ಕಾಫಿ ಬೀಜ ಕದ್ದ ಕಾರಣ ಮರಕ್ಕೆ ಕಟ್ಟಿ ಹಾಕಿ ಮನಬಂದಂತೆ ಹಲ್ಲೆ: ಐವರ ಬಂಧನ

ಬೇಲೂರು: ಕಾಫಿ ಬೀಜ ಕದಿಯಲು ಬಂದು ಸಿಕ್ಕಿ ಬಿದ್ದ ಖದೀಮನಿಗೆ ಕೆಲವರು ಮನ ಬಂದಂತೆ ಥಳಿಸಿ ಅಮಾನವೀಯತೆ ಮೆರೆದಿರುವ ಘಟನೆ ತಾಲೂಕಿನ ಬೆಳ್ಳಾವರ ಗ್ರಾಮದಲ್ಲಿ ನಡೆದಿದೆ.

ಪಕ್ಕದ ಗ್ರಾಮದ ಮಂಜು ಎಂಬಾತ ಕಳೆದ ರಾತ್ರಿ ಕಾಫಿ ಬೀಜ ಕದಿಯಲು ಹೋಗಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ತೋಟದ ಮಾಲೀಕ, ಇತರರ ಜೊತೆ ಸೇರಿ ಮಂಜುನನ್ನು ಹಿಡಿದು ಕೈಕಾಲು ಕಟ್ಟಿ ಮನಬಂದಂತೆ ಥಳಿಸಿದ್ದಾರೆ. ಅಷ್ಟೇ ಅಲ್ಲದೆ ರಾತ್ರಿ ಇಡೀ ಒಂದೇ ಕಡೆ ಬಿದ್ದು ನರಳುವಂತೆ ಮಾಡಿ ನಿರ್ದಯಿ ವರ್ತನೆ ತೋರಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಮಂದಿ, ಬೆಳಗ್ಗೆ ಕಾಲಿಗೆ ಹಗ್ಗ ಬಿಗಿದು ತೋಟದ ಬಳಿಯ ಮರಕ್ಕೆ ಕಟ್ಟಿ ಮತ್ತೊಮ್ಮೆ ತಲೆಯಲ್ಲಿ ರಕ್ತ ಸೋರುವ ರೀತಿ ಥಳಿಸಿದ್ದಾರೆ. ತಲೆ ಕೆಳಗಾಗಿ ಮರಕ್ಕೆ ಕಟ್ಟಿ ದುವ್ರರ್ತನೆ ಪ್ರದರ್ಶನ ಮಾಡಿದ್ದಾರೆ.

ಕಾಫಿ ಕದಿಯೋದು ಬೇಕಿತ್ತಾ ನಿನಗೆ, ಹೊಲಸು ತಿನ್ನುವ ಕೆಲಸ ಮಾಡಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಅನ್ನೋ ಹಾಗೆ ದೊಣ್ಣೆ ಇತರೆ ವಸ್ತುಗಳಿಂದ ಥಳಿಸಿದ್ದಾರೆ. ಸಿಕ್ಕಿ ಬಿದ್ದ ಯುವಕ ನಿಮ್ಮ ದಮ್ಮಯ್ಯ ಹೊಡೀಬೇಡಿರಣ್ಣ, ತಪ್ಪಾಯ್ತು ಬಿಟ್ಟು ಬಿಡಿ, ಇನ್ನೊಮ್ಮೆ ಹೀಗೆ ಮಾಡೋದಿಲ್ಲ ಎಂದು ಕಣ್ಣೀರಿಡುತ್ತಾ ಕೈ ಮುಗಿದು, ಅಂಗಲಾಚಿ ಗೋಗರೆದರೂ ಬಿಡದೆ, ಕಳ್ಳತನ ಮಾಡುವಾಗ ಇದು ನಿನಗೆ ತಿಳಿದಿರಲಿಲ್ವಾ ಎಂದು ಹಂಗಿಸಿ ನಿಕೃಷ್ಟವಾಗಿ ನಡೆಸಿಕೊಂಡಿದ್ದಾರೆ.

ವಿಪರ್ಯಾಸ ಎಂದರೆ ತಾವು ಥಳಿಸುವ, ನಿಂದಿಸುವ ಎಲ್ಲವನ್ನೂ ವಿಡಿಯೋ ಮಾಡಿದ್ದಾರೆ. ಇದು ಎಲ್ಲೆಡೆ ವೈರಲ್ ಆಗಿದೆ. ತಪ್ಪು ಮಾಡಿದ ಯಾರನ್ನೇ ಆಗಲಿ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬೇಕು. ಆದರೆ ಕೆಲ ದುರುಳರು ತಾವೇ ಕಾನೂನು ಕೈಗೆ ತೆಗೆದುಕೊಂಡು ಮೃಗೀಯ ವರ್ತನೆ ತೋರಿದ್ದಾರೆ. ಈ ಹಿಂದೆಯೂ ಕಳ್ಳತನ ಮಾಡಿದ್ದೆ ಎಂದು ಸಿಟ್ಟಿಗೆದ್ದು ಮಂಜು ಮೇಲೆ ಅನೇಕರು ಮುಗಿ ಬಿದ್ದಿದ್ದಾರೆ. ಇನ್ನೊಮ್ಮೆ ತಪ್ಪು ಮಾಡಲ್ಲ, ನನ್ನನ್ನು ಬಿಟ್ಟುಬಿಡಿ ಎಂದು ಕ್ಷಮೆ ಕೇಳಿದರೂ ಬಿಡದೆ ಮನಬಂದಂತೆ ಕೈ ಮಾಡಿದ್ದಾರೆ.

ಆರೋಪಿಗಳ ಬಂಧನ

ಈ ಕುರಿತು ಮಾತನಾಡಿದ ಎಸ್ಪಿ ಹರಿರಾಮ್ ಶಂಕರ್, ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ಳಾವರ ಗ್ರಾಮದ ತೋಟವೊಂದರಲ್ಲಿ ಕಳ್ಳತನ ಮಾಡಿದ ಆರೋಪದಡಿ ಮಂಜು ಎಂಬಾತನನ್ನು ಥಳಿಸಲಾಗಿದೆ. ನಾಲ್ಕೈದು ಮಂದಿ ಕಾಫಿ ಬೆಳೆಗಾರರು ಸೇರಿ ಈ ಕೃತ್ಯ ಎಸಗಿದ್ದಾರೆ. ನಮ್ಮ ಪೊಲೀಸರು ದಿಢೀರ್ ಕಾರ್ಯಪ್ರವೃತ್ತರಾಗಿ ಬೆಳ್ಳಾವರ ಗ್ರಾಮದ ರಾಘವೇಂದ್ರ ಕೆ.ಪಿ.,  ಉಮೇಶ, ಮಲ್ಲಿಗನೂರು ಗ್ರಾಮದ ಕೀರ್ತಿ,  ದೋಣನಮನೆ ಗ್ರಾಮದ ಶ್ಯಾಮುಯಲ್ ಮತ್ತು ಕಿತ್ತಾವರ ಗ್ರಾಮದ ನವೀನ್ ರಾಜ್ ಎಂಬುವರನ್ನು ಬಂಧಿಸಿದ್ದಾರೆ ಎಂದು ಹೇಳಿದರು. ಹಲ್ಲೆ ಮಾಡಿದ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ.

ವ್ಯಕ್ತಿಯನ್ನು ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಮಾಹಿತಿ ಪಡೆದ ಅರೇಹಳ್ಳಿ ಪಿಎಸ್‌ಐ ತನಿಖೆ ಮುಂದುವರೆಸಿದ್ದಾರೆ. ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದರು.

Donate Janashakthi Media

Leave a Reply

Your email address will not be published. Required fields are marked *