ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ ಆರೋಪ: ಇನ್ಸ್​ಪೆಕ್ಟರ್​ ಅಮಾನತು

ಹೈದರಾಬಾದ್​ : ಮಹಿಳೆಯೊಬ್ಬರ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಹೈದರಾಬಾದ್​ನ ಮರೇಡಪಲ್ಲಿ ಇನ್ಸ್​ಪೆಕ್ಟರ್​ ನಾಗೇಶ್ವರ್​​ ರಾವ್​ರನ್ನು ಪೊಲೀಸ್​ ಕಮಿಷನರ್ ಸಿ.ವಿ.ಆನಂದ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಮರೇಡಪಲ್ಲಿ ಪೊಲೀಸ್ ಇನ್ಸ್​ ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ನಾಗೇಶ್ವರ್ ರಾವ್ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಜುಲೈ 7ರಂದು ಮಹಿಳೆಯೊಬ್ಬರು ವನಸ್ಥಲಿಪುರಂ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೇ, ತನ್ನ ಪತಿ ಮೇಲೂ ಹಲ್ಲೆ ಮಾಡಲಾಗಿದೆ ಎಂದು ಮಹಿಳೆ ಆರೋಪಿಸಿದ್ದು,ಈ ಸಂಬಂಧ ವನಸ್ಥಲಿಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ಇದೇ ಪ್ರಕರಣದಲ್ಲಿ ನಾಗೇಶ್ವರ್ ರಾವ್​ರನ್ನು ಪೊಲೀಸರು ಬಂಧಿಸುವ ಸಾಧ್ಯತೆಯೂ ಇದೆ.

ಅಲ್ಲದೇ, ಸಂತ್ರಸ್ತೆ ಮತ್ತು ಆಕೆಯ ಪತಿಯನ್ನು ನಾಗೇಶ್ವರ್​ ರಾವ್ ಕಾರಿನಲ್ಲಿ ಬಲವಂತವಾಗಿ ಕರೆದುಕೊಂಡು ಹೋಗುತ್ತಿದ್ದರು. ಆದರೆ, ಈ ವೇಳೆ ಇಬ್ರಾಹಿಂಪಟ್ಟಣದಲ್ಲಿ ಕಾರು ಅಪಘಾತಕ್ಕೀಡಾಯಿತು. ಇದರಿಂದ ತಾವು ತಪ್ಪಿಸಿಕೊಂಡು ಬಂದಿದ್ದೇವೆ. ಇಷ್ಟೇ ಅಲ್ಲ, ಬಂದೂಕಿನಿಂದ ನಮಗೆ ಇನ್ಸ್​ಪೆಕ್ಟರ್ ಬೆದರಿಸಿದ್ದಾರೆ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

ಈ ದೂರಿನ ಆಧಾರದ ಮೇಲೆ ಅತ್ಯಾಚಾರ, ಕೊಲೆ ಯತ್ನ, ಅಪಹರಣ ಆರೋಪದಡಿ ಪ್ರಕರಣ ದಾಖಲಿಸಿಕೊಂಡು, ಇನ್ಸ್​ಪೆಕ್ಟರ್​ ನಾಗೇಶ್ವರ್​​ ರಾವ್​ರನ್ನು ಅಮಾನತುಗೊಳಿಸಲಾಗಿದೆ.  ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ. ಇತ್ತ, ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳ ಪಡಿಸಲಾಗಿದೆ. ಇಂದು ಬೆಳಗ್ಗೆ ನಾಗೇಶ್ವರ್‌ ರಾವ್‌ರವರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Donate Janashakthi Media

Leave a Reply

Your email address will not be published. Required fields are marked *