ಮಾವೋವಾದಿ ನಂಟು ಆರೋಪ | ಕವಿ ವರವರ ರಾವ್ ಅವರ ಅಳಿಯನ ಮನೆ ಶೋಧಿಸಿದ ಎನ್‌ಐಎ

ನವದೆಹಲಿ: ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಯಾಗಿರುವ ಕ್ರಾಂತಿಕಾರಿ ತೆಲುಗು ಕವಿ ವರವರ ರಾವ್ ಅವರ ಅಳಿಯ, ಪತ್ರಕರ್ತ ಎಸ್. ವೇಣುಗೋಪಾಲ್ ಅವರ ನಿವಾಸ ಸೇರಿದಂತೆ ಹೈದರಾಬಾದ್‌ನ ಹಲವು ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)  ಮಾವೋವಾದಿ ನಂಟು ಇದೆ ಎಂದು ಆರೋಪಿಸಿ ಶೋಧ ನಡೆಸಿದೆ ಎಂದು ವರದಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ವರವರ ರಾವ್ ಅವರನ್ನು 2018 ರಲ್ಲಿ ಪುಣೆ ಪೊಲೀಸರು ಬಂಧಿಸಿದ್ದರು. ಹಲವು ಪ್ರಯತ್ನಗಳ ನಂತರ ಅಂತಿಮವಾಗಿ ಆಗಸ್ಟ್ 2022 ರಲ್ಲಿ ಸುಪ್ರೀಂ ಕೋರ್ಟ್  ವೈದ್ಯಕೀಯ ಕಾರಣಗಳಿಗಾಗಿ ಅವರಿಗೆ ಜಾಮೀನು ನೀಡಿತ್ತು.

ಇದನ್ನೂ ಓದಿ: ಉತ್ತರಾಖಂಡ | ವಿವಾದಾತ್ಮಕ ಏಕರೂಪ ನಾಗರಿಕ ಸಂಹಿತೆ ಮಸೂದೆ ಅಂಗೀಕಾರ

2017ರ ಡಿಸೆಂಬರ್ 31 ರಂದು, ಭೀಮಾ ಕೋರೆಗಾಂವ್ ಕದನದ 200 ನೇ ವಾರ್ಷಿಕೋತ್ಸವದ ನೆನಪಿಗಾಗಿ ವಾರ್ಷಿಕ ಆಚರಣೆಯನ್ನು ಮಹಾರಾಷ್ಟ್ರದ ಪುಣೆ ಬಳಿಯ ಭೀಮಾ ಕೋರೆಗಾಂವ್‌ನಲ್ಲಿ ನಡೆಸಲಾಗಿತ್ತು. ಇದಾಗಿ ಒಂದು ದಿನದ ನಂತರ ಮಹಾರ್ ಮತ್ತು ಮರಾಠರ ಗುಂಪುಗಳ ನಡುವೆ ಹಿಂಸಾಚಾರ ಭುಗಿಲೆದ್ದಿತ್ತು. ಹಿಂಸಾಚಾರದ ಪರಿಣಾಮವಾಗಿ ಒಬ್ಬರು ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿದ್ದರು.

ಈ ಹಿಂಸಾಚಾರದ ನಂತರ ಕಾರ್ಯಕ್ರಮವನ್ನು ಆಯೋಜಿಸಲು ಕಾರಣರಾಗಿದ್ದ ಹಲವಾರು ಹೋರಾಟಗಾರರನ್ನು ಬಂಧಿಸಲಾಗಿತ್ತು. ಅಂದು ಅಲ್ಲಿ ನಡೆಸಿದ್ದ ಭಾಷಣದ ಕಾರಣಕ್ಕೆ ಹಿಂಸಾಚಾರ ನಡೆದಿದೆ ಎಂದು ಪೊಲೀಸರು ಆರೋಪಿಸಿದ್ದರು. ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ರೋನಾ ವಿಲ್ಸನ್, ವರವರ ರಾವ್ ಮತ್ತು ಹನಿ ಬಾಬು ಅವರನ್ನು ಪ್ರಕರಣದಲ್ಲಿ ಸಿಲುಕಿಸಲು ಅವರ ಕಂಪ್ಯೂಟರ್‌ಗಳನ್ನು ಹ್ಯಾಕ್ ಮಾಡಿ ಅದಕ್ಕೆ ವೈರಸ್ ಕಳುಹಿಸಿ ಪುರಾವೆಗಳನ್ನು ಸೃಷ್ಟಿ ಮಾಡಲಾಗಿತ್ತು ಎಂದು ಅಮೆರಿಕಾದ ಭದ್ರತಾ ಸಂಶೋಧಕರು ಕಂಡುಕೊಂಡಿದ್ದಾರೆ ಎಂದು ವರದಿಯಾಗಿತ್ತು.

ಪ್ರಕರಣದಲ್ಲಿ ಪುಣೆ ಪೊಲೀಸರು ಹೋರಾಟಗಾರರ ವಿರುದ್ಧ ಸಲ್ಲಿಸಲಾಗಿರುವ ಪುರಾವೆಗಳಲ್ಲಿ ಪುಸ್ತಕಗಳು ಮತ್ತು ಪತ್ರವನ್ನು ಉಲ್ಲೇಖಿಸಿದ್ದರು ಬಂಧನಕ್ಕೆ ಒಳಗಾದ ಹೋರಾಟಗಾರರ ಕಂಪ್ಯೂಟರ್‌ನಲ್ಲಿ ವೈರಸ್ ಕಳುಹಿಸಿ ಪುರಾವೆ ಸೃಷ್ಟಿಸಿದ್ದ ಹ್ಯಾಕರ್‌ಗಳು ಮತ್ತು ಪುಣೆ ಪೊಲೀಸರ ನಡುವೆ ಸಂಬಂಧ ಇದೆ ಎಂದು ಸಂಶೋಧಕರು ವರದಿ ಮಾಡಿದ್ದರು. ಇದರ ನಂತರ ನಗರದಲ್ಲಿ ಅನೇಕ ಹೋರಾಟಗಾರರನ್ನು ಕಪೋಲಕಲ್ಪಿತ ಸಾಕ್ಷ್ಯದ ಆಧಾರದ ಮೇಲೆ ಬಂಧಿಸಲಾಗಿದೆ ಎಂದು ವರದಿಯಾಗಿದೆ.

ವಿಡಿಯೊ ನೋಡಿ: ಎಚ್ಚರ ಮತ್ತು ವಿವೇಕದ ಕಣ್ಣುಗಳನ್ನು ತೆರೆಯಿಸುವ ಹೊಣೆ ಪತ್ರಕರ್ತರದ್ದು – ಟಿ. ಗುರುರಾಜ Janashakthi Media

 

Donate Janashakthi Media

Leave a Reply

Your email address will not be published. Required fields are marked *