ಬೆಂಗಳೂರು: ನಗರದಲ್ಲಿ ಅನುಮತಿ ಇಲ್ಲದೆ ಸೇವೆ ನೀಡುತ್ತಿರುವ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸಂಚಾರವನ್ನು ನಿಷೇಧಿಸಬೇಕೆಂದು ನಾಳೆ (ಮಾರ್ಚ್ 20) ಆಟೋ ಸಂಚಾರ ಬಂದ್‌ಗೆ ಕರೆ ನೀಡಿರುವ ಬೆಂಗಳೂರು ಆಟೋರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟ ಇಂದು ಮಧ್ಯರಾತ್ರಿ 12 ರಿಂದ 24 ಗಂಟೆಗಳ ಕಾಲ ನಗರದಲ್ಲಿ ಆಟೋ ಸಂಚಾರ ಸ್ಥಗಿತಗೊಳ್ಳಲಿದೆ.
ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್(ಎಆರ್‌ಡಿಯು-ಸಿಐಟಿಯು) ಮತ್ತು ಹಲವು ಆಟೋ ಚಾಲಕ ಸಂಘಟನೆಗಳು ತಮ್ಮ ಹಕ್ಕುಗಳನ್ನು ಈಡೇರಿಸಬೇಕೆಂದು ಒಟ್ಟಾಗಿದ್ದು, ಈಗಾಗಲೇ ಮೂರು ದಿನಗಳು ನಗರದಾದ್ಯಂತ ಚಾಲಕರು ತೋಳಿಗೆ ಕಪ್ಪುಪಟ್ಟಿ ಧರಿಸಿ, ಆಟೋಗಳಿಗೆ ಕಪ್ಪು ಬಾವುಟಗಳನ್ನು ಸಂಚಾರ ನಡೆಸಿದ್ದಾರೆ ಆದರೂ ಸಹ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಆಟೋ ಸಂಚಾರ ಸ್ಥಗಿತ ಹಾಗೂ ಪ್ರತಿಭಟನೆಗೆ ಮುಂದಾಗಿದ್ದಾರೆ.
ಇದನ್ನು ಓದಿ: ರ‍್ಯಾಪಿಡೋ ಬೈಕ್ ಟ್ಯಾಕ್ಸಿ ನಿಷೇಧಿಸುವಂತೆ ಆಗ್ರಹಿಸಿ ಮಾ.20ರಂದು ಆಟೋ ಚಾಲಕರಿಂದ ಮುಖ್ಯಮಂತ್ರಿ ಮನೆ ಮುತ್ತಿಗೆ
ರ‍್ಯಾಪಿಡೋ ನಂತಹ ಬೈಕ್ ಟ್ಯಾಕ್ಸಿ ಸೇವೆಗಳಿಂದಾಗಿ ನಿತ್ಯದ ಜೀವನದ ನಿರ್ವಹಣೆ ಕಷ್ಟಕರವಾಗಿದೆ. ಸರಿಯಾಗಿ ಬಾಡಿಗೆ ಸಿಗುತ್ತಿಲ್ಲ. ಜೀವನಕ್ಕೆ ತೊಂದರೆಯಾಗಿದೆ. ಅನಧಿಕೃತ ಸಂಚಾರಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದ್ದಾರೆ.
ನಗರದ 21 ಆಟೋ ಚಾಲಕರ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದ್ದು, 2 ಲಕ್ಷದ 10 ಸಾವಿರ ಆಟೋಗಳ ಸಂಚಾರ ಬಂದ್ ಆಗುವ ಸಾಧ್ಯತೆಯಿದೆ. ಓಲಾ, ಊಬರ್ ಸೇವೆ ನೀಡುವ ಆಟೋ ಸಂಚಾರವೂ ಸ್ಥಗಿತಗೊಳ್ಳಲಿದೆ.
ಸಾರಿಗೆ ಇಲಾಖೆ ಮತ್ತು ಸಾರಿಗೆ ಸಚಿವರ ಕುಮ್ಮಕ್ಕಿನಿಂದ ಬೆಂಗಳೂರಿನಲ್ಲಿ ಕಳೆದ ಎರಡು ವರ್ಷಗಳಿಂದ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿಗಳ ಹಾವಳಿ ಹೆಚ್ಚಾಗಿದೆ. ದೆಹಲಿ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಈ ಸೇವೆಗಳು ಈಗಾಗಲೇ ಬಹಿಷ್ಕರಿಸಲಾಗಿದೆ. ಚುನಾವಣೆಗೂ ಮುನ್ನ ಇವುಗಳನ್ನು ನಿಯಂತ್ರಿಸದಿದ್ದರೇ ಚುನಾವಣೆಯನ್ನೇ ಬಹಿಷ್ಕರಿಸಲಾಗುವುದು ಎಂದು ಒಕ್ಕೂಟ ಆರೋಪಿಸಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ