ಮಾ.14-15ರಂದು ದೇವದಾಸಿ ಮಹಿಳೆಯರ ಅಹೋರಾತ್ರಿ ಧರಣಿ ಸತ್ಯಾಗ್ರಹ

ಬೆಂಗಳೂರು: ಈ ಸಾಲಿನ ರಾಜ್ಯ ಬಜೆಟ್ಟಿನಲ್ಲಿ ದೇವದಾಸಿ ಮಹಿಳೆಯರ ಹಕ್ಕೊತ್ತಾಯಗಳನ್ನು ಕಡೆಗಣಿಸಿರುವ ಸರಕಾರದ ನೀತಿಗಳನ್ನು ಪ್ರತಿರೋಧಿಸಿ ಮಾರ್ಚ್ 14-15ರಂದು ವಿಧಾನಸೌಧದೆದುರು ಬೃಹತ್ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ಧರಣಿಯಲ್ಲಿ ರಾಜ್ಯದ ವಿವಿದೆಡೆಗಳಿಂದ ಸುಮಾರು 2,000 ದೇವದಾಸಿ ಮಹಿಳೆಯರು ಪಾಲ್ಗೊಳ್ಳಲಿದ್ದಾರೆ ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ತಿಳಿಸಿದೆ.

ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಮಾಳಮ್ಮ ಕಳೆದ ಮೂರು ಸರ್ಕಾರಗಳು ದೇವದಾಸಿ ಮಹಿಳೆಯರಿಗೆ ನೀಡಲಾಗುತ್ತಿರುವ ಮಾಸಿಕ ಸಹಾಯ ಧನವನ್ನು ರೂ.500 ಗಳಷ್ಟು ಹೆಚ್ಚಳ ಮಾಡುವುದಾಗಿ ಪ್ರಕಟಿಸಿದರೂ, ಜಾರಿಗೆ ಬಂದಿಲ್ಲ. ಈಗ, ಬಸವರಾಜ ಬೊಮ್ಮಾಯಿ ಸಹ ಉಪೇಕ್ಷೆ ಮಾಡಿದೆ. ಶಾಸಕರು, ಮಂತ್ರಿಗಳು ಯಾವುದೇ ಚರ್ಚೆಯಿಲ್ಲದೇ ತಲಾ ಮಾಸಿಕ 20,000 ರೂ.ಗಳಿಂದ 40,000 ರೂ.ಗಳ ವರೆಗೆ ತಮ್ಮ ವೇತನ ಹೆಚ್ಚಳ ಮಾಡಿಕೊಂಡರು.  ಆದರೇ, ದೌರ್ಜನ್ಯದ ದೇವದಾಸಿ ಪದ್ಧತಿಯ ಕಪಿಮುಷ್ಠಿಯಿಂದ ಬಿಡುಗಡೆ ಹೊಂದಲು ದೇವದಾಸಿ ಮಹಿಳೆಯರಿಗೆ ನೀಡಲಾಗುತ್ತಿರುವ ಮಾಸಿಕ ಸಹಾಯಧನವನ್ನು 1500 ರೂ. ಗಳಿಂದ 3,000 ರೂ.ಗಳಿಗೆ ಹೆಚ್ಚಳ ಮಾಡದೇ ತಾರತಮ್ಯ ಎಸಗಿದೆ ಎಂದು ಆರೋಪಿಸಿದರು.

ದೇವದಾಸಿ ಮಹಿಳೆಯರು ಅವರ ಸಂಕಷ್ಠದಿಂದ ಪಾರಾಗಲು ನೆರವು ನೀಡುವ ಬದಲು ರಾಜ್ಯ ಸರಕಾರ ಅವರಿಗೆ ನೀಡಲಾಗುವ ಒಂದು ಲಕ್ಷ ರೂ. ವರೆಗಿನ ಸಹಾಯಧನದ ಸಾಲ ಸೌಲಭ್ಯವನ್ನು 30,000 ರೂ.ಗಳಿಗೆ ಕಡಿತ ಮಾಡಿದೆ. ರಾಜ್ಯದಲ್ಲಿ ಈಗಲೂ ಸುಮಾರು 20,000 ಮಹಿಳೆಯರು ಗಣತಿ ಪಟ್ಟಿಯಲ್ಲಿಲ್ಲವೆಂದೋ ಹಾಗೂ ಅಗತ್ಯ ವಯೋಮಾನ ವಿಲ್ಲವೆಂದೋ ಗುರುತಿಸದಿರುವುದರಿಂದ ಅವರಿಗೆ ಯಾವ ಸೌಲಭ್ಯವನ್ನು ಪಡೆಯಲಾಗುತ್ತಿಲ್ಲ. ಈಗಲೂ ರಾಜ್ಯದ ಎಲ್ಲಾ ದೇವದಾಸಿ ಮಹಿಳೆಯರನ್ನು ಸರಿಯಾಗಿ ಗುರುತಿಸಿ ಗಣತಿಯನ್ನು ವಿಸ್ತರಿಸಲು ನಿರಾಕರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಅಧ್ಯಕ್ಷೆ ಟಿ.ವಿ. ರೇಣುಕಾ ಅವರು, ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಢ ಪಂಗಡಗಳ ಅಭಿವೃದ್ಧಿಗಾಗಿ ಸುಮಾರು 28,000 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದು ಸರಕಾರ ಹೇಳಿಕೊಂಡಿದೆ. ಆದರೆ, ರಾಜ್ಯ ಸರ್ಕಾರದ  ಮುಖ್ಯಮಂತ್ರಿ, ಸಮಾಜ ಕಲ್ಯಾಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರುಗಳಿಗಾಗಲೀ, ಆ ಹಣದ ಒಂದು ಸಣ್ಣ ಮೊತ್ತವಾದ ರೂ.30 ಕೋಟಿಯನ್ನು ದೇವದಾಸಿ ಮಹಿಳೆಯರಿಗಾಗಿ ಮೀಸಲಿಡದಿರುವುದು ಸರಿಯಾದ ಕ್ರಮವಲ್ಲ ಎಂದು ಆರೋಪಿಸಿದರು.

ರಾಜ್ಯದ ಸುಮಾರು ಒಂದು ಲಕ್ಷ ದೇವದಾಸಿ ಮಹಿಳೆಯರ ಕುಟುಂಬದ ಸದಸ್ಯರ ಅಭಿವೃದ್ಧಿಗೆ ಅನುದಾನ ನೀಡಬಹುದೆಂಬ ಯೋಚನೆ ಭಾರದಿರುವುದು ಸ್ಪಷ್ಟವಾಗಿ ತಮ್ಮ ಸರಕಾರ ದೌರ್ಜನ್ಯದ ದೇವದಾಸಿ ಪದ್ಧತಿಯನ್ನು ತೊಡೆದು ಹಾಕುವಲ್ಲಿ ತೀವ್ರ ಮುತುವರ್ಜಿವಹಿಸುತ್ತಿಲ್ಲವೆಂಬುದನ್ನು ತೋರಿಸುತ್ತಿದೆ ಎಂದು ಬಿ. ಮಾಳಮ್ಮ ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭಿವೃದ್ದಿಗಾಗಿ ಮೀಸಲಿಟ್ಟ ಹಣವನ್ನು ಅಲ್ಲಿನ ತೀವ್ರ ಸಂಕಷ್ಠದಲ್ಲಿರುವವರಿಗೆ ಆದ್ಯತೆಯ ಮೇಲೆ ನೀಡುವ ಬದಲು ನಮ್ಮ ನಡುವೆ ಕೆಲವೇ ಶ್ರೀಮಂತರನ್ನು ಹುಟ್ಟು ಹಾಕಲು ಹಣದ ದುರುಪಯೋಗ ಮಾಡಿದಂತೆ ಕಂಡು ಬರುತ್ತದೆ. ದೇವದಾಸಿ ಮಹಿಳೆಯರ ಮಕ್ಕಳ ನಡುವಿನ ವಿವಾಹಕ್ಕೆ ಪ್ರೋತ್ಸಾಹ ಧನವನ್ನು ವಿಸ್ತರಿಸಲಿರುವ ಷರತ್ತುಗಳನ್ನು ತೆಗೆದಿಲ್ಲ, ತಕ್ಷಣವೇ ರಾಜ್ಯ ಸರಕಾರ ಈ ಬಜೆಟ್ ಅಂತಿಮಗೊಳ್ಳುವ ಪೂರ್ವದಲ್ಲಿಯೇ ದೇವದಾಸಿ ಮಹಿಳೆಯರಿಗೆ ನೀಡಲಾಗುವ ಮಾಸಿಕ ಸಹಾಯ ಧನವನ್ನು ರೂ.3,000 ಗಳಿಗೆ ಕನಿಷ್ಟ ಹೆಚ್ಚಿಸಬೇಕು ಮತ್ತು ವಯೋ ಭೇದ ಮಾಡದೇ ಎಲ್ಲ ದೇವದಾಸಿ ಮಹಿಳೆಯರಿಗೂ ಸೌಲಭ್ಯಗಳು ದೊರೆಯುವಂತೆ ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಹಾಯ ಧನದ ಸಾಲ ಸೌಲಭ್ಯವನ್ನು ಕನಿಷ್ಠ 5 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು ಮತ್ತು ದೇವದಾಸಿ ಮಹಿಳೆಯರ ಮಕ್ಕಳ ನಡುವಿನ ವಿವಾಹಕ್ಕೆ ಪ್ರೋತ್ಸಾಹ ಧನ ದೊರೆಯುವಂತೆ ಕ್ರಮವಹಿಸಲು ಆಗ್ರಹಿಸಲು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ರಾಜ್ಯ ಘಟಕ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *