ಮಾರಾಟ ನಂತರ ತರಕಾರಿ ಬಿಟ್ಟುಹೋದಲ್ಲಿ ವ್ಯಾಪಾರಿಗಳಿಗೆ ದಂಡ: ಬಿಬಿಎಂಪಿ

ಬೆಂಗಳೂರು: ಎಲ್ಲೆಂದರಲ್ಲಿ ಬಿದ್ದ ಕಸಕ್ಕೆ ದಂಡ, ಪ್ಲಾಸ್ಟಿಕ್ ಬಳಕೆಗೆ ದಂಡ ವಿಧಿಸುತ್ತಿದ್ದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಇದೀಗ ತರಕಾರಿ ವ್ಯಾಪಾರಿಗಳ ಮೇಲೆ ದಂಡ ಹಾಕಲು ಸಿದ್ಧತೆ ಕೈಗೊಂಡಿದೆ.

ಕೃಷ್ಣರಾಜೇಂದ್ರ ಮಾರುಕಟ್ಟೆ ರೀತಿಯ ದೊಡ್ಡ ದೊಡ್ಡ ಮಾರುಕಟ್ಟೆಗಳಿಗೆ ತರಕಾರಿ ಮಾರಲು ಬರುವ ವ್ಯಾಪಾರಿಗಳು, ವ್ಯಾಪಾರದ ನಂತರದಲ್ಲಿ ಉಳಿದ ತರಕಾರಿಗಳನ್ನು ಮಂಡಿಗಳಲ್ಲೇ ಬಿಟ್ಟು ಹೋಗುತ್ತಾರೆ. ಆ ರೀತಿ ತರಕಾರಿಗಳನ್ನು ಮಂಡಿಯಲ್ಲಿ ಬಿಟ್ಟು ಹೋದವರು ದಂಡ ಕಟ್ಟಬೇಕಾಗುತ್ತದೆ ಎಂದು ಮನವರಿಕೆ ಮಾಡಲಾಗುತ್ತಿದೆ. ಕೃಷ್ಣರಾಜೇಂದ್ರ ಮಾರುಕಟ್ಟೆ ಬಳಿ ಬಿಬಿಎಂಪಿ ಮಾರ್ಷಲ್‍ಗಳು ಧ್ವನಿವರ್ಧಕಗಳ ಮೂಲಕ ಪ್ರಚಾರಕ್ಕೆ ಮುಂದಾಗಿದ್ದಾರೆ.

ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ದಂಡ ಹಾಕುವುದಕ್ಕೆ ಬಿಬಿಎಂಪಿ ಮುಂದಾಗಿದೆ. ತರಕಾರಿ ಎಷ್ಟು ಬಿಟ್ಟು ಹೋಗಿದ್ದಾರೆ ಎಂಬ ತೂಕದ ಆಧಾರದ ಮೇಲೆ ದಂಡ ಹಾಕಲಾಗುತ್ತದೆ. ಅರ್ಧ ಟನ್, ಒಂದು ಟನ್‍ವರೆಗೂ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಬಿಟ್ಟು ಹೋದರೆ 5 ಸಾವಿರದಿಂದ 10 ಸಾವಿರದವರೆಗೂ ದಂಡ ಕಟ್ಟಬೇಕಾಗುತ್ತದೆ ಎಂದು ಪ್ರಕಟಿಸಲಾಗಿದೆ.

ಆದರೆ, ವ್ಯಾಪಾರಿಗಳು ನಮಗೆ ಲಾಭ ಆಗೋದೇ ನೂರು ರೂಪಾಯಿ. ಇದನ್ನು ದಂಡವಾಗಿ ಕಟ್ಟಿದರೆ ನಮ್ಮ ಗತಿ ಏನು ಎಂದು ದಂಡ ಪ್ರಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಖರೀದಿಗೆ ಯೋಗ್ಯವಲ್ಲದ ತರಕಾರಿಗಳನ್ನು ಬಿಬಿಎಂಪಿ ಕಸದ ಲಾರಿಗೆ ಹಾಕಿ. ವ್ಯಾಪಾರದ ವೇಳೆ ಪಕ್ಕದಲ್ಲಿ ಚೀಲ ಇಟ್ಟುಕೊಂಡು ಅದರಲ್ಲಿ ಹಾಕಿಕೊಳ್ಳಬೇಕು. ಕೊಳೆತ ಹಣ್ಣು, ತರಕಾರಿಗಳನ್ನು ಸಂಗ್ರಹಿಸಿ ಕಸದ ಲಾರಿಗೆ ಹಾಕಬೇಕು. ತರಕಾರಿ ಮೇಲೆ ಹೊದಿಕೆಗೆ ಹಾಕಿದ ಪೇಪರ್, ಹುಲ್ಲು, ಚೀಲವನ್ನು ಪ್ರತ್ಯೇಕವಾಗಿ ವಿಂಗಡಿಸಿ ಲಾರಿಗೆ ಹಾಕುವ ಮೂಲಕ ಸ್ವಚ್ಛತೆಯನ್ನು ಕಾಪಾಡಬೇಕಿದೆ.

Donate Janashakthi Media

Leave a Reply

Your email address will not be published. Required fields are marked *