ಮರಕುಂಬಿ ಪ್ರಕರಣ : ಪವರ್ ಸಿನಿಮಾ ನೆಪವಷ್ಟೆ, ಹಕ್ಕಿಗಾಗಿ ಹೋರಾಡಿದ್ದಕ್ಕೆ ಬೆಂಕಿ ಹಚ್ಚಿದರು

ಗುರುರಾಜ ದೇಸಾಯಿ

ದಲಿತರ ಮನೆಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ 98 ಜನರಿಗೆ ಜೀವಾವಧಿ ಶಿಕ್ಷೆ ಹಾಗೂ ಮೂವರಿಗೆ ಸಾದಾ ಶಿಕ್ಷೆಯ ಮೂಲಕ ಐತಿಹಾಸಿಕ ತೀರ್ಪಿಗೆ ಸಾಕ್ಷಿಯಾದ ಮರಕುಂಬಿ ಗ್ರಾಮಕ್ಕೆ ಜನಶಕ್ತಿ ಮೀಡಿಯ ತಂಡ ಭೇಟಿ ನೀಡಿತ್ತು. ಈ ವೇಳೆ ಬಹಳಷ್ಟು ಜನರೊಟ್ಟಿಗೆ ಜನಶಕ್ತಿ ಮೀಡಿಯಾ ಮಾತುಕತೆ ನಡೆಸಿತು.

ಆರಂಭದಲ್ಲಿ ಮೇಲ್ಜಾತಿ (ಸವರ್ಣೀಯರು) ಎಂದು ಕರೆಯಲ್ಪಡುವ ಜನರ ಜೊತೆ ಮಾತುಕತೆಗೆ ಮುಂದಾದ ನಮ್ಮ ತಂಡಕ್ಕೆ ಕೆಲ ಜನ ಮಾತನಾಡಲು ನಿರಾಕರಿಸಿದರು, ಹಲವರು ಹಿಂದೇಟು ಹಾಕಿದರು, ” ನಮ್ಮ ನೋವು ನಮಗಾಗೈತಿ, ಹೆಂಗ್ರಿ ಮಾತಾಡಾಣ” ಎಂದು ಮಹಿಳೆ ಪ್ರತಿಕ್ರಿಯಿಸಿದಾಗ, ನಿಮ್ಮ ನೋವಿಗೆ ನಾವು ಮರುಕ ಪಡುತ್ತೇವೆ, ನೀವೆಲ್ಲ ಜಾತಿ ದ್ವೇಷವನ್ನು ಮರೆತು ಸೌಹಾರ್ದಯುತವಾಗಿ ಇರಬೇಕು, ದಲಿತರನ್ನು ಗೌರವಿಸಬೇಕು, ಬನ್ನಿ ಮಾತನಾಡಿ ಎಂದು ಪ್ರೇರೆಪಿಸಿದರೂ ಅವರು ಮಾತನಾಡಲು ಹಿಂದೇಟು ಹಾಕಿದರು.

ಅಲ್ಲಿಂದ ನಾವು ಸೀದಾ ತೆರಳಿದ್ದು, ದಲಿತರ ಮನೆಗಳತ್ತ, ನೊಂದವರಿಗೆ ಜನಶಕ್ತಿ ಮೀಡಿಯಾ ಇದೆ ಎಂಬುದನ್ನು ಅರಿತಿದ್ದ ಅವರು ನಮ್ಮೊಟ್ಟಿಗೆ ಮಾತನಾಡಲು ಮುಂದಾದರು.

ಆಗಸ್ಟ್ 28, 2014 ರಂದು ನಾವು ಗಣೇಶನನ್ನು ತರಲು ಗಂಗಾವತಿಗೆ ಹೋಗಿದ್ದೇವು, ಅದಾಗಲೇ ಮೇಲ್ಜಾತಿ ಎಂದು ಕರೆಯಲ್ಪಡುವ ಜನ ನಮ್ಮ ವಿರುದ್ಧ ಕಿಡಿ ಕಾರುತ್ತಲೆ ಇದ್ದರು, ಇದೇ ವೇಳೆ ನಮ್ಮೂರಿನ ಮೇಲ್ಜಾತಿ ಯುವಕರು ಹಾಗೂ ಇತರರು ಪವರ್ ಸಿನಿಮಾ ನೋಡಲು ಹೋಗಿದ್ದರು, ಅದೇ ದಿನ ಚಿಕ್ಕ ಜಂತಗಲ್ ನ ದಲಿತ ಹುಡುಗರೂ ಸಿನೆಮಾ ನೋಡಲು ಹೋಗಿದ್ದರು. ಟಿಕೆಟ್ ಪಡೆಯುವ ವಿಚಾರದಲ್ಲಿ ಒಂದಿಷ್ಟು ಗದ್ದಲವಾಗಿ ” ಈ ದಲಿತರದ್ದು ಅತೀ ಆಯಿತು” ಎಂದು ಗಲಾಟೆ ಮಾಡುತ್ತಾರೆ. ಇದನ್ನು ನಾವೆ ಮಾಡಿಸಿದ್ದು ಎಂದು ನಮ್ಮ ಮನೆಗಳಿಗೆ ಬೆಂಕಿ ಹಚ್ಚಿದರು ಎಂದು ಮರಕುಂಬಿಯ ದೇವೆಂದ್ರ ಘಟನೆಯ ಬಗ್ಗೆ ಅಳಲು ತೋಡಿಕೊಂಡರು,

ಪವರ್ ಸಿನೆಮಾ ವಿಚಾರದಲ್ಲಿ ಗಲಾಟೆಯಾಯಿತು ಎಂಬುದು ನೆಪ ಮಾತ್ರ, 2014 ರ ಜುಲೈ ತಿಂಗಳಲ್ಲಿ ಹೊಟಲ್ ನಲ್ಲಿನ ಪ್ರತ್ಯೇಕ ಲೋಟ ಪದ್ದತಿ ನಿಲ್ಲಿಸಬೇಕು, ನಮಗೂ ಕ್ಷೌರ ಮಾಡಬೇಕು ಎಂದು ನಾವು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆಯ ನೇತೃತ್ವದಲ್ಲಿ ಮನವಿ ಮಾಡಿದ್ದೆವು, ಹೋರಾಟ ಮಾಡುವುದಾಗಿ ಎಚ್ಚರಿಸಿದ್ದೆವು. ನಮ್ಮನ್ನು ಹೆದರಿಸಲು ಮೇಲ್ಜಾತಿಯವರೆಂದು ಕೊಳ್ಳುವವರು ನಾಲ್ಕು ಮನೆಗಳಿಗೆ ಬೆಂಕಿ ಇಟ್ಟು, ನಮ್ಮ ಮೇಲೆ ಕಲ್ಲು ತೂರಾಟ ನಡೆಸಿದರು, ಮಹಿಳೆಯರು, ಮಕ್ಕಳನ್ನು ಎಳೆದಾಡಿ ಹಿಂಸೆ ನೀಡಿದರು ಎಂದು ಕರಾಳ ಘಟನೆಯನ್ನು ಮಾರುತಿ ನೆನಪು ಮಾಡಿಕೊಳ್ಳುತ್ತಾರೆ.

ಇದನ್ನೂ ಓದಿಮರಕುಂಬಿಯ ದಲಿತರ ಮನೆಗೆ ಬೆಂಕಿ ಹಚ್ಚಿದ ಪ್ರಕರಣ – 101 ಜನರ ವಿರುದ್ಧದ ಆರೋಪ ಸಾಬೀತು

ಬೆಂಕಿ ಹಚ್ಚುವಷ್ಟರ ಮಟ್ಟಿಗೆ ಮೆಲ್ಜಾತಿಯವರೆಂದುಕೊಂಡವರು ಕ್ರೌರ್ಯವನ್ನು ಮೆರೆಯುವುದಕ್ಕೆ ಇದಷ್ಟೆ ಕಾರಣವಲ್ಲ, ಅದಕ್ಕೂ ದೊಡ್ಡದಾದ ಕಾರಣ ಇದೆ. ಅದೇನು ಅಂದರೆ ಕಾಂಗ್ರೆಸ್ ಬೆಂಬಲಿತ ಊರ ಸಾಹುಕಾರನೊಬ್ಬ ದಲಿತರ‌ ಉಪಯೋಗಕ್ಕಾಗಿ ಇದ್ದ ಸಮುದಾಯ ಭವನವನ್ನು ಭತ್ತವನ್ನು ಸಂಗ್ರಹಿಸಲು ಬಳಸಿಕೊಳ್ಳುತ್ತಿದ್ದ, ಇದನ್ನು ಪ್ರಶ್ನಿಸುವ ನಿಟ್ಟಿನಲ್ಲಿ 2003ನೇ ಇಸ್ವಿಯಲ್ಲಿ” ಈ ಸಮುದಾಯ ಭವನ ನಮ್ಮ ಮನೆಯ ಮದುವೆ, ಇತ್ಯಾದಿ ಕಲ್ಯಾಣ ಕೆಲಸಗಳಿಗೆ ಬೇಕಾಗಿದೆ ಹಾಗಾಗಿ ಸಾಹುಕಾರನಿಗೆ ಬತ್ತ ತೆಗೆಯಲು ಹೇಳೋಣ ಎಂದು ಯುವಕರು ನಿರ್ಧರಿಸುತ್ತಾರೆ. ಈ ಸುದ್ದಿ ಸಾಹುಕಾರನಿಗೆ ಗೊತ್ತಾಗಿ ನನ್ನ ಹಾಗೂ ಇತರ ಮೂವರ ಮೇಲೆ ಕಳ್ಳತನ ಮಾಡಿದ್ದಾರೆ ಎಂದು ಸುಳ್ಳು ಆರೋಪವನ್ನು ಮಾಡಿ ದೇವಸ್ಥಾನದ ಕಂಬಕ್ಕೆ ಕಟ್ಟಿಹಾಕಿ ಎಂಟತ್ತು ಗಂಟೆಗಳ ಕಾಲ ನಿರಂತರ ಹಿಂಸೆ ನೀಡಿದರು ಎಂದು ಭೀಮೇಶ್ ನೋವನ್ನು ತೋಡಿಕೊಂಡರು.

2003 ರಲ್ಲಿ ಸಾಹುಕಾರನ ಈ ದೌರ್ಜನ್ಯಕ್ಕೆ ಒಳಗಾದ ದಲಿತ ಸಮುದಾಯದ ಸಹಾಯಕ್ಕೆ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘಟನೆ ಬೆಂಬಲವಾಗಿ ನಿಲ್ಲುತ್ತದೆ. ಇದೇ ಊರಿನ ವಿರಶೈವ ಜಂಗಮ ಸಮುದಾಯಕ್ಕೆ ಸೇರಿದ ಸಿಪಿಐಎಂ ನಾಯಕ ಗಂಗಾಧರಯ್ಯ ಸ್ವಾಮಿ ದಲಿತರ ಸಹಾಯಕ್ಕೆ ಬರುತ್ತಾರೆ.

ಸಿಪಿಐಎಂ ನಾಯಕ ಗಂಗಾಧರ ಸ್ವಾಮಿ

ವರ್ಷಗಳು ಕಳೆದ ನಂತರ ಸಂಘಟನೆ ಬಲಗೊಳ್ಳುತ್ತದೆ. ಭೂಮಿ, ನಿವೇಶನಕ್ಕಾಗಿ ಸಂಘರ್ಷಾತ್ಮಕ ಹೋರಾಟಗಳು ನಡೆಯುತ್ತಿವೆ. ದಲಿತರನ್ನು ರಾಜಕೀಯವಾಗಿ ಗಟ್ಟಿಗೊಳಿಸುತ್ತಿದ್ದಾರೆ ಎಂದು ಗಂಗಾಧರ ಸ್ವಾಮಿಯ ಮೇಲೆ ಹಾಗೂ ಕುಟುಂಬದವರ ಮೇಲೆ ಹಲ್ಲೆ ನಡೆಸುತ್ತಾರೆ.

ದಲಿತರು ಸಿಪಿಐಎಂ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಮುಂದಾಗುತ್ತಾರೆ. ಇದನ್ನು ತಡೆಯಲು ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಗ್ರಾಮದ ಮೇಲ್ಜಾತಿಯವರು ದಲಿತರನ್ನು ಹಿಂಸಿಸುತ್ತಾರೆ. ಮೂರು ಬಾರಿ ದಲಿತರ ಮೇಲೆ ದೂರು ದಾಖಲಿಸುತ್ತಾರೆ. ಇದ್ಯಾವುದಕ್ಕೆ ಜಗ್ಗದೆ ಚುನಾಚಣೆಯಲ್ಲಿ ಸ್ಪರ್ಧಿಸಿ 4 ಸ್ಥಾನಗಳಲ್ಲಿ ಇಬ್ಬರು ಮಹಿಳೆಯರು ಅವಿರೋಧವಾಗಿ ಆಯ್ಕೆಯಾಗಾತ್ತಾರೆ. ಸಿಪಿಐಎಂ ನೇತೃತ್ವದಲ್ಲಿ ಸಂಘಟನೆ ಹೋರಾಟಗಳನ್ನು ಬಲಿಷ್ಟ ಗೊಳಿಸಿ, ಊರಿನ ಸಾಹುಕಾರರು ಹಾಗೂ ದಬ್ಬಾಳಿಕೆ ನಡೆಸುತ್ತಿದ್ದವರ ವಿರುದ್ಧ ನಿರಂತರ ಹೋರಾಟಗಳನ್ನು ನಡೆಸುತ್ತಾರೆ.

ದಲಿತರು ಹಾಗೂ ಕಮ್ಯುನಿಷ್ಟರು ಬೆಳೆಯುವುದನ್ನು ಸಹಿಸದ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತ ಈಡಿಗ, ಲಿಂಗಾಯತ, ನಾಯಕ ಸಮುದಾಯದವರು ದಲಿತರ ಮೇಲೆ ದೌರ್ಜನ್ಯವನ್ನು ನಡೆಸುತ್ತಾ ಬಂದು ಕೊನೆಗೆ ಅವರ ಮನೆಗಳಿಗೆ ಬೆಂಕಿ ಇಟ್ಟರು.

ನೂರಕ್ಕು ಹೆಚ್ಚು ಮೇಲ್ಜಾತಿ ಜನರ ಮೇಲೆ ದೌರ್ಜನ್ಯ ಪ್ರಕರಣ ದಾಖಲಾದ ನಂತರವೂ, ದಲಿತರ ಮೇಲಿನ ಬಹಿಷ್ಕಾರ ಮುಂದುವರೆಯಿತು, ಐದು ವರ್ಷಗಳ ಕಾಲ ದಲಿತರನ್ನು ಕೂಲಿ ಕೆಲಸಗಳಿಗೆ ಕರೆಯಲಿಲ್ಲ, ಪಕ್ಕದ ಊರುಗಳಲ್ಲಿ ಕೆಲಸ ಸಿಗದಂತೆ ನೋಡಿಕೊಂಡರು ಎಂದು ರೇಣುಕಮ್ಮ ಹಿಂಸೆಯ ದಿನಗಳನ್ನು ನೆನಪಿಸಿಕೊಂಡರು.

ನಾವು ಚಿಕ್ಕವರಿದ್ದಾಗಲೆ ಶೋಷಣೆ ಅನುಭವಿಸಿದ್ದೇವೆ, ಶಾಲೆಯಲ್ಲಿ ನಮ್ಮನ್ನು ಪ್ರತ್ಯೇಕವಾಗಿ ಕೂಡಿಸುತ್ತಿದ್ದರು, ಬೋರಿನ ನೀರು ಕುಡಿಯಲು ಬಿಡುತ್ತಿರಲಿಲ್ಲ, ಶಿಕ್ಷಕರು ಮೇಲ್ಜಾತಿಯ ಮಕ್ಕಳಿಗೆ ತೋರಿಸುತ್ತಿದ್ದ ಕಾಳಜಿಯನ್ನು ನಮಗೆ ತೋರಿಸುತ್ತಿರಲಿಲ್ಲ, ನಮ್ಮ ಜೊತೆ ಆಟವಾಡಬಾರದು ಎಂದು ಮೇಲ್ಜಾತಿಯವರು, ತಮ್ಮ ಮಕ್ಕಳನ್ನು ನಮ್ಮ ಹತ್ತಿರ ಬರದಂತೆ ನೋಡಿಕೊಳ್ಳುತ್ತಿದ್ದರು ಎಂದು ಪಾಂಡರಂಗ ತಾವು ಅನುಭವಿಸಿದ ನೋವುಗಳನ್ನು ಹಂಚಿಕೊಂಡರು.

” ಈ ಘಟನೆ ನಡೆಯಬಾರದಿತ್ತು, ಇನ್ನಾದರೂ ಊರಲ್ಲಿ ಒಗ್ಗಟ್ಟಾಗಿರೋಣ ಎಂದು ರಾಜೀಯಾಗಲು ಹಲವು ಬಾರಿ ಮನವಿ ಮಾಡಿದೆವು, ದಲಿತರು ಹೇಳಿದಂತೆ ನಾವ್ಯಾಕೆ ಕೇಳಬೇಕು ಎಂದು ಅಹಂಕಾರದಿಂದ ಓಡಾಡಿದರೂ ಈಗಲೂ ನಾವು ಒಗ್ಗಟ್ಟಿನಿಂದ ಇರೋಣ ಎಂದು ಬಯಸುತ್ತೇವೆ ಎಂದು ಹಿರಿಯ ದಲಿತ ನಾಯಕ ಸಣ್ಣ ಹುಲಗಪ್ಪ ತಿಳಿಸಿದರು.

ಈ ಪ್ರಕರಣ ನಂತರವಾದರೂ ಮೇಲ್ಜಾತಿ ಎಂದು ಕರೆಯಲ್ಪಡುವವರು ಎಚ್ಚೆತ್ತುಕೊಳ್ಳಬೇಕಿದೆ, ದಲಿತರ ಮೇಲೆ ನಡೆಸುವ ದೌರ್ಜನ್ಯಗಳನ್ನು ನಿಲ್ಲಿಸಬೇಕಿದೆ. ಎಲ್ಲರು ಜಾತಿ ವೈಷಮ್ಯ ಬಿಟ್ಟು ಸಾಮರಸ್ಯದಿಂದ ಬಾಳಲು ಮುಂದಾಗಬೇಕಿದೆ.

ರಾಜ್ಯ ಸರಕಾರ ಕೂಡಾ‌ ದಲಿತರ, ಬಡವರ ಕಷ್ಟಗಳಿಗೆ ಮೊಸಳೆ ಕಣ್ಣೀರು‌ ಸುರಿಸುವ ಬದಲು ಅವರ ಘನತೆಯ‌ ಬದುಕುವ ಹಕ್ಕಿನ ರಕ್ಷಣೆಗೆ ಬದ್ದವಾಗಬೇಕು. ಈ ಐತಿಹಾಸಿಕ ತೀರ್ಪು‌ ದಲಿತರ ಮೇಲಿನ ದೌರ್ಜನ್ಯ ಎಸಗುವ ಶಕ್ತಿಗಳಿಗೆ ಪಾಠವಾಗಬೇಕು ಎಂದು ಅಲ್ಲಿನ ಜನ ಬಯಸುತ್ತಾರೆ.

Donate Janashakthi Media

Leave a Reply

Your email address will not be published. Required fields are marked *