ಬಜೆಟ್ ಎಂಬ ಪ್ರಹಸನದಲ್ಲಿ ತೆರೆದಿರುವುದಕ್ಕಿಂತಲೂ ಮುಚ್ಚಿಟ್ಟಿರುವುದೇ ಮುಖ್ಯವಾದುದು
ಸಾಮಾನ್ಯವಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಾರ್ಷಿಕ ಬಜೆಟ್ ಮಂಡಿಸಿದಾಗ ಕೇಳಿಬರುವ ರಾಜಕೀಯ ಅಭಿಪ್ರಾಯಗಳು ವಸ್ತುನಿಷ್ಠವಾಗಿರುವುದಿಲ್ಲ. ಸರ್ಕಾರದ ನೀತಿ ಏನೇ ಇದ್ದರೂ ವಿರೋಧಿಸುವ ಅನಿವಾರ್ಯತೆ ವಿರೋಧ ಪಕ್ಷಗಳಿಗಿದ್ದರೆ ಸಮರ್ಥಿಸಿಕೊಳ್ಳುವ ದರ್ದು ಆಡಳಿತ ಪಕ್ಷಗಳಿಗೆ ಇರುತ್ತದೆ. ಎರಡೂ ಬದಿಗಳಲ್ಲಿ ʼಜನದನಿʼ ಇರುವುದಿಲ್ಲ. ಆರ್ಥಿಕ ಸೂಕ್ಷ್ಮಗಳು ಮತ್ತು ಮಾರುಕಟ್ಟೆಯ ಒಳಸುಳಿಗಳನ್ನು ಅರ್ಥಶಾಸ್ತ್ರೀಯ ನೆಲೆಯಲ್ಲಿ (Economic Grounds) ವ್ಯಾಖ್ಯಾನಿಸುವ ಅರಿವು ಕೆಲವೇ ಜನಪ್ರತಿನಿಧಿಗಳಲ್ಲಿರುವುದರಿಂದ ಈ ಪರ ವಿರೋಧಗಳಲ್ಲಿ, ಬಜೆಟ್‌ನ ಕೇಂದ್ರ ಬಿಂದು ಆಗಿರುವ ಶ್ರೀಸಾಮಾನ್ಯರ (Layman-woman) ದನಿ ಕಾಣಲಾಗುವುದಿಲ್ಲ. ರಾಜಕೀಯ ನಾಯಕರ ಅಭಿಪ್ರಾಯವನ್ನು ಉತ್ಪಾದಿಸುವುದೇ ಪಕ್ಷಗಳ ಹೈಕಮಾಂಡ್ ಎಂಬ ಕಾರ್ಖಾನೆಗಳಲ್ಲಿ ಎಂಬ ವಾಸ್ತವವನ್ನು ಮನಗಂಡು, ನಾಗರಿಕರು ಬಜೆಟ್ ಎಂಬ ವಾರ್ಷಿಕ ಪ್ರಹಸನದ ಒಳಿತು-ಕೆಡಕುಗಳನ್ನು ವ್ಯಾಖ್ಯಾನಿಸಬೇಕಾಗುತ್ತದೆ. ಮಾರುಕಟ್ಟೆ
– ನಾ ದಿವಾಕರ
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಅವರ 17ನೆಯ ಬಜೆಟ್‌ನ ವಿಶೇಷತೆಗಳನ್ನು ಗುರುತಿಸುವ ಮುನ್ನ, ಅವರ ನೇತೃತ್ವದ ಸರ್ಕಾರ ಅನುಸರಿಸುವ ಮೇಲ್ಪದರದ ಆರ್ಥಿಕ ಮಾದರಿ (Macro Economic Model) ಯನ್ನು ನಿರ್ಲಕ್ಷಿಸಲಾಗುವುದಿಲ್ಲ. ಕಾರ್ಪೋರೇಟ್ ಬಂಡವಾಳದ ಸಂತೆಯ ಜಗುಲಿಯಲ್ಲಿ ಕುಳಿತು ಬೊಕ್ಕಸಕ್ಕೆ ಬರುವ ಆದಾಯವನ್ನು ಜನಸಾಮಾನ್ಯರಿಗೆ ಹಂಚುವ ಬಜೆಟ್ ಎಂಬ ಪ್ರಹಸನದಲ್ಲಿ ಮೇಲ್ನೋಟಕ್ಕೆ ಕಾಣುವಂತಹ ಜನೋಪಯೋಗಿ ಯೋಜನೆಗಳು ಮತ್ತು ಜನಪರ ನೀತಿಗಳು, ಆಳದಲ್ಲಿ ಅರ್ಥವ್ಯವಸ್ಥೆಯ ಮೂಲಭೂತ ಲೋಪಗಳನ್ನು ಮರೆಮಾಚುವ ಕವಚಗಳಾಗಿರುತ್ತವೆ. ಇದನ್ನು ಗುರುತಿಸಬೇಕಾದರೆ ಸರ್ಕಾರಗಳ ಆರ್ಥಿಕ ನೀಲನಕ್ಷೆಯನ್ನು ಪರಾಮರ್ಶಿಸಬೇಕಾಗುತ್ತದೆ. ನವ ಉದಾರವಾದಿ ಆರ್ಥಿಕತೆಯಲ್ಲಿ ತಳಸ್ತರದ ಸಮಾಜಕ್ಕೆ ನೀಡಲಾಗುವ ಯಾವುದೇ ರೀತಿಯ ಭೌತಿಕ-ವಿತ್ತೀಯ ಸವಲತ್ತುಗಳು, ಸುಸ್ಥಿರ ಜೀವನಕ್ಕೆ ನೆರವಾಗುವುದಿಲ್ಲ ಎಂಬ ವಾಸ್ತವವನ್ನು ಅರಿತಿದ್ದರೆ ಸಾಕು.
ಪರ-ವಿರೋಧ ಮತ್ತು ದೂರದೃಷ್ಟಿ
ಬಜೆಟ್ ಮಂಡನೆಯಾದ ಕೂಡಲೇ ವಿರೋಧಿಗಳಿಂದ ಕೇಳಿಬರುವ ಆಕ್ಷೇಪ ಎಂದರೆ ʻದೂರದೃಷ್ಟಿ ಇಲ್ಲದ ಬಜೆಟ್ʼ ಎಂದು. ಈ ದೂರದೃಷ್ಟಿ ಎಂದರೇನು ? ಬಹುಶಃ ಯಾರೂ ಸ್ಪಷ್ಟ ವ್ಯಾಖ್ಯಾನ ನೀಡಿಲ್ಲ. ಸಾಮಾನ್ಯ ಪರಿಭಾಷೆಯಲ್ಲಿ ನೋಡುವುದಾದರೆ, ಈ ಬಜೆಟ್‌ನಲ್ಲಿ ಸರ್ಕಾರ ಖರ್ಚು ಮಾಡುವ ಹಣಕಾಸು, ಮುಂದಿನ ಹಲವು ವರ್ಷಗಳ ಅವಧಿಯಲ್ಲಿ ತಳಸಮಾಜದ ಜನಸಾಮಾನ್ಯರ ಬದುಕನ್ನು ಸುಗಮವಾಗಿಸುವ ಅಡಿಪಾಯಕ್ಕೆ ಕಾರಣವಾಗಬೇಕು. ಇದನ್ನೇ ದೂರದೃಷ್ಟಿ ಎನ್ನುವುದಾದರೆ, ತಳಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗಬೇಕು, ಕೃಷಿ ಮತ್ತು ಬೇಸಾಯ ವಲಯ ಸಮೃದ್ಧವಾಗಬೇಕು, ಕೈಗಾರಿಕೆಗಳು ಹೆಚ್ಚಿನ ಬಂಡವಾಳ ಹೂಡಿಕೆಯೊಂದಿಗೆ ಆರ್ಥಿಕತೆಯನ್ನು ಬಲಪಡಿಸಬೇಕು, ಜನಸಾಮಾನ್ಯರ ಆರೋಗ್ಯವನ್ನು ಸುಸ್ಥಿರವಾಗಿರಿಸುವಂತಹ ಮೂಲ ಭೌತಿಕ ಸೌಕರ್ಯಗಳು ನಿರ್ಮಾಣವಾಗಬೇಕು, ಶಿಕ್ಷಣ ವ್ಯವಸ್ಥೆಯಲ್ಲಿ ಗುಣಮಟ್ಟದ, ನೈತಿಕ ಮೌಲ್ಯವರ್ಧಿತ ಕಲಿಕೆಯ ಅವಕಾಶಗಳು ಹೆಚ್ಚಾಗಬೇಕು, ಸರ್ಕಾರಿ ಶಾಲೆ ಮತ್ತು ಆಸ್ಪತ್ರೆಗಳು ಸರ್ಕಾರದ ಆದ್ಯತೆಯಾಗಬೇಕು, ಈ ಸ್ತರದಲ್ಲಿ ದುಡಿಯುವ ಅಂಗನವಾಡಿ, ಆಶಾ , ಬಿಸಿಯೂಟ ಕಾರ್ಮಿಕರ ಬದುಕು ಹಸನಾಗಬೇಕು, ನಗರ-ಗ್ರಾಮಗಳ ಮಾಲಿನ್ಯವನ್ನು ತೊಡೆದುಹಾಕುವ ನೈರ್ಮಲ್ಯ ಕಾರ್ಮಿಕರ ಮತ್ತು ಪೌರ ಕಾರ್ಮಿಕರ ಜೀವನೋಪಾಯದ ದಾರಿಗಳು ಸುಗಮವಾಗಬೇಕು. ಮಾರುಕಟ್ಟೆ
ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು: ಮಹಿಳೆಯರಿಗೆ ಉಚಿತ ಬಸ್, ವಿದ್ಯಾರ್ಥಿನಿಯರಿಗೆ ₹1,000!
ಇವುಗಳನ್ನೇ ದೂರದೃಷ್ಟಿ ಎನ್ನುವುದಾದರೆ ಕಳೆದ ಮೂರು ದಶಕಗಳಲ್ಲಿ ಭಾರತದ ಯಾವುದೇ ಬಜೆಟ್ ಪ್ರಹಸನವೂ ನಿಲುಕುವುದಿಲ್ಲ. ಏಕೆಂದರೆ ಬಜೆಟ್ ರೂಪಿಸುವುದೇ ಸಮೀಪ ದೃಷ್ಟಿಕೋನದ (Myopic Viewpoint) ನೆಲೆಯಲ್ಲಿ. ಚುನಾವಣೆಗಳು ಸಮೀಪದಲ್ಲಿದ್ದರೆ ಗೆಲ್ಲಲು ಅಗತ್ಯವಾದ ʼ ಜನಪರ ʼ ಯೋಜನೆಗಳು ಕಾಣುತ್ತವೆ. ಸರ್ಕಾರದ ಅಥವಾ ಮುಖ್ಯಮಂತ್ರಿಯ ಸ್ಥಾನ ಡೋಲಾಯಮಾನ ಸ್ಥಿತಿಯಲ್ಲಿದ್ದರೆ, ಸ್ಥಾನ ರಕ್ಷಣೆ ಪ್ರಧಾನ ಆದ್ಯತೆಯಾಗುತ್ತದೆ. ಆಗ ಬಜೆಟ್ ಎಂಬ ಹಣಕಾಸು ಪ್ರಕ್ರಿಯೆ ಮತಬ್ಯಾಂಕುಗಳ ಮೂಲಕ ನಗದೀಕರಿಸುವ ಕಸರತ್ತುಗಳಾಗಿಬಿಡುತ್ತದೆ. ಜಾತಿ, ಸಮುದಾಯ, ಮತ, ಪ್ರದೇಶ ಮತ್ತು ಸಾಂಸ್ಥಿಕ ನೆಲೆಗಳಲ್ಲಿ ಆದ್ಯತೆಗಳನ್ನೂ ನಿರ್ಧರಿಸಲಾಗುತ್ತದೆ. ಈ ಸಮೀಪ ದೃಷ್ಟಿಕೋನ ಒಂದು ರೀತಿಯಲ್ಲಿ ಜನಸಾಮಾನ್ಯರ ಹತಾಶೆ ಅಥವಾ ನಿರಾಸೆಗಳನ್ನು ಅದುಮಿಡುವ ಅಸ್ತ್ರವಾಗುತ್ತದೆ. ಸಿದ್ದರಾಮಯ್ಯ ಅವರ ಬಜೆಟ್‌ನಲ್ಲಿ ದೂರದೃಷ್ಟಿಯಿಲ್ಲ ಎಂದು ಹೇಳುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಮ್ಮೆಯಾದರೂ ಕಳೆದ ಹತ್ತು ವರ್ಷಗಳ ಕೇಂದ್ರ ಬಜೆಟ್ ಕಡೆಗೆ ಗಮನಹರಿಸಿದರೆ ಈ ಒಳಸುಳಿಗಳು ಸುಲಭವಾಗಿ ಅರ್ಥವಾಗಬಹುದು. ಮಾರುಕಟ್ಟೆ
ಇದರಿಂದಾಚೆ ನೋಡಿದಾಗ ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಬಹುಸಂಖ್ಯೆಯ ಜನತೆ ತಮ್ಮ ವರ್ತಮಾನದ ಲಾಭ ಅಥವಾ ಅನುಕೂಲಗಳನ್ನಷ್ಟೇ ನೋಡುವುದಿಲ್ಲ. ತಮ್ಮ ಮುಂದಿನ ಪೀಳಿಗೆಯ ಸುರಕ್ಷಿತ ಜೀವನ, ಸುಭದ್ರ ಜೀವನೋಪಾಯದ ಹಾದಿಗಳನ್ನು ಗಮನಿಸುತ್ತಿರುತ್ತಾರೆ. ಈ ವರ್ಗಗಳ ಅಭಿವೃದ್ಧಿಗೆ ಪೂರಕವಾಗುವುದು ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಕೈಗಾರಿಕಾ ವಲಯಗಳು. ವಾರ್ಷಿಕ ಬಜೆಟ್‌ಗಳಲ್ಲಿ ಇವುಗಳಿಗೆ ನೀಡಲಾಗುವ ಹಣಕಾಸು ನೆರವು, ಈ ಎಲ್ಲ ಕ್ಷೇತ್ರಗಳ ಅಡಿಪಾಯವನ್ನು ಮತ್ತಷ್ಟು ಗಟ್ಟಿಗೊಳಿಸಲು ನೆರವಾಗುವಂತಿರಬೇಕು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳು ಇಲ್ಲಿ ನಿರ್ಣಾಯಕವಾಗುವುದಿಲ್ಲ. ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಮತ್ತು ಯುವಶಕ್ತಿ ಯೋಜನೆಗಳು ತಾತ್ಕಾಲಿಕ ಶಮನಕಾರಿ ತಂತ್ರಗಳಾಗುತ್ತವೆಯೇ ಹೊರತು, ಚಿಕಿತ್ಸಕ ಮಾದರಿಯಾಗುವುದಿಲ್ಲ. ಬಂಡವಾಳಶಾಹಿ ಆರ್ಥಿಕತೆಯ ಅಪಾಯಗಳಿಂದ ದುಡಿಯುವ ವರ್ಗಗಳಿಗೆ ರಕ್ಷಣೆ ನೀಡುವ ಈ ಕವಚಗಳು ಶಾಶ್ವತವೂ ಅಲ್ಲ. ಮಾರುಕಟ್ಟೆ
ವರ್ತಮಾನದ ಆದ್ಯತೆ ಮತ್ತು ವಾಸ್ತವ
ನಿರುದ್ಯೋಗದ ಸಮಸ್ಯೆ ಎದುರಿಸಲು ರಾಜ್ಯ ಬಜೆಟ್‌ನಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆ ನೀಡಲಾಗಿದೆ. ಪ್ರಸಕ್ತ ವರ್ಷದಲ್ಲಿ 56,432 ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, 2026-27ರ ಹಣಕಾಸು ವರ್ಷದಲ್ಲಿ ಇನ್ನೂ 32 ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡುವ ಭರವಸೆ ನೀಡಲಾಗಿದೆ. ಆದರೆ ಇದು ಉದ್ಯೋಗ ಸೃಷ್ಟಿ ಅಲ್ಲ, ಉದ್ಯೋಗ ಭರ್ತಿಯಷ್ಟೆ. ಸರ್ಕಾರಿ ವಲಯದಲ್ಲೇ ಖಾಲಿ ಇರುವ ಹುದ್ದೆಗಳ ಸಂಖ್ಯೆ 2.85 ಲಕ್ಷ ಎಂದು ಸರ್ಕಾರವೇ ಪ್ರಕಟಿಸಿದೆ. ಹೊಸದಾಗಿ ಕಾಲೇಜುಗಳಿಂದ ಹೊರ ಬರುವ ಯುವ ಸಮೂಹದ ದೃಷ್ಟಿಯಲ್ಲಿ, ಇನ್ನೂ ಲಕ್ಷಾಂತರ ಹೊಸ ಉದ್ಯೋಗಗಳು ಸೃಷ್ಟಿಯಾಗಬೇಕಿದೆ. ಇದಕ್ಕೆ ಬೇಕಿರುವುದು ಉತ್ಪಾದನಾ ವಲಯದ ಕೈಗಾರಿಕಾಭಿವೃದ್ಧಿ ಮತ್ತು ಕೃಷಿ ವಲಯದ ಸಬಲೀಕರಣ. ರಾಜ್ಯ ಬಜೆಟ್‌ನಲ್ಲಿ ಈ ಎರಡೂ ಅಂಶಗಳ ಬಗ್ಗೆ ಯಾವುದೇ ಪ್ರಸ್ತಾಪ ಕಾಣುವುದಿಲ್ಲ. ಮಾರುಕಟ್ಟೆ

ಈ ಉದ್ಯೋಗ ಭರ್ತಿ ಪ್ರಕ್ರಿಯೆಯಲ್ಲೂ ಗಮನಿಸಬೇಕಿರುವುದು ಶಾಶ್ವತ ನೌಕರಿಯ ಪ್ರಮಾಣ. ಶಿಕ್ಷಣ-ಆರೋಗ್ಯದಿಂದ ಹಿಡಿದು ಎಲ್ಲ ಕ್ಷೇತ್ರಗಳಲ್ಲೂ ಗುತ್ತಿಗೆ, ಹೊರಗುತ್ತಿಗೆ ಮತ್ತು ತಾತ್ಕಾಲಿಕ ನೇಮಕಾತಿಯನ್ನೇ ಸಾರ್ವತ್ರೀಕರಿಸಿರುವ ನವ ಉದಾರವಾದಿ ನೀತಿಗಳು ಭವಿಷ್ಯದ ಬುನಾದಿಯನ್ನು ಗಟ್ಟಿಗೊಳಿಸುವುದಿಲ್ಲ. ಈಗಾಗಲೇ ಕರ್ನಾಟಕದಲ್ಲಿ 34 ಸಾವಿರ ಅತಿಥಿ ಶಿಕ್ಷಕರು, 11 ಸಾವಿರ ಉಪನ್ಯಾಸಕರು ಅನಿಶ್ಚಿತ ಭವಿಷ್ಯ ಎದುರಿಸುತ್ತಿದ್ದಾರೆ. ಈ ವರ್ಷದಲ್ಲಿ 51 ಸಾವಿರ ಶಿಕ್ಷಕರನ್ನು, 11 ಸಾವಿರ ಉಪನ್ಯಾಸಕರನ್ನು ಅತಿಥಿಗಳಾಗಿ ನೇಮಿಸುವ ಆಶ್ವಾಸನೆ ನೀಡಲಾಗಿದೆ. ಇದಾವುದೂ ಶಾಶ್ವತ ನೌಕರಿ ಅಲ್ಲ. ಆಶಾ ಕಾರ್ಯಕರ್ತೆಯರು ಉತ್ತಮ ಜೀವನೋಪಾಯ ಆದಾಯವನ್ನು ನಿರೀಕ್ಷಿಸುತ್ತಿದ್ದಾರೆ. ಅಂಗನವಾಡಿ ನೌಕರರು, ಪೌರ ಕಾರ್ಮಿಕರು ಸುಸ್ಥಿರ ಭವಿಷ್ಯಕ್ಕಾಗಿ ಹೋರಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಮೇಲ್ಪದರದ ಆರ್ಥಿಕ ನೀತಿಯಲ್ಲಿ (Macro Economic policy) ಈ ನೌಕರರ ಸುಸ್ಥಿರ ಭವಿಷ್ಯ ಮತ್ತು ಸುಭದ್ರ ಭವಿಷ್ಯ ಆದ್ಯತೆಯಾಗುವುದೇ ಇಲ್ಲ.
ಶಿಕ್ಷಣ ವಲಯಕ್ಕೆ ಬಜೆಟ್‌ನಲ್ಲಿ ಮೀಸಲಿಟ್ಟಿರುವ ಪಾಲು ಶೇಕಡಾ 10.5ಕ್ಕೆ ಕುಸಿದಿರುವುದು ರಾಜ್ಯ ಸರ್ಕಾರದ ಕಾರ್ಪೋರೇಟ್ ನೀತಿಗಳನ್ನೇ ಬಿಂಬಿಸುತ್ತದೆ. 7500ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ಕೆಪಿಎಸ್ ಶಾಲೆಗಳಾಗಿ ಪರಿವರ್ತಿಸುವ ಜನವಿರೋಧಿ ಯೋಜನೆ, ತಳಸಮಾಜದ ದುಡಿಯುವ ಜನರನ್ನು ಶಿಕ್ಷಣವಂಚಿತರನ್ನಾಗಿ ಮಾಡುವ ಕುತಂತ್ರವಷ್ಟೇ. ಸರ್ಕಾರಿ ಶಾಲೆಗಳನ್ನು ಮುಚ್ಚುವುದೆಂದರೆ, ತಳಮಟ್ಟದ ಸಮಾಜದಲ್ಲಿ ಮಕ್ಕಳನ್ನು ಶಿಕ್ಷಣದಿಂದ ಹೊರಗಿಡುವ ಒಂದು ನೀತಿ. ಈ ಕುಟಿಲ ನೀತಿಯ ಜೊತೆಗೇ “ ಉತ್ತಮ ಕಲಿಕೆ-ಉಜ್ವಲ ಭವಿಷ್ಯ ” ಘೋಷಣೆಯಡಿ ಕೆಪಿಸ್ ಶಾಲೆಗಳನ್ನು ಉನ್ನತೀಕರಿಸುವ ಭರವಸೆ ನೀಡಲಾಗಿದೆ. ಇದಕ್ಕಾಗಿ 3,900 ಕೋಟಿ ವೆಚ್ಚ ನಿಗದಿಪಡಿಸಲಾಗಿದೆ. ಪ್ರಾಥಮಿಕ ಹಂತದಲ್ಲಿ ಬಡಮಕ್ಕಳನ್ನು ಶಿಕ್ಷಣವಂಚಿತರನ್ನಾಗಿ ಮಾಡಿ, ಕೆಳಮಧ್ಯಮ ವರ್ಗಗಳನ್ನು ಮತ್ತು ನಗರವಾಸಿ ಹಿತವಲಯವನ್ನು ಓಲೈಸುವ ಈ ಶಿಕ್ಷಣ ನೀತಿ ಸರ್ವತೋಮುಖ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸುತ್ತದೆ. ಮಾರುಕಟ್ಟೆ
ಕೃಷಿ ಉದ್ಯೋಗ ಮತ್ತು ಅಭಿವೃದ್ಧಿ
ಕೃಷಿ ಕ್ಷೇತ್ರಕ್ಕೆ ರಾಜ್ಯ ಬಜೆಟ್‌ನಲ್ಲಿ ಹಲವು ಸೌಕರ್ಯಗಳನ್ನು ಘೋಷಿಸಿದ್ದರೂ, ಮೂಲತಃ ಕೃಷಿ ಭೂಮಿಯನ್ನು ಕಾರ್ಪೋರೇಟ್-ರಿಯಲ್ ಎಸ್ಟೇಟ್ ಬಂಡವಾಳಿಗರಿಂದ ರಕ್ಷಿಸುವ ನಿಟ್ಟಿನಲ್ಲಿ ಯಾವುದೇ ನೀಲನಕ್ಷೆ ಕಾಣುವುದಿಲ್ಲ. ಕೇಂದ್ರ ಸರ್ಕಾರ ರೈತ ಮುಷ್ಕರಕ್ಕೆ ಮಣಿದು ಹಿಂಪಡೆದ ಕರಾಳ ಕೃಷಿ ಕಾಯ್ದೆಗಳು ರಾಜ್ಯದಲ್ಲಿ ಜೀವಂತವಾಗಿವೆ, ದಶಕದ ಹಿಂದೆ ಜಾರಿಗೊಳಿಸಿದ ಭೂ ಸ್ವಾಧೀನ ಕಾಯ್ದೆ ಯಥಾಸ್ಥಿತಿಯಲ್ಲಿ ಮುಂದುವರೆದಿದೆ. ಅಭಿವೃದ್ಧಿ ಎಂದರೆ ಕೇವಲ ಮೂಲ ಸೌಕರ್ಯಗಳು , ನಗರೀಕರಣ ಮತ್ತು ಹಿತವಲಯಕ್ಕೆ ಪ್ರಿಯವಾಗುವ ಆಧುನಿಕ ಸವಲತ್ತುಗಳನ್ನೇ ಪರಿಗಣಿಸುವ ನವ ಉದಾರವಾದಿ ಆರ್ಥಿಕ ಮಾದರಿಯಿಂದ ರಾಜ್ಯ ಸರ್ಕಾರ ಹಿಂದೆ ಸರಿಯದೆ ಇರುವುದು, ಇಡೀ ಬಜೆಟ್ ಪ್ರಹಸನವನ್ನು ಸಂಕುಚಿತಗೊಳಿಸುತ್ತದೆ. ಮಾರುಕಟ್ಟೆ

ಕೇಂದ್ರ ಸರ್ಕಾರ ಉದ್ಯೋಗ ಖಾತರಿ ಯೋಜನೆ MNREGA ರದ್ದುಪಡಿಸಿ ಹೊಸ ಕಾಯ್ದೆ VB G Ram G ಕಾಯ್ದೆಯನ್ನು ಜಾರಿಗೊಳಿಸಿರುವುದು ಗ್ರಾಮೀಣ ಉದ್ಯೋಗಾವಕಾಶಗಳಿಗೆ ಮಾರಕವಾಗಿ ಪರಿಣಮಿಸುತ್ತದೆ. ಇದು ಮತ್ತೊಮ್ಮೆ ವಲಸೆ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ರಾಜ್ಯ ಸರ್ಕಾರ ಹೊಸ ಕಾಯ್ದೆಯನ್ನು ವಿರೋಧಿಸಿದ್ದರೂ, ಇದರಿಂದ ಉಂಟಾಗುವ ಜೀವನೋಪಾಯದ ಸಮಸ್ಯೆಗಳನ್ನು ಹೇಗೆ ನಿರ್ವಹಿಸುತ್ತದೆ ? ಈ ಪ್ರಶ್ನೆಗೆ ಬಜೆಟ್ ಉತ್ತರಿಸುವುದಿಲ್ಲ. ಕೃಷಿ ಭೂಮಿಯನ್ನು ಕಳೆದುಕೊಳ್ಳುತ್ತಿರುವ ರೈತರಿಗೆ ಪರಿಹಾರ ನೀಡುವುದನ್ನೂ ದಾಟಿ ನೋಡುವುದಾದರೆ, ಅನಿರ್ಬಂಧಿತ ನಗರೀಕರಣ ಮತ್ತು ನಗರ ವಿಸ್ತೀರ್ಣ ಯೋಜನೆಗಳು ಭವಿಷ್ಯದ ಯುವ ಪೀಳಿಗೆಯನ್ನು ಅನಿಶ್ಚಿತತೆಯ ಕೂಪಕ್ಕೆ ತಳ್ಳುತ್ತವೆ. ಮಾರುಕಟ್ಟೆ
ರಾಜ್ಯ ಸರ್ಕಾರದ ಮೇಲೆ ಸಾಲದ ಹೊರೆ ಹೆಚ್ಚಾಗಿರುವುದು ನಿರಾಕರಿಸಲಾಗದ ಸತ್ಯ. ಆದರೆ ಈ ಕಾರಣಕ್ಕಾಗಿಯೇ ಗ್ಯಾರಂಟಿ ಯೋಜನೆಗಳನ್ನು ಗುರಿಯಾಗಿಸುವ ಬಿಜೆಪಿ-ಜೆಡಿಎಸ್ ಪಕ್ಷಗಳ ಧೋರಣೆ ಬೌದ್ಧಿಕ ದೀವಾಳಿತನದ ಸಂಕೇತ. ಏಕೆಂದರೆ ಕೇಂದ್ರ ಬಜೆಟ್‌ನಲ್ಲೂ ಸಹ ಇದೇ ಮಾದರಿಯನ್ನು ಅನುಸರಿಸಲಾಗಿದೆ, ಮಹಿಳಾ ಸಮೂಹವನ್ನು ಪ್ರತ್ಯೇಕ ಮತಬ್ಯಾಂಕುಗಳಂತೆ ಪರಿವರ್ತಿಸಿರುವ ಭಾರತದ ಅಧಿಕಾರ ರಾಜಕಾರಣಕ್ಕೆ ಇತ್ತೀಚಿನ ಬಿಹಾರ ಚುನಾವಣೆಗಳು ಹೊಸ ದಿಶೆಯನ್ನು ತೋರಿಸಿವೆ. ಚುನಾವಣೆಗಳಿಗೆ ಮುನ್ನ ಮಹಿಳೆಯರ ಖಾತೆಗಳಿಗೆ ನೇರ ನಗದು ವರ್ಗಾಯಿಸುವ ಬಿಜೆಪಿಯ ಹೊಸ ಅವಿಷ್ಕಾರ ಈಗ ತಮಿಳುನಾಡಿನ ಡಿಎಂಕೆ ಸರ್ಕಾರವನ್ನೂ ಆಕರ್ಷಿಸಿದ್ದು, ಈಗಾಗಲೇ 5, 000 ರೂಗಳನ್ನು ವರ್ಗಾಯಿಸಲಾಗಿದೆ. ಬಹುಶಃ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಬಜೆಟ್ ಪ್ರಹಸನದಲ್ಲಿ ಇದು ಪ್ರಮುಖ ಭಾಗವಾಗಬಹುದು. ಮಾರುಕಟ್ಟೆ
ಸಾಮಾಜಿಕ ಸಮಸ್ಯೆಗಳ ದೃಷ್ಟಿಯಲ್ಲಿ
ಆದರೆ ಮಹಿಳೆಯರ ಮೇಲೆ ನಿರಂತರವಾಗಿ, ಅನಿರ್ಬಂಧಿತವಾಗಿ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಂಸ್ಥಿಕ ಉಪಕ್ರಮಗಳನ್ನು ಕೈಗೊಳ್ಳುವ ಯಾವುದೇ ಸೂಚನೆ ಬಜೆಟ್‌ನಲ್ಲಿ ಕಾಣಲಾಗುವುದಿಲ್ಲ. ಇಂದಿರಾ ಆಹಾರ ಕಿಟ್ ಮೂಲಕ ಮಹಿಳೆಯರಿಗೆ ನೀಡುತ್ತಿದ್ದ 5 ಕಿಲೋ ಅಕ್ಕಿಯನ್ನು ಹಿಂಪಡೆಯಲಾಗಿದ್ದು, ಗರ್ಭಿಣಿ ಮಹಿಳೆಯರಿಗೆ ಲಭ್ಯವಿದ್ದ ಪಡಿತರ ವಿತರಣೆಯನ್ನೂ ರದ್ದುಪಡಿಸಲಾಗಿದೆ. ರೋಹಿತ್ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಜಾತಿ ದೌರ್ಜನ್ಯಗಳಿಗೆ ಕಡಿವಾಣ ಹಾಕುವ ಸರ್ಕಾರದ ಪ್ರಶಂಸಾರ್ಹ ಕ್ರಮ ಒಂದೆಡೆಯಾದರೆ, ಮತ್ತೊಂದೆಡೆ ಮರ್ಯಾದೆಗೇಡು ಹತ್ಯೆಯನ್ನು ತಡೆಗಟ್ಟಲು ಅವಶ್ಯವಾದ ಮಾನ್ಯ ಕಾಯ್ದೆಯ ಬಗ್ಗೆ ಮೌನ ವಹಿಸಿರುವುದು ಸರ್ಕಾರದ ಅಸೂಕ್ಷ್ಮತೆಯನ್ನು ಎತ್ತಿ ತೋರಿಸುತ್ತದೆ.

ಕಾಂಗ್ರೆಸ್ ಸರ್ಕಾರದ ಮೂರು ವರ್ಷಗಳ ಆಡಳಿತದಲ್ಲಿ ರಾಜ್ಯದಲ್ಲಿ 12 ಸಾವಿರ ಪೋಕ್ಸೋ ಮೊಕದ್ದಮೆಗಳು ದಾಖಲಾಗಿವೆ, 1700ಕ್ಕೂ ಹೆಚ್ಚು ಅತ್ಯಾಚಾರಗಳು ನಡೆದಿವೆ, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳ ಸಂಖ್ಯೆ ಈ ಮೂರು ವರ್ಷಗಳಲ್ಲಿ 18 ಸಾವಿರ ಮೀರಿದೆ. ಈ ಸಾಮಾಜಿಕ ಅಪರಾಧಗಳನ್ನು ತಡೆಗಟ್ಟಲು, ಮಾದಕ ವಸ್ತುಗಳನ್ನು ತಡೆಗಟ್ಟುವಂತೆಯೇ ಸಾಂಸ್ಥಿಕ ನೆಲೆಗಳನ್ನು ಸಾಮಾಜಿಕ ಅರಿವು ಮೂಡಿಸಲು ಸ್ಥಾಪಿಸಬೇಕಿದೆ. ವ್ಯಾಪಕವಾಗಿರುವ ಜ್ಞಾನ ಕೇಂದ್ರಗಳು ಅಪರಾಧಿಕ ಜಗತ್ತನ್ನು ಸರಿಪಡಿಸಲು ಸಾಧ್ಯವಾಗುತ್ತಿಲ್ಲ ಎಂಬ ವಾಸ್ತವ ಅರಿತು, ಅರಿವಿನ ಕೇಂದ್ರಗಳನ್ನು ಪ್ರತಿ ತಾಲ್ಲೂಕಿನಲ್ಲೂ ಸ್ಥಾಪಿಸಿ, ಎಲ್ಲ ಸ್ತರಗಳಲ್ಲೂ, ಎಲ್ಲ ಕ್ಷೇತ್ರಗಳಲ್ಲೂ ಲಿಂಗ ಸಂವೇದನೆಯನ್ನು, ಲಿಂಗ ಸೂಕ್ಷ್ಮತೆಯನ್ನು ಹೆಚ್ಚಿಸುವ ಉಪಕ್ರಮಗಳು ಅತ್ಯವಶ್ಯವಾಗಿವೆ. ಈ ನಿಟ್ಟಿನಲ್ಲಿ ಸರ್ಕಾರ ತನ್ನದೇ ಉಸ್ತುವಾರಿಯಲ್ಲಿ ‘ಅರಿವಿನ ಕೇಂದ್ರಗಳನ್ನು’ ಸೂಕ್ತ ಸಿಬ್ಬಂದಿಯೊಡನೆ ಸ್ಥಾಪಿಸಬೇಕಿದೆ. ಬಹುಶಃ ರಾಜ್ಯ ಸರ್ಕಾರಕ್ಕೆ ಈ ಆಲೋಚನೆಯೇ ಅಪಥ್ಯವಾಗಬಹುದು. ಆದರೆ ಇದು ಅನಿವಾರ್ಯವಾಗಿ ಆಗಬೇಕಿರುವ ಕೆಲಸ.
ಶಿಕ್ಷಣ, ಆರೋಗ್ಯ, ತಳಮಟ್ಟದ ಉದ್ಯೋಗ, ಮಹಿಳೆಯರ ರಕ್ಷಣೆ ಮತ್ತು ಯುವ ಸಮೂಹದ ಸುಭದ್ರ ಭವಿಷ್ಯ ಈ ಅಂಶಗಳು ಸರ್ಕಾರಗಳ ಆದ್ಯತೆಯಾದಾಗ ಮಾತ್ರ ʼ ದೂರದೃಷ್ಟಿಯ ʼ ಬಜೆಟ್‌ಗಳನ್ನು ನಿರೀಕ್ಷಿಸಲು ಸಾಧ್ಯ. ಆದರೆ ನವ ಉದಾರವಾದಿ ಆರ್ಥಿಕತೆಯಲ್ಲಿ ಈ ವಲಯಗಳ ಬಗ್ಗೆ ದೃಷ್ಟಿಹೀನವಾಗಿರುವ ರಾಜಕೀಯ ಪಕ್ಷಗಳು ನಮ್ಮನ್ನು ಆಳುತ್ತಿವೆ. ತತ್ಪರಿಣಾಮವಾಗಿ ಶಿಥಿಲವಾಗುತ್ತಿರುವ ಭವಿಷ್ಯದ ತಳಪಾಯವನ್ನು ದುರಸ್ತಿ ಮಾಡುವುದರ ಬದಲು, ಬಿರುಕುಗಳು ಕಾಣದಂತೆ ಮಾಡುವ ತಾತ್ಕಾಲಿಕ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಇದು ಕುಸಿಯುತ್ತಿರುವ ಕಟ್ಟಡದ ಅಡಿಪಾಯವನ್ನು ಗಮನಿಸದೆ, ಗೋಡೆಗಳಿಗೆ ಬಣ್ಣ ಬಳಿದಂತಾಗುತ್ತದೆ. ಬಾಹ್ಯ ನೋಟಕ್ಕೆ ಸುಂದರವಾಗಿ ಕಾಣುವ ಸ್ಥಾವರಗಳು ಮುಂದೊಂದು ದಿನ ಭೂಗತವಾಗುತ್ತವೆ. ಮಾರುಕಟ್ಟೆ
ನಿರ್ಣಾಯಕ ಜನರನ್ನು ತಲುಪದ ಅಭಿವೃದ್ಧಿ
ಇಂತಹ ಒಂದು ಸನ್ನಿವೇಶದಲ್ಲಿ ಚುನಾಯಿತ ಸರ್ಕಾರಗಳು ಅಂಕಿಸಂಖ್ಯೆಗಳೊಡನೆ ಆಟವಾಡುತ್ತಾ ಜನಸಾಮಾನ್ಯರನ್ನು ಶಾಶ್ವತವಾಗಿ ಭ್ರಮಾಧೀನ ಸ್ಥಿತಿಯಲ್ಲಿ ಇರಿಸುತ್ತಿವೆ. ವಾರ್ಷಿಕ ಬಜೆಟ್ ಎಂಬ ಪ್ರಹಸನ ಈ ಆಟವನ್ನು ಆಕರ್ಷಣೀಯವನ್ನಾಗಿ ಮಾಡುವ ಒಂದು ಪ್ರಕ್ರಿಯೆಯಷ್ಟೆ . ಅಂಕಿ-ಸಂಖ್ಯೆಗಳು, ಮಾರುಕಟ್ಟೆ ಸೂಚ್ಯಂಕಗಳು ಮೇಲ್ವರ್ಗದ, ಮೇಲ್ಪದರದ (Elite) ಸಮಾಜವನ್ನು ತಲುಪುತ್ತವೆ. ಕಡತಗಳಲ್ಲಿ ಕೊಳೆಯುತ್ತವೆ.
ಆದರೆ ಸಮಾಜದ ತಳಸ್ತರದಲ್ಲಿರುವ ಅಸಂಖ್ಯಾತ ಜನರನ್ನು ತಲುಪುವುದು ಸರ್ಕಾರಗಳು ಕಲ್ಪಿಸುವ ಅವಕಾಶಗಳು, ಸೃಷ್ಟಿಸುವ ಉದ್ಯೋಗ, ರೂಪಿಸುವ ಜೀವನೋಪಾಯದ ಹಾದಿಗಳು. ಈ ಬಹುಸಂಖ್ಯಾತ ಜನತೆಯ ಬದುಕನ್ನು ಸುಸ್ಥಿರವಾಗಿಸುವುದು ಸರ್ಕಾರಗಳ ಮೇಲ್ಪದದರದ ಆರ್ಥಿಕತೆ (Macro Economics) ಮತ್ತು ತತ್ಸಂಬಂಧಿ ನೀತಿಗಳು. ಇಲ್ಲಿ ಕಾಣುವ ಜೀವಂತಿಕೆ ಮತ್ತು ಚಲನಶೀಲತೆಯೇ ಸರ್ವತೋಮುಖ, ಸರ್ವಾಂಗೀಣ ಅಭಿವೃದ್ಧಿಯ ಅಡಿಪಾಯ.
ನವ ಉದಾರವಾದವನ್ನು ನಿರಾಕರಿಸದ ಹೊರತು, ಇದು ಸಾಧ್ಯವಾಗುವುದಿಲ್ಲ.. ಅಲ್ಲಿಯವರೆಗೂ ಬಜೆಟ್ ಸುತ್ತಲಿನ ಸಂಕಥನಗಳು ತಾತ್ಕಾಲಿಕ ಶಮನಕಾರಿ ಯಂತ್ರಗಳಂತೆ ಕಾರ್ಯನಿರ್ವಹಿಸುತ್ತಿರುತ್ತವೆ. ಭ್ರಮಾಧೀನ ಸಮಾಜ ಮತ್ತಷ್ಟು ಭ್ರಮೆಗಳಿಗೆ ಒಳಗಾಗುತ್ತಲೇ ಇರುತ್ತವೆ. ಬಂಡವಾಳಶಾಹಿಯ ಕ್ರೌರ್ಯ ಹೊಸ ರೂಪಗಳಲ್ಲಿ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳುತ್ತಿರುತ್ತದೆ.
ಇದನ್ನೂ ನೋಡಿ: ಮನರೇಗಾ ಗ್ರಾಮೀಣ ಮಹಿಳೆಯರ ಜೀವನಾಡಿ; ಯೋಜನೆ ದುರ್ಬಲಗೊಳಿಸಬೇಡಿ – ದೇವಿ Janashakthi Media
