ಉಪರಾಷ್ಟ್ರಪತಿ ಚುನಾವಣೆ: ವಿಪಕ್ಷಗಳ ಅಭ್ಯರ್ಥಿ ಮಾರ್ಗರೇಟ್‌ ಆಳ್ವ ನಾಮಪತ್ರ ಸಲ್ಲಿಕೆ

ನವದೆಹಲಿ: ಉಪರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾರ್ಗರೇಟ್​ ಆಳ್ವ ಇಂದು(ಜುಲೈ 19) ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಅಧೀರ್ ರಂಜನ್ ಚೌಧರಿ, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಸಿಪಿಐ ರಾಷ್ಟ್ರೀಯ ನಾಯಕ ಡಿ.ರಾಜಾ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಶಿವಸೇನೆಯ ಸಂಜಯ್ ರಾವತ್ ಸೇರಿದಂತೆ ಇತರೆ ಪ್ರತಿಪಕ್ಷದ ನಾಯಕರು ಉಪಸ್ಥಿತರಿದ್ದರು.

ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನಾಂಕವಾಗಿದೆ. ತಮ್ಮನ್ನು ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಘೋಷಿಸಿದಾಗ ನಾಯಕರಿಗೆ ಧನ್ಯವಾದ ಹೇಳಿದ್ದ ಮಾರ್ಗರೇಟ್ ಆಳ್ವ, ಇದು ತುಂಬಾ ಜಿದ್ದಾಜಿದ್ದಿನ ಚುನಾವಣೆ, ಆದರೆ ನಾನು ಸವಾಲನ್ನು ಎದುರಿಸಲು ಹೆದರುವುದಿಲ್ಲ ಎಂದು ಹೇಳಿದ್ದರು.

ಎನ್​ಡಿಎ ಅಭ್ಯರ್ಥಿ ​ವಿರುದ್ಧ ಹೋರಾಟ ಮಾಡಲಿದ್ದೇನೆ ಎಂದಿರುವ ಮಾರ್ಗರೇಟ್‌ ಆಳ್ವ, ನಾನು ಯಾರಿಗೂ ಹೆದರುವುದಿಲ್ಲ, ಇದು ಕಠಿಣ ಹೋರಾಟ ಎಂಬುದು ನನಗೆ ಗೊತ್ತು. ಆದರೆ, ರಾಜಕೀಯದಲ್ಲಿ ಸೋಲು – ಗೆಲುವು ಮುಖ್ಯವಲ್ಲ, ಹೋರಾಟ ಅತಿ ಮುಖ್ಯ. ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಎಲ್ಲ ನಾಯಕರಿಗೂ ಧನ್ಯವಾದ ತಿಳಿಸಿದ್ದಾರೆ.

ಏಪ್ರಿಲ್ 14, 1942ರಲ್ಲಿ ಮಂಗಳೂರಿನಲ್ಲಿ ಜನಿಸಿದ ಮಾರ್ಗರೇಟ್ ಆಳ್ವ ಬಿಎ ಪದವಿ ಶಿಕ್ಷಣದ ನಂತರ ಬೆಂಗಳೂರಿನ ಮೌಂಟ್ ಕ್ಯಾರಮೆಲ್ ಕಾಲೇಜು ಮತ್ತು ಸರ್ಕಾರಿ ಕಾನೂನು ಕಾಲೇಜಿನಿಂದ ಎಲ್ಎಲ್‌ಬಿ ಪದವಿ ಪಡೆದರು. ಶಾಲಾ ದಿನಗಳಲ್ಲಿ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದ, ಮಾರ್ಗರೇಟ್ ಆಳ್ವ, ವಿದ್ಯಾರ್ಥಿ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದರು. ವಕೀಲರಾಗಿ ವೃತ್ತಿ ಜೀವನ ಆರಂಭಿಸಿದ ಅವರು, 1964ರಲ್ಲಿ ನಿರಂಜನ್ ಆಳ್ವ ಅವರನ್ನು ಮದುವೆಯಾದರು.  ಇವರಿಗೆ ಒಬ್ಬ ಮಗಳು ಮತ್ತು ಮೂವರು ಪುತ್ರರಿದ್ದಾರೆ. 2018ರಲ್ಲಿ ಅವರ ನಿರಂಜನ್‌ ಆಳ್ವ ಮೃತಪಟ್ಟಿದ್ದಾರೆ. ಮಾರ್ಗರೇಟ್ ಆಳ್ವ ಅವರು ನಾಲ್ಕು ಬಾರಿ ರಾಜ್ಯಸಭೆ ಮತ್ತು ಒಂದು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. 1974ರಲ್ಲಿ ಕಾಂಗ್ರೆಸ್​​ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ರಾಜೀವ್ ಗಾಂಧಿ ಮತ್ತು ಪಿವಿ ನರಸಿಂಹ ರಾವ್ ಸಚಿವ ಸಂಪುಟದಲ್ಲಿ ಸಚಿವೆಯಾಗಿ ಸೇವೆ ಸಲ್ಲಿಸಿದ್ದಾರೆ. ಗೋವಾ, ರಾಜಸ್ಥಾನ, ಗುಜರಾತ್ ಮತ್ತು ಉತ್ತರಾಖಂಡದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಮಾರ್ಗರೇಟ್‌ ಆಳ್ವ ಅವರಿಗೆ ದೇಶದ ವಿವಿದೆಡೆಯ 18 ಪಕ್ಷಗಳು ಬೆಂಬಲ ಸೂಚಿಸಿವೆ. ಹಾಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಧಿಕಾರಾವಧಿ ಆಗಸ್ಟ್​​ 10ರಂದು ಕೊನೆಗೊಳ್ಳಲಿದೆ. ಆಗಸ್ಟ್​ 6 ರಂದು ಚುನಾವಣೆ ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ. ಎನ್​​ಡಿಎ ಅಭ್ಯರ್ಥಿಯಾಗಿ ಜಗದೀಪ್ ಧನ್ಖರ್ ಕಣದಲ್ಲಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *