ಬೆಂಗಳೂರು: 13ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿ ಸಭೆಯ ತೀರ್ಮಾನದಂತೆ ಮಾರ್ಚ್ 3ರಿಂದ 10 ದಿನಗಳ ಕಾಲ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಲನಚಿತ್ರೋತ್ಸವದ ಮಾಹಿತಿಗಳನ್ನು ಬಿಡುಗಡೆ ಮಾಡಿದರು.
ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂಟರ್ನ್ಯಾಷನಲ್ ಫೆಡರೇಷನ್ ಆಫ್ ಫಿಲಂ ಪ್ರೊಡ್ಯೂಸರ್ಸ್ ಅಸೋಸಿಯೇಷನ್ ಮಾನ್ಯತೆ ಸಿಕ್ಕಿದೆ. ಚಿತ್ರೋತ್ಸವಕ್ಕೆ ಜಾಗತಿಕ ಮನ್ನಣೆ ದೊರೆತಿದ್ದು, ವಿಶ್ವದ 45 ಜಾಗತಿಕ ಮಟ್ಟದ ಚಲನಚಿತ್ರೋತ್ಸವಗಳ ಪೈಕಿ ಬೆಂಗಳೂರು ಸೇರಿರುವುದು ಹೆಮ್ಮೆಯ ಸಂಗತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಸುದ್ದಿಗಾರರೊಂದಿಗೆ ಮಾತನಾಡಿ ಮುಖ್ಯಮಂತ್ರಿ ಅವರೊಂದಿಗೆ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಬಗ್ಗೆ ಚರ್ಚೆ ನಡೆಸಲಾಯಿತು. ಚಲನಚಿತ್ರೋತ್ಸವ ನಡೆಸಲು ಮುಖ್ಯಮಂತ್ರಿ ಆದೇಶ ನೀಡಿದ್ದಾರೆ. ಭಾರತದಲ್ಲಿ ಇದು ಐದನೇ ದೊಡ್ಡ ಚಲನಚಿತ್ರೋತ್ಸವ. ಕೋವಿಡ್ ನಿಯಮಾವಳಿ ಪಾಲಿಸಿ ಚಲನಚಿತ್ರೋತ್ಸವ ನಡೆಸುತ್ತೇವೆ. ಜಿಕೆವಿಕೆಯಲ್ಲಿ ಮಾರ್ಚ್ 3 ರಂದು 13ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆಯಾಗಲಿದೆ.
ತೋಟಗಾರಿಕಾ ಸಚಿವ ಮುನಿರತ್ನ, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಂ, ಸಂಘಟನಾ ಸಮಿತಿ ಸದಸ್ಯೆ, ಖ್ಯಾತ ಕಲಾವಿದೆ ಸುಧಾರಾಣಿ, ಕಲಾ ನಿರ್ದೇಶಕ ಶಶಿಧರ್ ಅಡಪ, ಕಲಾವಿದೆ ಸೋನುಗೌಡ, ಕಲಾ ನಿರ್ದೇಶಕ ಹೆಚ್.ಎನ್.ನರಹರಿರಾವ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಆಯುಕ್ತ ಡಾ. ಪಿ.ಎಸ್.ಹರ್ಷಾ ಉಪಸ್ಥಿತರಿದ್ದರು.