ಮಳವಳ್ಳಿ: ಜೆಡಿಎಸ್ ಶಾಸಕ ಮರಿತಿಬ್ಬೇಗೌಡ ಅವರು ತಳಗವಾದಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯನ್ನು ರಕ್ಷಿಸಲು ನಾನು ಯಾರಿಗೂ ಫೋನ್ ಮಾಡಿಲ್ಲ ಎಂದು ನಿಮಗೆ ಫೋನ್ ಮಾಡಿದ ಎಲ್ಲರಿಗೂ ಹೇಳಿದ್ದೀರಿ. ಆದರೆ, ನೀವು ಯಾರಿಗೆ, ಯಾವಾಗ ಪೋನ್ ಮಾಡಿದ್ದೀರಿ? ಏನು ಹೇಳಿದ್ದೀರಿ? ಎಂಬ ದಾಖಲೆ ನಮ್ಮ ಬಳಿ ಇದೆ ಎಂದು ತಳಗವಾದಿ ಸೊಸೈಟಿ ವ್ಯಾಪ್ತಿಯ ರೈತರು ಮತ್ತು ಸಾರ್ವಜನಿಕರ ಆಗ್ರಹಿಸಿದ್ದಾರೆ.
ತಳಗವಾದಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಭ್ರಷ್ಟಾಚಾರದ ವಿರುದ್ಧ ಕಳೆದ ಎರಡು ವರ್ಷಗಳಿಂದ ರೈತರು ಪ್ರತಿಭಟಿಸುತ್ತಿದ್ದಾರೆ. ಅಕ್ರಮ ಎಸಗಿದವರನ್ನು ಶಿಕ್ಷಿಸಲು ನಿಮ್ಮಿಂದ ಸಾಧ್ಯವಾಗದಿರುವುದ ಖಂಡನೀಯ ಎಂದು ತಿಳಿಸಿದ್ದಾರೆ.
ಮರಿತಿಬ್ಬೇಗೌಡ ಅವರ ಸುಳ್ಳಿನಿಂದ ಸಾವಿರಾರು ರೈತರ ಬದುಕು ಮತ್ತು ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಬಾಲ್ಯದ ಸ್ನೇಹಿತರೂ, ನಿಮಗೆ ಮತ ನೀಡಿದ ಶಿಕ್ಷಕರು ಅಸಹ್ಯ ಪಡುವಷ್ಟು ಸುಳ್ಳಿನ ಮೇಲೆ ಸುಳ್ಳನ್ನು ಹೇಳುತ್ತಿದ್ದಾರೆ. ಬಡವರು, ವಿಧವೆಯರು, ಅಸಹಾಯಕರ ಕೋಟ್ಯಾಂತರ ರೂಪಾಯಿಗಳನ್ನು ತಿಂದು ಮಜಾ ಮಾಡುತ್ತಿರುವ ಮನೆ ಮುರುಕರನ್ನು ರಕ್ಷಿಸಲು ನೀವು ಮುಂದಾಗುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಮರಿತಿಬ್ಬೇಗೌಡರವರು ಫೋನ್ ಕರೆಯಲ್ಲಿ ಸರಿಯಾಗಿ 8 ನಿಮಿಷ 8 ಸೆಕೆಂಡ್ ಮಾತನಾಡಿ, “ಬೀಗ ಒಡೆದು ಚಾರ್ಜ್ ನೀಡಲು ದಮಕಿ ಹಾಕಿದ್ದೀರಿ”, ಅಷ್ಟಕ್ಕೂ ಬೀಗ ಒಡೆದು ಚಾರ್ಜ್ ಕೊಡಬೇಕಾದ ಅಗತ್ಯವೇನು? ಚಾರ್ಜ್ ಕೊಡಲು ಸಿಇಒ ಸಿದ್ದವಿರುವಾಗ ಬೀಗ ಒಡೆಯುವುದು ಏಕೆ? ಚಾರ್ಜ್ ಕೊಡುವುದು ಎಂದರೆ ಬೀಗದ ಕೀ ಕೊಟ್ಟು ಬರುವುದು ಎಂಬುದು ನಿಮ್ಮ ತಿಳುವಳಿಕೆಯೆ? ಕೀ ಕೊಟ್ಟು ಬಂದರೆ ನಿಮ್ಮ ಶಿಷ್ಯರು ಬೇಕಾದಂತೆ ದಾಖಲೆಗಳನ್ನು ಬರೆದುಕೊಳ್ಳಲಿ ಎಂಬುದು ನಿಮ್ಮ ಅಂಬೋಣವೆ? ಹಾಗೇನಾದರೂ ಬೀಗ ಒಡೆದರೆ ರೈತರು ಅಧಿಕೃತವಾಗಿ ಸುಸ್ತಿದಾರರಾಗುತ್ತಾರೆ. ಅದರ ಸಂಪೂರ್ಣ ಹೊಣೆ ನಿಮ್ಮದಾಗುತ್ತದೆ ಎಂದು ರೈತರು ಸಾರ್ವಜನಿಕರ ಆಗ್ರಹವಾಗಿದೆ.