ಮಾರ್ಚ್ 4 ರಿಂದ 30ರವರೆಗೆ ʻವಿಧಾನಸೌಧʼದ ಸುತ್ತಮುತ್ತ 144 ಸೆಕ್ಷನ್ ಜಾರಿ

ಬೆಂಗಳೂರು : ವಿಧಾನಸೌಧದ 2 ಕಿ. ಮೀ. ವ್ಯಾಪ್ತಿಯಲ್ಲಿ ಮಾರ್ಚ್ 4 ರಿಂದ 30ರ ತನಕ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಸಮಯದಲ್ಲಿ ಪ್ರತಿಭಟನೆ ನಡೆಸುವುದು ನಿರ್ಬಂಧಿಸಲಾಗಿದೆ. ಈ ಕುರಿತು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ಕೆಲವು ರಾಜಕೀಯ ಪಕ್ಷಗಳು, ಸಂಘಟನೆಗಳು ವಿಧಾನಸೌಧದ ಮುಂದೆ ಧರಣಿ, ಪ್ರತಿಭಟನೆ, ಜಾಥ ನಡೆಸುವ ಸಾಧ್ಯತೆ ಇದೆ ಎಂಬ ಗುಪ್ತಚರ ಇಲಾಖೆ ಮಾಹಿತಿ ಹಿನ್ನಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು 2 ಕಿಮಿ ವ್ಯಾಪ್ತಿಯಲ್ಲಿ ಯಾವುದೇ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ ಎಂದು ಕಮಲ್ ಪಂಥ್ ತಿಳಿಸಿದ್ದಾರೆ.

ಪ್ರತಿದಿನ ಬೆಳಗ್ಗೆ 6ರಿಂದ ಮಧ್ಯರಾತ್ರಿ 12ವರೆಗೆ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ಈ ಅವಧಿಯಲ್ಲಿ ಪ್ರತಿಭಟನೆ, ರ‍್ಯಾಲಿ, ಧರಣಿ, ಗುಂಪುಗೂಡುವುದು ನಿಷೇಧವಾಗಿರಲಿದೆ. ಕಾನೂನು ನಿಯಮ ಉಲ್ಲಂಘನೆ ಕಂಡು ಬಂದರೆ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು‌ ಕಮಿಷನರ್ ತಿಳಿಸಿದ್ದಾರೆ.

ಇದನ್ನೂ ಓದಿ : ಚಿತ್ರನಟ, ಹೋರಾಟಗಾರ ಚೇತನ್ ಜೈಲಿನಿಂದ ಬಿಡುಗಡೆ

ಮಾರ್ಚ್ 4ರಂದು ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಅಧಿವೇಶನ ಮುಗಿಯುವ ತನಕ ವಿಧಾನಸೌಧದ 2 ಕಿ. ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಪೊಲೀಸ್‌ ಇಲಾಖೆಯ ಈ ಕಾರ್ಯಕ್ಕೆ ಜನಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆ ನಡೆಸುವುದು ಜನರ ಹಕ್ಕು. ಸರಕಾರಕ್ಕೆ ಮನವಿ ಸಲ್ಲಿಸುವ ಅಥವಾ ಅವರ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರಬೇಕೆಂಬ ಕಾರಣದಿಂದ ಹೋರಾಟಗಳನ್ನು ನಡೆಸಲಾಗುತ್ತದೆ.  ಸರಕಾರ ಈಡೇರಿಸಬಹುದಾದ ಬೇಡಿಕೆಗಳನ್ನೆ ಜನ ಕೇಳುತ್ತಾರೆ ಹೊರತು ಕಷ್ಟದ ಬೇಡಿಕೆಗಳನ್ನು ಅಲ್ಲ. ಹಾಗಾಗಿ ಈ ರೀತಿ ನಿರ್ಬಂದ ಹೇರುವುದು ಸರಿಯಾದ ಕ್ರಮವಲ್ಲ. ಪ್ರತಿಭಟನೆಗಳು ನಡೆಯುತ್ತವೆ. ಅವುಗಳನ್ನು ತಡೆಯಬಾರದು ಹಾಗೇನಾದರೂ ತಡೆದರೆ ಮುಂದಾಗಬಹುದಾದ ಅನಾಹುತಕ್ಕೆ ಪೊಲೀಸ್‌ ಇಲಾಖೆ ಮತ್ತು ಸರಕಾರವೇ ಕಾರಣವಾಗಲಿದೆ ಎಂದು ಜನಪರ ಸಂಘಟನೆಗಳು ಎಚ್ಚರಿಸಿವೆ

Donate Janashakthi Media

Leave a Reply

Your email address will not be published. Required fields are marked *