್ಕೆ ಐದು ತಂಡ ದಾಳಿ ನಡೆಸಿದೆ.
ಅಟೆಂಡೆನ್ಸ್ ಪುಸ್ತಕ, ಚಲನವಲನ ರಿಜಿಸ್ಟರ್, ಕ್ಯಾಸ್ ರಜಿಸ್ಟರ್ ಪರಿಶೀಲನೆ ಮಾಡಿದ್ದಾರೆ. ಲೋಕಾಯುಕ್ತ ಎಸ್. ಪಿ. ಉಮೇಶ್, ಡಿವೈಎಸ್ಪಿ ಗೀತಾ ಬೇನಾಳ, ಡಿವೈಎಸ್ಪಿ ಹನುಮಂತ್ ರಾಯ್, ಇನ್ಸೆಕ್ಟರ ಸಂತೋಷ್, ಸೇರಿದಂತೆ ಇತರೆ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪರೀಕ್ಷಾ ಅಕ್ರಮ ಹಾಗೂ ಮಾರ್ಕ್ಸ್ ಕಾರ್ಡ್ ಹಗರಣ ದಂಧೆ ವಿಚಾರವಾಗಿ ಅಪಖ್ಯಾತಿ ಪಡೆದಿರುವ ವಿವಿ ಮೇಲೆ ಇದೀಗ ಲೋಕಾಯುಕ್ತ ರೇಡ್ ನಡೆದಿದ್ದು, ಸಾಕಷ್ಟು ಅಕ್ರಮ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಇದನ್ನೂ ನೋಡಿ: ತ್ರಿಭಾಷ ಸೂತ್ರ ಮತ್ತು ಕಲಿಕಾ ಮಾಧ್ಯಮ – ನಿರಂಜನಾರಾಧ್ಯ.ವಿ.ಪಿJanashakthi Media